ಭಾನುವಾರ, ಡಿಸೆಂಬರ್ 15, 2019
19 °C

ಕಂಡಿದ್ದು ಗ್ರಾ.ಪಂ. ಅಧ್ಯಕ್ಷನ ಕನಸು–ಆಗಿದ್ದು ಉಪಮುಖ್ಯಮಂತ್ರಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಂಡಿದ್ದು ಗ್ರಾ.ಪಂ. ಅಧ್ಯಕ್ಷನ ಕನಸು–ಆಗಿದ್ದು ಉಪಮುಖ್ಯಮಂತ್ರಿ!

1975ರಲ್ಲಿ ವಿದ್ಯಾರ್ಥಿಯಾಗಿದ್ದಾಗ ತುರ್ತು ಪರಿಸ್ಥಿತಿ ವಿರೋಧಿಸಿ ಜೈಲಿಗೆ ಹೋಗಿದ್ದೆ. ಒಂದು ತಿಂಗಳು ಜೈಲಿನಲ್ಲಿದ್ದಾಗ ಅಡ್ವಾಣಿ ಅಂತಹ ನಾಯಕರನ್ನು ಹತ್ತಿರದಿಂದ ನೋಡಿದ್ದೆ. ಅದಾದ ಬಳಿಕ ರಾಜಕೀಯದಲ್ಲಿ ಸಕ್ರಿಯನಾದೆ. ಇಡೀ ದೇಶದಲ್ಲೇ ಅತಿ ದೊಡ್ಡ ವಿಧಾನಸಭಾ ಕ್ಷೇತ್ರವೆಂದು ಹೆಸರಾಗಿದ್ದ ಉತ್ತರ ಹಳ್ಳಿ ಕ್ಷೇತ್ರಕ್ಕೆ 1991ರಲ್ಲಿಯೇ ನನ್ನನ್ನು ಅಭ್ಯರ್ಥಿ ಎಂದು ಪಕ್ಷ ಘೋಷಿಸಿತ್ತು.

ಅಷ್ಟೊತ್ತಿಗೆ ಬೆಂಗಳೂರು ನಗರ ಬಿಜೆಪಿ ಘಟಕದ ಅಧ್ಯಕ್ಷನೂ ಆಗಿದ್ದೆ. 1994ರಲ್ಲಿ ವಿಧಾನಸಭೆಗೆ ಚುನಾವಣೆ ನಡೆದಾಗ, ನನ್ನನ್ನು ಬಿಟ್ಟು ಬೇರೆ ಪಕ್ಷದಿಂದ ಬಂದಿದ್ದ ಎಂ.ಶ್ರೀನಿವಾಸ್ ಅವರಿಗೆ ಟಿಕೆಟ್ ಕೊಟ್ಟರು. ಅವರು ಗೆದ್ದರು. 1998ರಲ್ಲಿ ಲೋಕಸಭೆಗೆ ಚುನಾವಣೆ ನಡೆದಾಗ, ಕನಕಪುರ ಕ್ಷೇತ್ರದಲ್ಲಿ ಸ್ಪರ್ಧಿಸಿದ ಅವರು ಅಲ್ಲಿಯೂ ಗೆದ್ದರು. ವಿಧಾನಸಭೆಗೆ ಅವರು ರಾಜೀನಾಮೆ ನೀಡಿದ್ದರಿಂದಾಗಿ ಉಪ ಚುನಾವಣೆ ನಡೆಯಿತು.

ಯಡಿಯೂರಪ್ಪ, ಅನಂತ

ಕುಮಾರ್ ಮತ್ತಿತರ ನಾಯಕರಿದ್ದ ಸಭೆಯಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂಬ ಚರ್ಚೆ ನಡೆಯಿತು. ಅಂದು ಸಂಸದರಾಗಿದ್ದ  ಶ್ರೀನಿವಾಸ್‌, ನನಗೆ ಟಿಕೆಟ್ ಕೊಡಲು ವಿರೋಧ ವ್ಯಕ್ತಪಡಿಸಿದರು. ಪಕ್ಷದ ತೀರ್ಮಾನಕ್ಕೆ ಬದ್ಧ ಎಂದು ಹೇಳಿದ ನಾನು, ರಾಜಕೀಯವೇ ಬೇಡ ಎಂಬ ಭಾವನೆಯಲ್ಲೇ ಮನೆಗೆ ಬಂದೆ. ಮನೆಯ ಎದುರು ಜಮಾಯಿಸಿದ್ದ ಸಾವಿರಾರು ಜನ, ನೀವೇ ಸ್ಪರ್ಧಿಸಬೇಕು ಎಂದು ಒತ್ತಾಯಿಸಿದರು. ಕೂಡಲೇ ಯಡಿಯೂರಪ್ಪನವರ ಮನೆಗೆ ಹೋದೆ. ನನಗೇ ಟಿಕೆಟ್ ಕೊಡಬೇಕು ಎಂದು ಹಟ ಮಾಡಿ, ಟಿಕೆಟ್ ಪಡೆದೆ.

ಆಗಿನ್ನೂ ನನಗೆ 40 ವರ್ಷ. ಉತ್ತರಹಳ್ಳಿ ಕ್ಷೇತ್ರದ ಮತದಾರರ ಸಂಖ್ಯೆ 8 ಲಕ್ಷ. ಜಾಲಹಳ್ಳಿಯಿಂದ ಹಿಡಿದು ಬೊಮ್ಮನಹಳ್ಳಿವರೆಗೆ ಕ್ಷೇತ್ರದ ವ್ಯಾಪ್ತಿಯಿತ್ತು. ಬೆಳಿಗ್ಗೆ 6 ಗಂಟೆಗೆ ತೆರೆದ ವಾಹನವೇರಿದರೆ ರಾತ್ರಿಯಾಗುವವರೆಗೆ ಕಂಬ ಕಂಡರೂ ಕೈಮುಗಿದು ಮತ ಕೇಳುವುದಷ್ಟೇ ನನ್ನ ಕಾಯಕವಾಗಿತ್ತು.

ಅಂದು ಎದುರಾಳಿಯಾಗಿದ್ದವರು ಕಾಂಗ್ರೆಸ್ ಅಭ್ಯರ್ಥಿ ಎಸ್. ರಮೇಶ್. ಅಂದು ಶಾಸಕರಾಗಿದ್ದ, ತುಮಕೂರಿನ ಈಗಿನ ಸಂಸದ ಎಸ್.‍ಪಿ. ಮುದ್ದ ಹನುಮೇಗೌಡ ಕ್ಷೇತ್ರದಲ್ಲಿ ಕಾಂಗ್ರೆಸ್ ಚುನಾವಣೆ ಉಸ್ತುವಾರಿ. ಕ್ಷೇತ್ರಕ್ಕೆ ಬಂದಿದ್ದ ಅವರು, ಬಿಜೆಪಿ ಅಭ್ಯರ್ಥಿ ಯಾರು ಎಂದು ಕೇಳಿದ್ದರು. ಯಾರೋ ಒಬ್ಬರು ನನ್ನನ್ನು ತೋರಿಸಿದರು. ‘ಜಿಂಕೆ ಮರಿಯನ್ನು ಹುಲಿ ಹೊಡೆದುಕೊಂಡು ಹೋಗಿ ಬಿಡುತ್ತೆ. ಬಿಜೆಪಿ ಅಭ್ಯರ್ಥಿ ಕತೆ ಅಷ್ಟೇ’ ಎಂದು ಅವರು ಹೇಳಿದ್ದರು.

ಮತದಾನ ಮುಗಿದ ಕೂಡಲೇ ಯಡಿಯೂರಪ್ಪನವರ ಮನೆಗೆ ಹೋದೆ. ‘ಶೇ 28ರಷ್ಟು ಮತದಾನವಾಗಿದೆ’ ಎಂದೆ. ‘ಗೆಲ್ಲಬೇಕಾದರೆ ಶೇ 50ರಷ್ಟಾದರೂ ಮತದಾನವಾಗಬೇಕು, ನೀನು ಗೆಲ್ಲಲ್ಲ. ಮನೆಗೆ ಹೋಗಿ ಮಲಗು’ ಎಂದರು. ಎದೆ ಧಸಕ್ಕೆಂದಿತು.

ತಮ್ಮದೇ ಆದ ಪ್ರಭಾವ ಹೊಂದಿದ್ದ ಕಾಂಗ್ರೆಸ್ ನಾಯಕ ಎಸ್‌. ರಮೇಶ್, ಗೆದ್ದೇ ಗೆಲ್ಲುವೆ ಎಂಬ ನಂಬಿಕೆಯಲ್ಲಿ ತಂಜಾವೂರಿನಿಂದ ದೊಡ್ಡ ಹಾರ, ಜನರಿಗೆ ಹಂಚಲು ನೂರಾರು ಬುಟ್ಟಿಗಳಲ್ಲಿ ಲಾಡು ತರಿಸಿದ್ದರು. ಸಂಭ್ರಮಕ್ಕೆ ಡೋಲು ಬಾರಿಸುವ ತಂಡಗಳನ್ನು ಕರೆಸಿದ್ದರು.

ಮತ ಎಣಿಕೆ ಕೇಂದ್ರಕ್ಕೆ ಹೋದಾಗ, ಅಲ್ಲಿ ರಮೇಶ್ ಕುಳಿತಿದ್ದರು. ತಮ್ಮ ಹುಡುಗರಿಗೆ ನನ್ನನ್ನು ತೋರಿಸಿದ ಅವರು ‘ಈ ಹುಡುಗ ಎಲ್ಲ  ಚೆಕ್‌ ಮಾಡ್ತಾನೆ. ಅವನ ಎದುರೇ ಮತಪೆಟ್ಟಿಗೆಗಳನ್ನು ಓಪನ್ ಮಾಡ್ರಪ್ಪ’ ಎಂದು ಹಂಗಿಸಿದರು. ಎದೆಯಲ್ಲಿ ದಿಗಿಲು ಹೆಚ್ಚುತ್ತಾ ಹೋಯಿತು. ಮೊದಲ ಸುತ್ತಿನ ಎಣಿಕೆ ಮುಗಿದಾಗ, 1800 ಮತಗಳಿಂದ ನಾನು ಮುಂದಿದ್ದೆ. ಪ್ರತಿ ಸುತ್ತಿನಲ್ಲೂ ಅಂತರ ಮುಂದುವರೆಯಿತು. ಮುಕ್ಕಾಲು ಭಾಗ ಮುಗಿಯುತ್ತಿದ್ದಂತೆ ಹಾರ, ಲಾಡು ಬುಟ್ಟಿಗಳನ್ನು ಅಲ್ಲಿಯೇ ಬಿಟ್ಟ ರಮೇಶ್ ಮತ್ತು ಅವರ ಬೆಂಬಲಿಗರು ಹೊರಟೇ ಬಿಟ್ಟರು.

ಜಾಲಹಳ್ಳಿ ಗ್ರಾಮ ಪಂಚಾಯಿತಿ ಚೇರ್ಮನ್ ಆಗಬೇಕು ಎಂಬ ಕನಸು ಇತ್ತು. ಆದರೆ, ಶಾಸಕನಾದೆ. ರಾಜಕೀಯಕ್ಕೆ ಬರದಿದ್ದರೆ ಉದ್ಯಮಿಯಾಗಿರುತ್ತಿದ್ದೆ.

–ಆರ್. ಅಶೋಕ್, ಪದ್ಮನಾಭನಗರ ಕ್ಷೇತ್ರ (ಬಿಜೆಪಿ)

ಪ್ರತಿಕ್ರಿಯಿಸಿ (+)