ಮಂಗಳವಾರ, ಆಗಸ್ಟ್ 4, 2020
26 °C

‘ಕೈ’ ಕೋಟೆ ಗಾಂಧಿನಗರದಲ್ಲಿ ‘ನಾಗಾ’ಲೋಟ ತಡೆಗೆ ಕಸರತ್ತು

ಮಂಜುನಾಥ ಹೆಬ್ಬಾರ್ Updated:

ಅಕ್ಷರ ಗಾತ್ರ : | |

‘ಕೈ’ ಕೋಟೆ ಗಾಂಧಿನಗರದಲ್ಲಿ ‘ನಾಗಾ’ಲೋಟ ತಡೆಗೆ ಕಸರತ್ತು

ರಾಜ್ಯ ರಾಜಧಾನಿಯ ಹೃದಯಭಾಗದಲ್ಲಿರುವ ‘ಈ ಕ್ಷೇತ್ರ’ ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತದೆ. ಪ್ರತಿ ನಿತ್ಯ ಇಲ್ಲಿಗೆ ಬಂದಿಳಿಯುವ ‘ವಲಸಿಗ’ರಿಗೆ ಲೆಕ್ಕ ಇಲ್ಲ. ರಾಜಕೀಯಕ್ಕಿಂತ ಹೆಚ್ಚಾಗಿ ಚಿತ್ರರಂಗದ ‘ಗಾಸಿಪ್‌’ಗಳೇ ಇಲ್ಲಿಂದ ಕೇಳಿ ಬರುತ್ತಿರುತ್ತವೆ.

–ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ಪ್ರತಿನಿಧಿಸುತ್ತಿರುವ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಸಂಕ್ಷಿಪ್ತ ಚಿತ್ರಣವಿದು.

ಕನ್ನಡಿಗರಿಗಿಂತ ಅನ್ಯಭಾಷಿಕರೇ ಇಲ್ಲಿ ಹೆಚ್ಚು. ಉತ್ತರ ಭಾರತ ಮೂಲದ ವ್ಯಾಪಾರಿಗಳೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಬಹು ಭಾಷೆ, ಬಹು ಸಂಸ್ಕೃತಿ ಈ ಕ್ಷೇತ್ರದ ವೈಶಿಷ್ಟ್ಯ. ಜನಜಂಗುಳಿ, ವಾಹನದಟ್ಟಣೆ ಹಾಗೂ ದಿನದ ಇಪ್ಪತ್ನಾಲ್ಕು ತಾಸು ಚಟುವಟಿಕೆಯಿಂದ ಕೂಡಿರುವ ಪ್ರದೇಶವಿದು. ಕೇಂದ್ರ ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಣ (ಮೆಜೆಸ್ಟಿಕ್‌) ಇಲ್ಲಿರುವುದರಿಂದ ಪರ ಊರಿಗೆ ತೆರಳುವ ಪ್ರಯಾಣಿಕರು, ಪ್ರವಾಸಿಗರು ಸಾಮಾನ್ಯವಾಗಿ ಇಲ್ಲಿಗೆ ಬಂದು ಹೋಗುತ್ತಾರೆ.

ಇದುವರೆಗಿನ ಚುನಾವಣೆಗಳಲ್ಲಿ ಹೆಚ್ಚು ಬಾರಿ ಕಾಂಗ್ರೆಸ್‌ ಗೆದ್ದಿರುವುದರಿಂದ ಇದು ‘ಕೈ’ ಪಕ್ಷದ ಭದ್ರಕೋಟೆ. ನಾಲ್ಕು ಚುನಾವಣೆಗಳಲ್ಲಿ ಎದುರಾಳಿಗಳನ್ನು ‘ಚಿತ್‌’ ಮಾಡಿರುವ ದಿನೇಶ್ ಅವರು, ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವರಾಗಿದ್ದರು. ಸಚಿವ ಸಂಪುಟ ಪುನರ್‌ರಚನೆ ವೇಳೆಗೆ ಸಚಿವ ಸ್ಥಾನ ಕಳೆದುಕೊಂಡರು. ಪಕ್ಷ ಸಂಘಟನೆಗಾಗಿ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ಮಾಡಲಾಯಿತು. ಒಂದೂವರೆ ವರ್ಷದಲ್ಲಿ ಪಕ್ಷ ಸಂಘಟನೆಯ ಜತೆಗೆ ‘ಅಭಿವೃದ್ಧಿ’ ಕಾರ್ಯದಲ್ಲೂ ‘ಚುರುಕುತನ’ ತೋರಿದ್ದಾರೆ.

ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಓಕಳೀಪುರ ಅಷ್ಟಪಥ ಕಾರಿಡಾರ್‌ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದೆ. ಇದರ ಮೂರು ಮಾರ್ಗಗಳನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಮೆಜೆಸ್ಟಿಕ್‌ ಸುತ್ತಮುತ್ತಲಿನ ರಸ್ತೆಗಳನ್ನು ವೈಟ್‌ಟಾಪಿಂಗ್‌ ಹಾಗೂ ಟೆಂಡರ್‌ಶ್ಯೂರ್‌ ಯೋಜನೆಯಡಿ ಅಭಿವೃದ್ಧಿಪಡಿಸಲಾಗುತ್ತಿದೆ. ಅರ್ಧ ಗಂಟೆ ಮಳೆಗೂ ಆನಂದ ರಾವ್‌ ಸರ್ಕಲ್‌, ಕಿನೊ ಥಿಯೇಟರ್‌ ಜಂಕ್ಷನ್‌ನಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿತ್ತು. ಇಲ್ಲಿ ಕಾಮಗಾರಿ ನಡೆಸಿ ಮಳೆ ನೀರಿನ ಸರಾಗ ಹರಿವಿಗೆ ವ್ಯವಸ್ಥೆ ಮಾಡಲಾಗಿದೆ.

ನಗರದ ಕೇಂದ್ರ ಭಾಗದಲ್ಲಿದ್ದರೂ ಸಮಸ್ಯೆಗಳಿಗೇನು ಬರವಿಲ್ಲ. ಕೊಳೆಗೇರಿಗಳ ಸಂಖ್ಯೆ ಹೆಚ್ಚಿರುವುದರಿಂದ ಕುಡಿಯುವ ನೀರು, ನೈರ್ಮಲ್ಯ, ವಸತಿ, ಒಳಚರಂಡಿ ಸೇರಿ ಹಲವು ಸಮಸ್ಯೆಗಳು ಕ್ಷೇತ್ರವನ್ನು ಕಾಡುತ್ತಿವೆ. ನೆರೆಯ ತಮಿಳುನಾಡು ಹಾಗೂ ಆಂಧ್ರದಿಂದ ಬಂದಿರುವ ವಲಸೆ ಕೂಲಿಕಾರ್ಮಿಕರ ಸಂಖ್ಯೆ ಹೆಚ್ಚಿದ್ದು, ಅವರು ಕೊಳೆಗೇರಿಗಳಲ್ಲಿ ವಾಸ ಮಾಡುತ್ತಿದ್ದಾರೆ. ಸಂಚಾರ ದಟ್ಟಣೆ ಹಾಗೂ ವಾಹನ ನಿಲುಗಡೆ ಇಲ್ಲಿನ ಬಹುದೊಡ್ಡ ಸಮಸ್ಯೆ. ಕೆಲವು ರಸ್ತೆಗಳು ಇಕ್ಕಟ್ಟಾಗಿವೆ. ಮೆಜೆಸ್ಟಿಕ್ ಸುತ್ತಮುತ್ತಲಿನ ಕೆಲವು ರಸ್ತೆಗಳೇ ಕಿತ್ತು ಹೋಗಿವೆ.‌

2008ರ ಚುನಾವಣೆಯಲ್ಲಿ ದಿನೇಶ್‌ ಅವರು ಬಿಜೆಪಿಯ ಪಿ.ಸಿ. ಮೋಹನ್‌ (ಬೆಂಗಳೂರು ಸೆಂಟ್ರಲ್‌ ಸಂಸದ) ಅವರನ್ನು 6,946 ಮತಗಳ ಅಂತರದಿಂದ ಸೋಲಿಸಿದ್ದರು. 2013ರ ಚುನಾವಣೆಯಲ್ಲಿ ಗೆಲುವಿನ ಅಂತರವನ್ನು 22,607ಕ್ಕೆ ಹೆಚ್ಚಿಸಿಕೊಂಡಿದ್ದರು. ಈ ಬಾರಿಯೂ ಕಾಂಗ್ರೆಸ್‌ನಿಂದ ದಿನೇಶ್‌ ಗುಂಡೂರಾವ್‌ ಕಣಕ್ಕೆ ಇಳಿಯುವುದು ನಿಕ್ಕಿಯಾಗಿದೆ. ಸತತ ಎರಡು ಬಾರಿ ಸೋಲಿನ ರುಚಿ ಕಂಡಿರುವ ಮೋಹನ್‌ ಅವರು ಕಣಕ್ಕೆ ಇಳಿಯಲು ಆಸಕ್ತರಾಗಿಲ್ಲ. ಬಿಜೆಪಿ ನಗರ ಘಟಕದ ಕಾರ್ಯದರ್ಶಿ ನರೇಶ್‌ ಕುಮಾರ್, ವಿಧಾನ ಪರಿಷತ್‌ ಸದಸ್ಯ ರಾಮಚಂದ್ರೇಗೌಡ ಪುತ್ರ ಸಪ್ತಗಿರಿ ಗೌಡ, ಬಿಬಿಎಂಪಿ ಸದಸ್ಯೆ ಎಸ್‌. ಲೀಲಾ ಶಿವಕುಮಾರ್‌ ಪತಿ ಶಿವಕುಮಾರ್, ನಿವೃತ್ತ ಎಸಿಪಿ ಗಂಗಾಧರ್‌, ಪಾಲಿಕೆಯ ಮಾಜಿ ಸದಸ್ಯ ಗೋಪಾಲಕೃಷ್ಣ ಆಕಾಂಕ್ಷಿಗಳಾಗಿದ್ದಾರೆ. ಸಪ್ತಗಿರಿ ಗೌಡ ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ. 2013ರಲ್ಲಿ ಜೆಡಿಎಸ್‌ನಿಂದ ನಿವೃತ್ತ ಪೊಲೀಸ್‌ ಅಧಿಕಾರಿ ಸುಭಾಷ್‌ ಭರಣಿ ಸ್ಪರ್ಧಿಸಿದ್ದರು. ಈ ಸಲ ಸರ್ವೋದಯ ನಾರಾಯಣಸ್ವಾಮಿ ಜೆಡಿಎಸ್ ಅಭ್ಯರ್ಥಿಯಾಗುವುದು ಬಹುತೇಕ ಖಚಿತ.

ಪಾಲಿಕೆಯ ಮಾಜಿ ಸದಸ್ಯ, ರೌಡಿ ವಿ. ನಾಗರಾಜ್‌ 2008ರ ಚುನಾವಣೆಯಲ್ಲಿ 13,053 ಮತ (ಪಕ್ಷೇತರ) ಹಾಗೂ 2013ರಲ್ಲಿ 10,875 ಮತಗಳನ್ನು (ಬಿಎಸ್‌ಆರ್‌ ಕಾಂಗ್ರೆಸ್‌) ಪಡೆದಿದ್ದರು. ಈ ಸಲ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ಸಿದ್ಧತೆ ನಡೆಸಿದ್ದಾರೆ. ಸಮಾಜಸೇವಾ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ತಮಿಳು ಭಾಷಿಕರ ಮತಗಳನ್ನು ಅವರು ನೆಚ್ಚಿಕೊಂಡಿದ್ದಾರೆ.

(ವಿ.ನಾಗರಾಜ್‌)

ನಗರ ಪೊಲೀಸರು 2017ರ ಏಪ್ರಿಲ್‌ನಲ್ಲಿ ನಾಗರಾಜ್‌ ಮನೆ ಮೇಲೆ ದಾಳಿ ನಡೆಸಿ ₹ 1,000 ಕೋಟಿಗೂ ಹೆಚ್ಚು ಮೌಲ್ಯದ ಭೂದಾಖಲೆ ಹಾಗೂ ₹ 14.8 ಕೋಟಿ ಮೊತ್ತದ ರದ್ದಾದ ನೋಟುಗಳು ವಶಪಡಿಸಿಕೊಂಡಿದ್ದರು. ಸಹೋದರನ ಪತ್ನಿ ಮತ್ತು ಅವರ ಮಗಳ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡುವುದಾಗಿ ಬೆದರಿಕೆವೊಡ್ಡಿದ್ದ ಆರೋಪದಡಿ ನಾಗರಾಜ್ ಹಾಗೂ ಆತನ ಇಬ್ಬರು ಪುತ್ರರನ್ನು ಶ್ರೀರಾಮಪುರ ಪೊಲೀಸರು ಕೆಲವು ದಿನಗಳ ಹಿಂದೆ ಬಂಧಿಸಿದ್ದರು. ಜಾಮೀನಿನ ಮೇಲೆ ಹೊರ ಬಂದ ಬಳಿಕ ಅವರು, ಪ್ರೆಸ್‌ ಕ್ಲಬ್‌ ಆವರಣದಲ್ಲೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು. ‘ಸಚಿವ ಕೆ.ಜೆ. ಜಾರ್ಜ್‌ ಹಾಗೂ ದಿನೇಶ್ ಗುಂಡೂರಾವ್‌ ಕಿರುಕುಳ ನೀಡುತ್ತಿದ್ದಾರೆ’ ಎಂದೂ ಆರೋಪಿಸಿದ್ದರು. ‘ನಾಗರಾಜ್‌ ಯಾರೆಂದೇ ಗೊತ್ತಿಲ್ಲ. ನಾನ್ಯಾಕೆ ಕಿರುಕುಳ ನೀಡಲಿ’ ಎಂದು ದಿನೇಶ್‌ ಮರುಪ್ರಶ್ನಿಸಿದ್ದರು.

**

ಪಾಲಿಕೆಯಲ್ಲಿ ಕಾಂಗ್ರೆಸ್‌ ಪ್ರಾಬಲ್ಯ

ಕ್ಷೇತ್ರ ವ್ಯಾಪ್ತಿಯಲ್ಲಿ ಬಿಬಿಎಂ‍ಪಿಯ ಏಳು ವಾರ್ಡ್‌ಗಳಿವೆ. ಪಾಲಿಕೆ ಚುನಾವಣೆಯಲ್ಲಿ ನಾಲ್ಕರಲ್ಲಿ ಕಾಂಗ್ರೆಸ್‌ ಜಯ ಗಳಿಸಿದ್ದರೆ, ಮೂರು ವಾ‌ರ್ಡ್‌ಗಳು ಬಿಜೆಪಿ ಪಾಲಾಗಿದೆ. ದತ್ತಾತ್ರೇಯ ದೇವಸ್ಥಾನ ವಾರ್ಡ್, ಗಾಂಧಿನಗರ, ಸುಭಾಷ್‌ನಗರದಲ್ಲಿ ಕಾಂಗ್ರೆಸ್‌ ಹಾಗೂ ಓಕಳೀಪುರ, ಚಿಕ್ಕಪೇಟೆ, ಕಾಟನ್‍ಪೇಟೆಯಲ್ಲಿ ಬಿಜೆಪಿ ಸದಸ್ಯರಿದ್ದಾರೆ. ಬಿನ್ನಿಪೇಟೆ ವಾರ್ಡ್‌ ಸದಸ್ಯರಾಗಿದ್ದ ಮಹದೇವಮ್ಮ ನಾಗರಾಜ್‌ (ಕಾಂಗ್ರೆಸ್‌) ಇತ್ತೀಚೆಗೆ ನಿಧನರಾಗಿದ್ದಾರೆ.

**

‘ದಟ್ಟಣೆ ಸಮಸ್ಯೆ ನಿವಾರಣೆ’

ಕೊಳೆಗೇರಿಗಳಿಗೆ ಉಚಿತ ಕಾವೇರಿ ನೀರು ಪೂರೈಕೆ ಮಾಡಲಾಗುತ್ತಿದೆ. ಪ್ರಧಾನಮಂತ್ರಿ ಆವಾಜ್ ಯೋಜನೆಯಡಿ ನಗರದ ಸ್ವತಂತ್ರಪಾಳ್ಯ, ಗೋಪಾಲಪುರ ಹಾಗೂ ವಿವೇಕಾನಂದನಗರದ (ಮುನೇಶ್ವರ ಬ್ಲಾಕ್) ಕೊಳೆಗೇರಿಗಳ 933 ನಿವಾಸಿಗಳಿಗೆ ಮನೆ ನಿರ್ಮಿಸಿ ಕೊಡುವ ಕಾಮಗಾರಿ ಆರಂಭವಾಗಿದೆ.

ಓಕಳೀಪುರ ಜಂಕ್ಷನ್‌ನಿಂದ ಫೌಂಟೇನ್‌ ವೃತ್ತದವರೆಗಿನ ಅಷ್ಟಪಥ ಕಾರಿಡಾರ್‌ನ ಮೊದಲ ಹಂತದಲ್ಲಿ ಪೂರ್ಣಗೊಂಡಿರುವ ಮೇಲ್ಸೇತುವೆ ಮತ್ತು ರೈಲ್ವೆ ಕೆಳ ಸೇತುವೆಗಳನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಬಾಕಿ ಇರುವ ಕಾಮಗಾರಿಗಳನ್ನು ಡಿಸೆಂಬರ್‌ ಅಂತ್ಯದೊಳಗೆ ಪೂರ್ಣಗೊಳಿಸಲಾಗುತ್ತದೆ. ಕ್ಷೇತ್ರದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ನಿವಾರಿಸಲಾಗಿದೆ.

-ದಿನೇಶ್‌ ಗುಂಡೂರಾವ್‌, ಶಾಸಕ

**

ಚುನಾವಣಾ ವರ್ಷದಲ್ಲಷ್ಟೇ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ಸಿಕ್ಕಿದೆ. ಮೆಜೆಸ್ಟಿಕ್‌ನಿಂದ ಮಾರುಕಟ್ಟೆಗೆ ಹೋಗುವ ಗೂಡ್‌ಶೆಡ್‌ ರಸ್ತೆ ಕಿರಿದಾಗಿದೆ. ಸದಾ ವಾಹನ ದಟ್ಟಣೆ ಇರುತ್ತದೆ. ಕೆಂಪೇಗೌಡ ಮೆಟ್ರೊ ನಿಲ್ದಾಣದಿಂದ ರೈಲ್ವೆ ನಿಲ್ದಾಣದ ನಡುವಿನ ಪಾದಚಾರಿ ಮೇಲ್ಸೇತುವೆ ಕಾಮಗಾರಿ ಇನ್ನೂ ಶುರುವಾಗಿಲ್ಲ.

-ಮಂಜುನಾಥ್‌, ಖಾಸಗಿ ಕಂಪೆನಿ ಉದ್ಯೋಗಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.