ಭಾನುವಾರ, ಡಿಸೆಂಬರ್ 15, 2019
25 °C
ಸಿದ್ದರಾಮಯ್ಯ– ಖರ್ಗೆ, ವೀರಪ್ಪ ಮೊಯಿಲಿ ನಡುವೆ ಜಟಾಪಟಿ

ಕಾಂಗ್ರೆಸ್‌ ಪಟ್ಟಿ: ಜಂಗಿ ಕುಸ್ತಿ

ಸಿದ್ದಯ್ಯ ಹಿರೇಮಠ Updated:

ಅಕ್ಷರ ಗಾತ್ರ : | |

ಕಾಂಗ್ರೆಸ್‌ ಪಟ್ಟಿ: ಜಂಗಿ ಕುಸ್ತಿ

ನವದೆಹಲಿ: ತಮ್ಮ ಬೆಂಬಲಿಗರಿಗೆ ಟಿಕೆಟ್‌ ಬೇಕೇಬೇಕು ಎಂದು ಪಟ್ಟು ಹಿಡಿದ ರಾಜ್ಯ ಮುಖಂಡರ ನಡುವೆ ಒಮ್ಮತ ಮೂಡದ ಕಾರಣ ಕಾಂಗ್ರೆಸ್‌ ಅಭ್ಯರ್ಥಿಗಳ ಅಂತಿಮ ಪಟ್ಟಿಯ ಬಿಡುಗಡೆ ಮುಹೂರ್ತ ಮತ್ತೆ ಮುಂದಕ್ಕೆ ಹೋಗಿದೆ.

ಸೋನಿಯಾ ಗಾಂಧಿ ಅವರ ಅಧಿಕೃತ ನಿವಾಸ ‘10 ಜನಪಥ್‌’ನಲ್ಲಿ ಶುಕ್ರವಾರ ಬೆಳಿಗ್ಗೆ ಹಾಗೂ ಸಂಜೆ ಸುದೀರ್ಘ ಸಭೆ ನಡೆಸಿದ ಪಕ್ಷದ ಕೇಂದ್ರ ಚುನಾವಣಾ ಸಮಿತಿ (ಸಿಇಸಿ)ಯು, ಟಿಕೆಟ್‌ ಹಂಚಿಕೆಗಾಗಿ ರಾಜ್ಯ ಮುಖಂಡರು ಪಟ್ಟು ಹಿಡಿದಿದ್ದರಿಂದ ರಾತ್ರಿ 8ರ ವೇಳೆಗೆ ಸಭೆಯನ್ನು ಮೊಟಕುಗೊಳಿಸಿತು.

ತಾವು ಸಿದ್ಧಪಡಿಸಿಕೊಂಡು ಬಂದಿದ್ದ 150ಕ್ಕೂ ಅಧಿಕ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಗೆ ಅನುಮೋದನೆ ಬಯಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆಯಿಂದ ಕೆಂಡಾಮಂಡಲವಾದ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ.

ಇತ್ತೀಚೆಗಷ್ಟೇ ಜೆಡಿಎಸ್‌ ಮತ್ತು ಬಿಜೆಪಿ ಸೇರಿದಂತೆ ಇತರ ಪಕ್ಷಗಳನ್ನು ತೊರೆದು ಕಾಂಗ್ರೆಸ್‌ ಸೇರಿರುವ ಶಾಸಕರು ಹಾಗೂ ಇತರ ಮುಖಂಡರಿಗೆ, ಹೈದರಾಬಾದ್‌ ಕರ್ನಾಟಕ ಭಾಗದ ಕೆಲವು ಕ್ಷೇತ್ರಗಳ ಟಿಕೆಟ್‌ ಅಂತಿಮಗೊಳಿಸುವ ವಿಚಾರದಲ್ಲಿ ರಾಜ್ಯದ ಮುಖಂಡರ ನಡುವೆ ಒಮ್ಮತ ಮೂಡಲಿಲ್ಲ. ಒಂದು ಹಂತದಲ್ಲಿ ಮುಖಂಡರ ನಡುವೆ ಮಾತಿನ ಚಕಮಕಿಯೇ ನಡೆದಿದ್ದರಿಂದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಸಹ ಕಕ್ಕಾಬಿಕ್ಕಿಯಾದರು. ಖರ್ಗೆ ಅವರು ತೀವ್ರ ಅಸಮಾಧಾನದಿಂದ ಸಭೆಯಿಂದಲೇ ಹೊರ ನಡೆದಿದ್ದರಿಂದ ಗೊಂದಲದ ವಾತಾವರಣ ಉಂಟಾಯಿತು. ಹಾಗಾಗಿ ಸಭೆಯನ್ನು ಸಂಜೆಗೆ ಮುಂದೂಡಿದರೂ ಪ್ರಯೋಜನವಾಗಲಿಲ್ಲ ಎಂದು ಪಕ್ಷದ ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿದವು.

‘ಎಲ್ಲಿ ಯಾರನ್ನು ಕಣಕ್ಕಿಳಿಸಬೇಕು ಎಂಬ ಕುರಿತು ನೀವೇ ಅಂತಿಮ ನಿರ್ಧಾರ ಕೈಗೊಳ್ಳಿ’ ಎಂದು ತಿಳಿಸಿದರೂ ನಾಯಕರು ಸಮ್ಮತಿ ಸೂಚಿಸಲಿಲ್ಲ. ಹಾಗಾಗಿ ರಾಹುಲ್‌ ಗಾಂಧಿ ಮುಜುಗರಕ್ಕೆ ಈಡಾಗುವಂತಾಯಿತು. ದಿಢೀರ್‌ ಉಂಟಾದ ಬಿಕ್ಕಟ್ಟು ಶಮನಕ್ಕೆ ಪಕ್ಷದ ಚುನಾವಣಾ ಪರಿಶೀಲನಾ ಸಮಿತಿ ಮುಖಂಡ ಮಧುಸೂದನ ಮಿಸ್ತ್ರಿ, ಪ್ರಧಾನ ಕಾರ್ಯದರ್ಶಿ ಅಶೋಕ್‌ ಗೆಹ್ಲೋಟ್‌, ಸಿಇಸಿ ಮುಖಂಡರಾದ ಗಿರಿಜಾ ವ್ಯಾಸ್‌, ಅಂಬಿಕಾ ಸೋನಿ, ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌  ಯತ್ನಿಸಿದರೂ ಪ್ರಯೋಜನವಾಗಲಿಲ್ಲ.

‘ಸಂಜೆ ನಡೆದ ಸಭೆಯಲ್ಲಿ ಸೋನಿಯಾ ಗಾಂಧಿ ಅವರೇ ನೇತೃತ್ವ ವಹಿಸಿ ಮನವರಿಕೆ ಮಾಡಲು ಯತ್ನಿಸಿದರೂ ರಾಜ್ಯದ ಮುಖಂಡರು ಪಟ್ಟು ಸಡಿಲಿಸಲಿಲ್ಲ. ಆ ಕಾರಣದಿಂದಲೇ ಪಟ್ಟಿಯ ಕುರಿತು ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಲಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಹಿರಿಯ ಮುಖಂಡರೊಬ್ಬರು ಹೇಳಿದರು.

ಪರಿಶಿಷ್ಟ ಜಾತಿಗೆ ಮೀಸಲಾದ ಕ್ಷೇತ್ರಗಳಲ್ಲಿ ದಲಿತ ಸಮುದಾಯದ ಎಡಗೈ ಬಣಕ್ಕೆ ನಿರ್ದಿಷ್ಟ ಸಂಖ್ಯೆಯಲ್ಲಿ ಟಿಕೆಟ್‌ ನೀಡುವಂತೆ ಸಂಸದ ಕೆ.ಎಚ್‌. ಮುನಿಯಪ್ಪ, ಸಚಿವ ಎಚ್‌.ಆಂಜನೇಯ ಮತ್ತಿತರರ ಬಣವು ಬೇಡಿಕೆ ಇರಿಸಿ ಕೆಲವು ಹೆಸರುಗಳನ್ನು ಸೂಚಿಸಿದೆ. ಈ ಕುರಿತೂ ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಅಧಿಕ ಸಂಖ್ಯೆಯ ಮೀಸಲು ಕ್ಷೇತ್ರಗಳನ್ನು ದಲಿತ ಸಮುದಾಯದ ಬಲಗೈ ಸಮುದಾಯಕ್ಕೇ ಆದ್ಯತೆ ನೀಡುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದರಿಂದ ಚರ್ಚೆ ಮತ್ತಷ್ಟು ಕಾವೇರಿತು ಎಂದು ಅವರು ವಿವರಿಸಿದರು.

ಕಾರ್ಕಳ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಷಯದಲ್ಲೂ ಸಿದ್ದರಾಮಯ್ಯ, ಜಿ.ಪರಮೇಶ್ವರ್‌, ಖರ್ಗೆ ಹಾಗೂ ವೀರಪ್ಪ ಮೊಯಿಲಿ ಅವರ ನಡುವೆ ಸಾಕಷ್ಟು ಚರ್ಚೆ ನಡೆಯಿತು. ಈ ವಿಚಾರದಲ್ಲೂ ಕೆಲವು ಮುಖಂಡರ ನಡುವೆ ಮಾತಿನ ಚಕಮಕಿಯೇ ನಡೆಯಿತು. ವಲಸಿಗರು, ಕಳಂಕಿತರಿಗೆ ಟಿಕೆಟ್‌ ನೀಡುವ ವಿಷಯದ ಕುರಿತು ವರಿಷ್ಠರ ಎದುರೇ ತೀವ್ರ ಜಟಾಪಟಿ ನಡೆಯಿತು ಎಂದು ಅವರು ತಿಳಿಸಿದರು.

**

ತಡರಾತ್ರಿವರೆಗೆ ಮತ್ತೊಂದು ಸಭೆ!

ದಿನವಿಡೀ ನಡೆದ ಸಿಇಸಿ ಸಭೆಯಲ್ಲಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲು ಸಾಧ್ಯವಾಗದ ಕಾರಣ ಚುನಾವಣಾ ಪರಿಶೀಲನಾ ಸಮಿತಿ ಮುಖಂಡ ಮಧುಸೂದನ ಮಿಸ್ತ್ರಿ ನೇತೃತ್ವದಲ್ಲಿ ಇಲ್ಲಿನ ಖಾಸಗಿ ಹೋಟೆಲ್‌ ಒಂದರಲ್ಲಿ ರಾತ್ರಿ 9ರಿಂದ ತಡರಾತ್ರಿವರೆಗೆ ರಾಜ್ಯ ಮುಖಂಡರ ಮತ್ತೊಂದು ಸಭೆ ನಡೆಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಕೆ.ಸಿ. ವೇಣುಗೋಪಾಲ್‌, ವೀರಪ್ಪ ಮೊಯಿಲಿ, ಅಶೋಕ್‌ ಗೆಹ್ಲೋಟ್‌ ಮತ್ತಿತರರು ಸಭೆಯಲ್ಲಿ ಭಾಗವಹಿಸಿ ಅಭ್ಯರ್ಥಿಗಳ ಒಮ್ಮತದ ಪಟ್ಟಿ ಸಿದ್ಧಪಡಿಸಲು ಯತ್ನಿಸಿದರು.

‘ನಾಮಪತ್ರ ಸಲ್ಲಿಕೆ ದಿನ ಹತ್ತಿರ ಬರುತ್ತಿದ್ದು, ಸ್ಪರ್ಧೆಯ ಕುರಿತು ಗೊಂದಲ ಮುಂದುವರಿಯಕೂಡದು. ಶನಿವಾರ ಬೆಳಿಗ್ಗೆ ನಡೆಯಲಿರುವ ಸಭೆಗೆ ಬರುವಾಗ ಅಂತಿಮ ಪಟ್ಟಿ ಸಿದ್ಧಪಡಿಸಿಕೊಂಡು ಬನ್ನಿ’ ಎಂದು ಸೋನಿಯಾ ಗಾಂಧಿ ತಾಕೀತು ಮಾಡಿದ್ದರಿಂದ ಅಂತಿಮ ಪಟ್ಟಿಗೆ ಒಪ್ಪಿಗೆ ನೀಡುವತ್ತ ರಾಜ್ಯ ಮುಖಂಡರು ಕಸರತ್ತು ನಡೆಸಿದರು ಎಂದು ತಿಳಿದುಬಂದಿದೆ.

**

ಟಿಕೆಟ್‌ ಕುರಿತು ಚರ್ಚಿಸಲಾಗಿದೆ. ಅಂತಿಮ ನಿರ್ಧಾರ ಕೈಗೊಳ್ಳುವಂತೆ ರಾಜ್ಯ ಮುಖಂಡರಿಗೇ ಸೂಚಿಸಲಾಗಿದೆ. ಶನಿವಾರ ಸಂಜೆ ಮೊದಲ ಪಟ್ಟಿ ಪ್ರಕಟವಾಗುವ ಸಾಧ್ಯತೆ ಇದೆ.

–ಅಂಬಿಕಾ ಸೋನಿ, ಕಾಂಗ್ರೆಸ್‌ ಕೇಂದ್ರ ಚುನಾವಣಾ ಸಮಿತಿ ಸದಸ್ಯೆ

ಪ್ರತಿಕ್ರಿಯಿಸಿ (+)