ಶುಕ್ರವಾರ, ಡಿಸೆಂಬರ್ 6, 2019
25 °C
ಬಾದಾಮಿಯಲ್ಲಿ ಸಿ.ಎಂ ಸ್ಪರ್ಧೆ: ಪ್ರತಿತಂತ್ರ ರೂಪಿಸಲು ಪ್ರಮುಖರ ಜತೆ ಶಾ ಚರ್ಚೆ

‘ಮೋದಿ ಭಾವಚಿತ್ರ ನೋಡಿ ಕೆಲಸ ಮಾಡಿ’

Published:
Updated:
‘ಮೋದಿ ಭಾವಚಿತ್ರ ನೋಡಿ ಕೆಲಸ ಮಾಡಿ’

ಮುಧೋಳ (ಬಾಗಲಕೋಟೆ ಜಿಲ್ಲೆ): ‘ಪಕ್ಷದ ಅಭ್ಯರ್ಥಿಗಳ ಬಗ್ಗೆ ಅತೃಪ್ತಿ, ಅಸಮಾಧಾನ ಇದ್ದರೆ ಅವರ ಮುಖ ನೋಡಬೇಡಿ. ಬದಲಿಗೆ ಭಾರತ ಮಾತೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಕಣ್ಮುಂದೆ ತಂದುಕೊಂಡು ಕೆಲಸ ಮಾಡಿ ಚುನಾವಣೆ ಗೆಲ್ಲಬೇಕು’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮುಖಂಡರಿಗೆ ಸಲಹೆ ನೀಡಿದರು.

ಪಕ್ಷದ ಬೆಳಗಾವಿ ವಿಭಾಗದ ಶಕ್ತಿ ಕೇಂದ್ರದ ಪ್ರಮುಖರ ಸಮಾವೇಶ ಉದ್ಘಾಟಿಸಿ ಶುಕ್ರವಾರ ಇಲ್ಲಿ ಮಾತನಾಡಿದ ಅವರು, ಎರಡನೇ ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಮುನ್ನವೇ, ಮುಖಂಡರ ಅತೃಪ್ತಿಯ ಬಿಸಿ ತಗ್ಗಿಸುವ ಪ್ರಯತ್ನ ಮಾಡಿದರು.

‘ದಕ್ಷಿಣ ಭಾರತದಲ್ಲಿ ಬಿಜೆಪಿ ವಿಜಯಯಾತ್ರೆ ಕರ್ನಾಟಕದಿಂದಲೇ ಆರಂಭವಾಗಬೇಕು. ಆ ನಿಟ್ಟಿನಲ್ಲಿ, ಚುನಾವಣೆ ಮುಗಿಯುವವರೆಗೂ ವಿಶ್ರಾಂತಿ ಬೇಡ. ಪಕ್ಷದಿಂದ ಕೊಟ್ಟಿರುವ 19 ಅಂಶಗಳ ಸೂತ್ರ ಬಳಸಿ ಬೂತ್ ಮಟ್ಟದಿಂದಲೇ ಮತ ಭದ್ರಗೊಳಿಸಬೇಕು’ ಎಂದು ಸೂಚಿಸಿದರು.

‘ಉತ್ತರ ಪ್ರದೇಶ, ಅಸ್ಸಾಂ, ಮಣಿಪುರ, ತ್ರಿಪುರಾ ಚುನಾವಣೆ ಗೆಲ್ಲುವ ಮೂಲಕ ನಾವು ರಾಜಕೀಯ ಪಂಡಿತರ ಲೆಕ್ಕಾಚಾರ ತಲೆಕೆಳಗೆ ಮಾಡಿದ್ದೇವೆ. ಆ ಗೆಲುವಿಗೆ ನಾನೇ ಕಾರಣ ಎಂದು ಹೇಳುವ ಮಾಧ್ಯಮಗಳು, ರಾಜಕೀಯ ಚಾಣಕ್ಯ ಎಂದು ಬಣ್ಣಿಸುತ್ತಿವೆ. ಆದರೆ ಆ ಗೆಲುವುಗಳಲ್ಲಿ ನನ್ನದೇನೂ ಪಾತ್ರವಿಲ್ಲ. ಯಾವುದೇ ರಹಸ್ಯ ಅಡಗಿಲ್ಲ. ಬದಲಿಗೆ ಶಕ್ತಿ ಕೇಂದ್ರ ಹಾಗೂ ಬೂತ್‌ ಮಟ್ಟದ ಉಸ್ತುವಾರಿಗಳ ಶ್ರಮ ಕಾರಣ’ ಎಂದರು.

ಸಿ.ಎಂ ವಿರುದ್ಧ ವಾಗ್ದಾಳಿ: ‘ದೇಶದ ಯಾವುದೇ ಮುಖ್ಯಮಂತ್ರಿ ಬಗ್ಗೆ ಇರದಷ್ಟು ಸಿಟ್ಟು ಸಿದ್ದರಾಮಯ್ಯ ಅವರ ಬಗ್ಗೆ ಕರ್ನಾಟಕದ ಜನರಲ್ಲಿದೆ. ಕಾಂಗ್ರೆಸ್ ನೇತೃತ್ವದ ಸರ್ಕಾರ, ಉತ್ತರ ಕರ್ನಾಟಕದವರನ್ನು ಮಲತಾಯಿ ಮಕ್ಕಳಂತೆ ನೋಡಿಕೊಂಡಿದೆ. ಜನರ ಮನಸ್ಸಿನ ಈ ಭಾವನೆಗೆ ಧ್ವನಿಯಾಗುವ ಜೊತೆಗೆ ಅವರ ಆಕ್ರೋಶವನ್ನು ಬಿಜೆಪಿ ಪರ ಮತವಾಗಿ ಪರಿವರ್ತಿಸಿ’ ಎಂದು ಹೇಳಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ‘ಸಿದ್ದರಾಮಯ್ಯ ಎಲ್ಲಿ ಸ್ಪರ್ಧೆ ಮಾಡಿದರೂ ಗೆಲ್ಲುವುದಿಲ್ಲ. ತಂತ್ರಗಾರಿಕೆಗೆ ಪ್ರತಿತಂತ್ರ ರೂಪಿಸುವುದರಲ್ಲಿ ಅಮಿತ್ ಶಾ ಕಡಿಮೆ ಇಲ್ಲ ಎಂಬುದು ಈಗಾಗಲೇ ಉತ್ತರ ಪ್ರದೇಶ ಚುನಾವಣೆಯಲ್ಲಿ ಸಾಬೀತಾಗಿದೆ’ ಎಂದರು.

**

ಕಾರಜೋಳ ಮನೆಯಲ್ಲಿ ಅಮಿತ್‌ ಶಾ ಕಾರ್ಯತಂತ್ರ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದು, ಅದಕ್ಕೆ ಪ್ರತಿತಂತ್ರ ರೂಪಿಸುವ ಬಗ್ಗೆ ಶಾಸಕ ಗೋವಿಂದ ಕಾರಜೋಳ ಅವರ ಮನೆಯಲ್ಲಿ ಅಮಿತ್‌ ಶಾ ಪ್ರಮುಖರ ಜತೆ ಚರ್ಚಿಸಿದರು.

ಸಮಾವೇಶದ ನಂತರ ಕಾರಜೋಳ ಅವರ ಮನೆಯಲ್ಲಿ ಹೋಳಿಗೆ, ಮಾವಿನ ಹಣ್ಣಿನ ಸೀಕರಣೆ, ಜೋಳದ ರೊಟ್ಟಿ, ಬದನೆಕಾಯಿ ಪಲ್ಯ ಸವಿದರು.

ನಂತರ, ಮುಖಂಡರೊಂದಿಗೆ 25 ನಿಮಿಷ ಗೋಪ್ಯ ಸಭೆ ನಡೆಸಿದರು. ಈ ವೇಳೆ ಯಡಿಯೂರಪ್ಪ, ಕೇಂದ್ರ ಸಚಿವ ರಮೇಶ ಜಿಗಜಿಣಗಿ, ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಗೋವಿಂದ ಕಾರಜೋಳ, ಸಂಸದ ಪ್ರಹ್ಲಾದ ಜೋಶಿ ಇದ್ದರು. ಎಲ್ಲರಿಂದಲೂ ಅಭಿಪ್ರಾಯ ಸಂಗ್ರಹಿಸಿದರು ಎನ್ನಲಾಗಿದೆ.

‘ಮುಖ್ಯಮಂತ್ರಿ ಸ್ಪರ್ಧೆ ಮಾಡಿದರೆ ಈ ಭಾಗದ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಅದಕ್ಕೆ ಅವಕಾಶ ನೀಡದಂತೆ ಪ್ರತಿತಂತ್ರ ರೂಪಿಸಬೇಕು. ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆ ಎದುರಿಸಬೇಕು’ ಎನ್ನುವ ಸಲಹೆಯನ್ನು ಅವರು ನೀಡಿದರು ಎಂದು ಗೊತ್ತಾಗಿದೆ.

ಭೇಟಿಗೆ ಅವಕಾಶ ಸಿಗಲಿಲ್ಲ: ಅಮಿತ್ ಶಾ ಭೇಟಿಯಾಗಲು ವಿಜಯಪುರದ ಮಾಜಿ ಶಾಸಕ ಅಪ್ಪಾ ಸಾಹೇಬ ಪಟ್ಟಣಶೆಟ್ಟಿ ಮುಧೋಳಕ್ಕೆ ಬಂದಿದ್ದರು. ‘ನಾನು ಗದ್ದಲ ಮಾಡಲು ಬಂದಿಲ್ಲ. ಅಮಿತ್ ಶಾ ಭೇಟಿಗೆ ಅವಕಾಶ ಸಿಕ್ಕಿದಲ್ಲಿ, ಎರಡನೇ ಪಟ್ಟಿಯಲ್ಲಿ ವಿಜಯಪುರ ನಗರದಿಂದಲೇ ಸ್ಪರ್ಧಿಸಲು ಅವಕಾಶ ನೀಡುವಂತೆ ಮನವಿ ಮಾಡುವೆ’ ಎಂದು ತಿಳಿಸಿದರು. ಆದರೆ ಶಾ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಲು ಅವಕಾಶ ಸಿಗದೇ ವಾಪಸಾದರು.

**

ಶಾ ರೋಡ್‌ ಶೋ: ದೂರ ಉಳಿದ ಬಾಲಚಂದ್ರ ಜಾರಕಿಹೊಳಿ!

ಗೋಕಾಕ: ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಗೋಕಾಕದಲ್ಲಿ ಶುಕ್ರವಾರ ನಡೆದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ರೋಡ್‌ ಶೋನಲ್ಲಿ ಕಾಣಿಸಿಕೊಳ್ಳಲಿಲ್ಲ. ಇದು ಮುಖಂಡರ ಹುಬ್ಬೇರಿಸಿದೆ.

ಪಕ್ಷದ ಬಹುತೇಕ ನಾಯಕರು ಶಾ ಅವರೊಂದಿಗೆ ಮೆರವಣಿಗೆಯಲ್ಲಿ ಕಾಣಿಸಿಕೊಂಡರು. ಆದರೆ, ಬಾಲಚಂದ್ರ ಇರಲಿಲ್ಲ. ಬಳಿಕ ಅವರು ಗುರುವಾರ ಪೇಟೆಯ ಶೂನ್ಯ ಸಂಪಾದನ ಮಠದ ಸ್ವಾಮೀಜಿಗಳ ಬಳಿ ಪ್ರತ್ಯಕ್ಷರಾದರು. ಮಠಕ್ಕೆ ಶಾ ಭೇಟಿ ನೀಡಿದ್ದಾಗ ಅವರು ಕೂಡ ಅಲ್ಲಿದ್ದರು.

ಈ ಸಂಬಂಧ ಸುದ್ದಿಗಾರರು ಕೇಳಿದಾಗ ‘ನಾನು ಮೆರವಣಿಗೆಯಲ್ಲಿ ಭಾಗವಹಿಸಿದ ನಂತರವೇ ಮಠಕ್ಕೆ ಬಂದಿದ್ದೇನೆ’ ಎಂದು ಸಮರ್ಥಿಸಿಕೊಂಡರು.

ನಂತರ ಮಠಕ್ಕೆ ಬಂದ ಸಂಸದ ಪ್ರಹ್ಲಾದ ಜೋಶಿ ತಮಗೆ ಎದುರಾದ ಬಾಲಚಂದ್ರ ಅವರನ್ನು ‘ರೋಡ್‌ ಶೋ’ನಲ್ಲಿ ಪಾಲ್ಗೊಳ್ಳಬೇಕಿತ್ತಲ್ಲ!’ ಎಂದು ಕೇಳಿದರು.‌ ಅದಕ್ಕೆ ಅವರು ‘ಬಂದಿದ್ದೆ’ ಎಂದು ಉತ್ತರಿಸಿದರು. ಕ್ಷೇತ್ರದ ಉಸ್ತುವಾರಿ, ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಭಾಗವಹಿಸಿರಲಿಲ್ಲ.

**

‘ಸಮೀಕ್ಷೆ ಆಧರಿಸಿ ಟಿಕೆಟ್ ನೀಡಿಕೆ’

‘ಆಮಿತ್ ಶಾ ಅವರ ಸಮೀಕ್ಷೆ ಆಧಾರದ ಮೇಲೆ ಟಿಕೆಟ್ ನೀಡಲಾಗುತ್ತಿದೆ ಹೊರತು ನಮ್ಮ ಚಿಕ್ಕಪ್ಪ, ದೊಡ್ಡಪ್ಪನ ಮಕ್ಕಳು ಅಭ್ಯರ್ಥಿಗಳಾಗುವುದಿಲ್ಲ. ಟಿಕೆಟ್‌ ಸಿಗದವರಿಗೆ ಸರ್ಕಾರ ಬಂದಾಗ ಬೇರೆ ಬೇರೆ ಸ್ಥಾನಮಾನ ನೀಡಲಾಗುವುದು’ ಎಂದು ಯಡಿಯೂರಪ್ಪ ಭರವಸೆ ನೀಡಿದರು.

ಪ್ರತಿಕ್ರಿಯಿಸಿ (+)