ಶುಕ್ರವಾರ, ಡಿಸೆಂಬರ್ 6, 2019
26 °C

ಆರೋಪಿ ಶಾಸಕ ಸೆಂಗರ್ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

ಆರೋಪಿ ಶಾಸಕ ಸೆಂಗರ್ ಬಂಧನ

ಲಖನೌ: ಕೆಲಸ ಕೇಳಲು ಬಂದ ಯುವತಿ ಮೇಲೆ ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿರುವ ಉತ್ತರ ಪ್ರದೇಶದ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್‌ರನ್ನು ಸಿಬಿಐ ಶುಕ್ರವಾರ ಸಂಜೆ ಬಂಧಿಸಿದೆ.

‘ಆರೋಪಿಯನ್ನು ತಕ್ಷಣವೇ ಬಂಧಿಸಿ’ ಎಂದು ಅಲಹಾಬಾದ್ ಹೈಕೋರ್ಟ್ ನೀಡಿದ ಆದೇಶದ ಮೇರೆಗೆ ಸಿಬಿಐ ಈ ಕ್ರಮ ತೆಗೆದುಕೊಂಡಿದೆ.

ಗುರುವಾರ ಸಂಜೆಯಷ್ಟೇ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದ ಸಿಬಿಐ, ಶುಕ್ರವಾರ ಬೆಳಿಗ್ಗೆ 4.30ರಲ್ಲಿ ಕುಲದೀಪ್‌ರನ್ನು ಅವರ ಮನೆಯಲ್ಲೇ ವಶಕ್ಕೆ ಪಡೆದು ಲಖನೌನಲ್ಲಿರುವ ತನ್ನ ಕಚೇರಿಗೆ ಕರೆದುಕೊಂಡು ಬಂದಿತ್ತು. ಈ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಸಿಬಿಐ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದೆ. ಸಂತ್ರಸ್ತೆಯ ತಂದೆಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತಾಗಿರುವ ಆರು ಪೊಲೀಸ್ ಸಿಬ್ಬಂದಿಯನ್ನೂ ಸಿಬಿಐ ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದೆ.

ಹೈಕೋರ್ಟ್‌ ಕೆಂಡಾಮಂಡಲ: ಪ್ರಕರಣವನ್ನು ಉನ್ನತಮಟ್ಟದ ತನಿಖೆಗೆ ಒಪ್ಪಿಸುವಂತೆ ಕೋರಿದ್ದ ಅರ್ಜಿಯ ವಿಚಾರಣೆ ವೇಳೆ ಅಲಹಾಬಾದ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ಬಿ. ಬೋಸ್ಲೆ ಮತ್ತು ನ್ಯಾಯಮೂರ್ತಿ ಸುನೀತ್ ಕುಮಾರ್ ಅವರಿದ್ದ ಪೀಠವು ಆರೋಪಿ ಶಾಸಕನನ್ನು ಬಂಧಿಸದೇ ಇದ್ದುದರ ಬಗ್ಗೆ ಶುಕ್ರವಾರ ಬೆಳಿಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.

‘ಕುಲದೀಪ್‌ರನ್ನು ವಶಕ್ಕೆ ಪಡೆದುಕೊಂಡು ಸಿಬಿಐ ವಿಚಾರಣೆ ನಡೆಸುತ್ತಿದೆ. ಆದರೆ ಬಂಧಿಸಿಲ್ಲ’ ಎಂದು ವಿಚಾರಣೆ ವೇಳೆ ಉತ್ತರ ಪ್ರದೇಶ ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್ ಜನರಲ್ ರಾಘವೇಂದ್ರ ಸಿಂಗ್ ಪೀಠಕ್ಕೆ ಮಾಹಿತಿ ನೀಡಿದರು.

ಅವರ ಉತ್ತರದಿಂದ ಅಸಮಾಧಾನಗೊಂಡ ಪೀಠವು, ‘ಮೊದಲು ಆರೋಪಿಯನ್ನು ಬಂಧಿಸುವ ಕೆಲಸ ಮಾಡಿ’ ಎಂದು ತಾಕೀತು ಮಾಡಿತು. ‘ಪ್ರಕರಣದ ತನಿಖೆಯನ್ನು ಕೂಲಂಕಷವಾಗಿ ನಡೆಸಿ. ಕೆಲವು ಆರೋಪಿಗಳಿಗೆ ನೀಡಲಾಗಿರುವ ಜಾಮೀನನ್ನು

ರದ್ದುಪಡಿಸುವಂತೆ ಅರ್ಜಿ ಸಲ್ಲಿಸಿ. ಮೇ 2ರಂದು ತನಿಖೆಯ ಸ್ಥಿತಿಗತಿ ವರದಿಯನ್ನು ಸಲ್ಲಿಸಿ’ ಎಂದು ಸಿಬಿಐಗೆ ಹೈಕೋರ್ಟ್ ಸೂಚನೆ ನೀಡಿತು.

‘ತನಿಖೆಯ ಮೇಲೆ ನಾವು ನಿಗಾ ಇರಿಸಿರುತ್ತೇವೆ’ ಎಂದೂ ಸಿಬಿಐಗೆ ಪೀಠ ಎಚ್ಚರಿಕೆ ನೀಡಿತು.

ಸಂತ್ರಸ್ತೆ ಚಿತ್ರ ಪ್ರಕಟಿಸಿದ ಮಾಧ್ಯಮಗಳಿಗೆ ನೋಟಿಸ್

ಕಠುವಾ ಅತ್ಯಾಚಾರ ಪ್ರಕರಣದ ಸಂತ್ರಸ್ತ ಬಾಲಕಿಯ ಹೆಸರು ಮತ್ತು ಚಿತ್ರಗಳನ್ನು ಪ್ರಕಟಿಸಿದ ಕಾರಣಕ್ಕೆ ಕೆಲವು ಸುದ್ದಿ ವಾಹಿನಿಗಳು ಮತ್ತು ಪತ್ರಿಕೆಗಳಿಗೆ ದೆಹಲಿ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಹಂಗಾಮಿ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ಮತ್ತು ನ್ಯಾಯಮೂರ್ತಿ ಸಿ.ಹರಿ ಶಂಕರ್ ಅವರಿದ್ದ ಪೀಠವು, ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ. ‘ಅತ್ಯಾಚಾರ, ಲೈಂಗಿಕ ದೌರ್ಜನ್ಯ ಸಂತ್ರಸ್ತರ ವೈಯಕ್ತಿಕ ವಿವರಗಳು ಮತ್ತು ಅವರ ಗುರುತನ್ನು ಬಹಿರಂಗಪಡಿಸುವ ಯಾವುದೇ ಮಾಹಿತಿ ಪ್ರಕಟಿಸುವುದನ್ನು ಪೋಸ್ಕೊ ಕಾಯ್ದೆ ನಿಷೇಧಿಸುತ್ತದೆ. ಈ ನಿಷೇಧವನ್ನು ನೀವು ಉಲ್ಲಂಘಿಸಿದ್ದೀರಿ. ನಿಮ್ಮ ವಿರುದ್ಧ ಕಠಿಣ ಕ್ರಮವನ್ನೇಕೆ ತೆಗೆದುಕೊಳ್ಳಬಾರದು’ ಎಂದು ನೋಟಿಸ್‌ನಲ್ಲಿ ಪ್ರಶ್ನಿಸಲಾಗಿದೆ.

‘ಮಕ್ಕಳ ಅತ್ಯಾಚಾರಿಗಳಿಗೆ ಗಲ್ಲು’

ನವದೆಹಲಿ (ಪಿಟಿಐ): ಮಕ್ಕಳ ಮೇಲಿನ ಅತ್ಯಾಚಾರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಪ್ರತಿಪಾದಿಸಿದ್ದಾರೆ.

‘ಕಠುವಾ ಅತ್ಯಾಚಾರ ಪ್ರಕರಣ ಮತ್ತು ಈಚೆಗೆ ದೇಶದ ಹಲವೆಡೆ ನಡೆದ ಅತ್ಯಾಚಾರಗಳಲ್ಲಿ ಮಕ್ಕಳೇ ಬಲಿಪಶುಗಳಾಗಿದ್ದಾರೆ. ಹೀಗಾಗಿ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಅತ್ಯಾಚಾರ ನಡೆಸುವವರಿಗೆ ಗಲ್ಲು ಶಿಕ್ಷೆ ವಿಧಿಸಲು ಅನುಕೂಲವಾಗುವಂತೆ ಕಾನೂನಿಗೆ ಅಗತ್ಯ ಬದಲಾವಣೆ ತರಬೇಕು. ಅದಕ್ಕಾಗಿ ಪೋಸ್ಕೊ ಕಾಯ್ದೆಗೆ ತಿದ್ದುಪಡಿ ತರಬೇಕು’ ಎಂದು ಮೇನಕಾ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)