ಶುಕ್ರವಾರ, ಡಿಸೆಂಬರ್ 6, 2019
25 °C

ಸೋಮವಾರ, 15–4–1968

Published:
Updated:
ಸೋಮವಾರ, 15–4–1968

ವಿಧಾನಸಭೆ ವಿಸರ್ಜನೆ ತಪ್ಪಿಸಲು ಯು.ಪಿ. ಪಕ್ಷಗಳ ಕಡೇ ಯತ್ನ

ನವದೆಹಲಿ, ಏ. 14–
ರಾಜ್ಯಪಾಲ ಡಾ. ಗೋಪಾಲರೆಡ್ಡಿ ವರದಿ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ರಾಜಕೀಯ ಪರಿಸ್ಥಿತಿಯನ್ನು ಕೇಂದ್ರ ಸಂಪುಟವು ನಾಳೆ ಚರ್ಚಿಸುತ್ತದೆ.‌

ಯಾವುದೇ ಪಕ್ಷವೂ ಸುಭದ್ರ ಸರಕಾರ ರಚಿಸಲಾಗದಿರುವುದರಿಂದ ವಿಧಾನಸಭೆ ವಿಸರ್ಜಿಸಿ ಮಧ್ಯಂತರ ಚುನಾವಣೆ ಏರ್ಪಾಟಾಗಬೇಕೆಂಬ ರಾಜ್ಯಪಾಲರ ಶಿಫಾರಸು ಕುರಿತು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು ಈಗಾಗಲೇ ತಮ್ಮ ಸಹೋದ್ಯೋಗಿಗಳೊಡನೆ ಅನೌಪಚಾರಿಕವಾಗಿ ಸಮಾಲೋಚಿಸಿದ್ದಾರೆ.

‘ದೇವರಿಗಿಂತ ರೈತರೇ ಹೆಚ್ಚು’

ನವದೆಹಲಿ, ಏ. 14–
‘ದೇವರನ್ನು ನಾನು ಸುಪ್ರೀತನನ್ನಾಗಿ ಮಾಡಲಿ– ಬಿಡಲಿ ರೈತರನ್ನು ಮಾತ್ರ ಸಂತೃಪ್ತರನ್ನಾಗಿ ಮಾಡಲು ಸ್ಥಿರಸಂಕಲ್ಪ ಮಾಡಿದ್ದೇನೆ’ ಎಂದು ಕೇಂದ್ರ ಆಹಾರ ಮತ್ತು ಕೃಷಿ ಮಂತ್ರಿ ಶ್ರೀ ಜಗಜೀವನರಾಂ ಅವರು ಇಂದು ಇಲ್ಲಿ ಹೇಳಿದರು.

ಶೀಘ್ರವೇ ನರ್ಮದಾ ಬಿಕ್ಕಟ್ಟು ಇತ್ಯರ್ಥ ಇಂದಿರಾ ಆಶಯ

ಅಹಮದಾಬಾದ್, ಏ. 14–
ವಿವಿಧೋದ್ದೇಶದ ನರ್ಮದಾ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಬಗ್ಗೆ ಇರುವ ವಿವಾದವನ್ನು ಶೀಘ್ರದಲ್ಲಿಯೇ ಬಗೆಹರಿಸಲಾಗುವುದೆಂದು ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಅವರು ಇಂದು ಆಶಯ ವ್ಯಕ್ತಪಡಿಸಿದರು.

ನಗರದಲ್ಲಿ ಸಂಸತ್ ಅಧಿವೇಶನ: ಸದಸ್ಯರ ಸಮಿತಿ ಪರಿಶೀಲನೆ

ಬೆಂಗಳೂರು, ಏ. 14–
ಸಂಸತ್ ಅಧಿವೇಶನ ಬೆಂಗಳೂರಿನಲ್ಲಿ ಜರುಗುವುದಾದರೆ, ಅದಕ್ಕೆ ಬೇಕಾದ ಸೌಕರ್ಯ ಮತ್ತು ತಗಲುವ ವೆಚ್ಚದ ಬಗ್ಗೆ ಪರಿಶೀಲನೆ ನಡೆಸಲು ಕೇಂದ್ರ ಸರ್ಕಾರ ಸದ್ಯದಲ್ಲೇ ಸಂಸತ್ ಸದಸ್ಯರ ಸಮಿತಿಯೊಂದನ್ನು ರಚಿಸಲಿದೆ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಶ್ರೀ ಕೆ. ಹನುಮಂತಯ್ಯ ಅವರು ತಿಳಿಸಿದರು.

ವಿಯಟ್ನಾಂ ಶಾಂತಿಗೆ ಪೋಪ್ ಮನವಿ

ವ್ಯಾಟಿಕನ್‌ನಗರ, ಏ. 14–
ವಿಯಟ್ನಾಂ ಸಮರದಲ್ಲಿ ಆಸಕ್ತಿ ಇರುವ ಎಲ್ಲ ಪಕ್ಷಗಳು ಕದನ ವಿರಾಮ ಮತ್ತು ಗೌರವಯುತವಾದ ಹಾಗೂ ನ್ಯಾಯವಾದ ಮಾತುಕತೆಯ ವಿಷಯವನ್ನು ದೃಢವಾಗಿ ಆಲೋಚಿಸಬೇಕೆಂದು ಪೋಪ್ ಪಾಲ್ ಅವರು ಇಂದು ನೀಡಿದ ಈಸ್ಟರ್ ಹಬ್ಬದ ಸಂದೇಶದಲ್ಲಿ ಮನವಿ ಮಾಡಿದರು.

4ನೆ ಯೋಜನೆಯಲ್ಲಿ ಸ್ವಾವಲಂಬನೆ ಸಾಧನೆಗೆ ಹೆಚ್ಚು ಮಹತ್ವ

ನವದೆಹಲಿ, ಏ. 14–
ಯೋಜನಾ ಆಯೋಗ ಸಿದ್ಧಪಡಿಸಿದ ನಾಲ್ಕನೆ ಯೋಜನೆ ಪ್ರಾರಂಭಿಕ ದಾಖಲೆಗಳಲ್ಲಿ ಸ್ವಾವಲಂಬನೆ ಸಾಧಿಸುವುದಕ್ಕೆ ಮಹತ್ವ ನೀಡಲಾಗಿದೆ. ಯೋಜನಾ ಆಯೋಗ ಈಗಾಗಲೇ ಪೂರ್ಣವಾಗಿ ಚರ್ಚಿಸಿದ ದಾಖಲೆಯನ್ನು ಕೇಂದ್ರ ಸಂಪುಟ ಸದ್ಯದಲ್ಲೇ ಪರಿಶೀಲಿಸುವುದು.

ಗುಂಪು ರಾಜಕೀಯ ಸಲ್ಲದು: ಹೊಸ ನಾಯಕರ ಆಯ್ಕೆಗೆ ಶಾಸಕರಿಗೆ ಸ್ವಾತಂತ್ರ್ಯವಿರಲಿ

ಬೆಂಗಳೂರು, ಏ. 14–
‘ರಾಜ್ಯ ಕಾಂಗ್ರೆಸ್‌ ಶಾಸಕ ಪಕ್ಷದ ಹೊಸ ನಾಯಕರ ಆಯ್ಕೆಗೆ ಸದಸ್ಯರಿಗೆ ಸಂಪೂರ್ಣ ಸ್ವಾತಂತ್ರ್ಯವಿರಬೇಕು’ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಶ್ರೀ ಕೆಂಗಲ್‌ ಹನುಮಂತಯ್ಯ ಇಂದು ಇಲ್ಲಿ ಹೆಳಿದರು.

ಪ್ರತಿಕ್ರಿಯಿಸಿ (+)