ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಲು ದಾರಿಯಲ್ಲಿ ಶೈಕ್ಷಣಿಕ ವ್ಯವಸ್ಥೆ

ವ್ಶವಸ್ಥೆ ಸುಧಾರಣೆಗೆ ರಾಜಕೀಯ ಇಚ್ಛಾಶಕ್ತಿ ತೋರದ ಪಕ್ಷಗಳು
Last Updated 14 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಶಿಕ್ಷಣ ಎಂದ ಕೂಡಲೇ ಈಗ ಹಲವರಿಗೆ ತಟ್ಟನೆ ನೆನಪಾಗುವುದು ದುಬಾರಿ ಶುಲ್ಕ, ಮಗುವಿಗೆ ಸೀಟು ಕೊಡಿಸಲು ಮಾಡುವ ಹರಸಾಹಸ, ಖಾಸಗಿ ಶಾಲೆಗಳ ಸುಲಿಗೆ. ಅಂಗಡಿಗಳಲ್ಲಿ ಸಿಗುವ ದಿನಸಿ, ತರಕಾರಿಗಳಂತೆ ಶಿ‌ಕ್ಷಣವು ಈಗ ಮಾರಾಟದ ಸರಕಾಗಿದ್ದು, ಪವಿತ್ರವಾದ ಜ್ಞಾನದೇಗುಲದ ಸ್ಥಾನದಲ್ಲಿ ಇರಬೇಕಾಗಿದ್ದ ಶಾಲೆಗಳು ವ್ಯಾಪಾರಿ ಕೇಂದ್ರಗಳಾಗಿವೆ. ಶಿಕ್ಷಣ ಇಂದು ಸೇವೆಯಾಗಿ ಉಳಿದಿಲ್ಲ. ಮೌಲ್ಯಗಳಿಗೆ ತಿಲಾಂಜಲಿ ನೀಡಿರುವ ಖಾಸಗಿಯವರು, ಲಾಭ ಗಳಿಸುವುದನ್ನೇ ಮುಖ್ಯ ಗುರಿಯಾಗಿಸಿಕೊಂಡಿದ್ದಾರೆ.

ಹಿಂದೆ ಸಮಾಜ ಸೇವೆ ಹೆಸರಿನಲ್ಲಿ ಮಠಗಳು, ಟ್ರಸ್ಟ್‌ಗಳು ಶಾಲೆಗಳನ್ನು ಆರಂಭಿಸಿದ್ದವು. ಆದರೆ, ಈಚಿನ ವರ್ಷಗಳಲ್ಲಿ ವ್ಯಾಪಾರ ಮನೋಭಾವವುಳ್ಳವರು ಶಾಲೆಗಳನ್ನು ತೆರೆಯುತ್ತಿದ್ದಾರೆ. ಶಿಕ್ಷಣದ ಬಗ್ಗೆ ಗಂಧಗಾಳಿಯೂ ಗೊತ್ತಿಲ್ಲದ ರಾಜಕಾರಣಿಗಳು, ಉದ್ಯಮಿಗಳು, ಮಠಾಧೀಶರು ಶಿಕ್ಷಣಸಂಸ್ಥೆಗಳ ಒಡೆಯರಾಗಿರುವುದರಿಂದ ‘ಬಿಡ್’ನಲ್ಲಿ ಸೀಟುಗಳು ಮಾರಾಟವಾಗುತ್ತಿವೆ. ಪ್ರತಿಷ್ಠಿತ ಎಂಬ ಹಣೆಪಟ್ಟಿ ಹಚ್ಚಿಕೊಂಡಿರುವ ಖಾಸಗಿ ಶಾಲೆಯವರು, ಯಾರು ಹೆಚ್ಚು ಹಣ ಕೊಡುತ್ತಾರೋ ಅಂತಹವರಿಗೆ ಸೀಟು ನೀಡುತ್ತಾರೆ. ಹೀಗಾಗಿ, ಉಳ್ಳವರಿಗೆ ಮಾತ್ರ ಶಿಕ್ಷಣ ಎಂಬಂತಾಗಿದೆ ಎನ್ನುತ್ತಾರೆ ಶಿಕ್ಷಣ ತಜ್ಞರೊಬ್ಬರು.

ಶಿಕ್ಷಣ ಪದ್ಧತಿ ಕವಲುದಾರಿಯಲ್ಲಿದ್ದು, ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದೆ. ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ ನಮ್ಮದೇ ಆದ ಏಕರೂಪ ಶಿಕ್ಷಣ, ಶುಲ್ಕ, ಪ್ರವೇಶ ಪದ್ಧತಿ, ಬೋಧನಾ ವಿಧಾನ ಅಳವಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಬಹುತೇಕ ಖಾಸಗಿ ಶಾಲೆಗಳು ಮನಬಂದಂತೆ ಶುಲ್ಕ ವಸೂಲಿ ಮಾಡುತ್ತಿದ್ದು, ಅವುಗಳ ಮೇಲೆ ಸರ್ಕಾರಕ್ಕೆ ನಿಯಂತ್ರಣವೇ ಇಲ್ಲದಂತಾಗಿದೆ.

ಸರ್ಕಾರ ನಿಗದಿಪಡಿಸಿರುವ ಮಾನದಂಡಗಳನ್ನು ಆಧರಿಸಿ (ಬೋಧಕರು, ಬೋಧಕೇತರ ನೌಕರರ ಸಂಬಳಕ್ಕೆ ಮಾಡುವ ವೆಚ್ಚ, ನಿರ್ವಹಣಾ ವೆಚ್ಚ, ಒಟ್ಟು ವಿದ್ಯಾರ್ಥಿಗಳ ಸಂಖ್ಯೆ) ಪ್ರತಿಯೊಂದು ಶಾಲೆಯು ಶುಲ್ಕ ನಿಗದಿ ಮಾಡಬೇಕು. ಅಲ್ಲದೆ ಶೈಕ್ಷಣಿಕ ವರ್ಷದ ಆರಂಭದಲ್ಲೇ ಶುಲ್ಕದ ವಿವರಗಳನ್ನು ಸೂಚನಾ ಫಲಕದಲ್ಲಿ ಪ್ರಕಟಿಸಬೇಕು ಎಂದು 1983ರ ಶಿಕ್ಷಣ ಕಾಯ್ದೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ನಿಗದಿಗಿಂತ ಹೆಚ್ಚಿನ ಶುಲ್ಕವನ್ನು ಪೋಷಕರಿಂದ ವಸೂಲಿ ಮಾಡಿದರೆ ಅದರ ಹತ್ತು ಪಟ್ಟು ದಂಡ ವಿಧಿಸಲು ಶಿಕ್ಷಣ ಹಕ್ಕು ಕಾಯ್ದೆಯ ಸೆಕ್ಷನ್ 13ರಲ್ಲಿ ಅವಕಾಶವಿದೆ. ಆದರೆ, ಇದರ ಪಾಲನೆ ಆಗುತ್ತಿಲ್ಲ.

‘ಅಭಿವೃದ್ಧಿ ಶುಲ್ಕ, ಕಂಪ್ಯೂಟರ್ ಶುಲ್ಕ, ಪ್ರಯೋಗಾಲಯ ಶುಲ್ಕ, ಗ್ರಂಥಾಲಯ ಶುಲ್ಕ, ನವೀಕರಣ ಶುಲ್ಕ ಸೇರಿದಂತೆ ಬೇರೆ ಬೇರೆ ಹೆಸರಿನಲ್ಲಿ ಪ್ರತಿ ವರ್ಷ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಆದರೆ, ವಾಸ್ತವವಾಗಿ ಹೊಸ ಕಟ್ಟಡಗಳನ್ನು ಕಟ್ಟಿರುವುದಿಲ್ಲ. ಹೀಗಿರುವಾಗ ಯಾಕೆ ಅಭಿವೃದ್ಧಿ ಶುಲ್ಕ ವಸೂಲಿ ಮಾಡಬೇಕು’ ಎಂಬುದು ಪೋಷಕರೊಬ್ಬರು ಕೇಳುವ ಪ್ರಶ್ನೆ.

ಬಹುತೇಕ ಖಾಸಗಿ ಶಾಲೆಗಳು ಸರ್ಕಾರದ ಮಾನದಂಡಗಳಿಗೆ ಕವಡೆ ಕಾಸಿನ ಕಿಮ್ಮತ್ತು ನೀಡದೆ, ಅಧಿಕ ಪ್ರಮಾಣದಲ್ಲಿ ಶುಲ್ಕ ವಸೂಲಿ ಮಾಡುತ್ತಿವೆ. ನರ್ಸರಿಗೆ ಎರಡು ಲಕ್ಷ ರೂಪಾಯಿ ಶುಲ್ಕ ಪಡೆಯುವ ಕೆಲವು ಪ್ರತಿಷ್ಠಿತ ಶಾಲೆಗಳು ಅದಕ್ಕೆ ರಸೀದಿಯನ್ನೂ ನೀಡುತ್ತವೆ. ಆದರೆ, ಅಂತಹ ಶಾಲೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಧೈರ್ಯವನ್ನು ಇದುವರೆಗೆ ಯಾವ ಸರ್ಕಾರವೂ ಮಾಡಿಲ್ಲ.

‘ಪ್ರತಿಯೊಂದು ಶಾಲೆಯು ಸುಸಜ್ಜಿತ ಕಟ್ಟಡ, ಆಟದ ಮೈದಾನ, ಶೌಚಾಲಯ, ಗ್ರಂಥಾಲಯ, ಪ್ರಯೋಗಾಲಯ, ಕುಡಿಯುವ ನೀರು, ವಿದ್ಯುತ್ ಇತ್ಯಾದಿ ಮೂಲಸೌಕರ್ಯ ಹೊಂದಿರಬೇಕು. ತರಬೇತಿ ಹೊಂದಿದ ಶಿಕ್ಷಕರನ್ನು ನೇಮಕ ಮಾಡಿಕೊಂಡಿರಬೇಕು. ಇಲ್ಲದಿದ್ದರೆ ಮಾನ್ಯತೆ ನೀಡಬಾರದು ಎಂದು ಕಾಯ್ದೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಇಷ್ಟಾದರೂ, ಅಧಿಕ ಸಂಖ್ಯೆಯ ಶಾಲೆಗಳಲ್ಲಿ ಮೂಲಸೌಕರ್ಯಗಳು ಇಲ್ಲ. ಹೆಚ್ಚಿನ ಶಾಲೆಗಳು ರಾಜಕಾರಣಿಗಳು, ಮಠಾಧೀಶರ ಒಡೆತನದಲ್ಲಿ ಇದ್ದು, ಸರ್ಕಾರದ ಬುಡವನ್ನೇ ಅಲುಗಾಡಿಸುವಷ್ಟು ಬಲಾಢ್ಯವಾಗಿವೆ. ಹೀಗಾಗಿ, ಯಾವುದೇ ಸರ್ಕಾರ ಬಂದರೂ ಅವುಗಳ ನಿಯಂತ್ರಣಕ್ಕೆ ಮುಂದಾಗುತ್ತಿಲ್ಲ’ ಎನ್ನುತ್ತಾರೆ ಶಿಕ್ಷಣ ತಜ್ಞ ಡಾ. ವಿ.ಪಿ. ನಿರಂಜನಾರಾಧ್ಯ.

‘ಕ್ಷೇತ್ರ ಶಿಕ್ಷಣಾಧಿಕಾರಿಗಳು ತಪಾಸಣೆಗೆ ಹೋದರೆ, ಕಿರುಕುಳ ನೀಡುತ್ತಾರೆ ಎಂದು ಖಾಸಗಿ ಶಾಲೆಯವರು ಮಾಧ್ಯಮಗಳ ಮುಂದೆ ಹೋಗುತ್ತಾರೆ. ನಮ್ಮ ಶಾಲೆಯಲ್ಲಿ ಅವರಿಗೆ ಏನು ಕೆಲಸ ಎಂದು ಪ್ರಶ್ನೆ ಮಾಡುತ್ತಾರೆ. ಅಧಿಕಾರಿಗಳು ಶಾಲೆಯತ್ತ ತಲೆ ಹಾಕದಂತೆ ನೋಡಿಕೊಳ್ಳಿ’ ಎಂದು ಈಚೆಗೆ ಆಡಳಿತ ಮಂಡಳಿಯವರು ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ. ಈ ರೀತಿ ರಾಜಕೀಯ ಒತ್ತಡ ಇದ್ದಾಗ ಕೆಳ ಹಂತದ ಅಧಿಕಾರಿಗಳು ಸ್ವತಂತ್ರವಾಗಿ ಕೆಲಸ ನಿರ್ವಹಿಸಲು ಸಾಧ್ಯವೇ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.

ಹಿಂದೆ ಜಿಲ್ಲಾಮಟ್ಟದ ನೇಮಕಾತಿ ಸಮಿತಿಗಳ (ಡಿಎಲ್ಆರ್‌ಸಿ) ಮೂಲಕ ಶಿಕ್ಷಕರ ನೇಮಕವಾಗುತ್ತಿತ್ತು. ಆ ಸಮಿತಿಯಲ್ಲಿ ಅಧಿಕಾರಿಗಳು, ಅಧಿಕಾರೇತರ ಸದಸ್ಯರು ಇರುತ್ತಿದ್ದರು. ಅಧಿಕಾರೇತರರು ಸೂಚಿಸಿದವರನ್ನು ನೇಮಕ ಮಾಡದೆ ಇದ್ದರೆ, ಸಚಿವರು, ಶಾಸಕರ ಮೇಲೆ ಒತ್ತಡ ತಂದು ಡಿಡಿಪಿಐಗಳನ್ನು ಅಮಾನತು ಮಾಡಿಸುತ್ತಿದ್ದರು. ಪಾರದರ್ಶಕವಾಗಿ ಶಿಕ್ಷಕರ ನೇಮಕಾತಿ ಆಗುತ್ತಿರಲಿಲ್ಲ. ಯಾವುದೇ ತಪ್ಪು ಮಾಡದೆ ಇದ್ದರೂ, ಅಧಿಕಾರಿಗಳು ಅಮಾನತಿನ ಶಿಕ್ಷೆಗೆ ಒಳಗಾಗುತ್ತಿದ್ದರು. ಈ ವಿಷಯವನ್ನು ಆಗ ಶಿಕ್ಷಣ ಸಚಿವರಾಗಿದ್ದ ಎಚ್.ಜಿ. ಗೋವಿಂದೇಗೌಡ ಅವರ ಗಮನಕ್ಕೆ ತಂದು, ಶಿಕ್ಷಕರ ನೇಮಕಾತಿ ವಿಧಾನದಲ್ಲಿ ಬದಲಾವಣೆ ತರಬೇಕು. ಸಂಯುಕ್ತ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಶಿಕ್ಷಕರನ್ನು ಆಯ್ಕೆ ಮಾಡುವುದು ಒಳ್ಳೆಯದು ಎಂದು ಸಲಹೆ ನೀಡಲಾಯಿತು. ಅದಕ್ಕೆ ಸಚಿವರು ಒಪ್ಪಿದರು. ಆದರೆ, ಬಹುತೇಕ ಶಾಸಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ದೇವೇಗೌಡ ಅವರು ಶಾಸಕರ ವಿರೋಧ ಎದುರಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಆರಂಭದಲ್ಲಿ ಇದಕ್ಕೆ ಒಪ್ಪಿಗೆ ನೀಡಲಿಲ್ಲ. ಆದರೆ, ಸುಧಾರಣೆ ತರಲು ಅವಕಾಶ ನೀಡದೆ ಇದ್ದರೆ ಅಧಿಕಾರದಲ್ಲಿ ಮುಂದುವರಿಯುವುದಿಲ್ಲ ಎಂದು ಗೋವಿಂದೇಗೌಡರು ರಾಜೀನಾಮೆ ಪತ್ರ ನೀಡಿದರು. ಆಗ ಅವರನ್ನು ಸಮಾಧಾನಪಡಿಸಿದ ದೇವೇಗೌಡ, ಶಾಸಕರು ಹಾಗೂ ಸಂಪುಟ ಸಹೋದ್ಯೋಗಿಗಳ ಮನವೊಲಿಸಿ ಶಿಕ್ಷಕರ ನೇಮಕಾತಿ ವಿಧಾನದಲ್ಲಿ ಬದಲಾವಣೆ ತರಲು ಅವಕಾಶ ಮಾಡಿಕೊಟ್ಟರು. ಆಗ ಒಂದು ಲಕ್ಷ ಶಿಕ್ಷಕರ ನೇಮಕವಾಯಿತು. ಆ ರೀತಿ ರಾಜಕೀಯ ಇಚ್ಛಾಶಕ್ತಿ ಇದ್ದರೆ ಮಾತ್ರ ಸುಧಾರಣೆ ತರಲು ಸಾಧ್ಯ ಎನ್ನುತ್ತಾರೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು.

ಮೂಲಸೌಕರ್ಯ: ‌ಭಾರತದಲ್ಲಿ ಪ್ರಾಥಮಿಕ ಶಾಲೆಗಳು ಗುಡಿಸಲಿನಂತೆ, ಪ್ರೌಢಶಾಲೆಗಳು ಕುಸಿದುಬಿದ್ದ ಮಣ್ಣಿನ ಗೋಡೆಗಳಂತೆ ಹಾಗೂ ಕಾಲೇಜುಗಳು ಕಾಂಕ್ರೀಟ್‌ ಕಟ್ಟಡಗಳಂತೆ ಇವೆ ಎಂದು ತತ್ವಜ್ಞಾನಿ ಎಮರ್ಸನ್ ಹಲವು ವರ್ಷಗಳ ಹಿಂದೆಯೇ ಹೇಳಿದ್ದರು. ಅವರ ಮಾತಿನಲ್ಲಿ ಸತ್ಯಾಂಶವಿದೆ ಎಂಬುದು ಶಾಲೆಗಳನ್ನು ನೋಡಿದರೆ ಗೊತ್ತಾಗುತ್ತದೆ. ಕೆಲ ಶಾಲೆಗಳಿಗೆ ಕಟ್ಟಡಗಳೇ ಇಲ್ಲ. ಕೆಲವು ಶಾಲೆಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. ಇನ್ನೂ ಕೆಲವು ಬಾಡಿಗೆರಹಿತ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. 2016-17ರ ಅಂಕಿಅಂಶಗಳ ಪ್ರಕಾರ, ಸರ್ಕಾರದ ಬೇರೆ ಬೇರೆ ಇಲಾಖೆಗಳ ಅಥವಾ ದಾನಿಗಳು ನೀಡಿರುವ ಕಟ್ಟಡಗಳ ಮೇಲೆ ಅವಲಂಬಿತವಾಗಿರುವ ಶಾಲೆಗಳ ಸಂಖ್ಯೆ 1,177. ಇದರಲ್ಲಿ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳೂ ಸೇರಿವೆ.

ಎಲ್ಲ ರೀತಿಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ದಾಖಲೆಗಳಲ್ಲಿ ತೋರಿಸುತ್ತಾರೆ. ಆದರೆ, ವಾಸ್ತವವಾಗಿ ನೋಡಿದರೆ ಕಟ್ಟಡಗಳೇ ಇರುವುದಿಲ್ಲ. ಎಲ್ಲಿ ಅಗತ್ಯವಿಲ್ಲವೋ ಅಂತಹ ಕಡೆ ಪಂಚಾಯಿತಿಯವರು ಕಟ್ಟಡಗಳನ್ನು ಕಟ್ಟಿರುತ್ತಾರೆ. ಶೌಚಾಲಯ, ಪ್ರಯೋಗಾಲಯ, ಕುಡಿಯುವ ನೀರು, ತರಗತಿಗೊಬ್ಬ ಶಿಕ್ಷಕರು ಇರುವುದಿಲ್ಲ. ಆದರೆ, ಖಾಸಗಿ ಶಾಲೆಗಳಲ್ಲಿ ತರಗತಿಗೊಬ್ಬ ಶಿಕ್ಷಕರಿದ್ದಾರೆ. ಶಾಲೆ ಆರಂಭಕ್ಕೂ ಮೊದಲೇ ಪುಸ್ತಕ, ಸಮವಸ್ತ್ರ ಸಿಗುತ್ತವೆ. ಮಕ್ಕಳ ಬಗ್ಗೆ ಕಾಳಜಿ ಮಾಡುವವರೂ ಇದ್ದಾರೆ. ಹೀಗಾಗಿ, ಬಡವರು ಸಹ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸಲು ಮುಂದಾಗುತ್ತಿದ್ದಾರೆ ಎಂಬುದು ಈಗಿರುವ ವಾಸ್ತವ ಸ್ಥಿತಿ.

ಸಮಗ್ರತೆಯ ಕೊರತೆ: ಸರ್ಕಾರಿ ಶಾಲೆಗಳು ಹಾಗೂ ಕೆಲವು ಖಾಸಗಿ ಶಾಲೆಗಳಲ್ಲಿ ರಾಜ್ಯ ಪಠ್ಯಕ್ರಮ ಜಾರಿಯಲ್ಲಿದ್ದರೆ, ಬಹುತೇಕ ಖಾಸಗಿ ಶಾಲೆಗಳಲ್ಲಿ ಸಿಬಿಎಸ್ಇ ಪಠ್ಯಕ್ರಮ, ಐಸಿಎಸ್ಇ ಪಠ್ಯಕ್ರಮ ಬೋಧಿಸಲಾಗುತ್ತಿದೆ. ರಾಜ್ಯದಲ್ಲಿ ಅಧಿಕ ಸಂಖ್ಯೆಯಲ್ಲಿ ಸರ್ಕಾರಿ ಶಾಲೆಗಳಿದ್ದು, ಅಲ್ಲಿ ಓದುತ್ತಿರುವ ಮಕ್ಕಳು ರಾಜ್ಯ ಪಠ್ಯಕ್ರಮದಲ್ಲಿ ಕಲಿಯುತ್ತಿದ್ದಾರೆ. ಒಂದರಿಂದ 7ನೇ ತರಗತಿವರೆಗೆ ಪದವಿಯೇತರ ಶಿಕ್ಷಕರು ಬೋಧಿಸುತ್ತಿದ್ದರೆ, 8ರಿಂದ 10ನೇ ತರಗತಿವರೆಗೆ ಪದವೀಧರ ಶಿಕ್ಷಕರು ಬೋಧಿಸುತ್ತಿದ್ದಾರೆ. ಆದರೆ, ಸಿಬಿಎಸ್ಇ ಪಠ್ಯಕ್ರಮ ಇರುವ ಶಾಲೆಗಳು ಹಾಗೂ ಕೇಂದ್ರೀಯ ವಿದ್ಯಾಲಯಗಳಲ್ಲಿ 6ರಿಂದ 8ನೇ ತರಗತಿವರೆಗೆ ಪದವೀಧರ ಶಿಕ್ಷಕರು ಹಾಗೂ 9ರಿಂದ 12ನೇ ತರಗತಿವರೆಗೆ ಸ್ನಾತಕೋತ್ತರ ಪದವೀಧರ ಶಿಕ್ಷಕರು ಬೋಧಿಸುತ್ತಾರೆ.

ನಮ್ಮ ಶೈಕ್ಷಣಿಕ ನೀತಿಯಲ್ಲಿ ಸಮಗ್ರತೆಯ ಕೊರತೆ ಎದ್ದು ಕಾಣುತ್ತಿದೆ. ಪ್ರಾಥಮಿಕ, ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಹಂತಗಳು ಪರಸ್ಪರ ಪೂರಕವಾಗುವ ಬದಲು, ಬಿಡಿಬಿಡಿಯಾಗಿ ಕಾರ್ಯನಿರ್ವಹಿಸುತ್ತಿವೆ.

ಸಿಬಿಎಸ್ಇಯಲ್ಲಿ 1ರಿಂದ 5, 6ರಿಂದ 8 ಹಾಗೂ 9ರಿಂದ 12ನೇ ತರಗತಿವರೆಗಿನ ಪಠ್ಯಕ್ರಮಗಳು ಒಂದಕ್ಕೊಂದು ಪೂರಕವಾಗಿವೆ. ಆದರೆ, ರಾಜ್ಯ ಪಠ್ಯಕ್ರಮದಲ್ಲಿ ಕಲಿಕೆಯ ಸರಪಳಿ 10ನೇ ತರಗತಿಗೆ ಮುಕ್ತಾಯವಾಗುತ್ತದೆ. ಪ್ರಥಮ ಪಿಯುಸಿಯಿಂದ ಹೊಸದಾಗಿ ಹೇಳಿಕೊಡಬೇಕಾಗುತ್ತದೆ. ಪಠ್ಯಕ್ರಮದಲ್ಲಿನ ವ್ಯತ್ಯಾಸದಿಂದಾಗಿ ಮುಂದೆ ಪ್ರವೇಶ ಪರೀಕ್ಷೆ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ.

ದಡ್ಡ ಅನ್ನುತ್ತಾರೆ: ಅಮೆರಿಕದಲ್ಲಿ ಸರ್ಕಾರಿ ಶಾಲೆಗಳಿಗೆ ಇರುವಷ್ಟು ಮರ್ಯಾದೆ ಖಾಸಗಿ ಶಾಲೆಗಳಿಗೆ ಇಲ್ಲ. ಅಲ್ಲಿ ಕೌಂಟಿ ಶಾಲೆಗಳಿದ್ದು (ಪಬ್ಲಿಕ್ ಶಾಲೆ) ಎಲ್ಲ ಮಕ್ಕಳೂ ಅಲ್ಲಿಗೇ ಹೋಗುತ್ತಾರೆ. ಶುಲ್ಕ ಕೊಟ್ಟು ಖಾಸಗಿ ಶಾಲೆಗೆ ಹೋದರೆ ದಡ್ಡ ಇರಬೇಕು ಎಂದುಕೊಳ್ಳುತ್ತಾರೆ! ಆದರೆ, ನಮ್ಮಲ್ಲಿ ಅದಕ್ಕೆ ತದ್ವಿರುದ್ಧವಾದ ಪರಿಸ್ಥಿತಿ ಇದೆ. ರಾಜ್ಯದ ಎಲ್ಲ ಕಡೆ ಸರ್ಕಾರಿ ಶಾಲೆಗಳಿವೆ. ಪುಸ್ತಕ, ಸಮವಸ್ತ್ರ, ಶೂ, ಬಿಸಿಯೂಟ, ಹಾಲು, 8ನೇ ತರಗತಿ ಮಕ್ಕಳಿಗೆ ಸೈಕಲ್ ಸೇರಿದಂತೆ ಅನೇಕ ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಶಿಕ್ಷಕರು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆಯಾಗಿದ್ದು, ಖಾಸಗಿ ಶಾಲೆಗಳ ಶಿಕ್ಷಕರಿಗಿಂತ ಹೆಚ್ಚಿನ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ.

ಇಷ್ಟಾದರೂ ಗುಣಮಟ್ಟ ಯಾಕೆ ಇಲ್ಲ ಎಂಬ ಬಗ್ಗೆ ಸರ್ಕಾರ ಆತ್ಮಾವಲೋಕನ ಮಾಡಿಕೊಳ್ಳಬೇಕು. ಶಿಕ್ಷಕರಲ್ಲಿ ಬದ್ಧತೆಯ ಕೊರತೆ ಇದೆ. ಅವರಿಗೆ ಗುರಿ ನಿಗದಿಪಡಿಸಿ ಆ ಪ್ರಕಾರ ಕೆಲಸ ಮಾಡಿಸದೆ ಇರುವುದರಿಂದ ಬಿಗಿ ಇಲ್ಲದಂತಾಗಿದೆ.

ಖಾಸಗಿ ಶಾಲೆಗಳನ್ನು ಪ್ರಾರಂಭಿಸುವಾಗ ಅನುಸರಿಸಬೇಕಾದ ಮಾನದಂಡಗಳು, ಹೊಂದಿರಬೇಕಾದ ಮೂಲಸೌಕರ್ಯ, ಎಷ್ಟು ಶುಲ್ಕ ವಸೂಲಿ ಮಾಡಬೇಕು, ಯಾವ ಭಾಷೆ, ಮಾಧ್ಯಮದಲ್ಲಿ ಬೋಧಿಸಬೇಕು ಎಂಬ ಬಗ್ಗೆ 1983ರ ಶಿಕ್ಷಣ ಕಾಯ್ದೆ ಹಾಗೂ ಶಿಕ್ಷಣ ಹಕ್ಕು ಕಾಯ್ದೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಮುಂದೆ ಅಧಿಕಾರಕ್ಕೆ ಬರುವವರು ಯಾವುದೇ ಒತ್ತಡಗಳಿಗೆ ಮಣಿಯದೆ ಕಾಯ್ದೆಯಲ್ಲಿನ ನಿಯಮಾವಳಿಗಳನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಿದರೆ ಈಗಿರುವ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎನ್ನುತ್ತಾರೆ ಅಧಿಕಾರಿಗಳು.

**

‘ ಸರ್ಕಾರಿ ಶಾಲೆಗಳ ಬಗ್ಗೆ ಯೋಚಿಸುವವರೇ ಇಲ್ಲ’

‘ನಮ್ಮಲ್ಲಿ ಶೈಕ್ಷಣಿಕ ಸ್ವಾಯತ್ತತೆ ಇಲ್ಲ. ಪಠ್ಯಪುಸ್ತಕ ಬದಲಾವಣೆ, ವರ್ಗಾವಣೆ, ನೇಮಕಾತಿ ಸೇರಿದಂತೆ ಪ್ರಮುಖ ನಿರ್ಧಾರಗಳನ್ನು ವಿಧಾನಸೌಧದಲ್ಲಿ ಕುಳಿತ ರಾಜಕಾರಣಿಗಳು, ಐಎಎಸ್ ಅಧಿಕಾರಿಗಳು ತೆಗೆದುಕೊಳ್ಳುತ್ತಾರೆ.

ಇದು ಸರಿಯಲ್ಲ. ಶಿಕ್ಷಣ ಹಕ್ಕು ಕಾಯ್ದೆಯ ಸೆಕ್ಷನ್ 29ರ ಪ್ರಕಾರ, ಪಠ್ಯಕ್ರಮ ಜಾರಿಗೆ ಶೈಕ್ಷಣಿಕ ಪ್ರಾಧಿಕಾರ ರಚನೆ ಆಗಬೇಕು. ತಜ್ಞರನ್ನು ಒಳಗೊಂಡ ಪ್ರಾಧಿಕಾರವೇ ಪಠ್ಯಕ್ರಮ ವಿಷಯದಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕು. ಆದರೆ, ಆ ರೀತಿ ಆಗುತ್ತಿಲ್ಲ. ಮುಂದಿನ ವರ್ಷದಿಂದ ಪ್ರೌಢಶಾಲಾ ಮಟ್ಟದಲ್ಲಿ ಸಿಬಿಎಸ್ಇ ಪಠ್ಯಕ್ರಮ ಜಾರಿ ಮಾಡುತ್ತೇವೆ ಎಂದು ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳು ಹೇಳಿಕೆ ನೀಡಿದರೆ, ಅಂತಹ ಪ್ರಸ್ತಾವ ಇಲ್ಲ ಎಂದು ಶಿಕ್ಷಣ ಸಚಿವರು ಹೇಳುತ್ತಾರೆ. ಇಂತಹ ಪ್ರಮುಖ ತೀರ್ಮಾನಗಳನ್ನು ತಜ್ಞರ ಸಮಿತಿ ತೆಗೆದುಕೊಳ್ಳಬೇಕಾಗುತ್ತದೆ. ಆದರೆ, ತಜ್ಞರ ಮಾತಿಗೆ ಕಿಮ್ಮತ್ತು ನೀಡದೆ ಶೇ 90ರಷ್ಟು ನಿರ್ಧಾರಗಳನ್ನು ರಾಜಕಾರಣಿಗಳು, ಅಧಿಕಾರಿಗಳು ತೆಗೆದುಕೊಳ್ಳುತ್ತಿದ್ದಾರೆ. ‌ಸರ್ಕಾರಿ ಶಾಲೆಗಳ ಬಗ್ಗೆ ಯೋಚನೆ ಮಾಡುವವರೇ ಇಲ್ಲ’ ಎನ್ನುತ್ತಾರೆ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಟಿ.ಎಂ. ಕುಮಾರ್.

ಶಿಕ್ಷಣದ ಬಲವರ್ಧನೆಗೆ ಕಾರ್ಯಯೋಜನೆ ಅಗತ್ಯ.

ಎಸ್ಎಸ್ಎಲ್‌ಸಿಗೆ ಬಂದಾಗಷ್ಟೇ ಗಮನಹರಿಸುವ ಬದಲು, ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಹಂತದಲ್ಲಿಯೇ ಮಕ್ಕಳ ಕಲಿಕೆಯತ್ತ ವಿಶೇಷ ಗಮನ ಹರಿಸಬೇಕು. ಮೂಲ ಅವಶ್ಯಕತೆಗಳು ಏನು ಎಂಬುದನ್ನು ಅರ್ಥ ಮಾಡಿಕೊಂಡು 6ನೇ ತರಗತಿಯಿಂದ ಇಂಗ್ಲಿಷ್, ಗಣಿತ, ವಿಜ್ಞಾನ ವಿಷಯಗಳಿಗೆ ಆದ್ಯತೆ ನೀಡಬೇಕು. ಕೌಶಲ, ಗುಣಮಟ್ಟ ಸುಧಾರಣೆಗೂ ಒತ್ತು ನೀಡಬೇಕು. ಆಗ ಸುಧಾರಣೆ ತರಲು ಸಾಧ್ಯ ಎನ್ನುತ್ತಾರೆ ಮತ್ತೊಬ್ಬ ನಿವೃತ್ತ ಅಧಿಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT