ಶನಿವಾರ, ಡಿಸೆಂಬರ್ 14, 2019
20 °C
ಐತಿಹಾಸಿಕ ನಗನೂರಿನ ಶರಣಬಸವೇಶ್ವರ ಜಾತ್ರಾ ಮಹೋತ್ಸವ ಸಂಭ್ರಮ

ಜೋಡೆತ್ತುಗಳ ವ್ಯಾಪಾರ ಬಲುಜೋರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೋಡೆತ್ತುಗಳ ವ್ಯಾಪಾರ ಬಲುಜೋರು

ಕೆಂಭಾವಿ: ಇಲ್ಲಿನ ಸುಕ್ಷೇತ್ರ ನಗನೂರು ಮಹಾದಾಸೋಹಿ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬಸವೇಶ್ವರ ಜಾತ್ರೆ ಅಂಗವಾಗಿ ಜಾನುವಾರು ಜಾತ್ರೆ ನಡೆಯುತ್ತಿದ್ದು, ಈ ಜಾತ್ರೆಯು ಉತ್ತರ ಕರ್ನಾಟಕದ ಭಾಗದಲ್ಲೇ ಬೃಹತ್‌ ದನಗಳ ಜಾತ್ರೆ ಎಂದು ಪ್ರಸಿದ್ಧಿ ಪಡೆದಿದೆ.

ಮಹಾರಾಷ್ಟ್ರದ ಸೊಲ್ಲಾಪುರ, ತೆಲಂಗಾಣದ ವಿವಿಧ ಭಾಗ, ರಾಜ್ಯದ ವಿಜಯಪುರ, ಬಾಗಲಕೋಟೆ, ಬೆಳಗಾವಿ, ರಾಯಚೂರು, ಕಲಬುರ್ಗಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯ ರೈತರು ಜೋಡೆತ್ತು ಖರೀದಿಗಾಗಿ ಬರುವುದು ವಾಡಿಕೆ. ಈ ಬಾರಿ ಜಾತ್ರೆಯಲ್ಲಿ ಜೋಡೆತ್ತುಗಳ ಬೆಲೆ ಕೇಳಿದವರಿಗೆ ಬಿಸಿಲ ಝಳವನ್ನೂ ಮೀರಿ ಬೆವರಿಳಿಸುವಂತಿದೆ.

‘ ಬಸವ ಜಯಂತಿ(ಏಪ್ರಿಲ್‌ 18) ಉತ್ಸವದವರೆಗೂ ಜಾತ್ರೆ ನಡೆಯಲಿದ್ದು, ಈ ಬಾರಿ ಜಾತ್ರೆಗೆ ಬಂದ ಎತ್ತುಗಳ ಬೆಲೆ ₹50 ಸಾವಿರ ದಿಂದ ₹2.5 ಲಕ್ಷ ವರೆಗೆ ನಡೆದಿದೆ. ಕಳೆದ ಬಾರಿ ಸಿಂದಗಿ ತಾಲ್ಲೂಕಿನ 3 ವರ್ಷದ ಹೋರಿಗಳಿಗೆ ₹3 ಲಕ್ಷ ವರೆಗೆ ಬೆಲೆ ಕಟ್ಟಲಾಗಿತ್ತು’ ಎಂದು ರೈತ ನಿಂಗಣ್ಣ ವಣಿಕ್ಯಾಳ ಹೇಳಿದರು.

‘ರೈತರು ಬಸವ ಜಯಂತಿಯವರೆಗೆ ನಡೆಯುವ ಜಾತ್ರೆಯಲ್ಲೇ ಕಾಲ ಕಳೆದು ತಮಗಿಷ್ಟವಾದ ಹಾಗೂ ಕೈಗೆಟಕುವ ದರದ ಜೋಡಿ ಎತ್ತು ಖರೀದಿಸಿ ತಮ್ಮ ಹಳೆಯ ಎತ್ತುಗಳನ್ನು ಮಾರುವ ಜೊತೆಗೆ ಕೃಷಿ ಪರಿಕರ ಖರೀದಿಸುವುದು ಸಾಮಾನ್ಯವಾಗಿದೆ. ಜಾತ್ರೆಯ ಕೊನೆಯ ದಿನ ಹೆಚ್ಚಿನ ಸಂಖ್ಯೆಯಲ್ಲಿ ಜಾನುವಾರುಗಳು ಸೇರಲಿವೆ’ ಎಂದು ಸ್ಥಳಿಯರಾದ ತಮ್ಮಣ್ಣಪ್ಪ ವಣಿಕ್ಯಾಳ ಹೇಳುತ್ತಾರೆ.

‘ರೈತರು ಜಾತ್ರೆಗೆ ಮಾರಾಟಕ್ಕೆಂದು ತರುವ ಬಹುತೇಕ ರಾಸುಗಳನ್ನು ಕಸಾಯಿಖಾನೆಗೆ ಸಾಗಣೆ ಮಾಡಲಾಗುತ್ತಿದೆ. ವಯಸ್ಸಾದ ಜಾನುವಾರು ಖರೀದಿಸಲು ರೈತರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕಸಾಯಿಖಾನೆ ದಲ್ಲಾಳಿಗಳೇ ಜಾತ್ರೆಯಲ್ಲಿ ತುಂಬಿದ್ದಾರೆ’ ಎಂದು ರವಿಕಾಂತ ಉಪ್ಪಾರ ದೂರುತ್ತಾರೆ.

**

ಜಾತ್ರೆಗೆ ಬಂದ ಜಾನುವಾರು, ರೈತರಿಗೆ ಟ್ಯಾಂಕರ್ ಮೂಲಕ ದಾನಿಯೊಬ್ಬರು ಸ್ವಂತ ಖರ್ಚಿನಲ್ಲಿ ನೀರು ಪೂರೈಕೆ ಮಾಡುತ್ತಿದ್ದು, ಸ್ಥಳಿಯ ಬಾವಿಗಳಿಂದಲೂ ನೀರು ಒದಗಿಸಲಾಗುತ್ತಿದೆ – ಶಾಂತಣ್ಣ ಚನ್ನೂರು, ಗ್ರಾಮ ಪಂಚಾಯಿತಿ ಅಧ್ಯಕ್ಷ, ನಗನೂರ.

**

ಪ್ರತಿಕ್ರಿಯಿಸಿ (+)