ಶುಕ್ರವಾರ, ಡಿಸೆಂಬರ್ 13, 2019
19 °C

ಸುಳ್ಳಿನ ವಿಜೃಂಭಣೆಯೂ ಸತ್ಯೋತ್ತರ ಯುಗದ ಮಿತಿಯೂ

ಎಸ್. ಸಿರಾಜ್ ಅಹಮದ್ Updated:

ಅಕ್ಷರ ಗಾತ್ರ : | |

ಸುಳ್ಳಿನ ವಿಜೃಂಭಣೆಯೂ ಸತ್ಯೋತ್ತರ ಯುಗದ ಮಿತಿಯೂ

ಪದಗಳ ಮೂಲಕವೇ ಪ್ರಪಂಚ ಸೃಷ್ಟಿಯಾಯಿತು ಎಂಬ ಮಾತೊಂದಿದೆ. ಮನುಷ್ಯನ ಪ್ರಜ್ಞೆ, ಅದನ್ನು ಆವರಿಸಿಕೊಂಡಿರುವ ಪ್ರಪಂಚ ಎಲ್ಲದಕ್ಕೂ ಕೊಂಡಿಯಾಗಿರುವುದು ಭಾಷೆಯೇ ಎಂಬುದು ಅದರ ಅರ್ಥ. ಮನುಷ್ಯನ ಪ್ರಜ್ಞೆಯಲ್ಲಿ ರೂಪುಗೊಳ್ಳುವ ಪ್ರಪಂಚದ ಚಹರೆಗಳು ಅವನು ಬಳಸುವ ಭಾಷೆಯ ಮೂಲಕವೇ ರೂಪುಗೊಂಡಿರುತ್ತವೆ. ಉದಾಹರಣೆಗೆ ಇಡೀ ಮೈಯಲ್ಲಿ ಹರಿಯುವ ರಕ್ತ ಒಂದೇ ಬಗೆಯದು ಎಂದು ನಾವು ನಂಬಿದ್ದೇವೆ. ಖಾಸಿ ಭಾಷೆಯನ್ನು ಮಾತಾಡುವ ಜನಾಂಗದವರನ್ನು ಕೇಳಿ. ಖಾಸಿ ಹೆಣ್ಣುಮಗಳ ಪ್ರಕಾರ ದೇಹದ ಹಲವು ಭಾಗಗಳಲ್ಲಿ ಹಲವು ಬಗೆಯ ರಕ್ತ ಹರಿಯುತ್ತದೆ. ಖಾಸಿ ಭಾಷೆಯಲ್ಲಿ ದೇಹದಲ್ಲಿ ಹರಿಯುವ ಹಲವು ಬಗೆಯ ರಕ್ತಕ್ಕೆ ಬೇರೆ ಬೇರೆಯದೇ ಆದ ಹೆಸರುಗಳಿವೆ.

ಭೂಮಿ, ಆಕಾಶದ ಅಗಾಧ ರೂಪ, ವ್ಯೋಮದ ವಿಸ್ತಾರ ಆಳ ಅಗಲಗಳು, ಆಕಾಶ ಕಾಯಗಳ ಗಾತ್ರ ಚಲನೆಯ ವಿವರಗಳು ಹಲವು ನಾಗರಿಕತೆಗಳಲ್ಲಿ ವೈವಿಧ್ಯಮಯ ಪದಗಳಲ್ಲಿ ನಿರೂಪಿತವಾಗಿವೆ. ಅವುಗಳನ್ನು ವಿವರಿಸುವ ಕ್ರಮ ಅಲ್ಲಿನ ನಾಗರಿಕತೆಯ ಭಾಷೆಯ ಮೂಲಕವೇ ರೂಪುಗೊಂಡಿರುತ್ತದೆ. ಉದಾಹರಣೆಗೆ, ಪಾಪದ ಪರಿಕಲ್ಪನೆ ಹೀಬ್ರೂ ಮತ್ತು ಲ್ಯಾಟಿನ್ ಭಾಷೆಗಳಲ್ಲಿ ಸ್ಪಷ್ಟವಾಗುವ ಹಾಗೆ ಭಾರತೀಯ ಭಾಷೆಗಳಲ್ಲಿ ಆಗುವುದು ಕಷ್ಟ. ಕರ್ಮ ಎಂಬ ಪದವನ್ನು ಭಾರತೀಯರು ಗ್ರಹಿಸಿದಷ್ಟು ಸುಲಭವಾಗಿ ಇಂಗ್ಲಿಷ್ ಭಾಷಿಕರು ಅರ್ಥಮಾಡಿಕೊಳ್ಳಲಾರರು, ಎಷ್ಟೇ ಉದ್ದುದ್ದದ ವಿವರಣೆಗಳನ್ನು ನೀಡಿದರೂ ಸಹ.

ಪದಗಳು ಹಾಗೂ ಪ್ರಪಂಚದ ನಡುವಿನ ಸಂಬಂಧವನ್ನು ಜನಗಳ ಯೋಚನೆಗಳನ್ನು ನಿಯಂತ್ರಿಸುವುದಕ್ಕೆ ಹೇಗೆ ಬಳಸಿಕೊಳ್ಳಲಾಗುತ್ತದೆ ಎಂಬುದನ್ನು ಸೋಷಿಯಲ್ ಸೈಕೋಮೆಟ್ರಿಯ ಅಧ್ಯಯನಗಳು ಚರ್ಚಿಸುತ್ತವೆ. ಈಚೆಗೆ ಸಮಾಜ ಕಲ್ಯಾಣ ಇಲಾಖೆಯನ್ನು ಸಾಮಾಜಿಕ ನ್ಯಾಯದ ಇಲಾಖೆ ಎಂದು ಮರುನಾಮಕರಣ ಮಾಡಿದಾಗ, ಇಲಾಖೆಯ ಉದ್ದೇಶ ಹಾಗೂ ಅದರ ಕಾರ್ಯವೈಖರಿಯ ಬಗ್ಗೆ ಜನರಿಗಿದ್ದ ನಿರೀಕ್ಷೆಗಳೇ ಬದಲಾದವು. ಒಂದು ವೇಳೆ ಖೈದಿಗಳಿಗೆ ಶಿಕ್ಷೆ, ಹಿಂಸೆ ನೀಡುವ ಜೈಲುಗಳನ್ನು ಸಂತೋಷದ ಮರುಗಳಿಕೆಯ ಕೇಂದ್ರಗಳು ಎಂದು ಕರೆಯುವುದಾದರೆ, ಅಂಥ ಜಾಗಗಳಿಗೆ ಸೇರಲು ಜನ ಉದ್ದುದ್ದದ ಕ್ಯೂನಲ್ಲಿ ನಿಲ್ಲಬಹುದು.

ಇಂಥ ಮೋಸಗಾರಿಕೆಯ ತಂತ್ರವನ್ನು ಪುಢಾರಿಗಳು ಮತ್ತು ಸರ್ವಾಧಿಕಾರಿಗಳು ತಮ್ಮ ಅನುಕೂಲಕ್ಕಾಗಿ ಇತಿಹಾಸದಲ್ಲಿ ಬಳಸಿಕೊಂಡಿರುವುದಕ್ಕೆ ಹಲವು ಉದಾಹರಣೆಗಳನ್ನು ನೀಡಬಹುದು. ಸಾಮಾನ್ಯವಾಗಿ ಎಲ್ಲರೂ ಬಳಸುವ, ಎಲ್ಲರಿಗೂ ಗೊತ್ತಿರುವ ರಾಜಕೀಯ ಶಬ್ದಗಳನ್ನು ತಿರುಚಿ ಹೇಳುವುದು, ರಾಜಕೀಯ ಲಾಭಕ್ಕಾಗಿ ಸುಳ್ಳು ಮಾಹಿತಿಗಳನ್ನು ಪ್ರಚಾರ ಮಾಡುವುದು ಇಂಥ ತಂತ್ರಗಾರಿಕೆಯ ಭಾಗವಾಗಿವೆ. ಸುಳ್ಳುಗಳನ್ನು ಹೇಳುವುದರಲ್ಲಿ ಅಸಾಮಾನ್ಯ ಕಲೆಯನ್ನು ಸಾಧಿಸಿದ್ದ ಹಿಟ್ಲರ್‌ನನ್ನು ಒಮ್ಮೆ ನೆನಪಿಸಿಕೊಳ್ಳಿ. ಆತನ ಮಾತಿನಲ್ಲಿರುವ ಸುಳ್ಳಿನ ವಿಜೃಂಭಣೆಯೇ ಆತನ ಪೊಳ್ಳುತನದ ವಿರುದ್ಧ ಸಾಕ್ಷಿ ನುಡಿಯುವಂತೆ ಕಾಣುತ್ತದೆ.

ಪ್ರಜಾಪ್ರಭುತ್ವದಲ್ಲಿ ಹೀಗೆ ಯಾರಾದರೂ ರಸವತ್ತಾದ ಸುಳ್ಳುಗಳನ್ನು ಹಬ್ಬಿಸುತ್ತಿದ್ದರೆ ಅದು ಅನೈತಿಕ ರಾಜಕೀಯವಲ್ಲದೆ ಇನ್ನೇನು? ಕೆಲವು ದೇಶಗಳಲ್ಲಿ ಸರ್ಕಾರವಾಗಲಿ ಅಥವಾ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಗಳಾಗಲೀ ಉದ್ದೇಶಪೂರ್ವಕವಾಗಿ ಜನರನ್ನು ಮರುಳು ಮಾಡಲು ಸುಳ್ಳು ಹೇಳಿದ್ದು ಸಾಬೀತಾದರೆ, ತನ್ನ ಜವಾಬ್ದಾರಿಯುತ ಸ್ಥಾನವನ್ನು ತ್ಯಜಿಸಬೇಕಾಗುತ್ತದೆ ಅಥವಾ ರಾಜೀನಾಮೆ ನೀಡಬೇಕಾಗುತ್ತದೆ. ಅದೆಲ್ಲ ಈಗ ಹಳೆಯ ಮಾತಾಯಿತು. ಸತ್ಯೋತ್ತರ ಯುಗವೆಂದು ಕರೆಯಲಾಗುವ ಇಂದಿನ ದಿನಗಳಲ್ಲಿ ಸತ್ಯದ ಜಾಗವನ್ನು ಸುಳ್ಳು ಸುದ್ದಿಗಳು ಆಕ್ರಮಿಸಿವೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ವಿರುದ್ಧದ ವರದಿಗಳನ್ನು ಸುಳ್ಳು ಸುದ್ದಿ ಎಂದಿರುವುದು ಸತ್ಯೋತ್ತರ ಯುಗದ ಅತ್ಯುತ್ತಮ ಉದಾಹರಣೆಯಾಗಿದೆ. ಇಂದಿನ ದಿನಗಳಲ್ಲಿ ಹಲವಾರು ದೇಶಗಳು ತಮ್ಮ ಸರ್ಕಾರಗಳು ಸಾಧಿಸಿರುವ ಆರ್ಥಿಕ ಅಭಿವೃದ್ಧಿಯ ಬಗೆಗೆ ಸುಳ್ಳು ಅಂಕಿ– ಸಂಖ್ಯೆಗಳನ್ನು ಬಿಡುಗಡೆ ಮಾಡುತ್ತಿವೆ. ಇವು ಮೆಟ್ರೋ ಸಿಟಿ ಕಾರ್ಪೊರೇಷನ್‌ಗಳು ನೂರಾರು ಇಲಿ ಹೆಗ್ಗಣಗಳನ್ನು ಹಿಡಿದು ಕೊಂದ ಅಂಕಿ ಅಂಶಗಳಂತೆ ಹಾಸ್ಯಾಸ್ಪದವಾಗಿವೆ.

ಸಮೂಹ ಮಾಧ್ಯಮಗಳ ನಡುವೆ ಯುವರಾಣಿಯಂತೆ ಕಂಗೊಳಿಸುತ್ತಿರುವ ಸೋಷಿಯಲ್ ಮೀಡಿಯಾ ಇಂಥ ಹಲವು ಅಸತ್ಯಗಳನ್ನು ಅಸಾಧ್ಯ ಪ್ರಮಾಣದಲ್ಲಿ ಹರಡುತ್ತಿದೆ. ಅದಕ್ಕಿರುವ ವೇಗ ಮತ್ತು ವಿಸ್ತಾರದ ಕಾರಣದಿಂದ ರಾಜಕೀಯ ಪಕ್ಷಗಳಿಗೆ ಬಹುಪ್ರಿಯವಾದ ಸಂವಹನದ ಮಾಧ್ಯಮವಾಗಿ ಪರಿಣಮಿಸಿದೆ. ಕೊಲ್ಲುವ ಕೆಲಸ ವೇಗವಾಗಿ ಆಗಲಿ ಎಂದು ತುಪಾಕಿ- ಪಿಸ್ತೂಲುಗಳ ಜಾಗದಲ್ಲಿ ಮೆಶಿನ್ ಗನ್ನುಗಳು-ಎಕೆ 47ಗಳನ್ನು ಬಳಸಿದಂತೆ ಇಂದು ರಾಜಕೀಯ ಪಕ್ಷಗಳು ಒಂದಕ್ಕಿಂತ ಒಂದು ವೇಗವಾಗಿ ಹರಡುವ ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಿವೆ. ಈ ವೇಗದಲ್ಲಿ ಕೆಲವು ಸರಳ ಸತ್ಯಗಳನ್ನು ತಿಳಿದುಕೊಳ್ಳುವ ಹಕ್ಕಿನಿಂದ ನಾಗರಿಕರು ವಂಚಿತರಾಗುತ್ತಿದ್ದಾರೆ.

ವಾಸ್ತವ ಸಂಗತಿಗಳು- ಮಾಹಿತಿಗಳ ಮೇಲೆ ಕೆಲವು ವರ್ಷಗಳಿಂದ ಇನ್ನಿಲ್ಲದ ಆಕ್ರಮಣಗಳು ನಡೆಯುತ್ತಿವೆ. ಕೆಲವು ದಿನಗಳಲ್ಲಿ ನಾವು ಮಹಾತ್ಮ ಗಾಂಧಿಯವರ 150ನೇ ಹುಟ್ಟುಹಬ್ಬವನ್ನು ಆಚರಿಸಲಿದ್ದೇವೆ. 60 ವರ್ಷಗಳ ಹಿಂದೆ ನಾವು ಆ ವ್ಯಕ್ತಿಯನ್ನು ಕೊಂದಿದ್ದಲ್ಲದೆ, ಅವರು ಪ್ರತಿಪಾದಿಸಿದ ತತ್ವ ಸಿದ್ಧಾಂತಗಳನ್ನು ರಾಜಕೀಯ ಕ್ಷೇತ್ರದಲ್ಲಿ ಮತ್ತೆ ಮತ್ತೆ ಕೊಲ್ಲುತ್ತಲೇ ಬಂದಿದ್ದೇವೆ. ಯಾರಾದರೂ ಇನ್ನೊಬ್ಬರ ಮಾತಿನಲ್ಲಿ ಸುಳ್ಳನ್ನು ಕಂಡುಹಿಡಿದರೆ, ಅವರು ತಕ್ಷಣ ದೇಶದ್ರೋಹಿಗಳಾಗಿಬಿಡುವ ಸಂದರ್ಭದಲ್ಲಿ ನಾವಿದ್ದೇವೆ.

ರವೀಂದ್ರನಾಥ ಠಾಕೂರರು ತಮ್ಮ ಕನಸಿನ ಸ್ವತಂತ್ರ ಭಾರತ ಯಾರ ಭೀತಿಗೂ ಒಳಗಾಗದೆ ಸತ್ಯವನ್ನು ಪ್ರತಿಪಾದಿಸುವ ಸಮಾಜವಾಗಿರುತ್ತದೆ ಎಂದು ನಂಬಿದ್ದರು. ಇಂದು ಸುಳ್ಳು ಸುದ್ದಿಗಳು- ಪ್ರಚಾರ ವ್ಯವಸ್ಥೆ ಸತ್ಯವನ್ನು ನಿರ್ನಾಮ ಮಾಡಿವೆ. ಭಯ- ಭೀತಿಗಳು ಸ್ವಾತಂತ್ರ್ಯವನ್ನು ನಾಶ ಮಾಡಿವೆ. ಆದರೂ ಇತಿಹಾಸದ ಪುಟಗಳನ್ನು ತಿರುವಿದರೆ ತಮ್ಮ ವಾಗ್ವೈಖರಿಯಿಂದ ಸುಳ್ಳಿನ ಸಾಮ್ರಾಜ್ಯವನ್ನು ಕಟ್ಟಿದವರನ್ನು ಮನುಷ್ಯರು ತಮ್ಮ ಸಾಮೂಹಿಕ ಪ್ರಜ್ಞೆ ಹಾಗೂ ಪ್ರಯತ್ನಗಳಿಂದ ಅಳಿಸಿಹಾಕಿದ್ದನ್ನು ನೋಡಬಹುದು. ಸುಳ್ಳಿನ ಸ್ವರ್ಣ ಯುಗವನ್ನು ನಿರ್ಮಿಸಿದವರನ್ನು ವರ್ತಮಾನದ ಪ್ರಜ್ಞೆಯಿಂದ ಛೀಮಾರಿ ಹಾಕಿದ್ದನ್ನೂ ನೋಡಬಹುದು.

ಸುಳ್ಳು ಹೇಳಿದಷ್ಟೇ ಸಲೀಸಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸುವುದು ಬಹಳ ಸುಲಭದ ವಿಷಯವಾದರೂ, ನಿಧಾನಕ್ಕೆ ಅವನ್ನು ಸೃಷ್ಟಿಸುವವರ ವಿಶ್ವಾಸಾರ್ಹತೆಯೂ ಕುಸಿಯುತ್ತ ಹೋಗುತ್ತದೆ ಎಂಬುದನ್ನು ಅರಿತುಕೊಳ್ಳಬೇಕು. ಪ್ರಿಂಟ್ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಸುದ್ದಿಯ ಹೂರಣವೆನ್ನುವುದು ವ್ಯಕ್ತಿಯ ವಿಶ್ವಾಸಾರ್ಹತೆಯಷ್ಟೇ ಮುಖ್ಯವಾದುದು. ಪದೇ ಪದೇ ಸುಳ್ಳು ಸುದ್ದಿಗಳನ್ನೇ ಹರಡುತ್ತಿದ್ದರೆ ಓದುಗರು/ ನೋಡುಗರು ನಿಧಾನವಾಗಿ ಅಂಥ ಪತ್ರಿಕೆ/ ಚಾನಲ್‌ಗಳಿಂದ ದೂರಸರಿಯುತ್ತಾರೆ. ಹಿಂದೆ ಇಂಥ ಮಾಧ್ಯಮಗಳನ್ನು ಪೀತ/ ನೀಚ ಪತ್ರಿಕೋದ್ಯಮ ಎಂದು  ಕರೆಯಲಾಗುತ್ತಿತ್ತು. ಮಹಾ ಮಾಧ್ಯಮ ಯುಗವೆಂದು ಕರೆಯಲಾಗುವ ಇಂದಿನ ದಿನಗಳಲ್ಲಿ ಬ್ಲಾಗ್‌ಗಳು, ಡಿಜಿಟಲ್ ಮಾಧ್ಯಮಗಳು, ಟ್ವಿಟರ್, ಫೇಸ್‌ಬುಕ್ ಇತ್ಯಾದಿಗಳೇ ಸತ್ಯೋತ್ತರ ಯುಗದ ಸಾರಥಿಗಳು. ಅವುಗಳು ಎಷ್ಟೇ ವೇಗದಿಂದ ಹಬ್ಬಿದರೂ, ಎಷ್ಟರಮಟ್ಟಿಗೆ ಅವು ನಂಬಿಕೆಗೆ ಯೋಗ್ಯ ಎಂಬ ಸಂಶಯ ದಿನೇ ದಿನೇ ಬಲಗೊಳ್ಳುತ್ತಲೇ ಇದೆ. ಸ್ಥಿರವಾದ ಪ್ರಜಾಪ್ರಭುತ್ವಗಳು ಇರುವ ಕಡೆ ಜವಾಬ್ದಾರಿಯುತ ರಾಜಕೀಯ ಪಕ್ಷಗಳು ಸೋಷಿಯಲ್ ಮೀಡಿಯಾಗಳ ಮಿತಿಗಳನ್ನು ಅರಿಯಲಾರಂಭಿಸಿವೆ.

ಆರಂಭದಲ್ಲಿ ಅವುಗಳ ಬಗ್ಗೆ ಇದ್ದ ಭ್ರಮೆ ಕರಗಿಹೋಗಿ ನಿಧಾನವಾಗಿ ಗಂಭೀರವಾದ, ಸಮಚಿತ್ತದ ಹಾಗೂ ಸೂಕ್ಷ್ಮ ವಿಶ್ಲೇಷಣೆಗೆ ಅವಕಾಶವಿರುವ ಮಾಧ್ಯಮಗಳ ಕಡೆ ಗಮನ ಹರಿಯುತ್ತಿದೆ. ಯಾಕೆಂದರೆ ಸುಳ್ಳು ಒಂದಲ್ಲ ಒಂದು ದಿನ ಸತ್ಯದ ಎದುರು ಮಂಡಿಯೂರಲೇಬೇಕಾಗಿರುವುದರಿಂದ ಸತ್ಯೋತ್ತರ ಯುಗದ ಸತ್ಯವೇ ಎಂದಿಗೂ ಗಟ್ಟಿಯಾಗಿ ಉಳಿಯಲು ಸಾಧ್ಯವಿಲ್ಲ. ಅಂತರರಾಷ್ಟ್ರೀಯ ಮಾಧ್ಯಮ ಕುಳಗಳನ್ನು ಮಟ್ಟ ಹಾಕುವ, ಸೋಷಿಯಲ್ ಮೀಡಿಯಾಗೆ ಅಗತ್ಯವಾಗಿ ಬೇಕಾಗಿರುವ ನೈತಿಕ ಸಂಹಿತೆಯ ಬಗ್ಗೆ ಈಗಾಗಲೇ ಸಾರ್ವಜನಿಕ ಚರ್ಚೆ ಆರಂಭವಾಗಿದೆ.

ಬಹುಶಃ ನಾವು ಕೂಡ ಸುಳ್ಳು ಸುದ್ದಿಗಳ ವಿರುದ್ಧ ಇಂಥದೇ ಹೋರಾಟವನ್ನು ಕೈಗೊಳ್ಳಬೇಕಾಗಿದೆ. ಸುಳ್ಳು ಸುದ್ದಿಗಳನ್ನು ಇನ್ನಷ್ಟು ಸುಳ್ಳುಸುದ್ದಿಗಳ ಮೂಲಕ ಎದುರಿಸಲು ಸಾಧ್ಯವಿಲ್ಲ. ಎಲ್ಲವೂ ಒಂದು ನಿಶ್ಚಿತ ನೈತಿಕ ಸಂಹಿತೆಯ ಚೌಕಟ್ಟಿನಲ್ಲೇ ವ್ಯವಹರಿಸಬೇಕಾಗಿರುತ್ತದೆ. ಎಲ್ಲರಿಗೂ ಗೊತ್ತಿರುವಂತೆ ಯಾರಿಗೇ ಆಗಲಿ ಎಲ್ಲರನ್ನೂ ಎಲ್ಲ ಕಾಲದಲ್ಲೂ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ. ಇದು ಸರ್ಕಾರಗಳಿಗೂ ಅನ್ವಯವಾಗುತ್ತದೆ ಎಂದು ನಮಗೆ ಗೊತ್ತಿರಬೇಕು.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು