ಡಿವಿಲಿಯರ್ಸ್‌ ಮಿಂಚು; ಆರ್‌ಸಿಬಿಗೆ ಜಯ

7
ಜಯದ ಖಾತೆ ತೆರೆದ ರಾಯಲ್ ಚಾಲೆಂಜರ್ಸ್

ಡಿವಿಲಿಯರ್ಸ್‌ ಮಿಂಚು; ಆರ್‌ಸಿಬಿಗೆ ಜಯ

Published:
Updated:
ಡಿವಿಲಿಯರ್ಸ್‌ ಮಿಂಚು; ಆರ್‌ಸಿಬಿಗೆ ಜಯ

ಬೆಂಗಳೂರು: ಉದ್ಯಾನನಗರಿಯ ಕ್ರಿಕೆಟ್‌ಪ್ರೇಮಿಗಳಿಗೆ ಶುಕ್ರವಾರ ನಿರಾಶೆಯಾಗಲಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ  ವಿರಾಟ್ ಕೊಹ್ಲಿ ಬಳಗವು ಕಿಂಗ್ಸ್‌  ಇಲೆವನ್ ಪಂಜಾಬ್ ತಂಡದ ಎದುರು 4 ವಿಕೆಟ್‌ಗಳಿಂದ ಗೆದ್ದಾಗ ಪ್ರೇಕ್ಷಕರ ಸಂಭ್ರಮ ಮುಗಿಲು ಮುಟ್ಟಿತು.

ಹೋದ ವರ್ಷ ಇಲ್ಲಿ ನಡೆದಿದ್ದ ಏಳು ಪಂದ್ಯಗಳ ಪೈಕಿ ಐದರಲ್ಲಿ ಆರ್‌ಸಿಬಿಯು ಸೋತಿತ್ತು. ಈ ಬಾರಿಯ ಟೂರ್ನಿಯ ಮೊದಲ ಪಂದ್ಯವು ಕೋಲ್ಕತ್ತದಲ್ಲಿ ನಡೆದಿದ್ದಾಗಲೂ ಆರ್‌ಸಿಬಿ ಪರಾಭವಗೊಂಡಿತ್ತು. ಆದರೆ ಈ ಬಾರಿ ಉಮೇಶ್ ಯಾದವ್ (23ಕ್ಕೆ3) ಭೌಲಿಂಗ್ ಮತ್ತು ಎಬಿ ಡಿವಿಲಿಯರ್ (57; 40ಎ, 2ಬೌಂ, 4ಸಿ) ಅವರ ಅಬ್ಬರದ ಬ್ಯಾಟಿಂಗ್‌ನಿಂದ ಆರ್‌ಸಿಬಿ ಜಯಿಸಿತು.

(ಕಿಂಗ್ಸ್‌ ಇಲೆವನ್‌ ತಂಡದ ಕೆ.ಎಲ್‌. ರಾಹುಲ್‌ ಅವರ ಬ್ಯಾಟಿಂಗ್ ಶೈಲಿ)

ಕೆ.ಎಲ್. ರಾಹುಲ್ (47; 30ಎ, 2ಬೌಂ, 4ಸಿ) ಮತ್ತು ಕರುಣ್ ನಾಯರ್ (29; 26ಎ, 3ಬೌಂ) ಅವರ 58 ರನ್‌ಗಳ ಜೊತೆಯಾಟದಿಂದ ಕಿಂಗ್ಸ್‌ ತಂಡವು 155 ರನ್‌ ಗಳಿಸಿತ್ತು. ಇದಕ್ಕುತ್ತರವಾಗಿ ಆರ್‌ಸಿಬಿಯು 19.3 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 159 ರನ್‌ ಗಳಿಸಿತು.

(ಪಂದ್ಯ ವೀಕ್ಷಿಸಲು ಬಂದಿದ್ದ ನಟ ಶಿವರಾಜ್‌ಕುಮಾರ್‌ ಸಂಭ್ರಮಿಸಿದರು)

ವಿರಾಟ್ ಕೊಹ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಮೊದಲ ಎರಡು ಓವರ್‌ಗಳಲ್ಲಿ ಕಿಂಗ್ಸ್‌ನ ಆರಂಭಿಕ ಜೋಡಿ ಕೆ.ಎಲ್. ರಾಹುಲ್ ಮತ್ತು ಮಯಂಕ್ ಅಗರವಾಲ್ ಅವರು ರನ್‌ಗಳನ್ನು ಸೂರೆ ಮಾಡಿದರು. ಕ್ರಿಸ್‌ ವೋಕ್ಸ್‌ ಮತ್ತು ಉಮೇಶ್ ಯಾದವ್‌ ಅವರ ಓವರ್‌ಗಳಲ್ಲಿ ಸಿಕ್ಸರ್‌, ಬೌಂಡರಿಗಳನ್ನು ಗಳಿಸಿದರು. ಆದರೆ ನಾಲ್ಕನೇ ಓವರ್‌ನಲ್ಲಿ ಉಮೇಶ್ ತಿರುಗೇಟು ನೀಡಿದರು.  ಆದೊಂದೇ ಓವರ್‌ನಲ್ಲಿ ಉಮೇಶ್ ಅವರು ಮಯಂಕ್,  ಆ್ಯರನ್ ಫಿಂಚ್ ಮತ್ತು ಯುವರಾಜ್ ಸಿಂಗ್ ಅವರನ್ನು ಪೆವಿಲಿಯನ್‌ಗೆ ಕಳಿಸಿದರು.  ಇದರಿಂದಾಗಿ ಕಿಂಗ್ಸ್‌ ತಂಡದ ಬೃಹತ್ ಮೊತ್ತ ಗಳಿಸುವ ಆಸೆ ಈಡೇರಲಿಲ್ಲ.  ಸ್ಥಳೀಯ ಹೀರೊಗಳಾದ ರಾಹುಲ್ ಮತ್ತು ಕರುಣ್ ನಾಯರ್ ಪಾಲುದಾರಿಕೆಯಿಂದ ಕಿಂಗ್ಸ್‌ ಖಾತೆಗೆ ರನ್‌ಗಳು ಸೇರಿದವು. ಕೊನೆಯ ಹಂತದಲ್ಲಿ  ನಾಯಕ ಆರ್‌. ಅಶ್ವಿನ್ (33 ರನ್) ಬಿಟ್ಟರೆ ಉಳಿದ ಬ್ಯಾಟ್ಸ್‌ಮನ್‌ಗಳಿಂದ ಹೆಚ್ಚು ರನ್‌ಗಳು ಬರಲಿಲ್ಲ. ಈ ಪಂದ್ಯದಲ್ಲಿಯೂ ಸ್ಫೋಟಕ ಬ್ಯಾಟ್ಸ್‌ಮನ್‌ ಕ್ರಿಸ್ ಗೇಲ್ ಅವರಿಗೆ ಕಣಕ್ಕಿಳಿಯಲು ಅವಕಾಶ ಸಿಗಲಿಲ್ಲ.

ಆರ್‌ಸಿಬಿಯ ಎಡಗೈ ಮಧ್ಯಮವೇಗಿ ಕುಲವಂತ ಖೆಜ್ರೋಲಿಯಾ (33ಕ್ಕೆ2), ಕ್ರಿಸ್ ವೋಕ್ಸ್‌ (36ಕ್ಕೆ2), ಸ್ಪಿನ್ನರ್ ವಾಷಿಂಗ್ಟನ್ ಸುಂದರ್ (22ಕ್ಕೆ2) ಮತ್ತು ಚಾಹಲ್ (38ಕ್ಕ1) ಮಿಂಚಿದರು.

(ನಟಿ ಪ್ರೀತಿ ಜಿಂಟಾ)

ಎಬಿಡಿ ಮಿಂಚು: ದಕ್ಷಿಣ ಆಫ್ರಿಕಾದ ಸಿಡಿಲಮರಿ ಎಬಿ ಡಿವಿಲಿಯರ್ಸ್‌ ಕ್ರೀಸ್‌ಗೆ ಕಾಲಿಟ್ಟಾಗ ಆರ್‌ಸಿಬಿಯ   ಇಬ್ಬರು ಪ್ರಮುಖ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ಗೆ ಮರಳಿದ್ದರು. ಬ್ರೆಂಡನ್ ಮೆಕ್ಲಮ್ ಮೊದಲ ಓವರ್‌ನಲ್ಲಿ ಸೊನ್ನೆ ಸುತ್ತಿದ್ದರು. ನಾಯಕ ವಿರಾಟ್‌ ಕೊಹ್ಲಿ (21 ರನ್) ಐದನೇ ಓವರ್‌ನಲ್ಲಿ ಔಟಾಗಿದ್ದರು.

ಕ್ರೀಸ್‌ನಲ್ಲಿದ್ದ ಕ್ವಿಂಟನ್ ಡಿ ಕಾಕ್ (45 ರನ್) ಜೊತೆಗೂಡಿದ ಎಬಿಡಿ ತಂಡದ ಖಾತೆಗೆ ರನ್‌ಗಳನ್ನು ಸೇರಿಸಿದರು.  ಡಿಕಾಕ್ 12ನೇ ಓವರ್‌ನಲ್ಲಿ ಔಟಾದ ಮೇಲೆಯೂ ಎಬಿಡಿ ಅಬ್ಬರದ ಆಟ ನಿಲ್ಲಿಸಲಿಲ್ಲ. ಕಾಕ್ ನಂತರ ಬಂದ ಸರ್ಫರಾಜ್ ಸೊನ್ನೆ ಸುತ್ತಿದರು. ಆದರೆ ಮನದೀಪ್ ಸಿಂಗ್ ಅವರು ಎಬಿಡಿಗೆ ಉತ್ತಮ ಜೊತೆ ನೀಡಿದರು. 19ನೇ ಓವರ್‌ನಲ್ಲಿ ಎಬಿಡಿ ಔಟಾದಾಗ ಸ್ವಲ್ಪ ಆತಂಕ ಕಾಡಿತ್ತು. ಅದೇ ಓವರ್‌ನಲ್ಲಿ ಮನದೀಪ್ ರನ್‌ಔಟ್ ಆದಾಗಲೂ ಆರ್‌ಸಿಬಿಗೆ ಚಿಂತೆ ಕಾಡಿತ್ತು. ಆದರೆ ಕೊನೆಯ ಓವರ್‌ನಲ್ಲಿ ಕ್ರಿಸ್ ವೋಕ್ಸ್‌ ಮತ್ತು ವಾಷಿಂಗ್ಟನ್ ಸುಂದರ್ ತಂಡವನ್ನು ಗೆಲುವಿನ ದಡ ಸೇರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry