ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಲ್‌ಬಾಗ್‌, ಕಬ್ಬನ್‌ನಲ್ಲಿ ಭದ್ರತೆ ಕೊರತೆ

Last Updated 13 ಏಪ್ರಿಲ್ 2018, 19:39 IST
ಅಕ್ಷರ ಗಾತ್ರ

ಬೆಂಗಳೂರು: ನಿತ್ಯ ಸಾವಿರಾರು ಮಂದಿ ಭೇಟಿ ನೀಡುವ ಲಾಲ್‌ಬಾಗ್‌ ಹಾಗೂ ಕಬ್ಬನ್‌ ಉದ್ಯಾನದಲ್ಲಿ ಭದ್ರತಾ ಸಿಬ್ಬಂದಿಯ ಕೊರತೆ ಢಾಳಾಗಿ ಕಾಣಿಸುತ್ತಿದೆ.

ಲಾಲ್‌ಬಾಗ್‌, ಕಬ್ಬನ್‌ ಉದ್ಯಾನ ಸೇರಿ ಒಟ್ಟು 138 ಮಂದಿ ಸಿಬ್ಬಂದಿ ಇದ್ದಾರೆ. 192 ಎಕರೆ ವಿಸ್ತೀರ್ಣದ ಕಬ್ಬನ್‌ ಉದ್ಯಾನದ ಭದ್ರತೆಗೆ ಇಲ್ಲಿರುವುದು 72 ಸಿಬ್ಬಂದಿ ಮಾತ್ರ. ಅವರು ಮೂರು ಪಾಳಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

‘ಕಬ್ಬನ್‌ ಉದ್ಯಾನದಲ್ಲಿ ಬೆಳಿಗ್ಗೆ 8ರಿಂದ ರಾತ್ರಿ 10 ಗಂಟೆಯವರೆಗೆ ವಾಹನಗಳು ಸಂಚರಿಸುತ್ತವೆ. ಹಡ್ಸನ್‌ ವೃತ್ತ, ಸಿದ್ಧಲಿಂಗಯ್ಯ ದ್ವಾರ, ಬಾಲಭವನ, ಪ್ರೆಸ್‌ಕ್ಲಬ್‌, ಬಹುಮಹಡಿ ಕಟ್ಟಡ, ಹೈಕೋರ್ಟ್‌ ಹಾಗೂ ಕೆ.ಆರ್‌. ವೃತ್ತದ ಕಡೆಯವು ಸೇರಿ ಒಟ್ಟು ಏಳು ಪ್ರವೇಶ ದ್ವಾರಗಳಿವೆ. ಪ್ರತಿ ದ್ವಾರದಲ್ಲೂ ಪಾಳಿ ಪ್ರಕಾರ ಒಬ್ಬ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ದೇವೆ’ ಎನ್ನುತ್ತಾರೆ ತೋಟಗಾರಿಕಾ ಇಲಾಖೆ ಅಧಿಕಾರಿಗಳು.

‘ಐದು ದ್ವಾರಗಳಲ್ಲಿ ಮಾತ್ರ ಸಿಬ್ಬಂದಿ ಕಾಣಿಸುತ್ತಾರೆ‌’ ಎಂದು ನಡಿಗೆದಾರ ಸುಧೀಂದ್ರ ರಾವ್‌ ದೂರಿದರು.

‘ಅಧಿಕಾರಿಗಳು ಲೆಕ್ಕದಲ್ಲಿ 70 ಜನರನ್ನು ತೋರಿಸಿದರೂ ಉದ್ಯಾನದಲ್ಲಿ ಕಾಣ ಸಿಗುವುದು ಮಾತ್ರ 15 ಮಂದಿ. ಇಷ್ಟು ಸಿಬ್ಬಂದಿಯಿಂದ ಇಡೀ ಉದ್ಯಾನವನ್ನು ಕಾಯಲು ಸಾಧ್ಯವಿಲ್ಲ. ಕೇಂದ್ರ ಗ್ರಂಥಾಲಯ, ರೋಜ್‌ ಗಾರ್ಡನ್‌ ಬಳಿ ಭದ್ರತೆಯೇ ಇಲ್ಲ’ ಎಂದು ಕಬ್ಬನ್‌ ಉದ್ಯಾನದ ನಡಿಗೆದಾರರ ಸಂಘದ ಅಧ್ಯಕ್ಷ ಉಮೇಶ್‌ ಆರೋಪಿಸಿದರು.

'ಸಿಬ್ಬಂದಿ ಸಂಖ್ಯೆ ಕಡಿಮೆ ಇದೆ. ಹಾಗಾಗಿ ಪ್ರೇಮಿಗಳು ಬಹಿರಂಗವಾಗಿ ಸರಸ–ಸಲ್ಲಾಪದಲ್ಲಿ ತೊಡಗುವ ಪ್ರಸಂಗಗಳು ಹೆಚ್ಚುತ್ತಿವೆ. ವಾಯು ವಿಹಾರಿಗಳು, ಪ್ರವಾಸಿಗರು ಹಾಗೂ ಕುಟುಂಬ ಸಮೇತರಾಗಿ ಉದ್ಯಾನಕ್ಕೆ ಬರುವವರಿಗೆ ಇದರಿಂದ ಮುಜುಗರ ಉಂಟಾಗುತ್ತಿದೆ. ಭದ್ರತೆ ಹೆಚ್ಚಿಸಬೇಕೆಂದು ಸಂಘದ ಪರವಾಗಿ ಸಾಕಷ್ಟು ಬಾರಿ ಮನವಿ ಮಾಡಿದ್ದೇವೆ. ಆದರೂ ಪ್ರಯೋಜನವಾಗಿಲ್ಲ’ ಎಂದು ಅವರು ತಿಳಿಸಿದರು.

‘ಕಬ್ಬನ್‌ ಉದ್ಯಾನದಲ್ಲಿ ಮೂರು ಪಾಳಿಗಳಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಡಿಟೆಕ್ಟ್‌ ವೆಲ್‌ ಏಜೆನ್ಸಿ ಭದ್ರತಾ ಸಿಬ್ಬಂದಿಯನ್ನು ಒದಗಿಸುತ್ತಿದೆ’ ಎಂದು ಇಲಾಖೆಯ ಉಪನಿರ್ದೇಶಕ ಮಹಾಂತೇಶ್‌ ಮುರಗೋಡ 'ಪ್ರಜಾವಾಣಿ'ಗೆ ತಿಳಿಸಿದರು.

‘ಲಾಲ್‌ಬಾಗ್‌ನಲ್ಲಿ ಮೂರು ಪಾಳಿಗಳಲ್ಲಿ ತಲಾ 22 ಮಂದಿ ಕೆಲಸ ಮಾಡುತ್ತಿದ್ದಾರೆ. ಅವರ ಸಂಖ್ಯೆಯನ್ನು 25ಕ್ಕೆ ಏರಿಸಲು ಉದ್ದೇಶಿಸಿದ್ದೇವೆ’ ಎಂದು ಇಲಾಖೆಯ ಉಪನಿರ್ದೇಶಕ ಚಂದ್ರಶೇಖರ್‌ ತಿಳಿಸಿದರು.

‘ಭದ್ರತಾ ಏಜೆನ್ಸಿಯ ಟೆಂಡರ್‌ ಮೇ ತಿಂಗಳಲ್ಲಿ ಮುಕ್ತಾಯವಾಗಲಿದೆ. ಎರಡು ತಿಂಗಳು ಮುಂಚಿತವಾಗಿ ಟೆಂಡರ್‌ ಆಹ್ವಾನಿಸಬೇಕು. ಈಗ ಚುನಾವಣೆ ನೀತಿ ಸಂಹಿತೆ ಇರುವುದರಿಂದ ಆಯೋಗದಿಂದ ಈ ಪ್ರಕ್ರಿಯೆಗೆ ನಿರಾಕ್ಷೇಪಣಾ ಪತ್ರ ಪಡೆಯಬೇಕಿದೆ. ಹಿಂದೆ ಎರಡೂ ಉದ್ಯಾನಗಳಿಗೂ ಪ್ರತ್ಯೇಕವಾಗಿ ಟೆಂಡರ್‌ ಕರೆಯುತ್ತಿದ್ದೆವು. ಈ ವರ್ಷದಿಂದ ಎರಡೂ ಉದ್ಯಾನಕ್ಕೂ ಒಂದೇ ಏಜೆನ್ಸಿಯಿಂದ ಸಿಬ್ಬಂದಿಯನ್ನು ಪಡೆಯಲಿದ್ದೇವೆ’ ತೋಟಗಾರಿಕೆ ಇಲಾಖೆ ಆಯುಕ್ತ ವೈ.ಎಸ್‌.ಪಾಟೀಲ ತಿಳಿಸಿದರು.

**

ಸಿಸಿಟಿವಿ ಕ್ಯಾಮೆರಾ ಹೆಚ್ಚಳ

ಕಬ್ಬನ್‌ ಉದ್ಯಾನ ಹಾಗೂ ಲಾಲ್‌ಬಾಗ್‌ನಲ್ಲಿ ಈಗಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಹೊರತುಪಡಿಸಿ ಸುಮಾರು 200 ಕ್ಯಾಮೆರಾ ಅಳವಡಿಸಲು ತೋಟಗಾರಿಕೆ ಇಲಾಖೆ ಚಿಂತನೆ ನಡೆಸಿದೆ.

‘ಈಗ ಸಿಸಿಟಿವಿ ಕ್ಯಾಮೆರಾಗಳ ಸಂಖ್ಯೆ ಕಡಿಮೆ ಇದೆ ಎಂದೇನಲ್ಲ. ಇನ್ನೂ ಹೆಚ್ಚಿನ ನಿಗಾ ಅಗತ್ಯವಿದೆ ಎಂಬ ಕಾರಣಕ್ಕೆ ಅವುಗಳ ಸಂಖ್ಯೆ ಹೆಚ್ಚಿಸಲು ಯೋಜಿಸಿದ್ದೇವೆ. ಕಬ್ಬನ್‌ ಉದ್ಯಾನದಲ್ಲಿ 100, ಲಾಲ್‌ಬಾಗ್‌ನಲ್ಲಿ 100 ಕ್ಯಾಮೆರಾಗಳನ್ನು ಅಳವಡಿಸಲಾಗುವುದು’ ಎಂದು ಪಾಟೀಲ್‌ ತಿಳಿಸಿದರು.

**

ಭದ್ರತಾ ಸಿಬ್ಬಂದಿ ಸಂಖ್ಯೆ

72: ಕಬ್ಬನ್‌ಪಾರ್ಕ್‌

66: ಲಾಲ್‌ಬಾಗ್‌

**

ಉದ್ಯಾನದಲ್ಲಿನ ಭದ್ರತೆಯ ನೆಪದಲ್ಲಿ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ.

-ಉಮೇಶ್‌, ಅಧ್ಯಕ್ಷ, ಕಬ್ಬನ್‌ ಪಾರ್ಕ್‌ ನಡಿಗೆದಾರರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT