ಸೋಮವಾರ, ಡಿಸೆಂಬರ್ 9, 2019
25 °C

ಚುಕ್ಕಿಗಳು

Published:
Updated:
ಚುಕ್ಕಿಗಳು

ಒಂದೇ ನೇರರೇಖೆಯ ಮೇಲೆ
ಕೊನೆಬಿಂದುಗಳು
ಎಳೆದಂತೆಲ್ಲ ದೂರ ನಿಲ್ಲುತ್ತೇವೆ

ಒಳಸುಳಿದು ವಕ್ರವಾಗಿ
ಒತ್ತಿಕೊಂಡು ಸುತ್ತಿಕೊಂಡು‌
ತೆಕ್ಕೆಯಾಗಿದ್ದರೆ
ಚಿತ್ರವಾಗುತ್ತಿದ್ದೆವು

ಚಿತ್ರದೊಳಗೆ ಪೀಚುಮೊಗ್ಗುಗಳು
ಮೈತಳೆದು ಹೂವರಳುತ್ತಿದ್ದವು
ಹಳಿಗಳಾಗಿ ಎದುರುಬದುರಾಗಿದ್ದರೆ
ಅದೆಷ್ಟೋ ಪಯಣಿಗರು ಗುರಿಸೇರಿ

ಕ್ಷಣವಾದರೂ ನೆನೆಸುತ್ತಿದ್ದರು
ಚುಕ್ಕಿಗಳಾಗಿ ಅಕ್ಕಪಕ್ಕ ನಿಂತಿದ್ದರೆ
ರಂಗೋಲಿಯಾಗಿ ಪಸರಿಸಿ
ರಂಗುರಂಗಾಗುತ್ತಿದ್ದೆವೇನೋ

ಭಾವಗಳಾಗಿ ಭಾಷೆಗಳಾಗಿ
ನಳನಳಿಸಿ
ಬೆನ್ನುತೋರಿ ನಡೆಯುತ್ತಲೇ ಇದ್ದೇವೆ
ಮುಖಾಮುಖಿಯಾಗದೆಯೇ

ಅರಿವೆವೆಂದರೂ ಅರಿವುದೆಂತು
ಕೊಳವಾದರೆ ಎದೆ ತಿಳಿನೀರೂ ಇದೆ
ಕೈತೊಳೆದು ಕೊಳಕ ಮಾಡಿದ್ದೇವೆ

ತಡೆದಿದ್ದರೆ ಹನಿನೀರ ಬೊಗಸೆಗೆ
ಕನ್ನಡಿಯಿಲ್ಲದೆಯೇ
ಮುಖ ನೋಡುವಷ್ಟು
ಕುಡಿಯಬಹುದಿತ್ತು
ನಾವು ಕಲ್ಲೆಸೆಯುತ್ತಲೇ ಇದ್ದೇವೆ

 

ಪ್ರತಿಕ್ರಿಯಿಸಿ (+)