ಜನರ ಜಾಣ ಮೌನಕ್ಕೆ ಜಯರಾಂ ಅಚ್ಚರಿ

7
ಟಿಎಸ್‌ಆರ್‌ ಸುಬ್ರಮಣಿಯನ್‌ ವರದಿ: ಖಾಸಗಿ ಸ್ವಾಮ್ಯಕ್ಕೆ ಅರಣ್ಯ ಭೂಮಿ

ಜನರ ಜಾಣ ಮೌನಕ್ಕೆ ಜಯರಾಂ ಅಚ್ಚರಿ

Published:
Updated:

ಬೆಂಗಳೂರು: ಟಿಎಸ್‌ಆರ್‌ ಸುಬ್ರಮಣಿಯನ್‌ ಅವರು ನೀಡಿರುವ ವರದಿ ಆಧಾರದ ಮೇಲೆ ‘ಹೊಸ ಅರಣ್ಯ ನೀತಿ’ ಜಾರಿ ಮಾಡಿ ಅರಣ್ಯ ಭೂಮಿಯನ್ನು ಖಾಸಗಿ ಸ್ವಾಮ್ಯಕ್ಕೆ ಬಿಟ್ಟುಕೊಡಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಸಂಸದ ಜೈರಾಮ್‌ ರಮೇಶ್‌ ಆರೋಪಿಸಿದರು. ಕೇಂದ್ರದ ಈ ನಿಲುವಿಗೆ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

‘ಹೊಸ ಅರಣ್ಯ ನೀತಿ ಹಾಗೂ ಭಾರತದಲ್ಲಿ ಕುಸಿಯುತ್ತಿರುವ ಪರಿಸರ’ ವಿಷಯ ಕುರಿತು ಎನ್ವಿರಾನ್‌ಮೆಂಟ್‌ ಸಪೋರ್ಟ್‌ ಗ್ರೂಪ್‌ ಹಾಗೂ ಆ್ಯಕ್ಷನ್‌ ಏಯ್ಡ್‌ ಅಸೋಸಿಯೇಷನ್‌ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯುಪಿಎ ಸರ್ಕಾರ ಅರಣ್ಯ ಹಕ್ಕುಕಾಯ್ದೆಯನ್ನು ಜಾರಿಗೆ ತರಲು ಮುಂದಾದಾಗ ಇಲಾಖೆಯ ಅಧಿಕಾರಿಗಳೇ ಅದನ್ನು ವಿರೋಧಿಸಿದ್ದರು. ಈ ನೀತಿ ಪರಿಸರಕ್ಕೆ ಮಾರಕ ಎಂದು ದೇಶವ್ಯಾಪಿ ಪ್ರತಿಭಟನೆ ನಡೆಯಿತು. ಆದರೆ, ಇಂದಿನ ಸರ್ಕಾರ ಅರಣ್ಯ ಭೂಮಿಯನ್ನು ಖಾಸಗಿಯವರಿಗೆ ನೀಡಲು ಮುಂದಾದರೂ ಯಾರೂ ಚಕಾರ ಎತ್ತದೇ ಇರುವುದು ಆಶ್ಚರ್ಯ ತಂದಿದೆ ಎಂದರು.

‘ದೇಶದಲ್ಲಿ ಶೇ 40ರಷ್ಟು (3.4 ಕೋಟಿ ಹೆಕ್ಟೇರ್‌) ಅರಣ್ಯ ಪ್ರದೇಶ ನಶಿಸಿದೆ. ಇಂಥ ಸಂದರ್ಭದಲ್ಲಿ ಕಾಡನ್ನು ಅಭಿವೃದ್ಧಿಪಡಿಸುವ ಬಗ್ಗೆ ಕ್ರಮ ಕೈಗೊಳ್ಳುವ ಬದಲು, ಇವುಗಳನ್ನು ಖಾಸಗಿ ಕಂಪನಿಗಳಿಗೆ ವಹಿಸಲಾಗುತ್ತಿದೆ. ಅವುಗಳು ಸುಧಾರಿತ ತಂತ್ರಜ್ಞಾನಗಳ ಮೂಲಕ ಅರಣ್ಯವನ್ನು ಅಭಿವೃದ್ಧಿ ಪಡಿಸುತ್ತವೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಇದು ಅರಣ್ಯ ಭೂಮಿಯನ್ನು ಖಾಸಗಿಯವರ ಪಾಲಾಗಿಸುವ ಹುನ್ನಾರ. ಹೀಗಾಗಿ ರಾಜ್ಯ ಸರ್ಕಾರಗಳು ಕೇಂದ್ರದ ಈ ಪ್ರಸ್ತಾವವನ್ನು ತಿರಸ್ಕರಿಸುವ ಧೈರ್ಯ ತೋರಬೇಕು’ ಎಂದು ಅಭಿಪ್ರಾಯಪಟ್ಟರು.

ಈ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ದೂರದೃಷ್ಟಿಯ ಕೊರತೆ ಇದೆ. ಖಾಸಗಿ ಕಂಪನಿಗಳಿಗೆ ಅರಣ್ಯ ಪ್ರದೇಶ ನೀಡುವುದರಿಂದ ಆಗುವ ಒಳಿತು ಕೆಡುಕುಗಳ ಬಗೆಗೆ ಚರ್ಚೆಯನ್ನೇ ನಡೆಸಿಲ್ಲ. ಅಭಿವೃದ್ಧಿ ಹೆಸರಿನಲ್ಲಿ ಸಂಪನ್ಮೂಲಗಳನ್ನೆಲ್ಲಾ ಖಾಸಗಿ ಸ್ವಾಮ್ಯಕ್ಕೆ ನೀಡುವುದು ಸರಿಯೇ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

‘ಅರಣ್ಯಗಳ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳ ವಿಸ್ತರಣೆ, ರೈಲ್ವೆ ಯೋಜನೆಗಳಿಗೆ ಅನುಮತಿ, ಜಲಾಶಯ ಮತ್ತು ಜಲ ವಿದ್ಯುತ್ ಘಟಕಗಳ ಸ್ಥಾಪನೆ, ಗಣಿಗಾರಿಕೆ ಚಟುವಟಿಕೆಗಳಿಗೆ ನಿಯಮ ಮೀರಿ ಅನುಮತಿ ನೀಡಲಾಗುತ್ತಿದೆ. ಒಂದು ವೇಳೆ ಹೊಸ ಅರಣ್ಯ ಕರಡು ನೀತಿಯು ಸಂಪೂರ್ಣವಾಗಿ ಅನುಷ್ಠಾನಗೊಂಡರೆ, ರಾಜ್ಯಗಳು ಕಾಡುಗಳ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳಲಿವೆ’ ಎಂದು ಎಚ್ಚರಿಸಿದರು.

ನಂತರ ಪ್ರೇಕ್ಷಕರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry