ಸೋಮವಾರ, ಜುಲೈ 13, 2020
25 °C

‘ಏರ್‌ಕಂಡೀಷನಲ್ಲಿ ಕುಳಿತು ನಿಯಮ ರೂಪಿಸುವುದು ಸುಲಭ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಏರ್‌ಕಂಡೀಷನಲ್ಲಿ ಕುಳಿತು ನಿಯಮ ರೂಪಿಸುವುದು ಸುಲಭ’

ಬೆಂಗಳೂರು: ನೆತ್ತಿ ಸುಡುವಷ್ಟು ಬಿಸಿಲು, ಕುಡಿಯುವುದಕ್ಕೇ ನೀರಿಲ್ಲ... ಈ ಪರಿಸ್ಥಿತಿಯಲ್ಲಿ ಕಾಲೇಜುಗಳನ್ನು ಪ್ರಾರಂಭಿಸುವುದಾದರೂ ಹೇಗೆ ಎಂಬುದು ಹೈದರಾಬಾದ್‌ ಕರ್ನಾಟಕ ಭಾಗದ ಪಿಯುಸಿ ಉಪನ್ಯಾಸಕರ ಪ್ರಶ್ನೆ.

ಪದವಿಪೂರ್ವ ಶಿಕ್ಷಣ ಇಲಾಖೆ ಈ ಬಾರಿ ಪಿಯುಸಿ ತರಗತಿಗಳನ್ನು ಮೇ 2ಕ್ಕೆ ಪ್ರಾರಂಭಿಸಿರುವುದರಿಂದ ರಾಜ್ಯದ ವಿವಿಧ ಭಾಗಗಳ ಶಿಕ್ಷಕರು ವಿರೋಧ ವ್ಯಕ್ತಪಡಿಸಿದ್ದಾರೆ.

‘ಈ ವೇಳೆಯಲ್ಲಿ ನಮ್ಮ ಭಾಗದಲ್ಲಿ ಕೆಲಸ ಮಾಡುವುದು, ಏರ್‌ಕಂಡೀಷನ್‌ ಕೊಠಡಿಯಲ್ಲಿ ಕೂತು ನಿಯಮಗಳನ್ನು ರೂಪಿಸಿದಷ್ಟು ಸುಲಭವಲ್ಲ. ಉತ್ಸಾಹದಲ್ಲಿ ಹೊಸ ನಿಯಮಗಳನ್ನು ರೂಪಿಸಿರುವ ನಿರ್ದೇಶಕರಿಗೆ ವಾಸ್ತವ ಏನೆಂದು ಗೊತ್ತಿಲ್ಲ. ಶಹಾಪುರ ರಸ್ತೆಗಳಲ್ಲಿ ಅವರು 10 ನಿಮಿಷ ನಡೆದಾಡಿದರೆ, ನಾನು ರಾಜೀನಾಮೆ ನೀಡುತ್ತೇನೆ’ ಎಂದು ಉಪನ್ಯಾಸಕ ಬಸವಲಿಂಗಪ್ಪ ಸವಾಲೊಡ್ಡಿದರು.

‘ಹೈದರಾಬಾದ್‌ ಕರ್ನಾಟಕ, ಮುಂಬೈ ಕರ್ನಾಟಕ ಭಾಗದಲ್ಲಿ ಬೇಸಿಗೆಯಲ್ಲಿ ಕಚೇರಿಯ ಸಮಯವನ್ನೇ ಬದಲಿಸುತ್ತಾರೆ. ಹೀಗಿರುವಾಗ ಬೆಳಿಗ್ಗೆ 9.30ರಿಂದ ಸಂಜೆ 4ರವರೆಗೆ ಪಾಠ ಮಾಡಲು ಸಾಧ್ಯವೇ. ಛತ್ರಿ ಹಿಡಿದು ನಡೆದರೂ ಹೆಚ್ಚು ದೂರ ಹೋಗಲು ಸಾಧ್ಯವಿಲ್ಲ’ ಎಂದರು.

‘ಬೇಸಿಗೆಯಲ್ಲಿ ಈ ಭಾಗದಲ್ಲಿ ನೀರಿನ ಅಭಾವ ತಾರಕಕ್ಕೇರಿರುತ್ತದೆ. ಕುಡಿಯುವುದಕ್ಕೇ ನೀರು ಸಿಗುವುದಿಲ್ಲ. ಇನ್ನು ಶೌಚಾಲಯಗಳಿಗೆ ನೀರು ಒದಗಿಸುವುದು ಹೇಗೆ? ವಿದ್ಯಾರ್ಥಿಗಳಿಗೆ ಏನೇ ಆದರೂ ನಮ್ಮನ್ನೇ ಗುರಿ ಮಾಡಲಾಗುತ್ತದೆ. ಮೇ 28ರಿಂದ ತರಗತಿಗಳನ್ನು ಪ್ರಾರಂಭಿಸುವುದೇ ವೈಜ್ಞಾನಿಕವಾಗಿ ಸರಿಯಾದ ಕ್ರಮ’ ಎಂದು ‍ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಹೇಳಿದರು.

‘ಮೇ ತಿಂಗಳಲ್ಲಿ 9 ಜಿಲ್ಲೆಗಳಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್‌ವರೆಗೂ ತಲುಪುತ್ತದೆ.  ಇಲಾಖೆಗೆ ಬಂದ ನಿರ್ದೇಶಕರೆಲ್ಲರೂ ವ್ಯವಸ್ಥೆಯಲ್ಲಿ ಏನಾದರೂ ಬದಲಾವಣೆ ತರಲು ಮುಂದಾಗುತ್ತಾರೆ. ಇದರಿಂದಾಗಿ ಗೊಂದಲ ಸೃಷ್ಟಿಯಾಗುತ್ತದೆ. ಉಪನ್ಯಾಸಕರನ್ನು ಗಣನೆಗೆ ತೆಗೆದುಕೊಳ್ಳದೆ, ಮನಬಂದಂತೆ ನಿಯಮ ರೂಪಿಸಿದ್ದಾರೆ. ಮೇ 2ರಿಂದ ತರಗತಿಗಳನ್ನು ಬಹಿಷ್ಕರಿಸುತ್ತೇವೆ’ ಎಂದರು.

‘ನಮ್ಮ ಭಾಗದ ವಿದ್ಯಾರ್ಥಿಗಳು ಬಸ್‌ ಪಾಸ್‌ ದೊರೆಯುವವರೆಗೂ ಕಾಲೇಜಿಗೆ ಬರುವುದಿಲ್ಲ. ಜೂನ್‌ ನಂತರವೇ ಪಾಸ್‌ ವಿತರಿಸಲಾಗುತ್ತದೆ. ಹೀಗಾಗಿ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮುಂಚಿತವಾಗಿ ಕಾಲೇಜು ಪ್ರಾರಂಭಿಸುವ ಇಲಾಖೆಯ ಯೋಚನೆ ಫಲಪ್ರದವಾಗುವುದಿಲ್ಲ’ ಎಂದು ಬಳ್ಳಾರಿಯ ಉಪನ್ಯಾಸಕ ವೀರೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.

‘ಕರಾವಳಿ ಭಾಗದಲ್ಲಿ ಕುಡಿಯುವ ನೀರಿನ ತೀವ್ರ ಕೊರತೆ ಇರುತ್ತದೆ. ಜೊತೆಗೆ ಬೇಸಿಗೆಯಲ್ಲಿ ವಿಪರೀತ ಸೆಕೆಯ ವಾತಾವರಣ ಇರುತ್ತದೆ. ಹೀಗಾಗಿ ಕಾಲೇಜುಗಳಲ್ಲಿ ತಾಸುಗಟ್ಟಲೇ ಪಾಠ ಮಾಡಲು ಸಾಧ್ಯವಾಗುವುದಿಲ್ಲ’ ಎಂದು ಉಡುಪಿಯ ಹೆಸರು ಹೇಳಲು ಇಚ್ಚಿಸದ ಉಪನ್ಯಾಸಕರೊಬ್ಬರು ತಿಳಿಸಿದರು.

‘ರಜೆರಹಿತ ಹುದ್ದೆ ಎಂದು ಘೋಷಿಸಿ’

‘ಉಪನ್ಯಾಸಕರ ಹುದ್ದೆಯನ್ನು ರಜೆರಹಿತ ಹುದ್ದೆ ಎಂದಾದರೂ ಘೋಷಿಸಿದರೆ, ವರ್ಷಕ್ಕೆ ಇಂತಿಷ್ಟು ರಜೆ ಸಿಗುತ್ತದೆ. ಆಗ ನಮಗೆ ಅಗತ್ಯವಿದ್ದಾಗ ರಜೆ ಹಾಕಿಕೊಳ್ಳಬಹುದು’ ಎಂದು ತಿಮ್ಮಯ್ಯ ಪುರ್ಲೆ ಒತ್ತಾಯಿಸಿದರು.

ದಸರಾ ರಜೆ ಎಂದು 15 ದಿನ ನೀಡುತ್ತಾರೆ. ಆ ವೇಳೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಪಾಠ ತೆಗೆದುಕೊಳ್ಳಬೇಕು ಎಂಬ ನಿರ್ದೇಶನವಿದೆ. ಅದಕ್ಕಾಗಿ ಐದಾರು ದಿನ ವ್ಯಯವಾಗುತ್ತದೆ. ಈಗ ಮಾಡಿರುವ ವೇಳಾಪಟ್ಟಿಯ ಪ್ರಕಾರ ಉಪನ್ಯಾಸಕರಿಗೆ ಬೇಸಿಗೆ ರಜೆ ಸಿಗುವುದೇ ಇಲ್ಲ ಎಂದು ವಿವರಿಸಿದರು.

‘ಏಪ್ರಿಲ್‌ 11ಕ್ಕೆ ಮೌಲ್ಯಮಾಪನ ಮುಗಿದಿದೆ. 15ರಿಂದ ಪ್ರಥಮ ಪಿಯು ವಿದ್ಯಾರ್ಥಿಗಳ ಪೂರಕ ಪರೀಕ್ಷೆ ಪ್ರಾರಂಭವಾಗುತ್ತದೆ. ಇದರ ಮೌಲ್ಯಮಾಪನ ಮುಕ್ತಾಯವಾಗುವುದು ಮೇ 2ಕ್ಕೆ’ ಎಂದು ಹೇಳಿದರು.

ಪಿ.ಯು ತರಗತಿ ಆರಂಭ: ಶಿಖಾ ಸ್ಪಷ್ಟನೆ

‘ಚುನಾವಣೆ ನೀತಿಸಂಹಿತೆಯ ಕಾರಣದಿಂದ ಪ್ರಥಮ ಪಿ.ಯು ಪರೀಕ್ಷೆಗಳು ಫೆಬ್ರುವರಿ 21ಕ್ಕೆ ಮುಗಿದಿದ್ದು,  69 ರಜಾ ದಿನಗಳು ದೊರೆತಿವೆ. ದ್ವಿತೀಯ ಪಿ.ಯು ಪರೀಕ್ಷೆಗಳು ಮಾರ್ಚ್‌ 17ಕ್ಕೆ ಮುಕ್ತಾಯವಾಗಿದ್ದು, 45 ರಜಾ ದಿನಗಳು ಸಿಗಲಿವೆ. ಇನ್ನು ಮೌಲ್ಯಮಾಪನ ಉಪನ್ಯಾಸಕರ ಕರ್ತವ್ಯ. ಇದಕ್ಕೆ ದಿನಕ್ಕೆ ₹768 ಗೌರವಧನ ನೀಡಲಾಗುತ್ತದೆ’ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಸಿ. ಶಿಖಾ ಸ್ಪಷ್ಟನೆ ನೀಡಿದ್ದಾರೆ.

‘ರಜೆರಹಿತ ಹುದ್ದೆಯ ಕುರಿತು ಚುನಾವಣೆ ನಂತರ ಪರಿಶೀಲಿಸಲಾಗುವುದು. ಹಿಂದಿನ ಸಾಲಿನವರೆಗೂ ಜೂನ್‌ 1ರಿಂದ ತರಗತಿಗಳು ಪ್ರಾರಂಭವಾಗುತ್ತಿದ್ದವು. ಆಗ ಸುಮಾರು 100 ದಿನಗಳ ಸುದೀರ್ಘ ರಜೆ ಸಿಗುತ್ತಿತ್ತು. ಇದರಿಂದ ವಿದ್ಯಾರ್ಥಿಗಳು ಪ್ರಥಮ ಪಿಯುಸಿಯಲ್ಲಿ ಓದಿದ್ದನ್ನು ಮರೆತುಬಿಡುತ್ತಿದ್ದರು. ಮುಂಚಿತವಾಗಿಯೇ ತರಗತಿಗಳನ್ನು ಆರಂಭಿಸುವುದರಿಂದ ಶೈಕ್ಷಣಿಕ ಸುಧಾರಣೆ ಸಾಧ್ಯ’ ಎಂದರು.

* ಉಪನ್ಯಾಸಕರ ರಜೆ ಕಡಿತಗೊಳಿಸುವುದು ಪಿಯುಸಿ ಶೈಕ್ಷಣಿಕ ಗುಣಮಟ್ಟ ಕುಸಿತಕ್ಕೆ ಕಾರಣವಾಗುತ್ತದೆ. ಇದು ವಿದ್ಯಾರ್ಥಿಗಳ ಮೇಲೂ ಪರಿಣಾಮ ಬೀರುತ್ತದೆ

–ರಮೇಶ್‌ ಬಾಬು, ವಿಧಾನಪರಿಷತ್‌ ಸದಸ್ಯ

* ಉಪನ್ಯಾಸಕರಿಗೆ, ವಿದ್ಯಾರ್ಥಿಗಳಿಗೆ ಮಾರಕವಾದ ಹಾಗೂ ಬೇಜವಾಬ್ದಾರಿ ಸುತ್ತೋಲೆಯನ್ನು ಕೂಡಲೇ ಹಿಂಪಡೆಯಬೇಕು

–ಗಣೇಶ್ ಕಾರ್ಣಿಕ್‌, ವಿಧಾನಪರಿಷತ್‌ ಸದಸ್ಯ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.