ಗುರುವಾರ , ಡಿಸೆಂಬರ್ 12, 2019
20 °C
ಹಿರೀಸಾವೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ; 15 ಮಂದಿಗೆ ಗಾಯ

ಖಾಸಗಿ ಬಸ್ ಉರುಳಿ ಇಬ್ಬರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಖಾಸಗಿ ಬಸ್ ಉರುಳಿ ಇಬ್ಬರ ಸಾವು

ಹಿರೀಸಾವೆ: ರಾಷ್ಟ್ರೀಯ ಹೆದ್ದಾರಿ 75ರ ಬ್ಯಾಡರಹಳ್ಳಿ ಗೇಟ್‌ ಸಮೀಪ ಶುಕ್ರವಾರ ಬೆಳಿಗ್ಗೆ ಖಾಸಗಿ ಬಸ್‌ ಉರುಳಿ ಬಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, 15 ಪ್ರಯಾಣಿಕರು ಗಾಯಗೊಂಡಿದ್ದಾರೆ.

ಕುಂದಾಪುರದ ಪ್ರಶಾಂತ್‌ ಪುತ್ರ ಶಿಶಿರ್ (13) ಮತ್ತು ಉಡುಪಿ ಜಿಲ್ಲೆ ಬ್ರಹ್ಮಾವರದ ಬಸವಣ್ಣ ಪೂಜಾರಿ ಮಗ ಮಹೇಶ್ (45) ಮೃತಪಟ್ಟವರು. ಬಸ್‌ನಲ್ಲಿ ಇದ್ದ ಬಹುತೇಕರು ಉಡುಪಿ, ಕುಂದಾಪರ ಭಾಗದವರಾಗಿದ್ದು, ಬೆಂಗಳೂರಿನಲ್ಲಿನಲ್ಲಿ ನೆಲೆಸಿದ್ದಾರೆ.

ಸುಗಮ ಟ್ರಾವೆಲ್ಸ್‌ಗೆ ಸೇರಿದ ಬಸ್‌ ಗುರುವಾರ ರಾತ್ರಿ 9 ಗಂಟೆಗೆ ಕುಂದಾಪುರದಿಂದ ಹೊರಟಿದ್ದು, ಬೆಳಗಿನ ಜಾವ 5.30ರ ಸಮಯದಲ್ಲಿ ರಸ್ತೆ ಪಕ್ಕದ ಡಿವೈಡರ್‌ಗೆ ಬಡಿದು ಉರುಳಿ ಬಿದ್ದಿದ್ದೆ.

ಗಾಯಾಳುಗಳನ್ನು ಹಿರೀಸಾವೆ ಮತ್ತು ಆದಿಚುಂಚನಗಿರಿ ಆಸ್ಪತ್ರೆಗೆ ಸಾಗಿಸಲಾಯಿತು. ಎರಡು ಕ್ರೇನ್‌ ಬಳಸಿ, ಬಸ್‌ ಮೇಲಕ್ಕೆ ಎತ್ತಲಾಯಿತು. ಚಾಲಕ, ನಿರ್ವಾಹಕ ಸೇರಿ 23 ಜನರು ಇದ್ದರು.

ಎಂಜಿನಿಯರ್‌ ಪ್ರಶಾಂತ್‌ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಸಂಬಂಧಿಕರೊಂದಿಗೆ ಗೋವಾ ಸೇರಿದಂತೆ ವಿವಿಧೆಡೆ ಪ್ರವಾಸ ಮುಗಿಸಿ ಕುಂದಾಪುರಿಗೆ ಬಂದಿದ್ದರು. 8ನೇ ತರಗತಿ ಪ್ರವೇಶ ಆರಂಭವಾಗಿದ್ದರಿಂದ ಮಗ ಶಿಶಿರನನ್ನು ಕರೆದುಕೊಂಡು ಬೆಂಗಳೂರಿಗೆ ಹೋಗುತ್ತಿದ್ದರು. ಇರುವ ಒಬ್ಬ ಮಗ ಸಾವನ್ನಪ್ಪಿದ್ದನ್ನು ಕಂಡು ತಂದೆಯ ಆಕ್ರಂದನ ಮುಗಿಲು ಮುಟ್ಟಿತ್ತು.

ಮಹೇಶ್‌ ಬೆಂಗಳೂರಿನಲ್ಲಿ ಕ್ಯಾಟರಿಂಗ್‌ ನಡೆಸುತ್ತಿದ್ದು, ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದರು. ಬಸ್‌ ಉರುಳಿದಾಗ ಅಡಿಗೆ ಸಿಲುಕಿ ಮೃತಪಟ್ಟರೆ, ಪತ್ನಿ ಪೂರ್ಣಿಮಾ ಕಾಲು ಮುರಿದಿದೆ. ಇಬ್ಬರು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.

ವಿನೋದಕುಮಾರ್, ಸುಮತಿ, ರಶ್ಮಿ, ಮೌನ ಎಂಬುವರಿಗೆ ತೀವ್ರ ಗಾಯಾಗಳಾಗಿವೆ. ಡಿವೈಎಸ್‌ಪಿ ರಾಮಲಿಂಗೇಗೌಡ, ಸಿಪಿಐ ಹರೀಶ್‌ ಬಾಬು ಸೇರಿದಂತೆ ಪೊಲೀಸ್‌ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು.

 

ಪ್ರತಿಕ್ರಿಯಿಸಿ (+)