ರೈತ ನಾಯಕ ಅಂಬೇಡ್ಕರ್

7

ರೈತ ನಾಯಕ ಅಂಬೇಡ್ಕರ್

Published:
Updated:
ರೈತ ನಾಯಕ ಅಂಬೇಡ್ಕರ್

ಮಹಾರಾಷ್ಟ್ರದಲ್ಲಿ ನಡೆದ ‘ಖೋತಿ’ ವ್ಯವಸ್ಥೆ ವಿರೋಧಿ ಹೋರಾಟವು ಸುದೀರ್ಘವಾದ, ರಚನಾತ್ಮಕವಾದ, ಸಂಘಟಿತವಾದ ಗೇಣಿದಾರರ ಹೋರಾಟ ಎಂದೇ ಹೆಸರುವಾಸಿಯಾಗಿದೆ. ಪೇಶ್ವೆಗಳ ಆಡಳಿತದಲ್ಲಿ ‘ಖೋತಿ’ ಕಂದಾಯ ವ್ಯವಸ್ಥೆಯ ಯಜಮಾನರಾದ ‘ಖೋತ್‌’ಗಳ ಸುಲಿಗೆಯಿಂದ ರೈತರು ಬದುಕು ದುರ್ಭರವಾಗಿತ್ತು. ಬ್ರಿಟಿಷರು ಬಂದಮೇಲೂ ಪರಿಸ್ಥಿತಿ ಸುಧಾರಿಸಲಿಲ್ಲ. ಇಂಥ ಕ್ರೂರ ಪದ್ಧತಿಯ ವಿರುದ್ಧ ಧ್ವನಿ ಎತ್ತಿದವರು ಮತ್ತು ಅದು ನಿರ್ನಾಮವಾಗುವವರೆಗೂ ಹೋರಾಡಿದವರು ಡಾ. ಬಿ.ಆರ್.ಅಂಬೇಡ್ಕರ್ ಮತ್ತು ಸಂಗಾತಿಗಳು. 1929ರಿಂದ 1948ರವರೆಗೆ ನಿರಂತರವಾಗಿ ನಡೆದ ಈ ಹೋರಾಟ ಹೆಚ್ಚು ಪ್ರಚಾರ ಪಡೆದುಕೊಂಡಿಲ್ಲ.

ಜನರ ಸ್ವಾವಲಂಬಿ ಬದುಕಿಗಾಗಿ ಅಂಬೇಡ್ಕರ್ ಅವರು ನಡೆಸಿದ್ದ ಹೋರಾಟಗಳು, ಚಿಂತನೆಗಳು ಗೌಣವಾಗಿ ಉಳಿದಿವೆ. ಆ ಕಾರಣಕ್ಕೇ ಅಂಬೇಡ್ಕರ್ ಅವರನ್ನು ಇಂದು ಕೇವಲ ದಲಿತ ನಾಯಕರನ್ನಾಗಿ ನೋಡಲಾಗುತ್ತಿದೆ. ಮಹಾರಾಷ್ಟ್ರದ ‘ಖೋತಿ’ ವ್ಯವಸ್ಥೆಯ ವಿರೋಧಿ ಹೋರಾಟವನ್ನು ಗಮನಿಸಿದರೆ ಅಂಬೇಡ್ಕರ್ ಎಂಥ ರೈತ ಹೋರಾಟಗಾರರಾಗಿದ್ದರು ಎಂಬುದು ಅರಿವಾಗುತ್ತದೆ.

ಅಮಾನುಷ ‘ಖೋತಿ’ ವ್ಯವಸ್ಥೆಯ ಕುರಿತು ಕಾಂಗ್ರೆಸ್ ಧ್ವನಿ ಎತ್ತದಿದ್ದಾಗ ಹೋರಾಟದ ನಾಯಕತ್ವ ವಹಿಸಿದವರು ಅಂಬೇಡ್ಕರ್. ‘ಗಾಂಧೀಜಿಯವರ ದೃಷ್ಟಿಯಲ್ಲಿ ಭೂಮಿಯ ಕೃಷಿ ಮಾಡಲು ನೊಗಕ್ಕೆ ಕಟ್ಟುವ ಎರಡು ಎತ್ತುಗಳ ಜೊತೆ ರೈತನು ಮೂರನೆಯ ಎತ್ತು ಮಾತ್ರ. ಆದರೆ, ನನ್ನ ಧ್ಯೇಯವೇ ಸಂಪೂರ್ಣ ಭಿನ್ನ. ರೈತನ ಅಸಹನೀಯ ಸಂಕಟವನ್ನು ನಿವಾರಿಸಲು ಮತ್ತು ಅವನ ಒಳಿತಿಗಾಗಿ ಹೋರಾಟಲು ನಾನು ಸಂಪೂರ್ಣ ಬದ್ಧನಾಗಿದ್ದೇನೆ’ ಎಂದು ಹೇಳುತ್ತಾರೆ. ರೈತರ ಬಿಡುಗಡೆಗಾಗಿ ನಡೆಸಿದ ಹೋರಾಟದಲ್ಲಿ ಕೊನೆಯವರೆಗೂ ತೊಡಗಿಸಿಕೊಳ್ಳುತ್ತಾರೆ.

‘ಖೋತಿ’ ವ್ಯವಸ್ಥೆಯ ವಿರೋಧಿ ಹೋರಾಟ ಕೇವಲ ರೈತ ಹೋರಾಟ ಮಾತ್ರವಲ್ಲ. ಪರಿಣಾಮದಲ್ಲಿ ಅದು ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಹೋರಾಟವೂ ಆಗಿದೆ. ಅಸಾಧಾರಣ ಕಾರ್ಯವನ್ನು ಡಾ.ಅಂಬೇಡ್ಕರ್ ಮತ್ತು ಸಂಗಾತಿಗಳು ಸಾಧಿಸಿ ನ್ಯಾಯ ಪಡೆದ ಹೋರಾಟದ ಇತಿಹಾಸ ‘ಖೋತಿ ವಿರುದ್ಧದ ಹೋರಾಟ’ ಕೃತಿ.

ಡಾ. ಸಿದ್ದನಗೌಡ ಪಾಟೀಲ

‘ಖೋತಿ ವಿರುದ್ಧದ ಹೋರಾಟ’ ಪುಸ್ತಕ ಬಿಡುಗಡೆ (ಮೂಲ–ಚಂದ್ರಕಾಂತ ಅಧಿಕಾರಿ, ಅನು– ಎನ್.ಗಾಯತ್ರಿ):  ಲೋಕಾರ್ಪಣೆ– ಮಾವಳ್ಳಿ ಶಂಕರ್, ಕೃತಿ ಪರಿಚಯ– ಅನಸೂಯ ಕಾಂಬಳೆ, ಆಯೋಜನೆ– ನವಕರ್ನಾಟಕ ಪ್ರಕಾಶನ, ಸ್ಥಳ– ಶ್ರೀಕೃಷ್ಣರಾಜ ಪರಿಷನ್ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಶನಿವಾರ ಸಂಜೆ 5

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry