7

ಐಸಿಜೆ ಕೈಯಲ್ಲಿ ಜಾಧವ್‌ ಭವಿಷ್ಯ

Published:
Updated:

ನವದೆಹಲಿ: ಕುಲಭೂಷಣ್‌ ಜಾಧವ್‌ ಅವರ ಭವಿಷ್ಯದ ಬಗ್ಗೆ ಅಂತರರಾಷ್ಟ್ರೀಯ ನ್ಯಾಯಾಲಯವು (ಐಸಿಜೆ) ನಿರ್ಧಾರ ಕೈಗೊಳ್ಳಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಬೇಹುಗಾರಿಕೆ ಆರೋಪದಲ್ಲಿ ಜಾಧವ್‌ ಅವರಿಗೆ ಪಾಕಿಸ್ತಾನದ ಸೇನಾ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿದೆ. ‍

ಐಸಿಜೆಯಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಎರಡೂ ದೇಶಗಳು ತಮ್ಮ ವಾದವನ್ನು ಮಂಡಿಸಿವೆ. ಭಾರತವು ತನ್ನ ವಾದವನ್ನು ಕಳೆದ ಸೆಪ್ಟೆಂಬರ್‌ನಲ್ಲಿ ಲಿಖಿತವಾಗಿ ನೀಡಿದೆ. ಜಾಧವ್‌ಗೆ ಕಾನ್ಸಲ್‌ ಕಚೇರಿಯ ಜತೆ ಸಂಪರ್ಕಕ್ಕೆ ಅವಕಾಶ ಕೊಟ್ಟಿಲ್ಲ ಎಂಬುದು ಭಾರತದ ಪ್ರಮುಖ ಆಕ್ಷೇಪವಾಗಿದೆ.

ಈ ಆಕ್ಷೇಪ‍ವನ್ನು ಪಾಕಿಸ್ತಾನ ತಳ್ಳಿ ಹಾಕಿದೆ. ಮರಣ ದಂಡನೆ ವಿಧಿಸಲಾದ ಅಪರಾಧಿಗೆ ಕಾನ್ಸಲ್‌ ಜತೆ ಸಂಪರ್ಕಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ. ‘ಗೂಢಚಾರನಾಗಿರುವ ಜಾಧವ್‌ ಸಂಗ್ರಹಿಸಿರುವ ಮಾಹಿತಿಯನ್ನು ಪಡೆದುಕೊಳ್ಳುವುದಕ್ಕೆ ಭಾರತವು ಕಾನ್ಸಲ್‌ ಜತೆಗಿನ ಸಂಪರ್ಕಕ್ಕೆ ಒತ್ತಾಯಿಸುತ್ತಿದೆ’ ಎಂದು ಪಾಕಿಸ್ತಾನ ಹೇಳಿದೆ.

‘ಇನ್ನಷ್ಟು ಮಾಹಿತಿ ಕೋರಬೇಕೇ ಅಥವಾ ಈಗಿರುವಷ್ಟು ಮಾಹಿತಿಯ ಆಧಾರದಲ್ಲಿ ನಿರ್ಧಾರ ಕೈಗೊಳ್ಳಬೇಕೇ ಎಂಬುದು ಐಸಿಜೆಗೆ ಬಿಟ್ಟ ವಿಚಾರ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್‌ ಕುಮಾರ್‌ ಹೇಳಿದ್ದಾರೆ.

ಜಾಧವ್‌ ಅವರ ಬಂಧನ ಮತ್ತು ಶಿಕ್ಷೆ ವಿಧಿಸುವಿಕೆ ವಿಚಾರದಲ್ಲಿ ವಿಯೆನ್ನಾ ಒಪ್ಪಂದವನ್ನು ಪಾಕಿಸ್ತಾನ ಉಲ್ಲಂಘಿಸಿದೆ ಎಂದು ಆರೋಪಿಸಿ ಕಳೆದ ಮೇ 8ರಂದು ಭಾರತವು ಐಸಿಜೆಗೆ ದೂರು ನೀಡಿತ್ತು. ಜಾಧವ್‌ ಅವರಿಗೆ ವಿಧಿಸಲಾಗಿದ್ದ ಮರಣ ದಂಡನೆಯನ್ನು ಐಸಿಜೆ ಅಮಾನತು ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry