ಬುಧವಾರ, ಜುಲೈ 15, 2020
22 °C
ಮುಂಚೂಣಿ ನಾಯಕರಿಗೆ ಸ್ವಕ್ಷೇತ್ರ ಉಳಿಸಿಕೊಳ್ಳುವ ಚಿಂತೆ

ರಾಜ್ಯವ್ಯಾಪಿ ಪ್ರಚಾರದ ಸಾರಥ್ಯ ರಾಹುಲ್ ಹೆಗಲಿಗೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯವ್ಯಾಪಿ ಪ್ರಚಾರದ ಸಾರಥ್ಯ ರಾಹುಲ್ ಹೆಗಲಿಗೆ?

ಬೆಂಗಳೂರು: ಕಾಂಗ್ರೆಸ್‌ನ ಮೂವರು ಮುಂಚೂಣಿ ನಾಯಕರು ರಾಜ್ಯದಾದ್ಯಂತ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ನೆರವಾಗುವುದಕ್ಕಿಂತಲೂ ಹೆಚ್ಚಾಗಿ ಸ್ವಂತ ಕ್ಷೇತ್ರವನ್ನು ಉಳಿಸಿಕೊಳ್ಳುವ ಬಗ್ಗೆಯೇ ಚಿಂತಿತರಾಗಿದ್ದಾರೆ. ಇದರಿಂದಾಗಿ ಪಕ್ಷವನ್ನು ಗೆಲ್ಲಿಸಿಕೊಳ್ಳುವ ಹೊಣೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಹೆಗಲೇರುವ ಸಾಧ್ಯತೆ ಹೆಚ್ಚಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ತಾವೂ ಗೆಲ್ಲುವುದರ ಜೊತೆಗೆ ಮಗ ಡಾ. ಯತೀಂದ್ರ ಅವರನ್ನೂ ಗೆಲ್ಲಿಸುವ ಸವಾಲು ಎದುರಿಸುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತ ಕಾರಣ ಮುಖ್ಯಮಂತ್ರಿ ಹುದ್ದೆಯ ರೇಸ್‌ನಿಂದ ದೂರ ಉಳಿಯಬೇಕಾಗಿ ಬಂದಿದ್ದ ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ, ಈ ಸಲ ಗೆಲುವಿಗೆ ಶತಾಯಗತಾಯ ಪ್ರಯತ್ನ ಮಾಡಬೇಕಾಗಿದೆ. ಹೈದರಾಬಾದ್‌–ಕರ್ನಾಟಕ ಭಾಗದ ನಾಯಕ ಮಲ್ಲಿಕಾರ್ಜುನ ಖರ್ಗೆ, ತಮ್ಮ ಪುತ್ರ ಪ್ರಿಯಾಂಕ್‌ ಖರ್ಗೆ ಅವರನ್ನು ಗೆಲ್ಲಿಸಲು ಹೆಚ್ಚಿನ ಪರಿಶ್ರಮ ವಹಿಸಬೇಕಾಗಿದೆ.

ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ವರುಣಾ ಕ್ಷೇತ್ರದಲ್ಲಿ ಕೆಜೆಪಿಯ ಕಾಪು ಸಿದ್ಧಲಿಂಗಸ್ವಾಮಿ ಅವರ ಎದುರು 29,641 ಮತಗಳ ಅಂತರದಿಂದ ಗೆದ್ದಿದ್ದರು. ಅಲ್ಲಿ ಈ ಬಾರಿ ಪುತ್ರ ರಾಕೇಶ್‌ ಅವರನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಿದ್ದರು.‌ ಅವರ ಅಕಾಲಿಕ ಮರಣದ ನಂತರ ಇನ್ನೊಬ್ಬ ಪುತ್ರ ಡಾ. ಯತೀಂದ್ರ ಅವರನ್ನು ಉತ್ತರಾಧಿಕಾರಿಯನ್ನಾಗಿ ಬೆಳೆಸುವ ಇರಾದೆ ಸಿದ್ದರಾಮಯ್ಯ ಅವರದು. ಬಿಜೆಪಿಯು ಬಿ.ಎಸ್‌. ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಅವರನ್ನು ವರುಣಾದಲ್ಲಿ ಕಣಕ್ಕಿಳಿಸಲು ಮುಂದಾಗಿರುವುದರಿಂದ ಈ ಕ್ಷೇತ್ರದ ಹಣಾಹಣಿ ಕುತೂಹಲ ಕೆರಳಿಸಿದೆ. ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸುವುದಾಗಿ ಸಿದ್ದರಾಮಯ್ಯ ಹೇಳಿಕೊಂಡು ಬರುತ್ತಿದ್ದಾರೆ. ಇಲ್ಲಿ ಐದುಬಾರಿ ಗೆದ್ದು, ಎರಡು ಬಾರಿ ಸೋತಿದ್ದರು. ಜೆಡಿಎಸ್‌ಗೆ ರಾಜೀನಾಮೆ ನೀಡಿ ಕಾಂಗ್ರೆಸ್‌ ಸೇರಿದ ಬಳಿಕ, 2006ರಲ್ಲಿ ಇಲ್ಲಿ ನಡೆದ ಉಪಚುನಾವಣೆಯಲ್ಲಿ ಕೇವಲ 257 ಮತಗಳಿಂದ ಗೆದ್ದಿದ್ದರು. ಕ್ಷೇತ್ರ ಮರು ವಿಂಗಡಣೆ ಬಳಿಕ ವರುಣಾದತ್ತ ಮುಖಮಾಡಿದ್ದರು.

ಇಲ್ಲಿ ಸಿದ್ದರಾಮಯ್ಯ ಅವರಿಗೆ ಸೋಲಿನ ರುಚಿ ತೋರಿಸಲು ವಿರೋಧ ಪಕ್ಷಗಳೆಲ್ಲ ಒಂದಾಗಿ ಕೆಲಸ ಮಾಡುತ್ತಿವೆ. ಒಂದು ಕಾಲದಲ್ಲಿ ಅವರಿಗೆ ಆಪ್ತರಾಗಿದ್ದ ಎಚ್‌.ವಿಶ್ವನಾಥ್‌ ಹಾಗೂ ವಿ.ಶ್ರೀನಿವಾಸ ಪ್ರಸಾದ್‌ ಈಗ ಅವರ ವಿರುದ್ಧವೇ ಕತ್ತಿ ಮಸೆಯುತ್ತಿದ್ದಾರೆ. ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಹಾಗೂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯ ‘ಮೀಸೆ ಮಣ್ಣಾಗುವಂತೆ’ ಮಾಡಲು ತಂತ್ರ ಹೆಣೆಯುತ್ತಿದ್ದಾರೆ. ಗೆದ್ದುಬರಬೇಕಾದರೆ ಸಿದ್ದರಾಮಯ್ಯ ಇವನ್ನೆಲ್ಲ ಮೆಟ್ಟಿ ನಿಲ್ಲಬೇಕಾಗಿದೆ.

ಪರಮೇಶ್ವರ ಅವರಿಗೂ ಗೆಲುವಿನ ಹಾದಿ ಸುಲಭವೇನಲ್ಲ. ಕೊರಟಗೆರೆ ಕ್ಷೇತ್ರದಲ್ಲಿ 2008ರಲ್ಲಿ ಗೆದ್ದು ಬಂದಿದ್ದ ಅವರು, 2013ರಲ್ಲಿ ಜೆಡಿಎಸ್‌ನ ಪಿ.ಆರ್‌. ಸುಧಾಕರ ಲಾಲ್‌ ಅವರ ವಿರುದ್ಧ 18,155 ಮತಗಳ ಅಂತರದಿಂದ ಸೋಲು ಕಂಡಿದ್ದರು. ಈ ಬಾರಿ ಗೆಲುವಿಗಾಗಿ ಅವರು ಕ್ಷೇತ್ರದಲ್ಲಿ ಹೆಚ್ಚಿನ ಬೆವರು ಸುರಿಸಬೇಕಾಗಿದೆ.

ಪ್ರಿಯಾಂಕ್‌ ಖರ್ಗೆ 2013ರಲ್ಲಿ ಚಿತ್ತಾಪುರ ಕ್ಷೇತ್ರದಲ್ಲಿ ಬಿಜೆಪಿಯ ವಾಲ್ಮೀಕಿ ನಾಯಕ್‌ ಅವರ ವಿರುದ್ಧ 31,191 ಮತಗಳ ಅಂತರದಿಂದ ಗೆದ್ದಿದ್ದರು. ಆದರೆ, ಇಲ್ಲೀಗ ರಾಜಕೀಯ ಸಮೀಕರಣ ಬದಲಾಗಿದೆ. ಕಾಂಗ್ರೆಸ್‌ ನಂಟು ಕಡಿದುಕೊಂಡು ಬಿಜೆಪಿ ಸೇರಿರುವ ಮಾಲೀಕಯ್ಯ ಗುತ್ತೇದಾರ, ‘ಖರ್ಗೆ ಪುತ್ರನಿಗೆ ಸೋಲಿನ ರುಚಿ ತೋರಿಸುವುದೇ ನನ್ನ ಗುರಿ’ ಎಂದು ಗುಡುಗಿದ್ದಾರೆ. ಇನ್ನೊಂದೆಡೆ, ಖರ್ಗೆ ಪರಮಾಪ್ತರಾಗಿದ್ದ ಪ್ರಭಾವಿ ನಾಯಕ ಧರ್ಮಸಿಂಗ್‌ ಅನು‍‍ಪಸ್ಥಿತಿಯ ಕೊರತೆಯೂ ಈ ಭಾಗದಲ್ಲಿದೆ. ಈ ಬೆಳವಣಿಗೆಗಳ ನಡುವೆ ಪುತ್ರನ ರಾಜಕೀಯ ಭವಿಷ್ಯ ಮಂಕಾಗದಂತೆ ನೋಡಿಕೊಳ್ಳಬೇಕಾದರೆ ಖರ್ಗೆ ಇಲ್ಲಿ ಹೆಚ್ಚಿನ ಪರಿಶ್ರಮ ಹಾಕಬೇಕಾಗುತ್ತದೆ.

‘ಈ ಎಲ್ಲ ಕಾರಣಗಳಿಂದ ರಾಜ್ಯದಾದ್ಯಂತ ಓಡಾಡಿ ಕಾಂಗ್ರೆಸ್‌ ಕಡೆಗೆ ಮತ ಸೆಳೆಯಲು ಈ ಮೂವರು ನಾಯಕರು ಪೂರ್ಣ ಪ್ರಮಾಣದಲ್ಲಿ ತೊಡಗಿಕೊಳ್ಳುವುದು ಕಷ್ಟ. ಹೀಗಾಗಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತಂದು, ಪ್ರಧಾನಿ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ‘ಉತ್ತರ’ ನೀಡಬೇಕಾದರೆ ರಾಹುಲ್ ಅವರೇ ಪ್ರಚಾರದ ಸಾರಥ್ಯ ವಹಿಸಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ. ಇದನ್ನು ಪಕ್ಷದ ರಾಜ್ಯ ವರಿಷ್ಠರು, ರಾಹುಲ್‌ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ’ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.