ಶನಿವಾರ, ಆಗಸ್ಟ್ 8, 2020
22 °C
ಅಭಿವೃದ್ಧಿಯ ‘ಶ್ರೀರಕ್ಷೆ’ ನೆಚ್ಚಿಕೊಂಡಿರುವ ಕಾಂಗ್ರೆಸ್‌; ಜಂಗಮರ ಸೆಳೆತ, ಅನುಕಂಪದ ಅಲೆಯ ನಿರೀಕ್ಷೆಯಲ್ಲಿ ಬಿಜೆಪಿ

ಬಬಲೇಶ್ವರದಲ್ಲಿ ‘ಪಾಟೀಲದ್ವಯರ’ ಬಲಾಬಲ

ಡಿ.ಬಿ.ನಾಗರಾಜ್‌ Updated:

ಅಕ್ಷರ ಗಾತ್ರ : | |

ಬಬಲೇಶ್ವರದಲ್ಲಿ ‘ಪಾಟೀಲದ್ವಯರ’ ಬಲಾಬಲ

ಲಿಂಗಾಯತ ಸ್ವತಂತ್ರ ಧರ್ಮದ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ, ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕ. ಸ್ವತಂತ್ರ ಧರ್ಮದ ವಿವಾದದ ಕಾರಣಕ್ಕೇ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮತ್ತು ಎಂ.ಬಿ.ಪಾಟೀಲ ನಡುವೆ ವಾಕ್‌ ಸಮರವೂ ನಡೆಯುತ್ತಿದೆ. ಹೀಗಾಗಿಯೇ ಈ ಕ್ಷೇತ್ರ ನಾಡಿನ ಗಮನ ಸೆಳೆದಿದೆ.

ಈ ಹಿಂದಿನ ಎರಡು ಚುನಾವಣೆಗಳಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಎರಡನೇ ಸ್ಥಾನ ಪಡೆದಿದ್ದ ವಿಜುಗೌಡ ಪಾಟೀಲ, ಬಿಜೆಪಿಗೆ ಸೇರ್ಪಡೆಯಾದ ಬಳಿಕ ಕ್ಷೇತ್ರದ ಚಿತ್ರಣ ಬದಲಾಗಿದೆ. ಆರೋಪ– ಪ್ರತ್ಯಾರೋಪ ಮತ್ತಷ್ಟು ಹೆಚ್ಚಾಗಿದೆ.

ಕಾಂಗ್ರೆಸ್– ಬಿಜೆಪಿ ನಡುವೆ ನೇರ ಹಣಾಹಣಿ ನಡೆದಿದೆ. ಜೆಡಿಎಸ್‌ ಪಕ್ಷವು ಬಹುಜನ ಸಮಾಜ ಪಕ್ಷಕ್ಕೆ (ಬಿಎಸ್‌ಪಿ) ಕ್ಷೇತ್ರವನ್ನು ಬಿಟ್ಟುಕೊಟ್ಟಿದೆ. ಬಬಲೇಶ್ವರದಲ್ಲಿ ನೆಲೆ ಇಲ್ಲದ ಬಿಎಸ್‌ಪಿ, ಸಮರ್ಥ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿದೆ. ಈ ಹೊಂದಾಣಿಕೆಯ ಹಿಂದೆ ಕಾಂಗ್ರೆಸ್‌ನ ಕೈವಾಡವಿದೆ ಎಂಬ ಮಾತು ಕ್ಷೇತ್ರದೆಲ್ಲೆಡೆ ಕೇಳಿ ಬರುತ್ತಿದೆ.

ಇಬ್ಬರ ಬಗೆಗೂ ಒಲವು: ‘ಎಂ.ಬಿ.ಪಾಟೀಲ ಚಲೋ ಮನುಷ್ಯ. ಯಾರಿಗೂ ತ್ರಾಸು ಕೊಡಂಗಿಲ್ಲ. ಸಾಕಷ್ಟು ಅಭಿವೃದ್ಧಿ ಕೆಲಸ ಮಾಡ್ಯಾರ. ಅವರನ್ನ ಬೆಂಬಲಸ್ತೀವಿ’ ಎಂಬ ಮಾತು ಒಂದೆಡೆ; ‘ಜನಸಾಮಾನ್ಯರನ್ನು ಅಷ್ಟೇನೂ ಹತ್ರಕ್ಕ ಬಿಟ್ಕೊಂಡಿಲ್ಲ. ಇನ್ನು ಜನರೊಂದಿಗೆ ಅವರ ಆಪ್ತರು, ಬೆಂಬಲಿಗರು, ಕಚೇರಿ ಸಿಬ್ಬಂದಿ ನಡಕೊಳ್ಳೋ ರೀತಿ ಸರಿ ಇಲ್ಲ’ ಎಂಬ ಅಸಮಾಧಾನ ಇನ್ನೊಂದೆಡೆ.

‘ವಿಜುಗೌಡ ಎರಡು ಬಾರಿ ಸೋತಾನ. ಸಾವು– ನೋವಿಗೆ, ನಮ್‌ ಕಷ್ಟಕ್ಕ ಕರೀದಿದ್ರೂ ಬರ್ತಾನ. ಒಂದ್‌ ಸಲ ಅವಕಾಶ ಕೊಟ್ಟು ನೋಡೋಣೂ’ ಎಂಬ ಅನುಕಂಪದ ಮಾತು ಒಂದೆಡೆಯಾದರೆ, ‘ಎಲ್ಲಾರನೂ ವಿಶ್ವಾಸಕ್ಕೆ ತೊಗೊಳಲ್ಲ. ತನ್ನ ಮಾತ ನಡೀಬೇಕು ಅನ್ನೋ ಉದ್ಧಟತನ. ಹಳೆ ಕಾರ್ಯಕರ್ತರ ಕೂಡ ಬೆರೆಯೋದು ಕಮ್ಮಿ. ಗೌಡಕಿ ಗತ್ತು ಮಾಡ್ತಾನ. ಈಗಾಗ್ಲೇ ತನ್ನ ಮಗನನ್ನು ಮುಂದ ತಂದಾನ... ಆದ್ರೂ ಈಗ ಒಂಚೂರು ಸುಧಾರಿಸಿದ್ದಾನ’ ಎಂಬ ಮಾತು ಬಿಜೆಪಿ ಕಾರ್ಯಕರ್ತರಿಂದಲೇ ಕೇಳಿ ಬರುತ್ತಿದೆ.

ಆಂತರಿಕ ಸಮೀಕ್ಷೆ; ಉಡುಗೊರೆ

‘ಎಂ.ಬಿ.ಪಾಟೀಲ ತಿಂಗಳಿಗೊಮ್ಮೆ ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆಯಿಂದ ಆಂತರಿಕ ಸಮೀಕ್ಷೆ ನಡೆಸುತ್ತಿದ್ದಾರೆ. ಇದರ ಫಲಿತಾಂಶದ ಆಧಾರದಲ್ಲಿ, ತಮ್ಮ ಫೌಂಡೇಷನ್‌ ವತಿಯಿಂದ ಕ್ಷೇತ್ರದ ಜನರಿಗೆ ಉಡುಗೊರೆ ನೀಡಿ ಮನ ಸೆಳೆಯುವ ಕೆಲಸ ನಡೆಸಿದ್ದಾರೆ. ಈ ಸಂಬಂಧ ಚುನಾವಣಾ ಆಯೋಗ ಕೂಡ ದೂರು ದಾಖಲಿಸಿಕೊಂಡಿದೆ’ ಎನ್ನುತ್ತಾರೆ ಸ್ಥಳೀಯ ಯುವಕರು.

‘ಕೆರೆಗಳಿಗೆ ಬಾಗಿನ ಅರ್ಪಣೆ ನೆಪದಲ್ಲಿ ಮಹಿಳೆಯರಿಗೆ ಸೀರೆ, ಕೊಡ ನೀಡಿದರು. ಯುವಕರಿಗೆ ಕ್ರಿಕೆಟ್‌ ಕಿಟ್, ಆಟದ ಸಾಮಗ್ರಿ ನೀಡಿದ್ದಾರೆ. ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್‌ ಕೊಟ್ಟಿದ್ದಾರೆ. ಈಚೆಗೆ ಮನೆ ಮನೆಗೂ ಪಾತ್ರೆ ವಿತರಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಸಾಕಷ್ಟು ಉಡುಗೊರೆ ನೀಡಲಿದ್ದಾರೆ ಎಂಬ ಮಾತು ಸಚಿವರ ಹಿಂಬಾಲಕರಿಂದಲೇ ಕೇಳಿ ಬರುತ್ತಿದೆ’ ಎಂದು ಅವರು ಹೇಳಿದರು.

ಕ್ಷೇತ್ರದಲ್ಲಿನ ಚುನಾವಣಾ ಚಿತ್ರಣ ಈಗಾಗಲೇ ರಂಗೇರಿದೆ. ಆದರೂ ಅಧಿಸೂಚನೆ ಬಳಿಕ ಕೆಲ ಪ್ರಮುಖ ಬದಲಾವಣೆ ಆಗಬಹುದು ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ ಎನ್ನುತ್ತಾರೆ ತಿಕೋಟಾದ ಆರ್‌.ಎಸ್‌.ಬಿರಾದಾರ.

**

ಅಭಿವೃದ್ಧಿಯ ಪರ್ವ...

ಕ್ಷೇತ್ರ ಅಭಿವೃದ್ಧಿಯ ಪರ್ವ ಕಂಡಿದೆ. ತುಬಚಿ– ಬಬಲೇಶ್ವರ ಏತ ನೀರಾವರಿ ಯೋಜನೆಗೆ ಮಂಜೂರಾತಿ ನೀಡಿ, ಟೆಂಡರ್‌ ಕರೆದು, ಕಾಮಗಾರಿ ಪೂರ್ಣಗೊಳಿಸಿ, 600 ಮೀಟರ್‌ ಎತ್ತರದಲ್ಲಿರುವ ತಿಕೋಟಾ ತಾಲ್ಲೂಕಿಗೆ ಪ್ರಾಯೋಗಿಕವಾಗಿ ನೀರು ಹರಿಸಿರುವುದು ಮೈಲುಗಲ್ಲಾಗಿದೆ.

ಮುಳವಾಡ, ಕಾರಜೋಳ ಏತ ನೀರಾವರಿ ಯೋಜನೆಯಡಿಯೂ ಕ್ಷೇತ್ರದ ವಿವಿಧೆಡೆ ನೀರಾವರಿ ಸೌಲಭ್ಯ ಒದಗಿಸಲಾಗಿದೆ. ಕೆರೆಗಳನ್ನು ತುಂಬಿಸಲಾಗಿದೆ. 80 ಬಾಂದಾರ ನಿರ್ಮಿಸಿ ನೀರು ಸಂಗ್ರಹಿಸುವ ಕೆಲಸ ವ್ಯವಸ್ಥಿತವಾಗಿ ನಡೆದಿದೆ. ಪ್ರತಿ ಗ್ರಾಮದಲ್ಲೂ ಜಾತಿಗೊಂದು ಸಮುದಾಯ ಭವನ, ಯಾತ್ರಿ ನಿವಾಸ, ಶಾದಿ ಮಹಲ್‌ ಹಲವೆಡೆ ನಿರ್ಮಾಣಗೊಂಡಿದ್ದರೆ, ಉಳಿದೆಡೆ ಕಾಮಗಾರಿ ಪ್ರಗತಿಯಲ್ಲಿದೆ. ಹಳ್ಳಿ– ಹಳ್ಳಿಗೂ ಸಂಪರ್ಕ ರಸ್ತೆ ನಿರ್ಮಿಸಲಾಗಿದೆ. ಜಲಸಂಪನ್ಮೂಲ ಇಲಾಖೆಯ ಎಸ್‌ಸಿಪಿ, ಟಿಎಸ್‌ಪಿ ಅನುದಾನದಡಿ ಓಣಿ ಓಣಿಗೂ ಕಾಂಕ್ರೀಟ್‌ ರಸ್ತೆ ನಿರ್ಮಾಣಗೊಂಡಿವೆ. ತೋಟದ ವಸ್ತಿಗೂ ಕೆಲವೆಡೆ ರಸ್ತೆ ಸೌಲಭ್ಯ ಒದಗಿಸಲಾಗಿದೆ.

100 ಪ್ರೌಢಶಾಲೆಗಳಿಗೆ ಡಿಜಿಟಲ್‌ ಶಿಕ್ಷಣದ ಉಪಕರಣ ಒದಗಿಸಿದ್ದರೆ, 35 ಪ್ರಾಥಮಿಕ ಶಾಲೆಗಳಿಗೆ ಟಾಕಿಂಗ್‌ ಟ್ರೀ ನೀಡಲಾಗಿದೆ. ಒಟ್ಟಾರೆ ₹8,000 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ.

–ಎಂ.ಬಿ.ಪಾಟೀಲ, ಬಬಲೇಶ್ವರ ಶಾಸಕ – ಸಚಿವ

**

‘ತಕ್ಕ ಪಾಠ ಕಲಿಸಲಿದ್ದಾರೆ‘

ಎರಡು ಬಾರಿ ಸೋತಿದ್ದರೂ ಜನರ ಸಂಪರ್ಕದಲ್ಲಿರುವೆ. ಅವರ ಕಷ್ಟದಲ್ಲಿ ಭಾಗಿಯಾಗಿರುವೆ. ಜಲಸಂಪನ್ಮೂಲ ಸಚಿವರ ಸ್ವಕ್ಷೇತ್ರದಲ್ಲೇ ಕುಡಿಯುವ ನೀರಿನ ಬವಣೆ ನೀಗಿಸಲು ಸತತ ಐದು ವರ್ಷ ‘ಜೀವ ಜಲಧಾರೆ’ ಟ್ಯಾಂಕರ್‌ಗಳ ಮೂಲಕ ಹಳ್ಳಿ ಹಳ್ಳಿಗೂ ನೀರು ಕೊಟ್ಟಿರುವೆ.

ಬಾಯಿ ಬಿಟ್ಟರೆ ವಿಜಯಪುರ ಜಿಲ್ಲೆಯ 15 ಲಕ್ಷ ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಿದ್ದೇನೆ ಎಂದು ಸಚಿವರು ಬಡಾಯಿ ಕೊಚ್ಚಿಕೊಳ್ಳುತ್ತಾರೆ. ಆದರೆ ಭೂಮಿ ಕಳೆದುಕೊಂಡವರಿಗೆ ಇನ್ನೂ ಪರಿಹಾರ ಕೊಟ್ಟಿಲ್ಲ. ಇದರ ಜತೆಗೆ ವೀರಶೈವ ಲಿಂಗಾಯತ ಧರ್ಮ ಒಡೆಯಲಿಕ್ಕೆ ಮುಂಚೂಣಿಯಲ್ಲಿದ್ದರು. ಇವೆಲ್ಲದರಿಂದ ಜನ ಬೇಸತ್ತಿದ್ದಾರೆ. ಇದೀಗ ಸಮಯ ಬಂದಿದೆ. ಕಾಂಗ್ರೆಸ್‌ ಅಭ್ಯರ್ಥಿಗೆ ತಕ್ಕ ಉತ್ತರ

ನೀಡಲಿದ್ದಾರೆ.

–ವಿಜುಗೌಡ ಪಾಟೀಲ, ಬಿಜೆಪಿ ಅಭ್ಯರ್ಥಿ

**

ಶಾಸಕರು ಭೇದ ಭಾವವಿಲ್ಲದೆ ಕೆಲಸ ಮಾಡಿದ್ದಾರೆ. ನೀರಾವರಿಗೆ ಅಪಾರ ಕೊಡುಗೆ ನೀಡಿದ್ದಾರೆ. ನಮ್ಮ ಕೆರೆಗಳನ್ನು ತುಂಬಿಸಿದ್ದಾರೆ. ಸಾಕಷ್ಟು ಸಮುದಾಯ ಭವನಗಳು ಹಳ್ಳಿಗಳಲ್ಲಿ ನಿರ್ಮಾಣಗೊಂಡಿವೆ.

–ಸಾಹೇಬಗೌಡ ಪಾಟೀಲ, ನಾಗರಾಳ

**

ಚುನಾವಣೆ ಸಮೀಪಿಸಿದಾಗ ರಸ್ತೆಗೆ ಭೂಮಿಪೂಜೆ ಮಾಡಿದ್ದಾರೆ. ಬರಟಗಿ ಕೆರೆ ತುಂಬಿಲ್ಲ. ಆಪ್ತ ಕಾರ್ಯಕರ್ತರಿಗಷ್ಟೇ ಮಣೆ ಹಾಕಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಟ್ಟಿಗೆ ಕರೆದೊಯ್ಯಲ್ಲ.

–ಪ್ರಕಾಶ ರಾಠೋಡ, ಬರಟಗಿ

**

ಧರ್ಮ ರಾಜಕಾರಣ

ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಬಿರುಸುಗೊಂಡ ಬೆನ್ನಿಗೇ ‘ಧರ್ಮ ರಾಜಕಾರಣ’ ಬಬಲೇಶ್ವರದಲ್ಲಿ ಬೂದಿ ಮುಚ್ಚಿದ ಕೆಂಡದಂತಿದೆ. ಕೆಲವೊಮ್ಮೆ ಬಹಿರಂಗವಾಗಿ ಸ್ಫೋಟಗೊಂಡಿದೆ.

‘ವೀರಶೈವ ಲಿಂಗಾಯತ ಧರ್ಮದ ಪ್ರಬಲ ಪ್ರತಿಪಾದಕರಾದ ಪಂಚಪೀಠಾಧೀಶ್ವರರು ಬಹಿರಂಗವಾಗಿಯೇ ಎಂ.ಬಿ.ಪಾಟೀಲ ವಿರುದ್ಧ ಗುಡುಗಿದ್ದಾರೆ. ತಮ್ಮ ಪೀಠಗಳ ಭಕ್ತರ ಮನೆಗೆ ಸಂದೇಶ ರವಾನಿಸಿದ್ದಾರೆ. ಬಬಲೇಶ್ವರ ಬೃಹನ್ಮಠದ ಡಾ. ಮಹಾದೇವ ಶಿವಾಚಾರ್ಯರು ಬಹಿರಂಗವಾಗಿಯೇ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಕ್ಷೇತ್ರ ವ್ಯಾಪ್ತಿಯ ಇನ್ನೂ ಕೆಲ ಮಠಾಧೀಶರು ತೆರೆಮರೆಯಲ್ಲಿ ಸಚಿವರ ವಿರುದ್ಧ

ಹುನ್ನಾರ ನಡೆಸಿದ್ದಾರೆ’ ಎಂದು ಕೆ.ಎಸ್‌.ಹಿರೇಮಠ ಹೇಳಿದರು.

ಇದಕ್ಕೆ ಸಡ್ಡು ಹೊಡೆದವರಂತೆ ಎಂ.ಬಿ.ಪಾಟೀಲ ಸಹ ಎಲ್ಲ ವರ್ಗದ ಸ್ವಾಮೀಜಿಗಳನ್ನು ಕೆರೆಗೆ ಬಾಗಿನ ಅರ್ಪಿಸುವ ಸಮಾರಂಭಕ್ಕೆ ಆಹ್ವಾನಿಸಿ, ತಮ್ಮ ಪರ ಬ್ಯಾಟ್‌ ಬೀಸುವಂತೆ ಚಾಣಾಕ್ಷ ನಡೆ ಅನುಸರಿಸಿದ್ದಾರೆ.

**

‌ಕುಟುಂಬಗಳ ನಡುವೆ ಜಿದ್ದಾಜಿದ್ದಿ

ಬಿ.ಎಂ.ಪಾಟೀಲ ನಿಧನದಿಂದ 1991ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಎಂ.ಬಿ.ಪಾಟೀಲ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ನಂತರ 1994, 1999ರಲ್ಲಿ ನಡೆದ ಚುನಾವಣೆಗಳಲ್ಲಿ ಶಿವಾನಂದ ಪಾಟೀಲ ವಿರುದ್ಧ ಸೋತರು.

2004, 2008, 2013ರಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದಾರೆ. 90ರ ದಶಕದಿಂದ ತಿಕೋಟಾ, 2008ರಿಂದ ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ ಮನೆತನದ ನಡುವೆಯೇ ಜಿದ್ದಾಜಿದ್ದಿ ನಡೆದಿದ್ದು, 2018ರಲ್ಲೂ ಇದು ಮುಂದುವರಿಯಲಿದೆ.

ಈ ಹಿಂದಿನ ತಿಕೋಟಾ, ಈಗಿನ ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಮತದಾರರು ಇಲ್ಲಿಯವರೆಗೂ ಎಂಟು ಬಾರಿ ಎಂ.ಬಿ.ಪಾಟೀಲ ಕುಟುಂಬಕ್ಕೆ ಆಶೀರ್ವದಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.