ಗುರುವಾರ , ಡಿಸೆಂಬರ್ 12, 2019
20 °C

ಪನಯಾ ಮಾರಾಟಕ್ಕೆ ಇನ್ಫೊಸಿಸ್ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪನಯಾ ಮಾರಾಟಕ್ಕೆ ಇನ್ಫೊಸಿಸ್ ಸಿದ್ಧತೆ

ಬೆಂಗಳೂರು: ವಿಶಾಲ್ ಸಿಕ್ಕಾ ಅವರು ಸಿಇಒ ಆಗಿದ್ದ ಅವಧಿಯಲ್ಲಿ ಸ್ವಾಧೀನಪಡಿಸಿಕೊಂಡಿದ್ದ ಪನಯಾ ಮತ್ತು ಸ್ಕಾವಾ ಸಂಸ್ಥೆಗಳನ್ನು ಮಾರಾಟ ಮಾಡಲು ಇನ್ಫೊಸಿಸ್ ಆಡಳಿತ ಮಂಡಳಿ ನಿರ್ಧರಿಸಿದೆ.

ಈ ಅಂಗಸಂಸ್ಥೆಗಳನ್ನು ಮಾರಾಟ ಮಾಡಲು ಅರ್ಹ ಖರೀದಿದಾರರನ್ನು ಕಂಡುಕೊಳ್ಳಲು ತೀರ್ಮಾನಿಸಲಾಗಿದೆ. 2019ರ ಮಾರ್ಚ್ ಒಳಗೆ ಮಾರಾಟ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

ಅಂಗಸಂಸ್ಥೆಗಳ ಒಟ್ಟು ಸಂಪತ್ತು ಮೌಲ್ಯ ₹ 2,060 ಕೋಟಿ ಇದೆ. ಸಾಲದ ಮೊತ್ತ ₹ 324 ಕೋಟಿ ಇದೆ. ನಾಲ್ಕನೇ ತ್ರೈಮಾಸಿಕದಲ್ಲಿ ಪನಯಾ ಸಂಸ್ಥೆಯ ನಷ್ಟ ₹ 118 ಕೋಟಿ ಇದೆ.

ಪನಯಾ ವಿವಾದ: ಪನಯಾ ಖರೀದಿಗೆ ಸಂಬಂಧಿಸಿದಂತೆ 2017ರಲ್ಲಿ ಸಂಸ್ಥೆಯ ಸ್ಥಾಪಕರು ಮತ್ತು ಅಂದಿನ ಸಿಇಒ ವಿಶಾಲ್‌ ಸಿಕ್ಕಾ ನೇತೃತ್ವದ ಆಡಳಿತ ಮಂಡಳಿ ಮಧ್ಯೆ ತೀವ್ರ ಬಿಕ್ಕಟ್ಟು ಸೃಷ್ಟಿಯಾಗಿತ್ತು.

ಈ ಸಂಬಂಧ ಬೋರ್ಡ್‌ ರೂಂ ಕಲಹ ತೀವ್ರಗೊಂಡಿದ್ದರಿಂದ ಸಿಕ್ಕಾ ಅವರು ತಮ್ಮ ಸ್ಥಾನಕ್ಕೆ ಆಗಸ್ಟ್‌ 18ರಂದು ರಾಜೀನಾಮೆ ನೀಡುವಂತಾಗಿತ್ತು. ನಂತರ ಆಡಳಿತ ಮಂಡಳಿ ಪುನರ್‌ ರಚನೆಗೂ ಕಾರಣವಾಗಿತ್ತು.

ಇನ್ಫೊಸಿಸ್‌, 2015ರಲ್ಲಿ ₹ 1,300 ಕೋಟಿಗೆ ಪನಯಾ ಸಂಸ್ಥೆಯನ್ನು ಖರೀದಿಸಿತ್ತು. ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಇಬ್ಬರು ಅನಾಮಧೇಯ ವ್ಯಕ್ತಿಗಳು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಗಮನಕ್ಕೆ ತಂದಿದ್ದರು. ಈ ಬಗ್ಗೆ ಇನ್ಫೊಸಿಸ್‌ ತನಿಖೆ ನಡೆಸಿದ್ದ ಗಿಬ್ಸನ್‌ ಡನ್‌ ಆ್ಯಂಡ್‌ ಕಂಟ್ರೋಲ್‌ ರಿಸ್ಕ್ಸ್‌ (ಜಿಡಿಸಿಆರ್‌) ಸಂಸ್ಥೆಯು, ಸ್ವಾಧೀನ ಪ್ರಕ್ರಿಯೆಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ವರದಿ ನೀಡಿತ್ತು.

ಪ್ರತಿಕ್ರಿಯಿಸಿ (+)