ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಮಹಿಳಾ ತಂಡಕ್ಕೆ ನಾಲ್ಕನೇ ಸ್ಥಾನ

ಹಾಕಿ: ಇಂಗ್ಲೆಂಡ್ ಎದುರು ಒಂದೂ ಗೋಲು ಗಳಿಸಲಾಗದ ರಾಣಿ ಬಳಗಕ್ಕೆ ನಿರಾಸೆ
Last Updated 14 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಗೋಲ್ಡ್‌ ಕೋಸ್ಟ್‌: ಇಂಗ್ಲೆಂಡ್‌ ತಂಡದ ಸಮರ್ಥ ಆಟಕ್ಕೆ ಕಕ್ಕಾಬಿಕ್ಕಿಯಾದ ಭಾರತದ ಮಹಿಳಾ ಹಾಕಿ ತಂಡದವರು ಕಾಮನ್‌ವೆಲ್ತ್ ಕ್ರೀಡಾಕೂಟದ ಹಾಕಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡರು.

ಶನಿವಾರ ನಡೆದ ಕಂಚಿನ ಪದಕದ ಪಂದ್ಯದಲ್ಲಿ ಇಂಗ್ಲೆಂಡ್‌ 6–0ಯಿಂದ ರಾಣಿ ರಾಂಪಾಲ್‌ ಬಳಗವನ್ನು ಮಣಿಸಿತು. ಗುಂಪು ಹಂತದ ಪಂದ್ಯದಲ್ಲಿ ಇದೇ ತಂಡವನ್ನು 2–1ರಿಂದ ಮಣಿಸಿದ ಭಾರತ ಶನಿವಾರ ಐದು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಕೈಚೆಲ್ಲಿತು. ಅಂತಿಮ ಕ್ವಾರ್ಟರ್‌ನಲ್ಲಿ ಭಾರಿ ಒತ್ತಡಕ್ಕೆ ಸಿಲುಕಿತು.

ಇಂಗ್ಲೆಂಡ್‌ನ ಸೋಫಿ ಗ್ರೇ ಅಮೋಘ ಆಟವಾಡಿ ಮೂರು ಗೋಲುಗಳನ್ನು ಗಳಿಸಿದರೆ ಲಾರಾ ಅನ್ಸ್‌ವರ್ಥ್‌, ಹೋಲಿ ಪೀರ್ನೆ ವೆಬ್‌ ಮತ್ತು ನಾಯಕಿ ಅಲೆಕ್ಸಾಂಡರ್‌ ಡನ್ಸನ್‌ ತಲಾ ಒಂದೊಂದು ಗೋಲು ಗಳಿಸಿದರು.

ಭಾರತಕ್ಕೆ ಎಂಟನೇ ನಿಮಿಷದಲ್ಲಿ ಮೊದಲ ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತ್ತು. ಇದನ್ನು ಗೋಲಾಗಿ ಪರಿವರ್ತಿಸುವ ಪ್ರಯತ್ನದಲ್ಲಿ ಭಾರತ ಆಘಾತಕ್ಕೆ ಒಳಗಾಯಿತು. ಗುರುಜೀತ್‌ ಕೌರ್ ಹೊಡೆದ ಚೆಂಡು ಎದುರಾಳಿ ತಂಡದ ಆಟಗಾರ್ತಿಯ ಸ್ಟಿಕ್‌ಗೆ ಬಡಿದು ವಾಪಸ್ ಬಂದು ವಂದನಾ ಕಟಾರಿಯಾ ಅವರ ಹಣೆಗೆ ತಾಗಿತು. ಹೀಗಾಗಿ ಅವರು ಅಂಗಣ ಬಿಟ್ಟು ಹೊರನಡೆಯಬೇಕಾಯಿತು.

ಮುಂದಿನ ನಿಮಿಷದಲ್ಲಿ ಭಾರತಕ್ಕೆ ಮತ್ತೊಂದು ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತು. ಆದರೆ ಅದರ ಲಾಭ ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ.

ಮೂರು ನಿಮಿಷಗಳ ನಂತರ ಇಂಗ್ಲೆಂಡ್‌ಗೆ ಪೆನಾಲ್ಟಿ ಕಾರ್ನರ್‌ ಲಭಿಸಿತು. ಆದರೆ ತಂಡದ ಪ್ರಯತ್ನವನ್ನು ಭಾರತದ ಗೋಲ್‌ಕೀಪರ್‌ ವಿಫಲಗೊಳಿಸಿದರು. ರೋಚಕ ಹಣಾಹಣಿಗೆ ಸಾಕ್ಷಿಯಾದ ಮೊದಲ ಕ್ವಾರ್ಟರ್‌ನಲ್ಲಿ ಎರಡೂ ತಂಡಗಳಿಗೆ ಗೋಲು ಗಳಿಸಲು ಆಗಲಿಲ್ಲ.

ಎರಡನೇ ಕ್ವಾರ್ಟರ್ ಕೂಡ ಗೋಲು ಕಾಣದೆ ಅಂತ್ಯಗೊಳ್ಳುತ್ತದೆ ಎನ್ನುವಷ್ಟರಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್‌ನಲ್ಲಿ ಹೋಲಿ ವೆಬ್‌ ಮಿಂಚು ಹರಿಸಿದರು. ಅವರ ಬಲವಾದ ಹೊಡೆತವನ್ನು ತಡೆಯಲು ಗೋಲ್‌ ಕೀಪರ್ ಸವಿತಾಗೆ ಸಾಧ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT