ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘150 ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ’

Last Updated 13 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬಳ್ಳಾರಿ: ‘ಹೈದರಾಬಾದ್‌ ಕರ್ನಾಟಕ ಪ್ರದೇಶದ ಆರು ಜಿಲ್ಲೆಗಳ ಆಯ್ದ 150 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಹೆಲ್ತ್‌ ಅಂಡ್‌ ಫಿಟ್‌ನೆಸ್‌ ಸೆಂಟರ್‌ ಆಗಿ ಮೇಲ್ದರ್ಜೆಗೆ ಏರಿಸಲಾಗುವುದು’ ಎಂದು ಪ್ರಾದೇಶಿಕ ಆಯುಕ್ತ ಹಾಗೂ ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಹರ್ಷ ಗುಪ್ತಾ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಕೇಂದ್ರಗಳಲ್ಲಿ ಪ್ರಸ್ತುತ ಕಿರಿಯ ಮಹಿಳಾ ಆರೋಗ್ಯ ಸಹಾಯಕರಷ್ಟೇ ಇದ್ದಾರೆ. ಅವರೊಂದಿಗೆ ಹಿರಿಯ ಸ್ಟಾಫ್‌ ನರ್ಸ್‌ ಹಾಗೂ ಡಿ ಗ್ರೂಪ್‌ ನೌಕರರನ್ನು ನೇಮಿಸಲಾಗುವುದು. ಹೆಚ್ಚುವರಿ ಕೊಠಡಿ ನಿರ್ಮಿಸಲಾಗುವುದು. ಅದಕ್ಕಾಗಿ ಪ್ರತಿ ಕೇಂದ್ರಕ್ಕೆ ₹11 ಲಕ್ಷ ನಿಗದಿಪಡಿಸಲಾಗಿದೆ’ ಎಂದು ವಿವರಿಸಿದರು.

ಆರೋಗ್ಯ –ಶಿಕ್ಷಣ: ‘ಆರೂ ಜಿಲ್ಲೆಗಳಲ್ಲಿ 2018–19ನೇ ಸಾಲಿನಲ್ಲಿ ₹1,500 ಕೋಟಿ ಅನುದಾನದ ಪೈಕಿ ಶೇ 60ರಷ್ಟನ್ನು ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ವಿನಿಯೋಗಿಸಲು ಮಂಡಳಿಯ ಸಭೆಯಲ್ಲಿ ನಿರ್ಧರಿಸಲಾಗಿದೆ. ಇದುವರೆಗೂ ಈ ಎರಡು ಕ್ಷೇತ್ರಗಳಿಗೆ ಶೇ 20ರಿಂದ 25ರಷ್ಟು ಅನುದಾನವನ್ನು ಬಳಸಲಾಗಿದೆ’ ಎಂದು ತಿಳಿಸಿದರು.

ಶಿಕ್ಷಣ ಕ್ಷೇತ್ರ: ‘ಅಂಗನವಾಡಿ ಹಾಗೂ ಶಾಲೆಗಳಿಗೆ ಅಗತ್ಯವಿರುವ ಹೆಚ್ಚುವರಿ ಕೊಠಡಿಗಳು, ಸಲಕರಣೆ, ಕಟ್ಟಡಗಳ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು. ಆರೋಗ್ಯ ಕ್ಷೇತ್ರದಲ್ಲಿ ರಾಜ್ಯದ ಅನುಮೋದಿತ ಯೋಜನೆಗಳಿಗೆ ಅನುದಾನ ನೀಡುವುದನ್ನು ಮುಂದುವ
ರಿಸಲಾಗುವುದು. ಮಾತೃಪೂರ್ಣ ಯೋಜನೆ ಜಾರಿಯಾಗಿರುವುರಿಂದ ಅಗತ್ಯವಿರುವ ಅಂಗನವಾಡಿಗಳಲ್ಲಿ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ಹಿರಿಯ ಪ್ರಾಥಮಿಕ ಶಾಲೆಗಳ ಉನ್ನತೀಕರಣಕ್ಕೂ ಅನುದಾನ ಬಿಡುಗಡೆ ಮಾಡಲಾಗುವುದು’ ಎಂದರು.

3 ವರ್ಷ ಅನುದಾನ: ಹೈ–ಕ ಜಿಲ್ಲೆಗಳಲ್ಲಿ ಹೊಸದಾಗಿ ಸ್ಥಾಪಿಸಲಾಗುವ ಶಿಕ್ಷಣ ಸಂಸ್ಥೆಗಳಿಗೆ ಮೂರು ವರ್ಷ ಮಂಡಳಿಯೇ ಅನುದಾನ ನೀಡಲಿದೆ. ನಂತರ ಸರ್ಕಾರವೇ ಅನುದಾನವನ್ನು ಭರಿಸಬೇಕು’ ಎಂದರು.

‘ಚುನಾವಣೆ ಕರ್ತವ್ಯದ ಭಾರ’

ಬಳ್ಳಾರಿ: ‘ಮಂಡಳಿಯ ಅಧಿಕಾರಿ, ಸಿಬ್ಬಂದಿಗಳೆಲ್ಲರೂ ಚುನಾವಣೆ ಕರ್ತವ್ಯದಲ್ಲಿ ನಿರತರಾಗಿರುವುದರಿಂದ ಮೇ ತಿಂಗಳ ಅಂತ್ಯದವರೆಗೆ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗುವುದಿಲ್ಲ’ ಎಂದು ಹರ್ಷಗುಪ್ತಾ ತಿಳಿಸಿದರು.

‘ಮಂಡಳಿಯು ಇದುವರೆಗೆ ₹4,500 ಕೋಟಿ ವೆಚ್ಚದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಿದೆ. ಮಾರ್ಚ್‌ ಅಂತ್ಯದ ವೇಳೆಗೆ ಮೂರು ಮತ್ತು ನಾಲ್ಕನೇ ಕಂತು ಸೇರಿ ಒಟ್ಟು ₹2,600 ಕೋಟಿ ಬಿಡುಗಡೆಯಾಗಿದ್ದು, ₹2,060 ಕೋಟಿ ಖರ್ಚು ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

* ಮಂಡಳಿ ಅನುದಾನ ದುರ್ಬಳಕೆಯಾಗಿರುವ ಕುರಿತು ನಿಖರ ದೂರು ಬಂದರೆ ಕ್ರಮ ಕೈಗೊಳ್ಳಲಾಗುವುದು

– ಹರ್ಷ ಗುಪ್ತಾ, ಹೈ–ಕ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT