ಮಂಗಳವಾರ, ಜೂಲೈ 7, 2020
24 °C
27 ಗ್ರಾಮಗಳಲ್ಲಿ ಎಚ್‌.ಡಿ.ಕುಮಾರಸ್ವಾಮಿ ರೋಡ್‌ ಷೋ

ಚಾಮುಂಡೇಶ್ವರಿಯಲ್ಲಿ ಪ್ರಚಾರ ಭರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮುಂಡೇಶ್ವರಿಯಲ್ಲಿ ಪ್ರಚಾರ ಭರಾಟೆ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸಲಿರುವ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಯ ಕಾವು ಹೆಚ್ಚುತ್ತಿದ್ದು, ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರು ಶನಿವಾರ ಪ್ರಚಾರಕ್ಕೆ ಧುಮುಕಿದರು.

ಮೈಸೂರು ಹೊರವಲಯದ ಹಿನಕಲ್‌ನಿಂದ ಪ್ರಚಾರ ಆರಂಭಿಸಿದರು. ರಾತ್ರಿಯವರೆಗೆ 27 ಗ್ರಾಮಗಳಲ್ಲಿ ರೋಡ್‌ ಷೋ, ಪಾದಯಾತ್ರೆ ನಡೆಸಿದ ಅವರು, ಜೆಡಿಎಸ್ ಅಭ್ಯರ್ಥಿ ಜಿ.ಟಿ. ದೇವೇಗೌಡ ಪರ ಮತಯಾಚಿಸಿದರು. ಇದರ ನಡುವೆ ಎಚ್.ಡಿ.ಕೋಟೆಯಲ್ಲಿ ‘ವಿಕಾಸ ಪರ್ವ’ ಸಮಾವೇಶದಲ್ಲೂ ಪಾಲ್ಗೊಂಡರು.

ಭಾನುವಾರ ಮತ್ತು ಸೋಮವಾರವೂ ಪ್ರಚಾರ ಮುಂದುವರಿಯಲಿದೆ. ಮೂರು ದಿನಗಳಲ್ಲಿ ಸುಮಾರು 100 ಗ್ರಾಮಗಳಲ್ಲಿ ಕುಮಾರಸ್ವಾಮಿ ಪ್ರಚಾರ ನಡೆಸಲಿದ್ದಾರೆ.

ಸಿದ್ದರಾಮಯ್ಯ ಕ್ಯಾಂಪ್ ಮಾಡಲಿ: ಪ್ರಚಾರಕ್ಕೂ ಮುನ್ನ ಮಾಧ್ಯಮದವರ ಜತೆ ಮಾತನಾಡಿದ ಕುಮಾರಸ್ವಾಮಿ, ‘ನಾನು ಸ್ಪರ್ಧಿಸಲಿರುವ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಒಂದು ದಿನ ಅಲ್ಲ, ಒಂದು ತಿಂಗಳು ಕ್ಯಾಂಪ್ ಮಾಡಲಿ. ಎರಡೂ ಕ್ಷೇತ್ರಗಳ ಜನರು ನನ್ನನ್ನೇ ಗೆಲ್ಲಿಸುತ್ತಾರೆ’ ಎಂದರು.

‘ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಪ್ರಚಾರಕ್ಕೆ ಹೋಗುವುದಿಲ್ಲ. ಕಾಂಗ್ರೆಸ್‌ನವರು ಏನೇ ಮಾಡಿದರೂ ಅಲ್ಲಿ ಗೆಲುವು ನನ್ನದೇ’ ಎಂದು ಮುಖ್ಯಮಂತ್ರಿಗೆ ಸವಾಲು ಹಾಕಿದರು.

‘ಸಿದ್ದರಾಮಯ್ಯ ಅವರಿಗೂ ರಾಮನಗರಕ್ಕೂ ಏನು ಸಂಬಂಧ? ಅವರು ಅಲ್ಲಿಗೆ ಬಂದರೆ ಯಾವುದೇ ಬದಲಾವಣೆ ಆಗದು. ನಾನು ಚಾಮುಂಡೇಶ್ವರಿಯಲ್ಲಿ ಪ್ರಚಾರ ಮಾಡುತ್ತಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಇತರ‌ ಕ್ಷೇತ್ರಗಳಲ್ಲಿ ಪ್ರಚಾರ ಕೈಗೊಂಡಂತೆ ಇಲ್ಲೂ ಪ್ರಚಾರ ಮಾಡುತ್ತಿದ್ದೇನೆ. ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಕೊಡುಗೆಗಿಂತ ನನ್ನ ಕೊಡುಗೆ ಜಾಸ್ತಿ ಇದೆ’ ಎಂದರು.

**

‘ಸಮೀಕ್ಷೆ ಉಲ್ಟಾ ಆಗಲಿದೆ’

‘ಇಂಡಿಯಾ ಟುಡೆ– ಕಾರ್ವಿ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಕಾಂಗ್ರೆಸ್‌ಗೆ 100, ಜೆಡಿಎಸ್‌ಗೆ 40 ಸ್ಥಾನ ದೊರೆಯಬಹುದು ಎಂದು ಹೇಳಲಾಗಿದೆ. ಸಮೀಕ್ಷೆಯನ್ನು ಯಾರು, ಏಕೆ ಮಾಡಿಸಿದರು ಎಂಬುದು ಗೊತ್ತಿದೆ. ದುಡ್ಡು ಕೊಟ್ಟು ಮಾಡಿಸಿರುವ ಈ ಸಮೀಕ್ಷೆ ಉಲ್ಟಾ ಆಗಲಿದ್ದು, ಮೂರನೇ ಸ್ಥಾನದಲ್ಲಿರುವ ನಾವು ಮೊದಲ ಸ್ಥಾನಕ್ಕೆ ಬರುವುದು ಖಚಿತ. ಜೆಡಿಎಸ್‌ ಕಿಂಗ್‌ಮೇಕರ್‌ ಅಲ್ಲ, ಕಿಂಗ್‌ ಆಗಲಿದೆ’ ಎಂದರು.

**

ರಾಮನಗರದಲ್ಲಿ ನನ್ನ ನಡವಳಿಕೆಗೂ, ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯನವರ ನಡವಳಿಕೆಗೂ ಹೋಲಿಕೆ ಮಾಡಬೇಡಿ.

-ಕುಮಾರಸ್ವಾಮಿ, ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.