ಭಾನುವಾರ, ಡಿಸೆಂಬರ್ 8, 2019
21 °C

‘ಭಿಕ್ಷುಕರ ಹೆಸರು ಮತದಾರರ ಪಟ್ಟಿಗೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಭಿಕ್ಷುಕರ ಹೆಸರು ಮತದಾರರ ಪಟ್ಟಿಗೆ’

ಬೆಂಗಳೂರು: ಹೈಕೋರ್ಟ್‌ ನಿರ್ದೇಶನದ ಮೇರೆಗೆ ಈ ಬಾರಿ ಮತದಾರರ ಪಟ್ಟಿಗೆ ಭಿಕ್ಷುಕರು, ಸೂರು ಇಲ್ಲದವರು ಮತ್ತು ವಿಚಾರಣಾಧೀನ ಕೈದಿಗಳ ಹೆಸರು ಸೇರಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ತಿಳಿಸಿದರು.

ಈಗಾಗಲೇ ತೃತೀಯ ಲಿಂಗಿಗಳು, ಲೈಂಗಿಕ ಕಾರ್ಯಕರ್ತೆಯರ ಹೆಸರುಗಳನ್ನೂ ಪಟ್ಟಿಗೆ ಸೇರಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಭಿಕ್ಷುಕರನ್ನು ಮತದಾರರ ಪಟ್ಟಿಗೆ ಸೇರಿಸಲು ಹೈಕೋರ್ಟ್‌ನಿಂದ ಬುಧವಾರವಷ್ಟೇ ಆದೇಶ ಬಂದಿದೆ. ಇಂತಹವರನ್ನು ಗುರುತಿಸಿ ಹೆಸರು ಸೇರಿಸಲು ಈಗ ಹೆಚ್ಚು ಸಮಯವಿಲ್ಲ. ಆದರೆ, ವಿಚಾರಣಾಧೀನ ಕೈದಿಗಳ ಹೆಸರು ಸೇರಿಸಬಹುದಾಗಿದೆ ಎಂದು ಅವರು ಹೇಳಿದರು.

ಯಾವುದು ರಾಜಕೀಯ ಜಾಹೀರಾತು:  ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುವ ಯಾವುದೇ ಸಂದೇಶಗಳು, ಛಾಯಾಚಿತ್ರಗಳು, ವಿಡಿಯೋ ತುಣುಕುಗಳನ್ನು ರಾಜಕೀಯ ಜಾಹೀರಾತು ಎಂದು ಪರಿಗಣಿಸುವುದಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ.

ಆದರೆ, ಇ–ಪೇಪರ್‌ಗಳಲ್ಲಿ ಪ್ರಕಟವಾಗುವ ಜಾಹೀರಾತುಗಳಿಗೆ ಮೊದಲೇ ಸಂಬಂಧಪಟ್ಟ ಸಮಿತಿಯಿಂದ ದೃಢೀಕರಣ ಪಡೆಯುವುದು ಕಡ್ಡಾಯ ಎಂದು ಹೆಚ್ಚುವರಿ ಚುನಾವಣಾಧಿಕಾರಿ ಡಾ.ಕೆ.ಜಿ.ಜಗದೀಶ್ ಮಾಧ್ಯಮ ಕಾರ್ಯಾಗಾರದಲ್ಲಿ ತಿಳಿಸಿದರು.

ರಾಜಕೀಯ ಪಕ್ಷ ಮತ್ತು  ಅಭ್ಯರ್ಥಿಗೆ ಸಂಬಂಧ ಇಲ್ಲದ ಮೂರನೇ ವ್ಯಕ್ತಿ ಸಂದೇಶ, ಚಿತ್ರಗಳು, ವಿಡಿಯೊ ಪೋಸ್ಟ್‌ ಮಾಡುವುದು ಜಾಹಿರಾತು ಎನಿಸುವುದಿಲ್ಲ. ಆದರೆ, ಅಭ್ಯರ್ಥಿ ಈ ಕೆಲಸಕ್ಕಾಗಿ ಒಬ್ಬನನ್ನು ನಿಯೋಜಿಸಿಕೊಂಡು ತನ್ನ ಪರವಾಗಿ ರಾಜಕೀಯ ಸಂದೇಶ, ಚಿತ್ರ, ವಿಡಿಯೊ ಕಳುಹಿಸಿದರೆ ಅದನ್ನು ಜಾಹಿರಾತು ಎಂದು ಪರಿಗಣಿಸಲಾಗುತ್ತದೆ. ಅದಕ್ಕೆ ತಗಲುವ ವೆಚ್ಚವನ್ನು ಅಭ್ಯರ್ಥಿ ಖರ್ಚಿಗೆ ಹಾಕಲಾಗುತ್ತದೆ ಎಂದರು.

ಜಾತಿ, ಧರ್ಮದ ಆಧಾರದ ಮೇಲೆ ಪ್ರಭಾವ ಬಿರುವ ಸಂದೇಶಗಳನ್ನು ಕಳುಹಿಸಿದರೆ, ಮಾದರಿ ನೀತಿ ಸಂಹಿತೆಯ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುತ್ತದೆ. ಪಕ್ಷ ಮತ್ತು ಅಭ್ಯರ್ಥಿಗೆ ತೆಜೋವಧೆ ಮಾಡುವ ಮಾಹಿತಿ ಮತ್ತು ಚಿತ್ರಗಳನ್ನು ಪೋಸ್ಟ್‌ ಮಾಡಿದರೂ ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದರು.

ಅನಿವಾಸಿ ಭಾರತೀಯರು ತಾವು ನಡೆಸುವ ಸಂಸ್ಥೆ ಅಥವಾ ಕೆಲಸ ಮಾಡುವ ಕಂಪನಿಯ ಮೂಲಕ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿ ಪರವಾಗಿ ಜಾಹೀರಾತು ಕೊಡುವಂತಿಲ್ಲ ಎಂದರು.

ವಿಕಿಪೀಡಿಯಾ, ಟ್ವಿಟರ್‌, ಯೂಟ್ಯೂಬ್‌, ಫೇಸ್‌ಬುಕ್‌ ಮತ್ತು ಆ್ಯಪ್‌ಗಳನ್ನು ಸಾಮಾಜಿಕ ಮಾಧ್ಯಮವಾಗಿವೆ. ಅಭ್ಯರ್ಥಿ ನಾಮಪತ್ರ ಸಲ್ಲಿಸುವಾಗ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯ ವಿವರ ನೀಡುವುದು ಕಡ್ಡಾಯಗೊಳಿಸಿದೆ. ರಾಜಕೀಯ ಜಾಹೀರಾತುಗಳಿಗೆ ಮೊದಲೇ ಅನುಮತಿ ಪಡೆಯಬೇಕು ಎಂದು ಜಗದೀಶ್‌ ತಿಳಿಸಿದರು.

ಪ್ರತಿಕ್ರಿಯಿಸಿ (+)