ಭಾನುವಾರ, ಡಿಸೆಂಬರ್ 15, 2019
19 °C
ರಾಜಕಾರಣಿಗಳ ಕೈಗಳು ರಿಯಲ್‌ ಎಸ್ಟೇಟ್‌ ಕುಳಗಳ ಜೇಬಿನಲ್ಲಿ : ಜಲತಾಣಗಳ ರಕ್ಷಣೆಗೆ ಕಾಳಜಿ ಎಲ್ಲಿ?

ಮತಗಳತ್ತ ಕಣ್ಣು: ಕೆರೆಗಳಿಗೆಲ್ಲ ಮಣ್ಣು!

ಪ್ರವೀಣ ಕುಲಕರ್ಣಿ Updated:

ಅಕ್ಷರ ಗಾತ್ರ : | |

ಮತಗಳತ್ತ ಕಣ್ಣು: ಕೆರೆಗಳಿಗೆಲ್ಲ ಮಣ್ಣು!

ಬೆಂಗಳೂರು: ರಾಜಧಾನಿ ಕುರಿತಂತೆ ಏನೇ ಚರ್ಚೆಯಾದರೂ ‘ನಾಡಪ್ರಭು’ ಕೆಂಪೇಗೌಡರನ್ನು ಭಾವನಾತ್ಮಕವಾಗಿ ಸ್ಮರಿಸುವುದು ಎಲ್ಲ ರಾಜಕೀಯ ಪಕ್ಷಗಳ ಮುಖಂಡರಿಗೂ ಅಂಟಿರುವ ಗೀಳು. ಆದರೆ, ಅವರ ಮಾತಿಗೂ ಕೃತಿಗೂ ಎಷ್ಟೊಂದು ಅಂತರವಿದೆ ಎನ್ನುವುದಕ್ಕೆ ಸಾಕ್ಷ್ಯ ನುಡಿಯುವಂತಿದೆ ನಗರದ ದಯನೀಯ ಸ್ಥಿತಿಯಲ್ಲಿರುವ ಕೆರೆಗಳ ಗೋಳು!

ನದಿಯಂತಹ ಜಲಮೂಲ­ದಿಂದ ಬಹುದೂರದಲ್ಲಿ ನಿರ್ಮಾಣ­ವಾದ ಬೆಂಗಳೂರಿನ ದಾಹ ತೀರಿಸಲು, ನಾಡಪ್ರಭುಗಳು ಆ ದಿನಗಳಲ್ಲೇ ಸಾವಿರಾರು ಕೆರೆಗಳನ್ನು ನಿರ್ಮಿ­ಸಿದ್ದರು. ಆದರೀಗ ನಗರದ ವ್ಯಾಪ್ತಿಯಲ್ಲಿ 200 ಕೆರೆಗಳೂ ಉಳಿದಿಲ್ಲ. ಜಲತಾಣಗಳಿಗೆ ‘ಮಣ್ಣು ಕೊಟ್ಟು’, ಭೂಗಳ್ಳರು ತಮ್ಮ ಕಟ್ಟಡ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುವಾಗ, ಅವರಿಗೆ ಸಹಕರಿಸಿದ ಆರೋಪ ನಗರದ ಹಲವು ಜನಪ್ರತಿನಿಧಿಗಳ ಮೇಲಿದೆ.

‘ವೋಟ್‌ ಬ್ಯಾಂಕ್‌’ ಮೇಲೆ ಕಣ್ಣಿಟ್ಟು ಕೆಂಪೇಗೌಡರ ಮೇಲೆ ಅಕ್ಕರೆ ಸುರಿಸುವ ರಾಜಕೀಯ ನೇತಾರರೇ, ಕೆರೆಗಳನ್ನು ಕೊಂದು ಆರೋಪಿ ಸ್ಥಾನದಲ್ಲಿ ನಿಂತವರಲ್ಲಿ ಮೊದಲಿಗರು’ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಜಲಮೂಲಗಳ ಸಂರಕ್ಷಣೆಗಾಗಿ ಹೋರಾಡುತ್ತಿರುವ ‘ಫ್ರೆಂಡ್ಸ್‌ ಆಫ್‌ ಲೇಕ್‌’ ಸಂಘಟನೆಯ ಮುಖಂಡರು.

ಬೆಂಗಳೂರು ಉತ್ತರ ಭಾಗದಲ್ಲೇ ಕೆರೆಗಳ ಒತ್ತುವರಿ ಹೆಚ್ಚಾಗಿದೆ. ಅವುಗಳ ಪಾತ್ರದಲ್ಲಿ ಎಲ್ಲ ಧರ್ಮೀಯರ ಮಂದಿರಗಳೂ ತಾವು ಪಡೆದುಕೊಂಡಿವೆ. ಸರ್ಕಾರಿ ಸಂಸ್ಥೆಗಳೆಲ್ಲ ಕೈಕಟ್ಟಿ ಕುಳಿತಾಗ ‘ನಮ್ಮ ಬೆಂಗಳೂರು ಪ್ರತಿಷ್ಠಾನ’ದಂತಹ ಸಂಘಟನೆಗಳು ಕಾನೂನು ಹೋರಾಟ ನಡೆಸಿ ಕೆರೆಗಳ ರಕ್ಷಣೆಗೆ ಮುಂದಾಗಿವೆ.

ಒಂದೆಡೆ ರಿಯಲ್‌ ಎಸ್ಟೇಟ್‌ ಕುಳಗಳು ಕೆರೆಗಳ ಅಂಗಳದಲ್ಲಿ ಕಟ್ಟಡ ತ್ಯಾಜ್ಯ ತುಂಬಿ, ಅವುಗಳ ಪಾತ್ರವನ್ನು ಯರ‍್ರಾಬಿರ‍್ರಿಯಾಗಿ ಒತ್ತುವರಿ ಮಾಡಿಕೊಂಡರೆ, ಇನ್ನೊಂದೆಡೆ ಕೈಗಾರಿಕೆಗಳು, ಅಪಾರ್ಟ್‌ಮೆಂಟ್‌ ಸಮುಚ್ಚಯಗಳು ಈ ಜಲತಾಣಗಳ ಒಡಲಿಗೆ ರಾಸಾಯನಿಕ ಹಾಗೂ ಮಾರ್ಜಕ ಹರಿಬಿಟ್ಟು, ನೀರಿನಲ್ಲಿ ಬೆಂಕಿ ಹೊತ್ತಿಕೊಂಡು ಉರಿಯುವಂತೆ ಮಾಡಿವೆ. ಕೆರೆಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಹಿಂದೆಂದೂ ಕಂಡು ಕೇಳರಿಯದ ವಿದ್ಯಮಾನ.

ಕೆರೆಯ ಅಂಚಿನಿಂದ 75 ಮೀಟರ್‌ ದೂರದವರೆಗೆ ಯಾವುದೇ ನಿರ್ಮಾಣ ಕಾಮಗಾರಿ ಕೈಗೊಳ್ಳುವಂತಿಲ್ಲ ಎನ್ನುವುದು ಹಸಿರು ನ್ಯಾಯಮಂಡಳಿ ನಿರ್ದೇಶನ. ನಗರದ ಯಾವ ಕೆರೆಗೆ ಹೋದರೂ ಅದರ ಪಕ್ಕದಲ್ಲೇ ಗಗನಚುಂಬಿ ಕಟ್ಟಡಗಳು ಎದ್ದು ನಿಂತಿರುವುದನ್ನು ಇಲ್ಲವೇ ನಿಲ್ಲುತ್ತಿರುವುದನ್ನು ಕಾಣಬಹುದು. ನ್ಯಾಯಮಂಡಳಿ ನಿರ್ದೇಶನವನ್ನೇ ಪಾಲನೆ ಮಾಡದಷ್ಟು ರಾಜಕಾರಣಿಗಳು, ಬಿಲ್ಡರ್‌ಗಳು, ಕಂದಾಯ, ಬಿಬಿಎಂಪಿ ಹಾಗೂ ಬಿಡಿಎ ಅಧಿಕಾರಿಗಳ ಗೆಳೆತನ ಗಟ್ಟಿ.

ಕೆರೆಗಳ ಒತ್ತುವರಿ ಅಧ್ಯಯನಕ್ಕಾಗಿ ನೇಮಿಸಲಾಗಿದ್ದ ಸದನ ಸಮಿತಿಯೇ ನೀಡಿರುವ ಒತ್ತುವರಿದಾರರ ಪಟ್ಟಿಯ ಮೇಲೆ ಕಣ್ಣಾಡಿಸಿದರೆ, ರಾಜ್ಯದ ಪ್ರಮುಖ ರಿಯಲ್‌ ಎಸ್ಟೇಟ್‌ ಕಂಪನಿಗಳ ಹೆಸರುಗಳೆಲ್ಲ ಅದರಲ್ಲಿ ತುಂಬಿಕೊಂಡಿವೆ. ಆ ಕಂಪನಿಗಳ ಹಿತಾಸಕ್ತಿ ಕಾಯುವ ನಾಯಕರು ಎಲ್ಲ ರಾಜಕೀಯ ಪಕ್ಷಗಳಲ್ಲೂ ಇದ್ದಾರೆ.

ಸಮರ್ಪಕ ಕಂದಾಯ ದಾಖಲೆಗಳು ಇಲ್ಲದಿರುವುದು, ನಕ್ಷೆಗಳು ನಾಪತ್ತೆಯಾಗಿರುವುದು, ಸುತ್ತ ಬೇಲಿ ಹಾಕದೇ ಇರುವುದು, ಕೊಳಚೆಯನ್ನು ನೇರವಾಗಿ ಒಡಲಿಗೆ ಬಿಡುವುದು– ಕೆರೆಗಳ ರಕ್ಷಣೆಯಲ್ಲಿ ಎದುರಾಗಿರುವ ಮುಖ್ಯ ತೊಡಕುಗಳು.

‘ಅಭಿವೃದ್ಧಿ’ ಕಾರ್ಯಗಳಿಗೆ ಸ್ಥಳಾಭಾವ ಎದುರಾದಾಗಲೆಲ್ಲ ಆಡಳಿತಗಾರರು ಕೆರೆಗಳತ್ತಲೇ ನೋಡುತ್ತಾರೆ. ರಕ್ಷಕನ ಹೊಣೆ ಹೊರಬೇಕಾದ ಬೆಂಗ­ಳೂರು ಅಭಿವೃದ್ಧಿ ಪ್ರಾಧಿಕಾರವೇ (ಬಿಡಿಎ) ಕೆರೆ­ಗಳ ಸಮಾಧಿ ಮೇಲೆ ಬಡಾವಣೆ ನಿರ್ಮಿಸಿ ಭಕ್ಷಕನಾ­ಗಿದೆ. ಡೆವಲಪರ್‌ಗಳೆಂಬ ಆಧುನಿಕ ಬಕಾಸುರರಿಗೆ ಎಷ್ಟು ಕೆರೆಗಳನ್ನು ನುಂಗಿ ನೀರು ಕುಡಿದರೂ ‘ಹಸಿದ ಹೊಟ್ಟೆ’ ತುಂಬುತ್ತಿಲ್ಲ. ಪ್ರತಿ ಚದರ ಅಡಿಗೆ ₹ 20 ಸಾವಿರಕ್ಕೂ ಅಧಿಕ ಬೆಲೆಯಿರುವ ನಗರದಲ್ಲಿ ಕೆರೆಗಳು ಭೂದಾಹ ತಣಿಸುವ ತಾಣಗಳಾಗಿ ಮಾರ್ಪಟ್ಟಿವೆ.

ಕೆರೆಗಳಿಗೆ ಕೊಳಚೆ ನೀರು ಹೋಗದಂತೆ ನೋಡಿಕೊಳ್ಳಬೇಕಾಗಿದ್ದ ಜಲಮಂಡಳಿ ತನ್ನ ಹೊಣೆಯನ್ನು ನಿಭಾಯಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಕೊಳಚೆಯನ್ನು ಒಯ್ದು ನೇರವಾಗಿ ಕೆರೆಗಳ ಒಡಲಿಗೆ ಬಿಟ್ಟಿರುವ ಈ ಸರ್ಕಾರಿ ಸಂಸ್ಥೆಯಲ್ಲಿ ಇದುವರೆಗೆ ಕಲುಷಿತ ನೀರಿನ ಸಂಸ್ಕರಣೆಗೆ ಬೇಕಾದ ಸೌಕರ್ಯಗಳೇ ಇರಲಿಲ್ಲ. ಈಗೇನೋ ಕೆಲವು ಘಟಕಗಳನ್ನು ಹಾಕಲಾಗಿದೆ. ಆದರೆ, ‘ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಎನ್ನುವಂತೆ ನಿತ್ಯ 120 ಕೋಟಿ ಲೀಟರ್‌ ಕೊಳಚೆ ನೀರು ಉತ್ಪಾದನೆಯಾದರೆ, ಅದರ ಕಾಲು ಭಾಗದಷ್ಟೂ ಪರಿಪೂರ್ಣವಾಗಿ ಸಂಸ್ಕರಣೆ ಆಗುತ್ತಿಲ್ಲ.

ದೇಹದ ಕೊಳೆತ ಭಾಗದಲ್ಲಿ ರಕ್ತದ ಬದಲು ಕೇವಲ ಕೀವು ತುಂಬಿಕೊಳ್ಳುವಂತೆ ಕೆರೆಗಳ ಅಂಗಳಗಳು ಸಹ ಕೊಳಚೆ ನೀರಿನ ಸಂಗ್ರಹಾಗಾರಗಳಾಗಿ ಮಾರ್ಪಟ್ಟಿವೆ. ಕೆರೆ ಅಂಗಳದಲ್ಲಿ ನೈಟ್ರೇಟ್‌, ಫಾಸ್ಫೇಟ್‌ನಂತಹ ರಾಸಾಯನಿಕಗಳೇ ತುಂಬಿ ಹೋಗಿದ್ದರೂ ಅದಕ್ಕೆ ಕಾರಣರಾದ ವ್ಯಕ್ತಿಗಳ ಮೇಲೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ.

ಬೆಂಗಳೂರು ನಗರ ಐವತ್ತು ವರ್ಷಗಳಲ್ಲಿ ಕಂಡಿರುವ ಬದಲಾವಣೆ ಕುರಿತು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ವಿಜ್ಞಾನಿಗಳು ನೀಡಿರುವ ಅಧ್ಯಯನ ವರದಿಯ ಮೇಲೆ ಕಣ್ಣಾಡಿಸಿದರೆ ದಿಗ್ಭ್ರಮೆ ಉಂಟಾಗುತ್ತದೆ. ನಗರದ ಆಗಿನ ನಕ್ಷೆ ಹಸಿರಾಗಿದ್ದರೆ, ಈಗಿನದು ಕೆಂಡದ ರೂಪವನ್ನು ತಾಳಿ ಅಸ್ತಂಗತನಾಗುವ ಸೂರ್ಯನಂತೆ ಕೆಂಪಾಗಿದೆ. ಅಂದರೆ ಕೆರೆ–ಕುಂಟೆ, ಮರ–ಗಿಡಗಳಿದ್ದ ಪ್ರದೇಶವನ್ನೆಲ್ಲ ಕಟ್ಟಡಗಳೇ ಆಕ್ರಮಿಸಿಬಿಟ್ಟಿವೆ. ಮುಂದಿನ ಹತ್ತು ವರ್ಷಗಳಲ್ಲಿ ಈ ನಗರ ವಾಸಯೋಗ್ಯವಾಗಿ ಉಳಿಯಲಿಕ್ಕಿಲ್ಲ ಎನ್ನುವ ಭೀತಿಯನ್ನೂ ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ.

ಕೆರೆ ಹಬ್ಬ ಮಾಡಿ, ಅವುಗಳ ರಕ್ಷಣೆಗಾಗಿ ಶ್ರಮಿಸುತ್ತಿರುವ ವಿವಿಧ ನಾಗರಿಕ ಸಂಘಟನೆಗಳು, ತಕ್ಕ ಸಾಥ್‌ ಕೊಡುವ ಜನಪ್ರತಿನಿಧಿಗಳಿಗಾಗಿ ಎದುರು ನೋಡುತ್ತಿವೆ. ಕೆರೆಗಳು ಉಳಿದರಷ್ಟೇ ನಗರ ಉಳಿದೀತು ಎಂಬ ಬಲವಾದ ನಂಬಿಕೆಯಲ್ಲಿರುವ ಅವುಗಳು, ಕೆರೆಗಳ ಸಂರಕ್ಷಣೆಯೇ ಬೆಂಗಳೂರಿನ ಮುಖ್ಯ ಚುನಾವಣಾ ವಿಷಯವಾಗಬೇಕು ಎಂದು ಬಯಸಿವೆ.

ಜಲತಾಣಗಳ ಒತ್ತುವರಿ ವಿಷಯ ಲಾಗಾಯ್ತಿನಿಂದಲೂ ಪ್ರಸ್ತಾಪ ಆಗುತ್ತಲೇ ಇದೆ. ಎನ್‌.ಲಕ್ಷ್ಮಣರಾವ್‌, ಎ.ಟಿ.ರಾಮಸ್ವಾಮಿ, ವಿ.ಬಾಲಸುಬ್ರಮಣಿಯನ್‌, ನ್ಯಾ. ಎನ್‌.ಕೆ. ಪಾಟೀಲ, ಕೆ.ಬಿ.ಕೋಳಿವಾಡ ಸಮಿತಿಗಳು ಹಲವು ಹುಳುಕುಗಳನ್ನು ಹೊರಹಾಕಿವೆ. ಅತ್ತ ಸಮಿತಿಗಳ ವರದಿಗಳು ಕತ್ತಲೆ ಕೋಣೆಯಲ್ಲಿ ಸೇರಿದಷ್ಟೇ ವೇಗವಾಗಿ ಇತ್ತ ಕೆರೆಗಳು ಸಹ ಕಣ್ಮರೆಯಾಗುತ್ತಿವೆ.

**

ತಜ್ಞರು ಹೇಳುವುದೇನು?

ಐಐಎಸ್‌ಸಿ ತಜ್ಞರಾದ ಟಿ.ವಿ.ರಾಮಚಂದ್ರ, ಕೆ.ಎಸ್‌.ಅಶುಲಭಾ, ವಿ.ಸಿನ್ಸಿ, ಸುದರ್ಶನ ಭಟ್‌ ಹಾಗೂ ಭರತ್‌ ಐತಾಳ ಅವರ ತಂಡ ನಗರದ ಕೆರೆಗಳ ಸ್ಥಿತಿ ಕುರಿತು ಅಧ್ಯಯನ ನಡೆಸಿದೆ. ಕೆರೆ ಹಾಗೂ ಅವುಗಳ ಜಲಾನಯನ ಪ್ರದೇಶಗಳು ಮಳೆಗಾಲದಲ್ಲಿ ಸ್ಪಂಜ್‌ನಂತೆ ವರ್ತಿಸಿ, ನೀರನ್ನು ಹಿಡಿದಿಟ್ಟುಕೊಳ್ಳುತ್ತಿದ್ದವು. ಅವುಗಳ ಒತ್ತುವರಿಯಿಂದ ನಗರ ಮಹಾಪೂರ ಹೆಚ್ಚಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಈ ತಜ್ಞರ ತಂಡದ ಕೆಲವು ಪರಿಹಾರ ಸೂತ್ರಗಳು ಹೀಗಿವೆ:

* ಜಲಮೂಲದ ಕಣಿವೆ ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣದ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಬೇಕು.

* ಭೂದಾಖಲೆಗಳನ್ನು ಡಿಜಿಟಲೀಕರಣ ಮಾಡಬೇಕು ಮತ್ತು ಈ ಮಾಹಿತಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು.

* ಕೆರೆ ಒತ್ತುವರಿಯನ್ನು ಸಮರ್ಪಕ ಸಮೀಕ್ಷೆ ನಡೆಸುವ ಮೂಲಕ ಗುರುತಿಸಿ, ಸಂಪೂರ್ಣ ತೆರವುಗೊಳಿಸಬೇಕು.

* ಜಲ, ಭೂಮಿ ಮತ್ತು ವಾಯು ಮಾಲಿನ್ಯ ತಡೆಗಟ್ಟಲು ವಿಫಲವಾದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ವಿರುದ್ಧ ಕ್ರಮ ಕೈಗೊಳ್ಳಬೇಕು.

* ಭೂಕಬಳಿಕೆಯನ್ನು ಜಾಮೀನುರಹಿತ ಅಪರಾಧ ಎಂದು ಪರಿಗಣಿಸಬೇಕು.

* ಜಕ್ಕೂರು ಕೆರೆಯಲ್ಲಿ ಇರುವಂತೆ ಜಲಮೂಲಗಳ ಪಕ್ಕದಲ್ಲಿ ಕೃತಕ ಕೆರೆಗಳನ್ನು ನಿರ್ಮಿಸಿ, ಅಲ್ಲಿ ಕೊಳಚೆ ನೀರು ಸಂಸ್ಕರಿಸಿದ ಬಳಿಕ ಶುದ್ಧ ನೀರನ್ನು ಮಾತ್ರ ಜಲಮೂಲಗಳಿಗೆ ಹರಿಸಬೇಕು.

* ಕೆರೆಗಳ ನಿರ್ವಹಣೆಗೆ ಉತ್ತಮ ಆಡಳಿತವೂ ಬೇಕು. ಅಂದರೆ, ಎಲ್ಲ ಕೆರೆಗಳು ಒಂದೇ ಸಂಸ್ಥೆಯ ಸುಪರ್ದಿಗೆ ಒಳಪಡಬೇಕು. ಅವುಗಳ ನಿಯಂತ್ರಣ ಮತ್ತು ನಿರ್ವಹಣೆಗೆ ಏಕಗವಾಕ್ಷಿ ಯೋಜನೆ ಬೇಕು.

ಪ್ರತಿಕ್ರಿಯಿಸಿ (+)