ಬುಧವಾರ, ಜುಲೈ 15, 2020
22 °C

ನೃತ್ಯ ಸಾಧಕನಿಗೆ ಪುರಸ್ಕಾರ

ಮೈಸೂರು ವಿ. ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

ನೃತ್ಯ ಸಾಧಕನಿಗೆ ಪುರಸ್ಕಾರ

ಚೌಡಯ್ಯ ಸ್ಮಾರಕ ಭವನದ ಅಕಾಡೆಮಿ ಆಫ್ ಮ್ಯೂಸಿಕ್ ನಡೆಸುತ್ತಿರುವ ವಾರ್ಷಿಕ ನೃತ್ಯೋತ್ಸವ ‘ನೃತ್ಯ ರಂಗೋಲಿ’ ಭಾನುವಾರದವರೆಗೆ (ಏ.15) ನಡೆಯಲಿದೆ. ನಗರದ ಪ್ರತಿಷ್ಠಿತ ಸಭಾಂಗಣವಾದ ಚೌಡಯ್ಯ ಸ್ಮಾರಕ ಭವನವು ಕೆ.ಕೆ.ಮೂರ್ತಿ ಅವರ ಕನಸು. 1980ರಲ್ಲಿ ಲೋಕಾರ್ಪಣೆಯಾದ ಪಿಟೀಲಿನ ಆಕಾರದಲ್ಲಿರುವ ಅಪರೂಪದ ಭವನ ಇದು.

ಅಕಾಡೆಮಿಯು ಪ್ರತಿವರ್ಷ ಒಬ್ಬ ಪ್ರತಿಭಾವಂಥ ಸಂಗೀತಗಾರರಿಗೆ ‘ಚೌಡಯ್ಯ ಸ್ಮಾರಕ ಪ್ರಶಸ್ತಿ’ ಪ್ರದಾನ ಮಾಡುತ್ತಿದೆ. ಪ್ರಶಸ್ತಿಯು ₹2 ಲಕ್ಷ ಹಮ್ಮಿಣಿ, ಸ್ಮರಣಿಕೆ ಹಾಗೂ ಉಡುಗೊರೆ ಒಳಗೊಂಡಿದೆ. ಸ್ಥಾಪಕ ಕೆ.ಕೆ. ಮೂರ್ತಿ ಸ್ಮರಣಾರ್ಥ ಪ್ರತಿ ವರ್ಷ ಒಂದು ಸಂಗೀತ ಉತ್ಸವವನ್ನೂ ವಿಜೃಂಭಣೆಯಿಂದ ನಡೆಸುವುದು ವಾಡಿಕೆ. ಈ ವರ್ಷದ ನೃತ್ಯೋತ್ಸವದ ಸಹಭಾಗಿತ್ವವನ್ನು ರಾಜರಾಜೇಶ್ವರಿ ಕಲಾನಿಕೇತನ ವಹಿಸಿದೆ.

ಉತ್ಸವದ ಅಂಗವಾಗಿ ಶನಿವಾರ ಮತ್ತು ಭಾನುವಾರ (ಏ.14 ಮತ್ತು 15) ನೃತ್ಯ ಪ್ರದರ್ಶನಗಳ ಜೊತೆಗೆ ವಿದ್ವತ್ ಗೋಷ್ಠಿಯನ್ನೂ ಆಯೋಜಿಸಲಾಗಿದೆ. ಈವರೆಗೆ 400ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ವಿದುಷಿ ವೀಣಾ ಮೂರ್ತಿ ವಿಜಯ್‍ ಅವರ ಮೂಲಕ ತರಬೇತಿ ನೀಡಿ ಬೆಂಗಳೂರಿನ ಪ್ರಮುಖ ಕೂಚಿಪುಡಿ ನೃತ್ಯಶಾಲೆಯಾಗಿ ಬೆಳಗುತ್ತಿದೆ.

ವೀಣಾ ಮೂರ್ತಿ ಅವರು ನೃತ್ಯೋತ್ಸವದ ಸಮನ್ವಯಕಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಭರತನಾಟ್ಯದ ವಿವಿಧ ಬಾನಿಗಳ ಮೇಲೆ ನಾಲ್ವರು ಹಿರಿಯ ನರ್ತಕಿಯರು ಪ್ರಾತ್ಯಕ್ಷಿಕೆ ನಡೆಸಿಕೊಟ್ಟರೆ, ಸಮನ್ವಯ ಕಲಾ ಉತ್ಸವದಲ್ಲಿ ದಕ್ಷಿಣ ಭಾರತದ ಶಾಸ್ತ್ರೀಯ ನೃತ್ಯಗಳ ಪರಸ್ಪರ ಸಾಮ್ಯ ಹಾಗೂ ಪ್ರಭಾವಗಳನ್ನು ಕುರಿತು ಐವರು ವಿದ್ವಾಂಸರು ಸೋದಾಹರಣ ಭಾಷಣ ಮಾಡುವರು.

ಸಮನ್ವಯ ಪುರಸ್ಕಾರ

ಭಾನುವಾರ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಕೂಚಿಪುಡಿ ನೃತ್ಯ ಕ್ಷೇತ್ರದ ಹಿರಿಯ ವಿದ್ವಾಂಸ ಕೆ.ವಿ. ಸತ್ಯನಾರಾಯಣ ‘ಸಮನ್ವಯ ಪುರಸ್ಕಾರ’ ಸ್ವೀಕರಿಸಲಿದ್ದಾರೆ.

ಕೊರಾಡ ನರಸಿಂಹರಾವ್, ವೆಂಪಟ್ಟಿ ಚಿನ್ನ ಸತ್ಯಂ ಹಾಗೂ ವೇದಾಂತಂ ಪ್ರಹ್ಲಾದ ಶರ್ಮ ಅವರಂಥ ಗುರುಗಳಿಂದ ದಕ್ಷ ಶಿಕ್ಷಣ ಪಡೆದ ಡಾ. ಕೆ.ವಿ. ಸತ್ಯನಾರಾಯಣ ಏಲೂರಿನಲ್ಲಿ ‘ಶ್ರೀ ಸತ್ಯ ಕೂಚಿಪುಡಿ ಮತ್ತು ಜಾನಪದ ನೃತ್ಯ ಅಕಾಡೆಮಿ’ ತೆರೆದು ನೂರಾರು ಮಂದಿಗೆ ನೃತ್ಯ ಶಿಕ್ಷಣ ನೀಡಿದ್ದಾರೆ. ಅಮೆರಿಕದಲ್ಲೂ ಈ ಶಾಲೆಯ ಶಾಖೆ ಇದೆ. ಹಲವು ಪೌರಾಣಿಕ, ಚಾರಿತ್ರಿಕ, ಸಾಮಾಜಿಕ ನೃತ್ಯ ನಾಟಕಗಳಿಗೆ ನೃತ್ಯ ಸಂಯೋಜನೆ ಮಾಡಿ ತಮ್ಮ ಕ್ರಿಯಾಶೀಲತೆಯನ್ನು ಮೆರೆದಿದ್ದಾರೆ.

ರಂಗಭೂಮಿಯ ಕಲಾವಿದರಾಗಿ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಅವರು ಸ್ತ್ರೀ ಪಾತ್ರಗಳಲ್ಲೇ ಹೆಚ್ಚು ಮಿಂಚಿ ಬಹುಮಾನಗಳನ್ನೂ ಪಡೆದುಕೊಂಡಿದ್ದಾರೆ. ಚಲನಚಿತ್ರಗಳಿಗೆ ನೃತ್ಯ ನಿರ್ದೇಶಕರಾಗೂ ಸೇವೆ ಸಲ್ಲಿಸಿದ್ದಾರೆ. ಅವುಗಳಲ್ಲಿ 'ಶ್ರುತಿಲಯಾಲು', 'ಸ್ವರ್ಣ ಕಮಲಂ' ಮುಖ್ಯವಾದವು.

ನಾಟ್ಯಕಲಾ ವಿಶಾರದ (ಸಿಂಗಪುರ), ನಾಟ್ಯಕಲಾ ತಪಸ್ವಿ (ಟೆಕ್ಸಾಸ್), ಕಲಾರತ್ನ (ಆಂಧ್ರಪ್ರದೇಶ ಸರ್ಕಾರ), ಚಲನಚಿತ್ರ ನೃತ್ಯ ಸಂಯೋಜನೆಗೆ ‘ನಂದಿ ಪ್ರಶಸ್ತಿ’ ಮತ್ತು ಕಂಚಿ ಕಾಮಕೋಟಿ ಪೀಠದ ‘ಆಸ್ಥಾನ ವಿದ್ವಾನ್’ ಗೌರವಗಳೂ ಅವರಿಗೆ ಸಂದಿವೆ. ಅಲ್ಲದೆ ತಾವೇ ಎರಡು ಪ್ರಶಸ್ತಿಗಳನ್ನು ಸ್ಥಾಪಿಸಿ ಓರ್ವ ಹಿರಿಯ ಕೂಚಿಪುಡಿ ಗುರುಗಳಿಗೆ ಹಾಗೂ ಇನ್ನೋರ್ವ ಪ್ರತಿಭಾವಂತ ಸಾಹಿತಿಗೆ ಪ್ರತಿ ವರ್ಷ ನೀಡುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.