ಭಾನುವಾರ, ಡಿಸೆಂಬರ್ 15, 2019
25 °C

ನನ್ನನ್ನು ಬದಲಿಸಿದ ಆ ದಿನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನನ್ನನ್ನು ಬದಲಿಸಿದ ಆ ದಿನ

ಸುರೇಶ ನೇರ್ಲಿಗೆ

ನಾನು ಪ್ರೌಢಶಾಲೆಯಲ್ಲಿ ಓದುತ್ತಿದ್ದ ಸಂದರ್ಭ. ಬೇಸಿಗೆ ರಜೆ ಕಳೆದು ಆಶ್ರಮಕ್ಕೆ ಹೊರಡುತ್ತಿದ್ದ ದಿನವಾಗಿತ್ತು. ರಾತ್ರಿ ಮಲಗುವಾಗಲೇ ನಿರ್ಧರಿಸಿದಂತೆ ಬೆಳಿಗ್ಗೆ 5 ಗಂಟೆಗೆ ಎದ್ದೆ. ತಡ ಮಾಡಬಾರದೆಂದು ಸ್ನಾನ ಮಾಡಲು ಬಚ್ಚಲಿಗೆ ಹೋದೆ, ಕರ‍್ರನೆಯ ಗುಡಾಣದಲ್ಲಿ ಕಾದ ನೀರಿತ್ತು. ಸ್ನಾನ ಪ್ರಾರಂಭಿಸಿ ಸೋಪಿಗಾಗಿ ನೋಡಿದೆ. ಇರಲಿಲ್ಲ‌. ಕಾರಣ, ತರುವಷ್ಟು ಅನುಕೂಲ ನಮಗಿರಲಿಲ್ಲ.

ದುರಾದೃಷ್ಟ ಏನಂದ್ರೆ ಆಗಾಗ ತರುತ್ತಿದ್ದ ಕಸ್ತೂರಿ ಬಾರ್ ಸೋಪೂ ಮುಗಿದು ಹೋಗಿತ್ತು, ನಮ್ಮ ಪರಿಸ್ಥಿತಿಯನ್ನು ಮನದಲ್ಲೇ ಹಣಿಯುತ್ತ ಸ್ನಾನವನ್ನು ಮುಗಿಸಿದೆ. ತಲೆ ಒರೆಸುತ್ತಾ ಬಟ್ಟೆ ಧರಿಸುವಾಗ ಅಮ್ಮ ಒಳಗಿನಿಂದ ‘ಮಗಾ, ದೇವರಿಗೆ ದೀಪ ಹಚ್ಚು’ ಎಂದಿದ್ದು ಕೇಳಿಸಿತು. ಒಣಗಿದ ಬತ್ತಿಗೆ ಬೆಂಕಿ ಹೊತ್ತಿಸಿ ಊದುಬತ್ತಿಗಾಗಿ ಅಮ್ಮನನ್ನು ಕೇಳಿದೆ. ಅದಕ್ಕೆ ಅಮ್ಮ ‘ಮೊನ್ನೇನೆ ಊದುಬತ್ತಿ ಮುಗಿದು ಹೋಗಿದೆ. ಹಾಗೆಯೇ ಕೈ ಮುಗಿ ಸಾಕು’ ಎಂದರು.

ಅಷ್ಟು ಸಾಕಾಗಿತ್ತು ನನಗೆ ನಮ್ಮ ಸಿರಿವಂತಿಕೆಯನ್ನು ತಿಳಿಯೋದಕ್ಕೆ. ಮಗನನ್ನು ಆಶ್ರಮಕ್ಕೆ ಕಳಿಸುತ್ತಿರುವ ಅಮ್ಮ ಹೇಗೋ ಒಂದು ಲೋಟ ಅಕ್ಕಿಯನ್ನು ಹೊಂದಿಸಿ ಬಹಳ ಸಂಭ್ರಮದಿಂದ ಒಲೆಯ ಮೂಲೆಯಲ್ಲಿ ಅನ್ನ ಕುದಿಸುತ್ತಿದ್ದರು, ಅನ್ನವೆಂದರೆ ಆಸೆ ಪಡುತ್ತಿದ್ದ ನನಗೆ ಅಂದು ಅಂತಹ ಆಸೆಯೂ ಹುಟ್ಟಲಿಲ್ಲ. ಕಾರಣ ಬಡತನದ ಉರಿಯಲ್ಲಿ ನನ್ನಾಸೆ ಬೆಂದು ಹೋಗಿತ್ತು. ಅಂತೂ ಅಮ್ಮನ ಸಮಾಧಾನಕ್ಕೆ ಮೊಸರಿನಲ್ಲಿ ಕಲೆಸಿ ನಾಲ್ಕು ತುತ್ತು ಉಣ್ಣುವಷ್ಟರಲ್ಲಿ ಕಣ್ಣಾಲಿಗಳು ಒದ್ದೆಯಾದವು. ಛೆ! ಬಡವರ ಬದುಕು ಹೀಗೇನಾ ಅನ್ನಿಸಿತು. ದುಃಖವನ್ನು ಅಮ್ಮನಿಗೆ ತೋರಗೊಡದೆ ಅತ್ತಿಂದಿತ್ತ ಓಡಾಡುತ್ತಿದ್ದೆ.

ಹತ್ತಿರ ಕರೆದು ಅಮ್ಮ ತಲೆಬಾಚುವಾಗ ಕೂದಲು ಅಂಟುತ್ತಿದೆ ಎಂದು ಎಣ್ಣೆಗಾಗಿ ಹುಡುಕಾಡಿದರೂ ತೊಟ್ಟು ಎಣ್ಣೆಯೂ ಇರದೆ ಬಾಟಲಿ ಖಾಲಿಯಾಗಿತ್ತು. ಅಪ್ಪನನ್ನು ಶಪಿಸುತ್ತಾ ಏನೋ ಗೊಣಗುತ್ತ ಇದ್ದ ಸ್ವಲ್ಪ ಬೆಣ್ಣೆಯನ್ನೇ ಜಿನುಗಿಸಿ ನನ್ನ ನೆತ್ತಿಗೆ ಸವರುವಾಗ ನಾವೆಷ್ಟೊಂದು ಬಡವರು ಅಂತ ಮರುಗಿದೆ. ಇಂತಹ ಸ್ಥಿತಿಯಲ್ಲಿ ಅಮ್ಮನೂ ನನಗೆ ಗೊತ್ತಾಗದಂತೆ ಸೆರಗಿನಿಂದ ಕಣ್ಣೀರು ಒರೆಸಿಕೊಳ್ಳುತ್ತಾ ತನ್ನ ಅಸಹಾಯಕತೆಯನ್ನು ಹೊರಹಾಕಿದ್ದು ನನಗೂ ದುಃಖ ತಂದಿತ್ತು. ಅಮ್ಮನಿಗೆ ಬಸ್ ನಿಲ್ದಾಣಕ್ಕೆ ಬರುವುದು ಬೇಡವೆಂದು ಹೇಳಿ ಕಾಲಿಗೆ ಬಿದ್ದು ಹೊರಟೆ.

ನಾನು ಆಶ್ರಮದಲ್ಲಿರುವ ಮೂಲಕವಾದರೂ ನಮ್ಮ ಅಪ್ಪ ಅಮ್ಮನವರ ಬಡತನದ ತೀವ್ರತೆ ಕೊಂಚ ಕಡಿಮೆಯಾಗಬಹುದೆಂಬ ಎಣಿಕೆ ನನ್ನದಾಗಿತ್ತು. ಬಸ್ ನಿಲ್ದಾಣದಲ್ಲಿ ನನ್ನ ಸಹಪಾಠಿಗಳು ತಮ್ಮ ಪೋಷಕರನ್ನು ಬಿಟ್ಟು ಬರಲು ಅಳುತ್ತಿದ್ದರೆ ನಾನೂ ಅತ್ತುಬಿಟ್ಟೆ... ನಮ್ಮ ಬಡತನವನ್ನು ನೆನೆದು. ಬಸ್ಸಿನ ಮೂಲೆಯಲ್ಲಿ ಕುಳಿತು ಎಷ್ಟೇ ಪ್ರಯತ್ನಿಸಿದರೂ ಮನೆಯ ಚಿತ್ರಣ ನನ್ನನ್ನು ಇನ್ನಿಲ್ಲದಂತೆ ಕಾಡುತ್ತಿತ್ತು.

ಅಂತಹ ದಾರಿದ್ರ್ಯವನ್ನು ತೊಡೆಯಲು ನನ್ನ ಮನಸ್ಸು ಮತ್ತು ಬುದ್ಧಿಗಳು ಒಂದಾಗಿ ತೀರ್ಮಾನಿಸಿ ನನ್ನನ್ನು ಓದಿಸಿದವು, ಶಿಕ್ಷಕನನ್ನಾಗಿ ಮಾಡಿದವು. ಶಿಕ್ಷಕನಾಗಿ ಹದಿಮೂರು ವರ್ಷಗಳಾದರೂ ನನ್ನನ್ನು ಕಾಡಿದ ಆ ನೆನಪುಗಳು ಕಟ್ಟಿಕೊಟ್ಟ ಬುತ್ತಿ ಬಿಚ್ಚಿದಾಗಲೆಲ್ಲ ಸ್ವಾದಿಷ್ಟ ಎನಿಸುತ್ತವೆ...

ಪ್ರತಿಕ್ರಿಯಿಸಿ (+)