ಶುಕ್ರವಾರ, ಡಿಸೆಂಬರ್ 13, 2019
19 °C

ಕರ್ನಾಟಕ ಎಲೆಕ್ಷನ್ ಲೀಗ್

ಪ್ರಕಾಶ್ ಶೆಟ್ಟಿ Updated:

ಅಕ್ಷರ ಗಾತ್ರ : | |

ಕರ್ನಾಟಕ ಎಲೆಕ್ಷನ್ ಲೀಗ್

ಆಹಾ! ಎಂತಹ ಸಮಯ ಅಂತೀರಾ! ಹೀಗೊಂದು ಸುಸಂದರ್ಭ ಬರಬೇಕಿದ್ದರೆ ಐದು ವರ್ಷ ಕಾಯಬೇಕಾಯಿತು ನೋಡಿ!

‘ಅರೆ, ಚುನಾವಣೆ ಬರುವುದು ಐದು ವರ್ಷಕ್ಕೊಮ್ಮೆ ತಾನೇ? ಅದರಲ್ಲೇನು ಅಂತಹ ವಿಶೇಷವಿದೆ’ ಎಂದು ನೀವು ಕೇಳಬಹುದು. ವಿಧಾನಸಭೆ ಚುನಾವಣೆ ಮತ್ತು ಐಪಿಎಲ್ ಕ್ರಿಕೆಟ್ ಟೂರ್ನಿ ಜತೆ ಜತೆಯಾಗಿ ನಡೆಯುತ್ತಿರುವುದೇ ಈ ಬಾರಿಯ ವಿಶೇಷ. ‘ಅಲ್ರೀ, ಚುನಾವಣೆ ಹೊತ್ತಿಗೇ ರಥೋತ್ಸವ, ಮದುವೆ, ಮುಂಜಿ ನಡೆಯುವುದಿಲ್ಲವೇ? ಸುಮ್ಮನೆ ಕ್ರಿಕೆಟ್ ಮತ್ತು ಚುನಾವಣೆಗೆ ಗಂಟು ಹಾಕಬೇಡಿ...’ ಅಂತ ಮುಖ ಗಂಟು ಹಾಕಿಕೊಂಡಿರಾ?

ಐಪಿಎಲ್ ಮತ್ತು ಚುನಾವಣೆ ಒಟ್ಟಿಗೆ ಸದ್ದು ಮಾಡುತ್ತಿರುವುದರಿಂದಲೇ ಕ್ರಿಕೆಟ್ ಹಾಗೂ ರಾಜಕೀಯದೊಳಗಿನ ವಿಶೇಷ ಬಾಂಧವ್ಯವನ್ನು ಇಲ್ಲಿ ಬರೆಯುವುದಕ್ಕೆ ದಯವಿಟ್ಟು ಅನುಮತಿ ಕೊಡಬೇಕು. ಈಚೆಗೆ ಕ್ರಿಕೆಟ್‌ನೊಳಗೆ ಸಿಕ್ಕಾಪಟ್ಟೆ ರಾಜಕೀಯ ಹೊಕ್ಕಿದೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಆದರೆ ರಾಜಕೀಯದೊಳಗೆ ಕ್ರಿಕೆಟ್ ಹೊಕ್ಕಿರುವುದು ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ಅದನ್ನೇ ಇಲ್ಲಿ ಬರೆಯಲು ಹೊರಟಿರುವುದು.

ರಾಜ್ಯದಲ್ಲಿ ಚುನಾವಣೆ ಯಾವ ರೂಪ ಪಡೆದಿದೆ ಎಂದರೆ, ನಾವು ‘ಕರ್ನಾಟಕ ಎಲೆಕ್ಷನ್ ಲೀಗ್’ ನೋಡುತ್ತಿದ್ದೇವೆಯೇನೋ ಅನಿಸತೊಡಗಿದೆ. ಅಷ್ಟರಮಟ್ಟಿಗೆ ಐಪಿಎಲ್ ನಮ್ಮ ವಿಧಾನಸಭೆ ಚುನಾವಣೆ ಮೇಲೆ ಪ್ರಭಾವ ಬೀರಿದೆ. ಮೊತ್ತ ಮೊದಲನೆಯದಾಗಿ ಎರಡು ‘ಲೀಗ್’ಗಳಲ್ಲೂ ನಡೆಯುವ ಹಣಾಹಣಿಯನ್ನು ‘ಹಣದ ಚೆಲ್ಲಾಟ’ ಎಂದೇ ಅರ್ಥೈಸಿಕೊಳ್ಳಬೇಕು.

ಐಪಿಎಲ್‌ನಲ್ಲಿರುವಂತೆ ಚುನಾವಣೆಯ ಕಣದಲ್ಲೂ ‘ಸೂಪರ್ ಕಿಂಗ್ಸ್’ (ಪಕ್ಷದ ‘ಎಟಿಎಂ’ ಖ್ಯಾತಿಗಳು) ‘ನೈಟ್ ರೈಡರ್ಸ್‌’ (ರಾತ್ರಿ ಗುಟ್ಟಾಗಿ ಮತದಾರರಿಗೆ ಆಮಿಷ ಕೊಡುವವರು) ‘ಡೇರ್ ಡೆವಿಲ್ಸ್’ (ಪ್ರತಿಸ್ಪರ್ಧಿಗಳನ್ನು ಹಿಗ್ಗಾಮುಗ್ಗಾ ಹೀಗಳೆಯುವವರು) ಮತ್ತು ‘ಸನ್ ರೈಸರ್ಸ್‌’ (ಮಕ್ಕಳನ್ನು ಕಣಕ್ಕೆ ಇಳಿಸಲು ಪಣತೊಟ್ಟ ಅಪ್ಪಂದಿರು) ಇದ್ದಾರೆ.

ಯಾವಾಗ ಐಪಿಎಲ್ ಬಂತೋ ಅಂದಿನಿಂದ ಕ್ರಿಕೆಟಿಗರೆಲ್ಲಾ ಹರಾಜಿನ ವಸ್ತುಗಳಾದದ್ದು ನಮಗೆಲ್ಲಾ ಗೊತ್ತು. ರಾಜಕೀಯದಲ್ಲೂ ಹರಾಜು ಆಗುವವರು ಬಹಳ ಹಿಂದಿನಿಂದ ಇದ್ದರೂ, ಅದೆಲ್ಲಾ ಅತ್ಯಂತ ಗುಟ್ಟಾಗಿ ನಡೆಯುತ್ತಿತ್ತು. ಆದರೆ ಈಗ ಹಾಗಲ್ಲ. ಇಂತಹ ಚುನಾವಣೆ ಸಂದರ್ಭಗಳಲ್ಲಿ ಎಲ್ಲರಿಗೂ ಹೇಳಿಕೊಂಡೇ ‘ಗೆಲ್ಲುವ ಕುದುರೆ’ಗಳನ್ನು ಕೊಂಡುಕೊಳ್ಳುತ್ತಾರೆ. ಇದಕ್ಕೆ ‘ಗಾಳ’ ಎಂಬ ಪದವೂ ಪ್ರಚಲಿತದಲ್ಲಿದೆ. ಅಧಿಕಾರಕ್ಕೆ ಬಂದರೆ ಕೋಟಿಗಟ್ಟಲೆ ಬೆಲೆ ಬಾಳುವ ಕುರ್ಚಿ ಸಿಗುತ್ತದೆ ಎಂಬ ಆಸೆಯಿಂದ ಹರಾಜು ಆಗುವವರೂ ಇದ್ದಾರೆ.

ಐಪಿಎಲ್ ಕ್ರಿಕೆಟ್‌ನಲ್ಲಿದ್ದಂತೆ ಈಗ ರಾಜಕೀಯ ಪಕ್ಷಗಳೂ ಇಂತಿಷ್ಟು ‘ಸ್ಕೋರು’ ಮಾಡಲೇಬೇಕೆಂಬ ಗುರಿ ಇಟ್ಟುಕೊಂಡೇ ಕಣಕ್ಕೆ ಇಳಿಯುತ್ತವೆ. ಕೆಲವರು ಅದನ್ನು ಎಲ್ಲೂ ಹೇಳಿಕೊಳ್ಳುವುದಿಲ್ಲ. ಕೆಲವರು ಅದಕ್ಕೆ ‘ಮಿಷನ್ 150’ ಎಂಬ ಹೊಸ ಹೆಸರನ್ನಿಟ್ಟುಕೊಂಡು ತಿರುಗಾಡುತ್ತಿರುತ್ತಾರೆ. ಇನ್ನು ಕೆಲವರು ಈ ಬಾರಿ ‘ಕಪ್’ ನಮಗೇ ಎಂದು ಹೇಳುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಅಭ್ಯರ್ಥಿಗಳು ಚುನಾವಣೆ ಅಂದ ತಕ್ಷಣ ನೀತಿ ಸಂಹಿತೆಯನ್ನು ಪ್ರತೀ ಕ್ಷಣವೂ ನೆನಪಿನಲ್ಲಿಟ್ಟುಕೊಳ್ಳಬೇಕಾಗಿದೆ. ಚುನಾವಣಾಧಿಕಾರಿಗಳು ಕ್ರಿಕೆಟ್‌ನಲ್ಲಿರುವ ಅಂಪೈರ್‌ಗಳಂತೆ ತುಂಬಾ ಕಟ್ಟುನಿಟ್ಟು. ಅಷ್ಟಾಗಿಯೂ ‘ಮ್ಯಾಚ್ ಫಿಕ್ಸಿಂಗ್’ (ಪ್ರತಿಸ್ಪರ್ಧಿಯೊಂದಿಗೆ ರಹಸ್ಯ ಒಪ್ಪಂದ), ‘ಬಾಲ್ ಟ್ಯಾಂಪರಿಂಗ್’ (ನಕಲಿ ಮತದಾರರು) ನಡೆಯುವುದು ಸಾಮಾನ್ಯವಾಗಿಬಿಟ್ಟಿದೆ.

ಐಪಿಎಲ್ ಪಂದ್ಯಗಳ ಅತಿಯಾದ ಪ್ರಭಾವದಿಂದ ರಾಜಕೀಯ ಮಾತುಗಳ ಶೈಲಿಯೂ ಬದಲಾಗುವ ಸಾಧ್ಯತೆ ಇದೆ. ಪಕ್ಷದ ನಾಯಕರು ಪ್ರತೀ ದಿವಸ ಆರು ಕಡೆ ಭಾಷಣ ಬಿಗಿದರೆ, ಪತ್ರಿಕೆಗಳಲ್ಲಿ ‘ಸಿಕ್ಸರ್‌ಗಳ ಸುರಿಮಳೆ!’ ಎಂಬ ಸುದ್ದಿ ಬರಬಹುದು. ‘ರಾಜ್ಯದಾದ್ಯಂತ ಪ್ರವಾಸ ಮಾಡಿದ ನಮ್ಮ ನಾಯಕರು ಒಂದೇ ವಾರದಲ್ಲಿ ಐವತ್ತು ಕಡೆ ಭಾಷಣ ಮಾಡಿ, ಅತಿ ವೇಗದ ಅರ್ಧ ಶತಕ ಬಾರಿಸಿ ದಾಖಲೆ ಮಾಡಿದ್ದಾರೆ’ ಎಂದು ಹೆಮ್ಮೆಯಿಂದ ಕೊಚ್ಚಿಕೊಳ್ಳುವವರೂ ಇರಬಹುದು. ತಾನು ನಿಂತ ಕ್ಷೇತ್ರದಲ್ಲಿ ಗೆಲ್ಲಲು ಅನುಕೂಲಕರ ವಾತಾವರಣ ಇದ್ದರೆ, ‘ಪಿಚ್’ ತಮಗೆ ಅನುಕೂಲವಾಗಿಯೇ ಇದೆ ಎಂದು ಖುಷಿಪಟ್ಟುಕೊಳ್ಳಬಹುದು. ಅಭ್ಯರ್ಥಿಯ ಮೇಲೆ ಹಲ್ಲೆ ನಡೆದು, ಆತ ಆಸ್ಪತ್ರೆ ಸೇರಿದರೆ ಖಂಡಿತ ‘ರಿಟೈರ್ಡ್ ಹರ್ಟ್’ ಅನ್ನಲೇಬೇಕು. ಸ್ವಾಮೀಜಿಗಳು ತಮ್ಮ ಪಾರ್ಟಿ ಪರ ‘ಬ್ಯಾಟಿಂಗ್’ ಮಾಡುತ್ತಾರೆ ಎಂಬ ನಂಬಿಕೆ ಇಟ್ಟುಕೊಳ್ಳಬಹುದು.

ಕೊನೆಗೆ ಐಪಿಎಲ್ ಅಂದ ಮೇಲೆ ಚಿಯರ್‌ ಹುಡುಗಿಯರು ಇರಬೇಕಲ್ಲವೇ! ಕರ್ನಾಟಕ ಎಲೆಕ್ಷನ್ ಲೀಗ್‌ನಲ್ಲೂ ಅಂಥವರಿದ್ದಾರೆ. ಆದರೆ ಹುಡುಗಿಯರಲ್ಲ, ಇಲ್ಲಿ ‘ಚಿಯರ್ಸ್’ ಹುಡುಗರಿರುತ್ತಾರೆ. ಇವರು ಚುನಾವಣೆ ಮುಗಿಯುವವರೆಗೆ ದಿನಾ ಮನಸೋ ಇಚ್ಛೆ ಗುಂಡು ಹಾಕಿ, ತಮ್ಮ ಪಕ್ಷದ (ಕೆಲವೊಮ್ಮೆ ಬೇರೆ ಪಕ್ಷಗಳಿಗೂ) ನಿಷ್ಠಾವಂತ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿರುತ್ತಾರೆ.

ಪ್ರತಿಕ್ರಿಯಿಸಿ (+)