ಭಾನುವಾರ, ಡಿಸೆಂಬರ್ 15, 2019
25 °C

ಕೋಟಿ ವಂಚಕನ ಗೆಳತಿ ಮನೆಯಲ್ಲಿ ಭಾವ ಸೆರೆ!

ಎಂ.ಸಿ ಮಂಜುನಾಥ Updated:

ಅಕ್ಷರ ಗಾತ್ರ : | |

ಕೋಟಿ ವಂಚಕನ ಗೆಳತಿ ಮನೆಯಲ್ಲಿ ಭಾವ ಸೆರೆ!

ಬೆಂಗಳೂರು: ಸಾರ್ವಜನಿಕರಿಗೆ ₹ 657 ಕೋಟಿ ವಂಚಿಸಿರುವ ಉದ್ಯಮಿ ಸಚಿನ್‌ ನಾಯಕ್‌ನನ್ನು ಹುಡುಕಿಕೊಂಡು ಉತ್ತರ ಪ್ರದೇಶದ ಯುವತಿಯೊಬ್ಬಳ ಮನೆಗೆ ತೆರಳಿದ್ದ ಸಿಐಡಿ ಪೊಲೀಸರಿಗೆ, ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ಸಿಕ್ಕಿಬಿದ್ದಿದ್ದಾನೆ!

‘ಟಿಜಿಎಸ್’ ಕಂಪನಿ ನಿರ್ದೇಶಕ ಜಸ್ಟಿತ್ ಸಿಂಗ್‌ (30) ಬಂಧಿತ ಆರೋಪಿ. ಸಚಿನ್‌ ನಾಯಕ್‌ನ 2ನೇ ಪತ್ನಿ ಮನ್‌ದೀಪ್‌ ಕೌರ್‌ಳ ಅಣ್ಣನಾದ ಈತ, ಎಫ್‌ಐಆರ್ ದಾಖಲಾದಾಗಿನಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ. ಬುಧವಾರ ರಾತ್ರಿ ಜಸ್ಟಿತ್‌ನನ್ನು ಬಂಧಿಸಿ, ನ್ಯಾಯಾಧೀಶರ ಆದೇಶದಂತೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಸಿಐಡಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

(ಮನ್‌ದೀಪ್‌ ಕೌರ್, ಸಚಿನ್‌ ನಾಯಕ್)

ಮಾಜಿ ಸೈನಿಕನ ಮಕ್ಕಳು: ಪಂಜಾಬ್‌ನ ಮಾಜಿ ಸೈನಿಕ ಹರಿಜಿತ್ ಸಿಂಗ್ ಎಂಬುವರ ಮಕ್ಕಳಾದ ಜಸ್ಟಿತ್ ಹಾಗೂ ಮನ್‌ದೀಪ್ ಕೌರ್, 20 ವರ್ಷಗಳಿಂದ ಹುಳಿಮಾವುವಿನಲ್ಲಿ ನೆಲೆಸಿದ್ದಾರೆ. ಬಿ.ಕಾಂ ಪದವಿ ಮುಗಿದ ನಂತರ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮನ್‌ದೀಪ್, ಸಂಬಳ ಕಡಿಮೆಯಾಯಿತೆಂದು 2012ರಲ್ಲಿ ಉದ್ಯೋಗ ಬದಲಿಸಲು ನಿರ್ಧರಿಸಿದ್ದಳು.

ಈ ಸಂದರ್ಭದಲ್ಲಿ ಸಚಿನ್‌ ನಾಯಕ್‌ನ ‘ಡ್ರೀಮ್ಸ್‌ ಜಿಕೆ’ ಕಂಪನಿ ಹೆಚ್ಚು ವೇತನ ನೀಡುವುದಾಗಿ ಉದ್ಯೋಗಿಗಳನ್ನು ಆಕರ್ಷಿಸುತ್ತಿತ್ತು. ನೋಡಲು ಸುಂದರವಾಗಿದ್ದ ಮನ್‌ದೀಪ್‌ಗೆ ₹ 1 ಲಕ್ಷ ವೇತನ ಕೊಟ್ಟು ಕೆಲಸ ನೀಡಿದ ಸಚಿನ್, ಅದೇ ವರ್ಷ ಆಕೆಯನ್ನು ಎರಡನೇ ಮದುವೆಯಾಗಿದ್ದ. ಆ ಬಳಿಕ, ‘ಡ್ರೀಮ್ಸ್‌ ಜಿಕೆ’ ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿಯೂ ಆಗಿದ್ದ ಮೊದಲ ಪತ್ನಿ ದಿಶಾ ಚೌಧರಿಗೆ ₹ 20 ಕೋಟಿ ಜೀವನಾಂಶ ಕೊಟ್ಟು ಮುಂಬೈಗೆ ಕಳುಹಿಸಿದ್ದ.

2013ರಲ್ಲಿ ‘ಟಿಜಿಎಸ್’ ಕಂಪನಿ ಪ್ರಾರಂಭಿಸಿ, ಮನ್‌ದೀಪ್‌ ಕೌರ್‌ಳನ್ನೇ ಅದರ ವ್ಯವಸ್ಥಾಪಕ ನಿರ್ದೇಶಕಿಯನ್ನಾಗಿ ಮಾಡಿದ. ಆಕೆ ತನ್ನ ಅಣ್ಣ ಜಸ್ಟಿತ್‌ಗೆ ನಿರ್ದೇಶಕ ಹುದ್ದೆ ನೀಡಿದ್ದಳು. ಕೈಗೆಟಕುವ ಬೆಲೆಯಲ್ಲಿ ನಿವೇಶನ ಮತ್ತು ಫ್ಲ್ಯಾಟ್ ನೀಡುವುದಾಗಿ ಜನರನ್ನು ನಂಬಿಸುವುದು ಹಾಗೂ ಹಣ ಹೂಡುವಂತೆ ಅವರ ಮನವೊಲಿಸುವುದು ಈತನ ಕೆಲಸವಾಗಿತ್ತು ಎಂದು ಸಿಐಡಿ ಅಧಿಕಾರಿಯೊಬ್ಬರು ಹೇಳಿದರು.

ಎರಡು ಕಂಪನಿಗಳಿಂದ ಕೋಟಿಗಟ್ಟಲೇ ಲಾಭ ಬರಲು ಶುರುವಾಗಿದ್ದರಿಂದ ಅತಿಯಾಸೆಗೆ ಬಿದ್ದ ಸಚಿನ್, ಆಪ್ತ ಗೆಳತಿ ಮುಜುಮ್ದಾರ್ ಶಾತಕರ್ಣಿ ಜತೆ ಸೇರಿ ‘ಗೃಹಕಲ್ಯಾಣ್’ ಎಂಬ ಮತ್ತೊಂದು ಕಂಪನಿಯನ್ನೂ ತೆರೆದಿದ್ದ. ಎಫ್‌ಐಆರ್ ದಾಖಲಾದ ಬಳಿಕ ಮುಜುಮ್ದಾರ್ ಸಹ ನಾಪತ್ತೆಯಾಗಿದ್ದಾಳೆ ಎಂದು ಮಾಹಿತಿ ನೀಡಿದರು.

ದಂಪತಿ ಪತ್ತೆಗೆ ಶೋಧ: ಮೋಸ ಹೋದವರು ಕೊಟ್ಟ ದೂರಿನನ್ವಯ ಮಡಿವಾಳ ಪೊಲೀಸರು 2017ರ ಮಾರ್ಚ್‌ನಲ್ಲಿ ಸಚಿನ್‌ನಾಯಕ್‌ನನ್ನು ಬಂಧಿಸಿದ್ದರು. ವಂಚನೆ ಮೊತ್ತ ಹೆಚ್ಚಿದ್ದ ಕಾರಣ ತನಿಖೆ ಸಿಐಡಿಗೆ ವರ್ಗವಾಗಿತ್ತು. 30 ಪ್ರಕರಣಗಳಲ್ಲಿ ಜಾಮೀನು ಪಡೆಯುವಲ್ಲಿ ಯಶಸ್ವಿಯಾದ ಆತ, ‘ಸಿಐಡಿ ಪೊಲೀಸರ ವಿಚಾರಣೆಗೆ ಸಹಕರಿಸಬೇಕು’ ಎಂಬ ನ್ಯಾಯಾಲಯದ ಷರತ್ತಿಗೆ ಒಪ್ಪಿ ಎರಡು ತಿಂಗಳ ಹಿಂದೆ ಬಿಡುಗಡೆಯಾಗಿದ್ದ. ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದಾನೆ.

‘ಸಚಿನ್ ಹಾಗೂ ಮನ್‌ದೀಪ್‌ ಕೌರ್‌ ಪತ್ತೆಗೆ ಡಿವೈಎಸ್ಪಿ ಎಸ್‌.ರೇವಣ್ಣ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದೇವೆ. ಟಿಜಿಎಸ್ ಕಂಪನಿಯ ಹಳೇ ಉದ್ಯೋಗಿಯೊಬ್ಬ, ‘ಮಡಿವಾಳದ ತಾವರೆಕರೆಯಲ್ಲಿರುವ ಉತ್ತರ ಪ್ರದೇಶದ ಗೆಳತಿ ಮನೆಗೆ ಸಚಿನ್ ಆಗಾಗ್ಗೆ ಹೋಗಿ ಬರುತ್ತಾನೆ’ ಎಂಬ ಸುಳಿವು ಕೊಟ್ಟ. ಅವನನ್ನು ಹುಡುಕಿಕೊಂಡು ಬುಧವಾರ ರಾತ್ರಿ ಗೆಳತಿ ಮನೆಗೆ ಹೋದಾಗ, ಅಲ್ಲಿ ಜಸ್ಟಿತ್ ಸಿಕ್ಕಿಬಿದ್ದ’ ಎಂದು ಅಧಿಕಾರಿಗಳು ಹೇಳಿದರು.

ವಂಚಕನ ಲೆಕ್ಕ

ಸಾರ್ವಜನಿಕರಿಂದ ಸಂಗ್ರಹಿಸಿದ ಹಣ ಹೇಗೆ ಖರ್ಚಾಯಿತು ಎಂಬ ಬಗ್ಗೆ ಸಚಿನ್‌ ನಾಯಕ್ ಪೊಲೀಸರಿಗೆ ವಿಚಾರಣೆ ವೇಳೆ ಈ ಕೆಳಗಿನಂತೆ ಲೆಕ್ಕ ಕೊಟ್ಟಿದ್ದಾನೆ.

* ₹ 200 ಕೋಟಿಯನ್ನು ಗ್ರಾಹಕರಿಗೆ ಹಿಂದಿರುಗಿಸಿದ್ದೇನೆ.

* ಮೊದಲ ಪತ್ನಿ ದಿಶಾ ಚೌಧರಿಗೆ ₹40 ಕೋಟಿ ಕೊಟ್ಟಿದ್ದೇನೆ.

* ಕಂಪನಿಗಳ ಬಗ್ಗೆ ಜಾಹೀರಾತು ಪ್ರಕಟಿಸಿದ ಮಾಧ್ಯಮಗಳಿಗೆ ₹ 50 ಕೋಟಿ ನೀಡಿದ್ದೇನೆ.

* ಮುಂಬೈನಲ್ಲಿ ಆರು ಫ್ಲ್ಯಾಟ್ ಖರೀದಿಸಿದ್ದೇನೆ.

* ಪತ್ನಿ ದಿಶಾ ಚೌಧರಿ ಅಭಿನಯದ ‘ಅನುರಾಧಾ’ ಹಿಂದಿ ಚಿತ್ರ ನಿರ್ಮಾಣಕ್ಕೆ ₹ 10 ಕೋಟಿ ವ್ಯಯಿಸಿದ್ದೇನೆ. ಆ ಚಿತ್ರ ಒಂದು ದಿನ ಮಾತ್ರ ಪ್ರದರ್ಶನ ಕಂಡಿದ್ದರಿಂದ ಬಿಡಿಗಾಸೂ ಬರಲಿಲ್ಲ.

* 2ನೇ ಪತ್ನಿ ಮನ್‌ದೀಪ್ ಕೌರ್ ಷೇರು ವಹಿವಾಟಿನಲ್ಲಿ ₹ 12 ಕೋಟಿ ಕಳೆದಿದ್ದಾಳೆ.

* ಉಳಿದೆಲ್ಲ ಹಣವನ್ನು ಹೊಸ ಕಂಪನಿ ಪ್ರಾರಂಭಿಸಲು ವ್ಯಯಿಸಿದ್ದೇನೆ.

‘ಆಸ್ತಿ ಹರಾಜು ಪ್ರಕ್ರಿಯೆ ವಿಳಂಬ’

‌‘ಸಚಿನ್‌ ನಾಯಕ್‌ನ ಆಸ್ತಿ ಹರಾಜು ಹಾಕಿ, ವಂಚನೆಗೆ ಒಳಗಾದವರಿಗೆ ಹಣ ಮರಳಿಸುವಂತೆ ಸರ್ಕಾರ ದಕ್ಷಿಣ ಉಪ ವಿಭಾಗಾಧಿಕಾರಿಗೆ ಸೂಚಿಸಿ ಎರಡು ತಿಂಗಳಾಗಿದೆ. ಆದರೆ, ‘ನೋಟಿಫಿಕೇಷನ್‌ ಜಾಹೀರಾತು ಸೇರಿದಂತೆ ವಿವಿಧ ಪ್ರಕ್ರಿಯೆಗಳಿಗೆ ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ’ ಎಂದು ಅವರೂ ಮುಂದಿನ ಪ್ರಕ್ರಿಯೆ ಪ್ರಾರಂಭಿಸುತ್ತಿಲ್ಲ. ಉಪ ವಿಭಾಗಾಧಿಕಾರಿಯಾಗಿದ್ದ ಡಾ.ಬಿ.ಆರ್‌. ಹರೀಶ್ ನಾಯಕ್‌ ಈಗ ಬೇರೆಡೆ ವರ್ಗವಾಗಿ, ಪ್ರಜ್ಞಾ ಅಮ್ಮೆಂಬಳ ಅವರು ಈ ಸ್ಥಾನಕ್ಕೆ ಬಂದಿದ್ದಾರೆ. ಈಗ ಅವರು ಚುನಾವಣಾ ಕೆಲಸದಲ್ಲಿ ನಿರತರಾಗಿದ್ದು, ನಮ್ಮ ಹಣ ಯಾವಾಗ ಕೈಸೇರುತ್ತದೋ ಗೊತ್ತಿಲ್ಲ’ ಎಂದು ವಂಚನೆಗೆ ಒಳಗಾದ ಎಸ್.ಶಿವಕುಮಾರ್ ಬೇಸರ ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿ (+)