ಶುಕ್ರವಾರ, ಡಿಸೆಂಬರ್ 6, 2019
25 °C

ಕಪ್ಪುಪಟ್ಟಿಗೆ ಮ್ಯಾನ್ಮಾರ್‌ ಸೇನಾಪಡೆ

ಎಪಿ Updated:

ಅಕ್ಷರ ಗಾತ್ರ : | |

ಕಪ್ಪುಪಟ್ಟಿಗೆ ಮ್ಯಾನ್ಮಾರ್‌ ಸೇನಾಪಡೆ

ವಿಶ್ವಸಂಸ್ಥೆ: ರೋಹಿಂಗ್ಯಾ ಮುಸ್ಲಿಮರ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ನಡೆಸಿವೆ ಎಂಬ ನಂಬಲರ್ಹ ವರದಿ ಆಧರಿಸಿ, ವಿಶ್ವಸಂಸ್ಥೆಯು ಮ್ಯಾನ್ಮಾರ್‌ನ ಸೇನಾ ಪಡೆಗಳನ್ನು ಕಪ್ಪು ಪಟ್ಟಿಗೆ ಸೇರಿಸಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್‌ ಸಲ್ಲಿಸಿದ ವರದಿಯಲ್ಲಿ ವಿವಿಧ ದೇಶಗಳ ಒಟ್ಟು 51 ಪಡೆಗಳನ್ನು ಕಪ್ಪುಪಟ್ಟಿಗೆ ಸೇರಿಸುವ ವಿಷಯ ಪ್ರಸ್ತಾಪಿಸಲಾಗಿದೆ.

ಮ್ಯಾನ್ಮಾರ್‌ನಿಂದ ಬಾಂಗ್ಲಾದೇಶಕ್ಕೆ ವಲಸೆ ಬಂದ 7 ಲಕ್ಷಕ್ಕೂ ಅಧಿಕ ರೋಹಿಂಗ್ಯಾ ಮುಸ್ಲಿಮರನ್ನು ದೈಹಿಕ ಮತ್ತು ಮಾನಸಿಕವಾಗಿ ಹಿಂಸಿಸಲಾಗಿದೆ ಎಂದು ಬಾಂಗ್ಲಾದೇಶದಲ್ಲಿದ್ದ ಅಂತರರಾಷ್ಟ್ರೀಯ ವೈದ್ಯಕೀಯ ಸಿಬ್ಬಂದಿ ಮತ್ತು ಇತರರು ತಿಳಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘2016ರ ಅಕ್ಟೋಬರ್‌ ಮತ್ತು 2017ರ ಆಗಸ್ಟ್‌ನಲ್ಲಿ ಮ್ಯಾನ್ಮಾರ್‌ ಸೇನಾ ಪಡೆಗಳು ರೋಹಿಂಗ್ಯಾ ಮುಸ್ಲಿಮರನ್ನು ದೇಶದಿಂದ ಹೊರಹಾಕುವ ಕೆಲಸ ಮಾಡಿದ್ದವು. ಆ ಸಂದರ್ಭದಲ್ಲಿ ಈ ದೌರ್ಜನ್ಯ ಎಸಗಿವೆ. ಇಡೀ ರೋಹಿಂಗ್ಯಾ ಸಮುದಾಯಕ್ಕೆ ಬೆದರಿಕೆ ಒಡ್ಡಿ, ಅತ್ಯಾಚಾರ ಮತ್ತು ಲೈಂಗಿಕ ಹಿಂಸಾಚಾರ ನಡೆಸಿವೆ. ಆ ಮೂಲಕ ಅವರೆಲ್ಲ ತಮ್ಮ ತಾಯ್ನೆಲ ಬಿಟ್ಟು ಹೊರಹೋಗುವಂತೆ ಮಾಡಿವೆ’ ಎಂದು ಗುಟೆರಸ್‌ ತಿಳಿಸಿದ್ದಾರೆ.

ಸೋಮವಾರ ಭದ್ರತಾ ಮಂಡಳಿ ಸಭೆಯಲ್ಲಿ ಸಂಘರ್ಷಪೀಡಿತ ಪ್ರದೇಶಗಳಲ್ಲಿ ಲೈಂಗಿಕ ಹಿಂಸಾಚಾರ ತಡೆಯುವ ಕುರಿತು ವಿಶೇಷ ಚರ್ಚೆ ನಡೆಯಲಿದೆ.

ಕಾಂಗೊದ ಸೇನಾ ಪಡೆಗಳು ಮತ್ತು ರಾಷ್ಟ್ರೀಯ ಪೊಲೀಸ್‌ ಪಡೆ ಸೇರಿ 17 ಪಡೆಗಳು, ಸಿರಿಯಾದ ಸೇನಾ ಪಡೆಗಳು ಮತ್ತು ಗುಪ್ತಚರ ಇಲಾಖೆ ಸೇರಿ 7 ಪಡೆಗಳು, ಸೆಂಟ್ರಲ್‌ ಆಫ್ರಿಕನ್‌ ರಿಪಬ್ಲಿಕ್‌ ಮತ್ತು ದಕ್ಷಿಣ ಸುಡಾನ್‌ನ ತಲಾ ಆರು ಪಡೆಗಳು, ಮಾಲಿಯ ಐದು, ಸೊಮಾಲಿಯಾದ ನಾಲ್ಕು, ಇರಾಕ್‌ ಮತ್ತು ಮ್ಯಾನ್ಮಾರ್‌ನ ತಲಾ ಒಂದು ಪಡೆ ಮತ್ತು ವಿವಿಧ ರಾಷ್ಟ್ರಗಳಲ್ಲಿ ಇರುವ ಬೋಕೊ ಹರಾಮ್‌ ಸಂಘಟನೆಗಳು ಈ ಕಪ್ಪುಪಟ್ಟಿಯಲ್ಲಿವೆ.

*

ರೋಹಿಂಗ್ಯಾ ಮುಸ್ಲಿಂ ಮಹಿಳೆಯರು, ಗರ್ಭಿಣಿಯರು, ಹದಿಹರೆಯದವರ ಮೇಲೆ ಹಿಂಸಾಚಾರ ನಡೆದಿದೆ.

–ಅಂಟೋನಿಯೊ ಗುಟೆರಸ್‌, ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ

ಪ್ರತಿಕ್ರಿಯಿಸಿ (+)