ಮಂಗಳವಾರ, ಡಿಸೆಂಬರ್ 10, 2019
26 °C
50 ಮೀಟರ್ಸ್‌ ರೈಫಲ್‌ 3 ಪೊಷಿಸನ್‌ನಲ್ಲಿ ತೇಜಸ್ವಿನಿ ಮೋಡಿ

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಅನೀಶ್‌ಗೆ ಚಿನ್ನ

Published:
Updated:
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಅನೀಶ್‌ಗೆ ಚಿನ್ನ

ಬ್ರಿಸ್ಬೇನ್‌: ಕಾಮನ್‌ವೆಲ್ತ್‌ ಕ್ರೀಡಾಕೂಟದ ಶೂಟಿಂಗ್ ಮತ್ತು ಕುಸ್ತಿಯಲ್ಲಿ ಭಾರತದ ಸ್ಪರ್ಧಿಗಳು ಚಿನ್ನದ ಬೇಟೆ ಮುಂದುವರಿಸಿದ್ದಾರೆ.

ಕೂಟದ ಒಂಬತ್ತನೆ ದಿನವಾದ ಶುಕ್ರವಾರ ಶೂಟರ್‌ಗಳು ಮೂರು ಪದಕ ಜಯಿಸಿದ್ದು, ಕುಸ್ತಿಪಟುಗಳು ಭಾರತದ ಖಾತೆಗೆ ನಾಲ್ಕು ಪದಕಗಳನ್ನು ಸೇರ್ಪಡೆ ಮಾಡಿದ್ದಾರೆ.

ಪುರುಷರ 25 ಮೀಟರ್ಸ್‌ ರ‍್ಯಾ‍ಪಿಡ್‌ ಫೈರ್‌ ಪಿಸ್ತೂಲ್‌ ವಿಭಾಗದಲ್ಲಿ ಕಣದಲ್ಲಿದ್ದ ಹತ್ತನೆ ತರಗತಿ ವಿದ್ಯಾರ್ಥಿ ಅನೀಶ್‌ ಭಾನವಾಲಾ, ಚಿನ್ನ ಗೆದ್ದು ಚಾರಿತ್ರಿಕ ಸಾಧನೆ ಮಾಡಿದರು.

(ತೇಜಸ್ವಿನಿ ಸಾವಂತ್‌)

15 ವರ್ಷದ ಅನೀಶ್‌, ಕಾಮನ್‌ವೆಲ್ತ್‌ ಕೂಟದಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ ಭಾರತದ ಅತಿ ಕಿರಿಯ ಕ್ರೀಡಾಪಟು ಎಂಬ ದಾಖಲೆ ತಮ್ಮದಾಗಿಸಿಕೊಂಡರು. ಮಹಿಳಾ ಶೂಟರ್‌ ಮನು ಭಾಕರ್‌ (16 ವರ್ಷ) ಮೊದಲು ಈ ಶ್ರೇಯಕ್ಕೆ ಪಾತ್ರರಾಗಿದ್ದರು.

ಮೊದಲ ಬಾರಿಗೆ ಕಾಮನ್‌ವೆಲ್ತ್‌ನಲ್ಲಿ ಭಾಗವಹಿಸಿದ್ದ ಅನೀಶ್‌, ಫೈನಲ್‌ನಲ್ಲಿ 30 ಸ್ಕೋರ್‌ ಕಲೆಹಾಕಿ ಕೂಟ ದಾಖಲೆ ತಮ್ಮ ಹೆಸರಿಗೆ ಬರೆದುಕೊಂಡರು.

2014ರ ಗ್ಲಾಸ್ಗೊ ಕೂಟದಲ್ಲಿ ಆಸ್ಟ್ರೇಲಿಯಾದ ಡೇವಿಡ್‌ ಚಾಪ್‌ಮನ್‌ 23 ಸ್ಕೋರ್‌ ಕಲೆಹಾಕಿದ್ದು ಇದುವರೆಗಿನ ಶ್ರೇಷ್ಠ ಸಾಧನೆಯಾಗಿತ್ತು.

ಎರಡನೆ ಹಂತದ ಅರ್ಹತಾ ಸುತ್ತಿನಲ್ಲಿ ಅನೀಶ್‌, ಅಗ್ರಸ್ಥಾನ ಗಳಿಸಿ ಫೈನಲ್‌ಗೆ ಲಗ್ಗೆ ಇಟ್ಟಿದ್ದರು. ಅವರು ಒಟ್ಟು 580 ಸ್ಕೋರ್‌ ಕಲೆಹಾಕಿದ್ದರು.

ಫೈನಲ್‌ನಲ್ಲಿ ಅನೀಶ್‌ ಮತ್ತು ಆಸ್ಟ್ರೇಲಿಯಾದ ಸರ್ಜಿ ಎವಗ್ಲೆವ್‌ಸ್ಕಿ ಅವರ ನಡುವೆ ತುರುಸಿನ ಪೈಪೋಟಿ ಏರ್ಪಟ್ಟಿತ್ತು. ಮೊದಲ ಹಂತದ ಮೂರೂ ಅವಕಾಶಗಳಲ್ಲಿ ಪರಾಕ್ರಮ ಮೆರೆದ ಅನೀಶ್‌ 13–8ರಿಂದ ಮುನ್ನಡೆ ಸಾಧಿಸಿದರು.

(ಅಂಜುಮ್‌ ಮೌದ್ಗಿಲ್‌)

ಎರಡನೆ ಹಂತದ ಎಲಿಮಿನೇಷನ್‌ ಸುತ್ತಿನ ಮೊದಲ ಅವಕಾಶದಲ್ಲಿ ಅನೀಶ್‌ ಒಂದು ಸ್ಕೋರ್‌ ಗಳಿಸಿದರೆ, ಸರ್ಜಿ ಮೂರು ಸ್ಕೋರ್‌ ಕಲೆಹಾಕಿ ಹಿನ್ನಡೆಯನ್ನು 12–14ಕ್ಕೆ ತಗ್ಗಿಸಿಕೊಂಡರು. ನಂತರದ ಮೂರು ಅವಕಾಶಗಳ ಬಳಿಕ ಅನೀಶ್‌ ಒಂದು ಸ್ಕೋರ್‌ನಿಂದ ಮುಂದಿದ್ದರು. ಹೀಗಾಗಿ ಚಿನ್ನದ ಪದಕ ಯಾರಿಗೆ ಒಲಿಯಲಿದೆ ಎಂಬ ಕುತೂಹಲ ಗರಿಗೆದರಿತ್ತು. ಅಂತಿಮ ಅವಕಾಶದಲ್ಲಿ ಐದು ಸ್ಕೋರ್‌ ಸಂಗ್ರಹಿಸಿದ ಅನೀಶ್‌ ಖುಷಿಯ ಕಡಲಲ್ಲಿ ತೇಲಿದರು.

 

ಕಾಂಗರೂಗಳ ನಾಡಿನ ಶೂಟರ್‌ ಸರ್ಜಿ (28 ಸ್ಕೋರ್‌) ಬೆಳ್ಳಿಗೆ ತೃಪ್ತಿಪಟ್ಟರು.

ಇಂಗ್ಲೆಂಡ್‌ನ ಸ್ಯಾಮ್‌ ಗೊವಿನ್‌ ಈ ವಿಭಾಗದ ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಅವರು 17 ಸ್ಕೋರ್‌ ಕಲೆಹಾಕಿದರು.

ಭಾರತದ ನೀರಜ್‌ ಕುಮಾರ್‌ ಐದನೆ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿದರು. ನೀರಜ್‌ ಅವರು ಅರ್ಹತಾ ಸುತ್ತಿನಲ್ಲಿ ಒಟ್ಟಾರೆ 579 ಸ್ಕೋರ್‌ ಗಳಿಸಿ ಎರಡನೆ ಸ್ಥಾನದೊಂದಿಗೆ ಫೈನಲ್‌ ಪ್ರವೇಶಿಸಿದ್ದರು. ಫೈನಲ್‌ನಲ್ಲಿ ಒಟ್ಟು ಆರು ಮಂದಿ ಶೂಟರ್‌ಗಳು ಪೈಪೋಟಿ ನಡೆಸಿದ್ದರು.

ತೇಜಸ್ವಿನಿಗೆ ಚಿನ್ನ: ಮಹಿಳೆಯರ 50 ಮಿಟರ್ಸ್‌ ರೈಫಲ್‌–3 ಪೊಷಿಸನ್‌ ವಿಭಾಗದಲ್ಲಿ ತೇಜಸ್ವಿನಿ ಸಾವಂತ್‌ ಕೂಟ ದಾಖಲೆಯೊಂದಿಗೆ (457.9 ಸ್ಕೋರ್‌) ಚಿನ್ನಕ್ಕೆ ಗುರಿ ಇಟ್ಟರು.

ತೇಜಸ್ವಿನಿ ಅವರು ಕಾಮನ್‌ವೆಲ್ತ್‌ ಕೂಟದಲ್ಲಿ ಗೆದ್ದ ಏಳನೆ ಪದಕ ಇದಾಗಿದೆ. ಗುರುವಾರ ನಡೆದಿದ್ದ 50 ಮೀಟರ್ಸ್‌ ರೈಫಲ್‌ ಪ್ರೋನ್ ವಿಭಾಗದಲ್ಲಿ ಅವರು ಬೆಳ್ಳಿಯ ಸಾಧನೆ ಮಾಡಿದ್ದರು.

ಅರ್ಹತಾ ಸುತ್ತಿನಲ್ಲಿ 582 ಸ್ಕೋರ್‌ ಗಳಿಸಿದ್ದ ತೇಜಸ್ವಿನಿ, ಮೂರನೆಯವರಾಗಿ ಫೈನಲ್‌ ಪ್ರವೇಶಿಸಿದ್ದರು.

ಅಂತಿಮ ಘಟ್ಟದಲ್ಲಿ ನೀಲಿಂಗ್‌ (ಮಂಡಿಯೂರಿ ಕುಳಿತು) ವಿಭಾಗದ ಮೂರು ಅವಕಾಶಗಳಿಂದ ಒಟ್ಟು 152.4 ಸ್ಕೋರ್‌ ಗಳಿಸಿದ ತೇಜಸ್ವಿನಿ, ಪ್ರೋನ್‌ ವಿಭಾಗದಲ್ಲೂ ನಿಖರ ಗುರಿ ಹಿಡಿದು ಒಟ್ಟು ಸ್ಕೋರ್‌ ಅನ್ನು 310.1ಕ್ಕೆ ಹೆಚ್ಚಿಸಿಕೊಂಡರು.

ಸ್ಟ್ಯಾಂಡಿಂಗ್‌ ಎಲಿಮಿನೇಷನ್‌ ಸುತ್ತಿನಲ್ಲೂ ಪ್ರಾಬಲ್ಯ ಮೆರೆದ ಅವರು ಚಿನ್ನ ಗೆದ್ದು ಸಂಭ್ರಮಿಸಿದರು.

ಭಾರತದ ಅಂಜುಮ್‌ ಮೌದ್ಗಿಲ್‌ ಈ ವಿಭಾಗದ ಬೆಳ್ಳಿ ತಮ್ಮದಾಗಿಸಿಕೊಂಡರು. ಅವರು ಒಟ್ಟು 455.7 ಸ್ಕೋರ್‌ ಗಳಿಸಿದರು.

ಅಂಜುಮ್‌ ಅವರು ಅರ್ಹತಾ ಸುತ್ತಿನಲ್ಲಿ ಕೂಟ ದಾಖಲೆ ಬರೆದಿದ್ದರು. ಅವರು ಒಟ್ಟು 589 ಸ್ಕೋರ್‌ ಗಳಿಸಿ ಸಿಂಗಪುರದ ಕ್ಸಿಯಾಂಗ್‌ ವೀ ಜಾಸ್ಮಿನ್‌ ಸೆರ್‌ (581 ಸ್ಕೋರ್‌) ಹೆಸರಿನಲ್ಲಿದ್ದ ನಾಲ್ಕು ವರ್ಷಗಳ ಹಿಂದಿನ ದಾಖಲೆ ಅಳಿಸಿ ಹಾಕಿದ್ದರು.

ಸ್ಕಾಟ್ಲೆಂಡ್‌ನ ಸಿಯೊನೈದ್‌ ಮೆಕಿಂತೋಷ್‌ (444.6 ಸ್ಕೋರ್‌) ಈ ವಿಭಾಗದ ಕಂಚು ತಮ್ಮದಾಗಿಸಿಕೊಂಡರು.

ಶ್ರೇಯಸಿಗೆ ನಿರಾಸೆ: ಮಹಿಳೆಯರ ಟ್ರ್ಯಾಪ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಶ್ರೇಯಸಿ ಸಿಂಗ್‌ ಐದನೆಯವರಾಗಿ ಅಭಿಯಾನ ಮುಗಿಸಿದರು.

ಫೈನಲ್‌ನಲ್ಲಿ ಶ್ರೇಯಸಿ, 19 ಸ್ಕೋರ್‌ ಗಳಿಸಿದರು. ಡಬಲ್‌ ಟ್ರ್ಯಾಪ್‌ ವಿಭಾಗದಲ್ಲಿ ಅವರು ಚಿನ್ನದ ಸಾಧನೆ ಮಾಡಿದ್ದರು.

ಆಸ್ಟ್ರೇಲಿಯಾದ ಲಯೆತೀಶಾ ಸ್ಕಾನ್‌ಲಾನ್‌ (38 ಸ್ಕೋರ್‌) ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು.

ನಾರ್ಥರ್ನ್ ಐರ್ಲೆಂಡ್‌ನ ಕರ್ಸ್ಟಿ ಬಾರ್‌ (37 ಸ್ಕೋರ್‌) ಮತ್ತು ವೇಲ್ಸ್‌ನ ಸಾರಾ ವಿಕ್ಸಿ (28 ಸ್ಕೋರ್‌) ಕ್ರಮವಾಗಿ ಬೆಳ್ಳಿ ಮತ್ತು ಕಂಚು ಜಯಿಸಿದರು.

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ

*ಅನೀಶ್‌ ಅವರು 2002ರ ಸೆಪ್ಟೆಂಬರ್‌ 26ರಂದು ಹರಿಯಾಣದ ಸೋನೆಪತ್‌ನ ಕಶಾಂಡಿ ಗ್ರಾಮದಲ್ಲಿ ಜನಿಸಿದರು.

*ಹರಿಯಾಣದ ಕರ್ನಲ್‌ನ ಸೇಂಟ್‌ ತೆರೆಸಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿರುವ ಅನೀಶ್‌, ಎಳವೆಯಿಂದಲೇ ಶೂಟಿಂಗ್‌ನಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು.

*2013ರಲ್ಲಿ ನಡೆದಿದ್ದ 12 ವರ್ಷದೊಳಗಿನವರ ವಿಶ್ವಕಪ್‌ ಮತ್ತು 2015ರಲ್ಲಿ ನಡೆದಿದ್ದ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿದ್ದರು.

*ಕಾಮನ್‌ವೆಲ್ತ್‌ ಕೂಟ ನಡೆಯುವ ಅವಧಿಯಲ್ಲೇ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಿಗದಿಯಾಗಿದೆ. ಅನೀಶ್‌ಗೆ ಅನುಕೂಲ ಮಾಡಿಕೊಡುವ ಸಲುವಾಗಿ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಮೂರು ವಿಷಯಗಳ ಪರೀಕ್ಷಾ ದಿನಾಂಕಗಳನ್ನು ಮುಂದೂಡಿದೆ.

* ಕಾಮನ್‌ವೆಲ್ತ್‌ನಲ್ಲಿ ಚಿನ್ನ ಗೆದ್ದಿರುವುದು ಖುಷಿ ನೀಡಿದೆ. ಈ ಸಾಧನೆ ಹೆಮ್ಮೆಯಿಂದ ಬೀಗುವಂತೆ ಮಾಡಿದೆ.

–ಅನೀಶ್‌ ಭಾನವಾಲಾ, ಚಿನ್ನ ಗೆದ್ದ ಭಾರತದ ಶೂಟರ್‌

ಪ್ರತಿಕ್ರಿಯಿಸಿ (+)