ಶನಿವಾರ, ಡಿಸೆಂಬರ್ 14, 2019
20 °C
ಇಂಪ್ಯಾಕ್ಟ್‌ ಫೈಲ್ಯೂರ್‌ ವಿಚಾರ ಸಂಕಿರಣ

‘ಸೋತರೆ ಭವಿಷ್ಯದ ಬಾಗಿಲು ಮುಚ್ಚದು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಸೋತರೆ ಭವಿಷ್ಯದ ಬಾಗಿಲು ಮುಚ್ಚದು’

ಬೆಂಗಳೂರು: ‘ಮೋಹನ ಕರಮಚಂದ ಗಾಂಧಿ ಅವರು ಸಾಲ ಮಾಡಿ ಬ್ಯಾರಿಸ್ಟರ್‌ ಶಿಕ್ಷಣ ಪಡೆದಿದ್ದರು. ಮೊದಲ ಮೊಕದ್ದಮೆಗಾಗಿ ಮುಂಬೈಗೆ ಬಂದಿದ್ದ ಅವರಿಗೆ ನ್ಯಾಯಾಲಯದಲ್ಲಿ ಮಾತನಾಡಲು ಆಗಲೇ ಇಲ್ಲ. ಅಂದರೆ ಮೊದಲ ಪ್ರಯತ್ನದಲ್ಲಿಯೇ ಅವರು ಸೋತಿದ್ದರು. ಹಾಗಂತ ಅವರು ಸುಮ್ಮನೆ ಕೂತಿದ್ದರೆ ದಕ್ಷಿಣ ಆಫ್ರಿಕಾದ ನೆಲದಲ್ಲಿ ಇತಿಹಾಸ ಸೃಷ್ಟಿಸಲೂ ಸಾಧ್ಯವಿರಲಿಲ್ಲ,. ಗಾಂಧೀಜಿ ಎಂಬ ಪರಿಕಲ್ಪನೆ ಜಗತ್ತಿಗೆ ಪರಿಚಯವಾಗಲೂ ಸಾಧ್ಯವಿರಲಿಲ್ಲ’ ಎಂದು ಅರ್ಘ್ಯಂ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷೆ ರೋಹಿಣಿ ನಿಲೇಕಣಿ ಅಭಿಪ್ರಾಯಪಟ್ಟರು.

ಸೆಲ್ಕೊ ಪ್ರತಿಷ್ಠಾನ ನಗರದ ಐಐಎಂಬಿ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ‘ಸೋಲಿನ ಪರಿಣಾಮ’ ಎಂಬ ಸಮಾವೇಶದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ಸೋಲನ್ನು ಒಪ್ಪಿಕೊಂಡು ಗೆಲುವಿನ ಹಾದಿಯಲ್ಲಿ ಮುನ್ನಡೆಯಬೇಕು ಎಂದು ಕಿವಿಮಾತು ಹೇಳಿದರು.

ಸೇವಾ ಕ್ಷೇತ್ರದಲ್ಲಿ ತಮಗೆ ಎದುರಾದ ಸೋಲಿನ ಬಗ್ಗೆ ರೋಹಿಣಿ ಹೇಳಿಕೊಂಡರು. ‘ಬರವಣಿಗೆ ಮೂಲಕ ಸಮಾಜ ಸುಧಾರಣೆ ಸಾಧ್ಯ ಎಂದುಕೊಂಡು ಲೇಖನಗಳನ್ನು ಬರೆದೆ. ಆದರೆ, ತಳಮಟ್ಟದ ಸುಧಾರಣೆಗೆ ಅದು ಮಾರ್ಗ ಅಲ್ಲ ಎಂಬುದು ಅರಿವಾಯಿತು. ಆಗ ಪಠ್ಯ ಪರಿಕರಗಳನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ಕೈಗೆತ್ತಿಕೊಂಡೆವು. ಅದೂ  ನಿರೀಕ್ಷಿತ ಫಲಿತಾಂಶ ನೀಡಲಿಲ್ಲ. ಆಗ ನಾವು ಪ್ರಥಮ್‌ ಬುಕ್ಸ್‌ ಆರಂಭಿಸಿದೆವು’ ಎಂದು ವಿವರಿಸಿದರು.

‘ವಿವಿಧ ಕ್ಷೇತ್ರಗಳಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸಾಧಕರು ಸೋಲು ಮತ್ತು ಅದರ ಪರಿಣಾಮವನ್ನು ವಿಶ್ಲೇಷಿಸುತ್ತಾರೆ. ಈ ಮೂಲಕ, ಯುವ ಜನಾಂಗಕ್ಕೆ ಸೋಲಿನ ಬಗೆಗಿರುವ ಕೀಳರಿಮೆಯನ್ನು ತೊಡೆದುಹಾಕುವ ಮತ್ತು ಸೋತವರಿಗೆ ಭವಿಷ್ಯದ ಬಾಗಿಲು ಮುಚ್ಚಿಕೊಳ್ಳುವುದಿಲ್ಲ ಎಂಬ ಸಂದೇಶವನ್ನು ಸಮಾಜಕ್ಕೆ ರವಾನಿಸುವುದು ಕಾರ್ಯಕ್ರಮದ ಉದ್ದೇಶ’ ಎಂದು ಸೆಲ್ಕೊ ಪ್ರತಿಷ್ಠಾನದ ಸಂಸ್ಥಾಪಕ ಹಾಗೂ ಸಿ.ಇ.ಒ. ಹರೀಶ್‌ ಹಂದೆ ತಿಳಿಸಿದರು.

ಐಐಎಂ ಬೆಂಗಳೂರು ಡೀನ್‌ ಪ್ರೊ. ಸೌರವ್‌ ಮುಖರ್ಜಿ, ಕಳೆದ ಒಲಿಂಪಿಕ್ಸ್‌ನಲ್ಲಿ ಟೆನಿಸ್‌ ತಾರೆ ಪಿ.ವಿ. ಸಿಂಧು ಸೋತಿದ್ದನ್ನು ಅವರ ಕೋಚ್‌ ಗೋಪಿಚಂದ್‌ ವ್ಯಾಖ್ಯಾನಿಸಿದ ಬಗೆಯನ್ನು ಉದಾಹರಿಸಿದರು. ‘ಸೋತ ಕಾರಣಕ್ಕೆ ಸಿಂಧು ಆಟ ನಿಲ್ಲುವುದಿಲ್ಲ. ಬದಲಾಗಿ, ಅವಳು ಇನ್ನೂ ಹೆಚ್ಚಿನ ಅಭ್ಯಾಸ ಮಾಡಿ ಮುಂದಿನ ಸ್ಪರ್ಧೆಯಲ್ಲಿ ಹೇಗೆ ಗೆಲ್ಲಲು ತಯಾರಾಗುತ್ತಾಳೆ ಎಂದು ಗೋಪಿಚಂದ್‌ ಹೇಳಿದ್ದರು’ ಎಂದು ಮುಖರ್ಜಿ ಹೇಳಿದರು. ಐಐಎಂಬಿ ನಿರ್ದೇಶಕ ಪ್ರೊ. ಜಿ.ರಘುರಾಮ್‌ ಉಪಸ್ಥಿತರಿದ್ದರು.

ಸೋಲಿನ ಗುರುತಿಸುವಿಕೆ, ವಿವಿಧ ಕ್ಷೇತ್ರಗಳ ಅನುದಾನಗಳ ಪೂರೈಕೆ ಮತ್ತು ಸೋಲು, ಆರೋಗ್ಯ ಮುಂತಾದ ಕ್ಷೇತ್ರಗಳಲ್ಲಿನ ಸೋಲು, ಸ್ವರೂಪ ಮತ್ತು ಕಾರಣಗಳ ಬಗ್ಗೆ ಪ್ರತ್ಯೇಕ ಗೋಷ್ಠಿಗಳು ನಡೆದವು.

ಪ್ರತಿಕ್ರಿಯಿಸಿ (+)