ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುನಿಲ್‌ ಚೆಟ್ರಿ ‘ಹ್ಯಾಟ್ರಿಕ್‌’ ಸಾಧನೆ

ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಬೆಂಗಳೂರು ಎಫ್‌ಸಿ
Last Updated 13 ಏಪ್ರಿಲ್ 2018, 19:39 IST
ಅಕ್ಷರ ಗಾತ್ರ

ಭುವನೇಶ್ವರ: ನಾಯಕ ಸುನಿಲ್‌ ಚೆಟ್ರಿ ಕಾಲ್ಚಳಕದಲ್ಲಿ ಅರಳಿದ ‘ಹ್ಯಾಟ್ರಿಕ್‌’ ಗೋಲುಗಳ ನೆರವಿನಿಂದ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡ ಸೂಪರ್‌ ಕ‍ಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.

ಕಳಿಂಗ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಬಿಎಫ್‌ಸಿ 3–1 ಗೋಲುಗಳಿಂದ ನೆರೋಕಾ ಎಫ್‌ಸಿ ತಂಡವನ್ನು ಪರಾಭವಗೊಳಿಸಿತು.

ನಾಲ್ಕರ ಘಟ್ಟದ ಪೈಪೋಟಿಯಲ್ಲಿ ಚೆಟ್ರಿ ಬಳಗ, ಮೋಹನ್‌ ಬಾಗನ್‌ ವಿರುದ್ಧ ಸೆಣಸಲಿದೆ. ಈ ಹೋರಾಟ ಏಪ್ರಿಲ್‌ 17ರಂದು ನಡೆಯಲಿದೆ.

ಈ ಬಾರಿಯ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯಲ್ಲಿ ರನ್ನರ್ಸ್‌ ಅಪ್‌ ಸಾಧನೆ ಮಾಡಿದ್ದ ಬೆಂಗಳೂರಿನ ತಂಡ ನೆರೋಕಾ ವಿರುದ್ಧ ಆರಂಭದಿಂದಲೇ ಆಕ್ರಮಣಕಾರಿ ಆಟ ಆಡಿತು. ಈ ಬಾರಿಯ ಐ ಲೀಗ್‌ನಲ್ಲಿ ರನ್ನರ್ಸ್‌ ಅಪ್‌ ಆಗಿದ್ದ ನೆರೋಕಾ ತಂಡ ಕೂಡ ಗುಣಮಟ್ಟದ ಹೋರಾಟ ನಡೆಸಿತು. ಹೀಗಾಗಿ ಮೊದಲ 10 ನಿಮಿಷಗಳ ಆಟ ಗೋಲು ರಹಿತವಾಗಿತ್ತು.

ನಂತರ ಬೆಂಗಳೂರಿನ ತಂಡ ಆಟದ ವೇಗ ಹೆಚ್ಚಿಸಿಕೊಂಡಿತು. 13ನೇ ನಿಮಿಷದಲ್ಲಿ ಬಿಎಫ್‌ಸಿ ಖಾತೆ ತೆರೆಯಿತು. ನೆರೋಕಾ ಎಫ್‌ಸಿ ಆವರಣದ ಎಡ ಭಾಗದಿಂದ ಉದಾಂತ್‌ ಸಿಂಗ್‌ ಒದ್ದು ಕಳುಹಿಸಿದ ಚೆಂಡನ್ನು ಚೆಟ್ರಿ ತಲೆತಾಗಿಸಿ ಗುರಿ ಮುಟ್ಟಿಸಿದಾಗ ಕ್ರೀಡಾಂಗಣದಲ್ಲಿ ಸಂಭ್ರಮ ಮನೆಮಾಡಿತು.

ಬಳಿಕ ನೆರೋಕಾ ತಂಡ ಮಿಂಚಿನ ಆಟ ಆಡಿತು. ಈ ತಂಡದ ಆಟಗಾರರು ಚೆಂಡಿನೊಂದಿಗೆ ಬಿಎಫ್‌ಸಿ ಆವರಣ ಪ್ರವೇಶಿಸುವ ಪ್ರಯತ್ನ ಮುಂದುವರಿಸಿದರು. ಆದರೆ ಗೋಲು ಗಳಿಸಲು ಮಾತ್ರ ಯಾರಿಗೂ ಸಾಧ್ಯವಾ ಗಲಿಲ್ಲ. 45ನೇ ನಿಮಿಷದವರೆಗೂ ಬೆಂಗಳೂರಿನ ತಂಡ ಮುನ್ನಡೆಯಲ್ಲಿತ್ತು. ಮೊದಲರ್ಧದ ಹೆಚ್ಚುವರಿ ಅವಧಿಯಲ್ಲಿ ನೆರೋಕಾ ಆಟಗಾರರು ಮೋಡಿ ಮಾಡಿದರು. 45+3ನೇ ನಿಮಿಷದಲ್ಲಿ ಪ್ರೀತಮ್‌ ಸಿಂಗ್‌ ಗೋಲು ದಾಖಲಿಸಿದರು.

ಸಹ ಆಟಗಾರ ಒದ್ದ ಚೆಂಡನ್ನು ಹಿಡಿಯಲು ಬಿಎಫ್‌ಸಿ ಗೋಲ್‌ಕೀಪರ್‌ ಗುರುಪ್ರೀತ್‌ ಸಿಂಗ್‌ ಸಂಧು ವಿಫಲರಾದರು. ಆ ಚೆಂಡನ್ನು ಪ್ರೀತಮ್‌ ಚುರುಕಾಗಿ ಬಿಎಫ್‌ಸಿ ಗೋಲು ಪೆಟ್ಟಿಗೆಯೊಳಗೆ ತೂರಿಸಿದರು. ಹೀಗಾಗಿ ಉಭಯ ತಂಡಗಳು 1–1ರ ಸಮಬಲದೊಂದಿಗೆ ವಿರಾಮಕ್ಕೆ ಹೋದವು.

ಅಲ್ಬರ್ಟ್‌ ರೋಕಾ ಮಾರ್ಗದರ್ಶ ನದಲ್ಲಿ ತರಬೇತುಗೊಂಡಿರುವ ಬೆಂಗಳೂರಿನ ತಂಡ ದ್ವಿತೀಯಾರ್ಧದಲ್ಲಿ ಪರಿಣಾಮಕಾರಿ ಆಟ ಆಡಿತು.

55ನೇ ನಿಮಿಷದಲ್ಲಿ ನಾಯಕ ಚೆಟ್ರಿ ಕಾಲ್ಚಳಕ ತೋರಿದರು. ಸಹ ಆಟಗಾರ ತಮ್ಮತ್ತ ತಳ್ಳಿದ ಚೆಂಡನ್ನು ಚೆಟ್ರಿ, ಎದುರಾಳಿ ಆವರಣದ 30 ಗಜ ದೂರದಿಂದ ಒದ್ದು ಗುರಿ ಮುಟ್ಟಿಸಿದ ರೀತಿ ಸೊಗಸಾಗಿತ್ತು. ಬಳಿಕ ನೆರೋಕಾ ತಂಡ ಛಲದಿಂದ ಹೋರಾಡಿತು. ರಕ್ಷಣಾ ವಿಭಾಗದಲ್ಲಿ ಅಮೋಘ ಆಟ ಆಡಿದ ಬೆಂಗಳೂರಿನ ತಂಡದ ಆಟಗಾರರು ಎದುರಾಳಿಗಳ ಎಲ್ಲಾ ಪ್ರಯತ್ನಗಳನ್ನು ವಿಫಲಗೊಳಿಸಿದರು. ನಿಗದಿತ ಅವಧಿ ಮುಗಿದಾಗ
ಬಿಎಫ್‌ಸಿ 2–1ರಿಂದ ಮುನ್ನಡೆ ಹೊಂದಿತ್ತು.

ಹೆಚ್ಚುವರಿ ಅವಧಿಯಲ್ಲಿ ಸುನಿಲ್‌ ಚೆಟ್ರಿ ಮೋಡಿ ಮಾಡಿದರು. 90+4ನೇ ನಿಮಿಷದಲ್ಲಿ ಚೆಂಡಿನೊಂದಿಗೆ ಎದುರಾಳಿ ಆವರಣ ಪ್ರವೇಶಿಸಿದ ಅವರು ನೆರೋಕಾ ತಂಡದ ಗೋಲ್‌ಕೀಪರ್‌ ಲಲಿತ್‌ ಥಾಪಾ ಅವರನ್ನು ವಂಚಿಸಿ ಅದನ್ನು ಗುರಿಯತ್ತ ಒದ್ದರು. ಚೆಟ್ರಿ ಬಾರಿಸಿದ ಚೆಂಡು ಎದುರಾಳಿ ತಂಡದ ಗೋಲು ಪೆಟ್ಟಿಗೆಯ ಬಲೆಗೆ ಮುತ್ತಿಕ್ಕುತ್ತಿದ್ದಂತೆ ಬಿಎಫ್‌ಸಿ ಪಾಳಯದಲ್ಲಿ ಸಂಭ್ರಮ ಮೇಳೈಸಿತು.

ನೆರೋಕಾ ತಂಡ ಕ್ವಾರ್ಟರ್‌ ಫೈನಲ್‌ನಲ್ಲಿ ಬಲಿಷ್ಠ ಕೇರಳ ಬ್ಲಾಸ್ಟರ್ಸ್‌ ತಂಡವನ್ನು ಸೋಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT