ಬಸ್‌ ಸಂಚಾರ ಪುನರಾರಂಭ

ಬುಧವಾರ, ಮಾರ್ಚ್ 20, 2019
31 °C
ಮೊದಲ ಹಂತದಲ್ಲಿ 60 ಬಸ್‌ಗಳು ಕಾರ್ಯಾಚರಣೆ

ಬಸ್‌ ಸಂಚಾರ ಪುನರಾರಂಭ

Published:
Updated:
ಬಸ್‌ ಸಂಚಾರ ಪುನರಾರಂಭ

ಬೆಂಗಳೂರು: ನಗರದ ವಾಹನ ದಟ್ಟಣೆ ತಪ್ಪಿಸಲು ನಿರ್ಮಿಸಿದ್ದ ಪೀಣ್ಯದ ಬಸವೇಶ್ವರ ಬಸ್‌ ನಿಲ್ದಾಣದಿಂದ ಕೆ.ಎಸ್‌.ಆರ್‌.ಟಿ.ಸಿ ಬಸ್‌ಗಳ ಸಂಚಾರವು ಗುರುವಾರದಿಂದ ಪುನರ್ ಆರಂಭಗೊಂಡಿದೆ.

ಕೆಂಪೇಗೌಡ ಬಸ್ ನಿಲ್ದಾಣದಿಂದ (ಮೆಜೆಸ್ಟಿಕ್) ತುಮಕೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಬೀದರ್, ರಾಯಚೂರು, ಧಾರವಾಡ, ಶಿವಮೊಗ್ಗ, ದಾವಣಗೆರೆ ಒಳಗೊಂಡಂತೆ 20ಕ್ಕೂ ಹೆಚ್ಚು ಜಿಲ್ಲೆಗಳಿಗೆ 980 ಬಸ್‌ಗಳು ಸಂಚರಿಸುತ್ತಿವೆ. ಈ ಪೈಕಿ 60 ಬಸ್‌ಗಳು ಬಸವೇಶ್ವರ ಬಸ್‌ ನಿಲ್ದಾಣದಿಂದಲೇ ಕಾರ್ಯಾಚರಣೆ ನಡೆಸಲಿವೆ. ಗುರುವಾರ 46 ಬಸ್‌ಗಳು ಸಂಚರಿಸಿವೆ. ಹಂತ ಹಂತವಾಗಿ ಎಲ್ಲ ಬಸ್‌ಗಳ ಕಾರ್ಯಾಚರಣೆಯನ್ನು ಇಲ್ಲಿಂದಲೇ ಆರಂಭಿಸಲು ಕೆಎಸ್‌ಆರ್‌ಟಿಸಿ ನಿರ್ಧರಿಸಿದೆ.

ಈ ನಿಲ್ದಾಣವನ್ನು ₹44 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದು, 2014ರಲ್ಲಿ ಉದ್ಘಾಟನೆಗೊಂಡಿತ್ತು. ಬಸ್‌ಗಳ ಸಂಚಾರವೂ ಆರಂಭಗೊಂಡಿತ್ತು. ಆದರೆ, ನಗರದ ಬೇರೆ ಭಾಗಗಳಿಗೆ ತೆರಳಲು ಪೀಣ್ಯ ನಿಲ್ದಾಣದಿಂದ ನಗರ ಸಾರಿಗೆ ವ್ಯವಸ್ಥೆ ಸಮರ್ಪಕವಾಗಿಲ್ಲದ ಕಾರಣ ಮೆಜೆಸ್ಟಿಕ್‌ಗೆ ಬಸ್‌ಗಳು ಬಂದು ಹೋಗಬೇಕೆಂದು ಜನಪಟ್ಟು ಹಿಡಿದಿದ್ದರು. ಒತ್ತಡ ಹೆಚ್ಚಾದ ಕಾರಣ ಅಂದಿನ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನಿರ್ಧಾರ ವಾಪಸ್‌ ಪಡೆದಿದ್ದರು. ಅಂದಿನಿಂದ ಪೀಣ್ಯ ನಿಲ್ದಾಣ ಬಸ್‌ಗಳಿಲ್ಲದೆ ಖಾಲಿ ಹೊಡೆಯುತ್ತಿತ್ತು.

ಬಸವೇಶ್ವರ ಬಸ್‌ ನಿಲ್ದಾಣದ ಉಪಯುಕ್ತತೆಯನ್ನು ಹೆಚ್ಚುವ ಉದ್ದೇಶದಿಂದ ಕೆಂಪೇಗೌಡ ಬಸ್‌ ನಿಲ್ದಾಣದಿಂದ ಕಾರ್ಯಾಚರಣೆ ಮಾಡುತ್ತಿರುವ ಬಸ್‌ಗಳಲ್ಲಿ ಕೆಲವು ಬಸ್‌ಗಳನ್ನು ಅಲ್ಲಿಗೆ ವರ್ಗಾಯಿಸಲಾಗಿದೆ. ಈ ಬಸ್‌ಗಳ ಪ್ರಯಾಣ ದರದಲ್ಲಿ ₹10ರಿಂದ ₹12 ಕಡಿತಗೊಳಿಸಲಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಕೆ.ಎಸ್‌.ಆರ್‌.ಟಿ.ಸಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಹಿಂದೆ ಪೀಣ್ಯಕ್ಕೆ ನಗರ ಸಾರಿಗೆ ವ್ಯವಸ್ಥೆ ಸಮರ್ಪಕವಾಗಿರಲಿಲ್ಲ. ಆದರೆ, ಈಗ ಪೀಣ್ಯ, ಜಾಲಹಳ್ಳಿಗೆ ಮೆಟ್ರೊ ರೈಲು ಸಂಪರ್ಕವಿದೆ. ಮೆಜೆಸ್ಟಿಕ್‌ನಿಂದ ಪೀಣ್ಯಕ್ಕೆ ಬಸ್‌ಗಳಲ್ಲಿ ಹೋಗಬೇಕಾದರೆ ಸುಮಾರು 1 ಗಂಟೆ ಹಿಡಿಯುತ್ತದೆ. ಆದರೆ, ಮೆಟ್ರೊದಲ್ಲಿ 15ರಿಂದ 20 ನಿಮಿಷಗಳಲ್ಲಿ ಸಂಚರಿಸಬಹುದು ಎಂದರು.

ಈ ನಿಲ್ದಾಣದಲ್ಲಿ ಕ್ಯಾಂಟೀನ್‌, ಶೌಚಾಲಯ, ಮಹಿಳೆಯರ ವಿಶ್ರಾಂತಿ ಗೃಹ ಸೇರಿದಂತೆ ಅನೇಕ ಸೌಲಭ್ಯಗಳಿವೆ. ಕಾರ್ಯಾಚರಣೆಗೆ ಬೇಕಾದ ಸಿಬ್ಬಂದಿಯನ್ನೂ ನೇಮಿಸಲಾಗಿದೆ ಎಂದು ತಿಳಿಸಿದರು.

**

ಉಚಿತ ಸಾರಿಗೆ ವ್ಯವಸ್ಥೆ

ಪ್ರಯಾಣಿಕರ ಅನುಕೂಲಕ್ಕಾಗಿ ಬಸವೇಶ್ವರ ನಿಲ್ದಾಣದಿಂದ ಅಯ್ಯಪ್ಪ ದೇವಸ್ಥಾನ ಮತ್ತು ಜಾಲಹಳ್ಳಿ ಮೆಟ್ರೊ ನಿಲ್ದಾಣಕ್ಕೆ ಉಚಿತ ಮಿನಿ ಬಸ್‌ ಸೇವೆಯನ್ನು ಕಲ್ಪಿಸಲಾಗಿದೆ. ಎರಡು ಬಸ್‌ಗಳು ಪ್ರತಿ 15 ನಿಮಿಷಗಳಿಗೊಮ್ಮೆ ಕಾರ್ಯಾಚರಣೆ ನಡೆಸುತ್ತವೆ. ಮೆಜೆಸ್ಟಿಕ್‌ನಿಂದ ಮೆಟ್ರೊ ರೈಲಿನಲ್ಲಿ ಬರುವವರು ಜಾಲಹಳ್ಳಿ ನಿಲ್ದಾಣದಲ್ಲಿ ಇಳಿದು, ಈ ಬಸ್‌ಗಳ ಸಹಾಯದಿಂದ ಬಸವೇಶ್ವರ ಬಸ್‌ ನಿಲ್ದಾಣಕ್ಕೆ ಬರಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry