ಶುಕ್ರವಾರ, ಡಿಸೆಂಬರ್ 6, 2019
25 °C

ಕೇಂದ್ರ ಗೃಹಸಚಿವಾಲಯ ತಲುಪಿದ ರಾಜ್ಯದ ಶಿಫಾರಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇಂದ್ರ ಗೃಹಸಚಿವಾಲಯ ತಲುಪಿದ ರಾಜ್ಯದ ಶಿಫಾರಸು

ಬೆಂಗಳೂರು: ‘ಲಿಂಗಾಯತರ ಧಾರ್ಮಿಕ ಅಲ್ಪಸಂಖ್ಯಾತ ಮಾನ್ಯತೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಸರ್ಕಾರ ಕಳುಹಿಸಿರುವ ಶಿಫಾರಸು ಕೇಂದ್ರ ಗೃಹ ಸಚಿವಾಲಯದ ಕೈಸೇರಿದೆ’ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್‌ ಪ್ರಭುಲಿಂಗ ಕೆ.ನಾವದಗಿ ಹೈಕೋರ್ಟ್‌ಗೆ ತಿಳಿಸಿದರು.

ಲಿಂಗಾಯತರಿಗೆ ಸ್ವತಂತ್ರ ಧರ್ಮದ ಮಾನ್ಯತೆ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಅಲ್ಪಸಂಖ್ಯಾತ ಆಯೋಗವು ತಜ್ಞರ ಸಮಿತಿ ರಚನೆಗೆ ಆದೇಶ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ನಾಲ್ಕು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (ಪಿಐಎಲ್‌) ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಬಿ.ಎಂ.ಶ್ಯಾಮ್ ಪ್ರಸಾದ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ಹಾಜರಿದ್ದ ನಾವದಗಿ, ಈ ಕುರಿತಂತೆ ನ್ಯಾಯಪೀಠಕ್ಕೆ ಲಿಖಿತ ಮೆಮೊ ಸಲ್ಲಿಸಿದರು.

‘ಲಿಂಗಾಯತರನ್ನು ಧಾರ್ಮಿಕ ಅಲ್ಪಸಂಖ್ಯಾತರು ಎಂದು ಘೋಷಿಸುವಂತೆ ಕೋರಿ ರಾಜ್ಯ ಸರ್ಕಾರ 2018ರ ಮಾರ್ಚ್ 23ರಂದು ಶಿಫಾರಸು ಮತ್ತು ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯಕ್ಕೆ ಕಳುಹಿಸಿತ್ತು. ಆದರೆ, ಇದು ಗೃಹ ಸಚಿವಾಲಯದ ವ್ಯಾಪ್ತಿಗೆ ಬರುತ್ತದೆ ಎಂದು ಅಲ್ಪಸಂಖ್ಯಾತ ಸಚಿವಾಲಯ ಗೃಹ ಸಚಿವಾಲಯಕ್ಕೆ ರವಾನಿಸಿದೆ. ಈ ಕುರಿತಂತೆ ಗೃಹ ಸಚಿವಾಯಲದ ಡೆಪ್ಯುಟಿ ಕಾರ್ಯದರ್ಶಿ ವಿವರ ನೀಡಿದ್ದಾರೆ’ ಎಂದು ತಿಳಿಸಿದರು.

‘ಶಿಫಾರಸು ಕುರಿತ ಪರಿಶೀಲನೆ ಪ್ರಕ್ರಿಯೆಗೆ ಸಾಕಷ್ಟು ಸಮಯ ತಗುಲುತ್ತದೆ. ಆದ್ದರಿಂದ ಇದಕ್ಕೆ ಕಾಲಾವಕಾಶ ನೀಡಬೇಕು’ ಎಂದು ಕೋರಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ವಿಚಾರಣೆಯನ್ನು ಜೂನ್ 19 ಕ್ಕೆ ಮುಂದೂಡಿದೆ.

ಪ್ರತಿಕ್ರಿಯಿಸಿ (+)