ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇನಕಾ ಭೇಟಿ ನಂತರ ಅಂಬೇಡ್ಕರ್ ಪ್ರತಿಮೆ ‘ಸ್ವಚ್ಛ’

Last Updated 14 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ವಡೋದರ/ಗುಜರಾತ್‌: ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಹಾಗೂ ಬಿಜೆಪಿ ನಾಯಕರು ಇಲ್ಲಿಯ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ತೆರಳಿದ ಬಳಿಕ, ದಲಿತ ಸಂಘಟನೆಗಳ ಸದಸ್ಯರು ಹಾಲು ಮತ್ತು ನೀರಿನಿಂದ ಸ್ಥಳವನ್ನು ಸ್ವಚ್ಛಗೊಳಿಸಿದ್ದಾರೆ.

ಅಂಬೇಡ್ಕರ್ ಅವರ 127ನೇ ಜಯಂತಿ ಅಂಗವಾಗಿ ಮೇನಕಾ ಗಾಂಧಿ ಮತ್ತು ಬಿಜೆಪಿ ಸಂಸದ ರಂಜನ್‌ಬೆನ್‌ ಭಟ್, ಮೇಯರ್ ಭರತ್ ದಂಗರ್, ಬಿಜೆಪಿ ಶಾಸಕ ಯೋಗೇಶ್ ಪಟೇಲ್ ಜತೆಗೆ  ಬೆಳಿಗ್ಗೆ ಪುಷ್ಪನಮನ ಸಲ್ಲಿಸಲು ಬಂದಿದ್ದರು.

ಈ ವೇಳೆ ಬರೋಡಾದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದ ಎಸ್‌ಸಿ/ಎಸ್‌ಟಿ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಠಾಕೂರ್ ಸೋಲಂಕಿ ನೇತೃತ್ವದಲ್ಲಿ ದಲಿತರು ಅವರ ವಿರುದ್ಧ ಘೋಷಣೆ ಕೂಗಲಾರಂಭಿಸಿದರು.

‘ಬಿಜೆಪಿ ನಾಯಕರಿಗಿಂತ ಮೊದಲೇ ನಾವು ಸ್ಥಳಕ್ಕೆ ಬಂದಿದ್ದೆವು. ನಮ್ಮನ್ನು ತಡೆದ ಪೊಲೀಸರು ಮೇಯರ್‌ ಮತ್ತು ಸಚಿವರಿಗೆ ಗೌರವ ಸಲ್ಲಿಸಲು ಅವಕಾಶ ನೀಡಿದರು’ ಎಂದು ಸೋಲಂಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ನಾಯಕರಿಂದ ಇಲ್ಲಿನ ಪರಿಸರ ಕಲುಷಿತವಾಗಿದೆ. ಹಾಗಾಗಿ ಹಾಲು ಮತ್ತು ನೀರು ಹಾಕಿ ಸ್ಥಳ ಸ್ವಚ್ಛಗೊಳಿಸಬೇಕಾಯಿತು ಎಂದು ದಲಿತ ಸಂಘಟನೆಗಳ ಸದಸ್ಯರು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ಸ್ಮಾರಕಕ್ಕೆ ಕೇಸರಿ ಬಣ್ಣ–ವಿರೋಧ: ಗೋರಖಪುರ‌:ನಿರ್ಮಾಣ ಹಂತದಲ್ಲಿರುವ ಅಂಬೇಡ್ಕರ್ ಸ್ಮಾರಕಕ್ಕೆ   ಕೇಸರಿ ಬಣ್ಣ ಬಳಿಯಲಾಗುತ್ತಿದ್ದು, ಇದಕ್ಕೆ ದಲಿತ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಖಾಸಗಿ ಆಭರಣ ಸಂಸ್ಥೆಯೊಂದು ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ ಈ ಸ್ಮಾರಕ ನಿರ್ಮಿಸುತ್ತಿದೆ. ಇದಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ. ಕೇಸರಿ ಬಣ್ಣ ಬಳಿಯಲು ಸರ್ಕಾರ ಆದೇಶ ನೀಡಿರಲಿಲ್ಲ ಎಂದು ನಗರಪಾಲಿಕೆ ಉಪ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

‘ನಾವು ಪ್ರತಿಭಟಿಸದೆ ಇದ್ದಿದ್ದರೆ ಸ್ಮಾರಕ ಸಂಪೂರ್ಣ ಕೇಸರಿಮಯವಾಗುತ್ತಿತ್ತು’ ಎಂದು ಸ್ಥಳೀಯ ದಲಿತ ಸಂಘಟನೆ ಮುಖಂಡರು ಹೇಳಿದ್ದಾರೆ.

‘ಸ್ಮಾರಕಕ್ಕೆ ಬಿಳಿಯ ಬಣ್ಣ ಬಳಿಯಬೇಕು ಎನ್ನುವ ನಮ್ಮ ಬೇಡಿಕೆಗೆ ಖಾಸಗಿ ಆಭರಣ ಸಂಸ್ಥೆ ಒಪ್ಪಿಕೊಂಡಿದೆ’ ಎಂದು ಅವರು ಹೇಳಿದ್ದಾರೆ.

ಪ್ರತಿಮೆ ಭಗ್ನ: (ನೋಯಿಡಾ ವರದಿ): ಇಲ್ಲಿಯ ಬಿಸರಖ್‌ನಲ್ಲಿನ ರಿಸಪಾಲ್ ಗ್ರಾಮದಲ್ಲಿ ಕಿಡಿಗೇಡಿಗಳು ಡಾ. ಅಂಬೇಡ್ಕರ್ ಪ್ರತಿಮೆ ಭಗ್ನಗೊ
ಳಿಸಿದ್ದಾರೆ.

ಡಾ. ಅಂಬೇಡ್ಕರ್‌ ಅವರ 127ನೇ ಜಯಂತಿಗೂ ಮುನ್ನಾದಿನ ಈ ಘಟನೆ ನಡೆದಿದೆ. ಶುಕ್ರವಾರ ಬೆಳಿಗ್ಗೆ ಪ್ರತಿಮೆ ಭಗ್ನವಾಗಿರುವುದನ್ನು ಗ್ರಾಮಸ್ಥರು ಗಮನಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ಜಮಾಯಿಸಿದ್ದಾರೆ.

ಪರಿಸ್ಥಿತಿ ನಿಯಂತ್ರಣಕ್ಕೆ ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಹೊಸ ಪ್ರತಿಮೆ ಸ್ಥಾಪಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ವಿಶ್ವಸಂಸ್ಥೆಯಲ್ಲಿ ಜಯಂತಿ
ವಿಶ್ವಸಂಸ್ಥೆ:
ಸಾಮಾಜಿಕ ನ್ಯಾಯ ಮತ್ತು ಸಮಾನತೆಗಾಗಿ ನಡೆಸಿದ ಅವಿರತ ಹೋರಾಟದಿಂದ ಅಡಾ. ಅಂಬೇಡ್ಕರ್‌ ವಿಶ್ವದ ಮನೆಮಾತಾಗಿದ್ದಾರೆ ಎಂದು ವಿಶ್ವಸಂಸ್ಥೆ ಬಣ್ಣಿಸಿದೆ.

ವಿಶ್ವಸಂಸ್ಥೆಯ 2030 ಅಭಿವೃದ್ಧಿ ಕಾರ್ಯಸೂಚಿಯು ಡಾ. ಅಂಬೇಡ್ಕರ್‌ ಅವರ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯ ಪರಿಕಲ್ಪನೆ ಹೊಂದಿದೆ ಎಂದು ವಿಶ್ವಸಂಸ್ಥೆಯ ಅಭಿವೃದ್ಧಿ ಯೋಜನೆಯ ಅಧಿಕಾರಿ ಅಚಿಮ್‌ ಸ್ಟೇನರ್‌ ಹೇಳಿದ್ದಾರೆ. ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಡಾ. ಅಂಬೇಡ್ಕರ್‌ ಜಯಂತಿಯಲ್ಲಿ ಅವರು ಪ್ರಧಾನ ಭಾಷಣ ಮಾಡಿದರು.

ಸಿಖ್‌ ಸಮುದಾಯದ ಪ್ರತಿಭಟನೆ: ಭಾರತದಲ್ಲಿ ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ವಿರೋಧಿಸಿ ಸಿಖ್‌ ಸಮು
ದಾಯದವರು ಕಪ್ಪುಪಟ್ಟಿ ಧರಿಸಿ ಹಠಾತ್‌ ಪ್ರತಿಭಟನೆ ನಡೆಸಿದರು.

ವಿಶ್ವಸಂಸ್ಥೆಯಲ್ಲಿ ಭಾರತದ ಪ್ರತಿನಿಧಿ ಸೈಯದ್ ಅಕ್ಬರುದ್ದಿನ್‌ ಪ್ರಾಸ್ತಾವಿಕ ಮಾತನಾಡಲು ಆರಂಭಿಸುತ್ತಲೇ 10ರಿಂದ 15 ಜನರ ಗುಂಪು ಪ್ರತಿಭಟನೆ ಆರಂಭಿಸಿದರು. ‘ಭಾರತದಲ್ಲಿ ಅಲ್ಪಸಂಖ್ಯಾತರು ಸುರಕ್ಷಿತರಲ್ಲ, ಅವರು ಅಪಾಯದಲ್ಲಿದ್ದಾರೆ’ ಎಂಬ ಫಲಕಗಳನ್ನು ಪ್ರದರ್ಶಿಸಿದರು.

ಪರಿಶಿಷ್ಟ ಜಾತಿಯ ಎಲ್ಲರೂ ‘ದಲಿತ’ರಲ್ಲ!
ನವದೆಹಲಿ:
ಪರಿಶಿಷ್ಟ ಜಾತಿಗೆ (ಎಸ್‌ಸಿ) ಸೇರಿದ ಎಲ್ಲರನ್ನೂ‘ದಲಿತ‘ ಎಂದು ಕರೆಯಬಾರದು ಕೇಂದ್ರ ಸರ್ಕಾರ ತಾಕೀತು ಮಾಡಿದೆ.

ಪರಿಶಿಷ್ಟ ಜಾತಿ ವ್ಯಾಪ್ತಿಗೆ ಸೇರುವ ಜನರ ಸರ್ಕಾರಿ ದಾಖಲೆಗಳಲ್ಲಿ ‘ದಲಿತ’ ಎಂದು ಸೂಚಿಸುವುದನ್ನು ಕೈಬಿಡುವಂತೆಯೂ ನಿರ್ದೇಶನ ನೀಡಿದೆ.

ಈ ಸಂಬಂಧ ಕೇಂದ್ರ ಸಾಮಾಜಿಕ ನ್ಯಾಯ ಸಚಿವಾಲಯವು ಈಗಾಗಲೇ ತನ್ನ ಅಧೀನದ ಇಲಾಖೆಗಳು, ಕೇಂದ್ರಾಡಳಿತ ಪ್ರದೇಶ ಮತ್ತು ರಾಜ್ಯ ಸರ್ಕಾರಗಳಿಗೆ  ಸುತ್ತೋಲೆ ಹೊರಡಿಸಿದೆ.

‘ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡುವಾಗ ‘ಹರಿಜನ’ ಪದ ಸೇರಿಸುವುದು ಬೇಡ. ಪರಿಶಿಷ್ಟ ಜಾತಿ ಕಾಯ್ದೆ ಅಡಿ ಗುರುತಿಸಲಾದ ವ್ಯಕ್ತಿ ಯಾವ ಜಾತಿಗೆ ಸೇರಿದ್ದಾನೆ ಎನ್ನುವುದನ್ನು ಮಾತ್ರ ನಮೂದಿಸಿದರೆ ಸಾಕು’ ಎಂದು ತಿಳಿಸಲಾಗಿದೆ.

‘ಸಂವಿಧಾನದ 341ನೇ ಕಲಂ ಪ್ರಕಾರ, ‘ಶೆಡ್ಡೂಲ್ಡ್‌ ಕಾಸ್ಟ್’ ಎಂಬ ಇಂಗ್ಲಿಷ್ ಪದಕ್ಕೆ ಆಯಾ ರಾಜ್ಯಗಳ ವ್ಯವಹಾರಿಕ ಭಾಷೆಯಲ್ಲಿ ತತ್ಸಮಾನ ಅರ್ಥ ಬರುವ ಪದವನ್ನಷ್ಟೇ ಬಳಸಬೇಕು’ ಎಂದು ತಿಳಿಸಿದೆ.

ಇದೇ ಜನವರಿ 15ರಂದು ಮಧ್ಯಪ್ರದೇಶ ಹೈಕೋರ್ಟ್ ನೀಡಿದ ತೀರ್ಪನ್ನೂ ಕೇಂದ್ರ ಸರ್ಕಾರದ ನಿರ್ದೇಶನದಲ್ಲಿ ಉಲ್ಲೇಖಿಸಲಾಗಿದೆ.

‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಸೇರಿದವರನ್ನು ದಲಿತ ಎಂದು ಗುರುತಿಸುವ ಸಂಸ್ಕೃತಿಯನ್ನು ಮುಂದುವರಿಸಬಾರದು. ಹಾಗೆ ಗುರುತಿಸಬೇಕು ಎಂದು ಸಂವಿಧಾನ ಮತ್ತು ರಾಜ್ಯದ ನಿಯಮಗಳಲ್ಲೂ ಇಲ್ಲ’ ಎಂದು ಹೈಕೋರ್ಟ್ ತೀರ್ಪು ನೀಡಿತ್ತು.

*
ಹಿಂದೂ ರಾಷ್ಟ್ರವನ್ನಾಗಿ ಪರಿವರ್ತಿಸಲು ಹೊರಟ ಬಿಜೆಪಿ ಆಡಳಿತದಲ್ಲಿ ಅಲ್ಪಸಂಖ್ಯಾತರು ಸುರಕ್ಷಿತವಾಗಿಲ್ಲ ಎಂಬ ಸಂದೇಶವನ್ನು ಇಡೀ ವಿಶ್ವಕ್ಕೆ ತಲುಪಿಸಿದ್ದೇವೆ.
–ಸಬ್ಜೀತ್‌ ಸಿಂಗ್‌, ಅಮೆರಿಕದ ಅಕಾಲಿದಳ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT