ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯದ ಲಯ ಉಳಿಸಿಕೊಳ್ಳುವ ಸವಾಲು

ಬೆಂಗಳೂರಿನಲ್ಲಿ ವಿರಾಟ್‌ ಕೊಹ್ಲಿ – ಅಜಿಂಕ್ಯ ರಹಾನೆ ಮುಖಾಮುಖಿ ಇಂದು: ಮಿಂಚುವ ನಿರೀಕ್ಷೆಯಲ್ಲಿ ನಾಯಕ
Last Updated 14 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಶನಿವಾರ ಸಂಜೆ ಚಿನ್ನ ಸ್ವಾಮಿ ಕ್ರೀಡಾಂಗಣದ ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ವಿರಾಟ್ ಕೊಹ್ಲಿ ಹೊಡೆತಕ್ಕೆ ಚೆಂಡು ಐದಾರು ಬಾರಿ ಬೌಂಡರಿಗೆರೆ ದಾಟಿ ಬಿತ್ತು. ಅಭ್ಯಾಸ ವೀಕ್ಷಿಸಲು ಸೇರಿದ್ದ ನೂರಕ್ಕೂ ಹೆಚ್ಚು ಅಭಿಮಾನಿಗಳು ಸಂತಸದಿಂದ ಕುಣಿದಾಡಿದರು.

ಭಾನುವಾರ ಇಲ್ಲಿ ನಡೆಯುವ ರಾಜಸ್ಥಾನ್ ರಾಯಲ್ಸ್‌ ಎದುರಿನ ಪಂದ್ಯದಲ್ಲಿಯೂ ವಿರಾಟ್ ಹೀಗೆ ಬ್ಯಾಟಿಂಗ್ ಮಾಡಲಿ ಎಂದು ಹಾರೈಸಿದರು. ಅದಕ್ಕೆ ಕಾರಣ ಅವರು ಕಳೆದ ಎರಡೂ ಪಂದ್ಯಗಳಲ್ಲಿ ಹೆಚ್ಚು ರನ್‌ ಗಳಿಸಿಲ್ಲ.

ಅವರ ಬ್ಯಾಟ್‌ನಿಂದ ವಿಶ್ವಾಸಭರಿತ ಹೊಡೆತಗಳು ಹೊರ ಹೊಮ್ಮಿಲ್ಲ. ಶುಕ್ರವಾರ ಕಿಂಗ್ಸ್‌ ಇಲೆವನ್ ಪಂಜಾಬ್ ವಿರುದ್ಧ ವಿರಾಟ್ ಬಳಗವು 4 ವಿಕೆಟ್‌ಗಳಿಂದ ಗೆದ್ದಿತ್ತು. ಆದರೆ ಈ ಪಂದ್ಯದಲ್ಲಿ ಆಗಿರುವ ಕೆಲವು ಲೋಪಗಳನ್ನು ಸರಿಪಡಿಸಿಕೊಳ್ಳದಿದ್ದರೆ ಅಜಿಂಕ್ಯ ರಹಾನೆ ಬಳಗವು ಮೇಲುಗೈ ಸಾಧಿಸುವಲ್ಲಿ ಹಿಂದೇಟು ಹಾಕುವುದಿಲ್ಲ. ಅದಕ್ಕಾಗಿಯೇ ವಿರಾಟ್ ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ಅಭ್ಯಾಸ ನಡೆಸಿದರು. ಸ್ಥಳೀಯ ಆಫ್‌ಸ್ಪಿನ್ ಬೌಲರ್‌ಗಳ ಎಸೆತಗಳನ್ನು ಹೆಚ್ಚು ಎದುರಿಸಿದರು.

ಏಕೆಂದರೆ ಕಳೆದ ಎರಡೂ ಪಂದ್ಯಗಳಲ್ಲಿ ಅವರು ಆಫ್‌ಸ್ಪಿನ್ನರ್‌ಗಳಿಗೆ  ಶರಣಾಗಿದ್ದರು. ಕೋಲ್ಕತ್ತ ನೈಟ್‌ ರೈಡರ್ಸ್ ಎದುರು 31 ಮತ್ತು  ಬೆಂಗಳೂರಿನಲ್ಲಿ ಕಿಂಗ್ಸ್‌ ಇಲೆವನ್ ಪಂಜಾಬ್ ಎದುರು 21 ರನ್ ಮಾತ್ರ ಗಳಿಸಿದ್ದರು. ಇಲ್ಲಿಯವರೆಗೆ ಅವರ ಬ್ಯಾಟ್‌ನಿಂದ ಚಿಮ್ಮಿದ್ದು ಒಂದು ಸಿಕ್ಸರ್‌ ಮಾತ್ರ.

ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್ ಆಗಿರುವ ವಿರಾಟ್ (ಅಂತರರಾಷ್ಟ್ರೀಯ ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಅವರು 137.32ರ ಸ್ಟ್ರೈರೇಟ್ ಹೊಂದಿದ್ದಾರೆ)ಖಾತೆಯಲ್ಲಿ ಕೇವಲ 56 ರನ್‌ಗಳು ಮಾತ್ರ ಇವೆ. ಈ ಟೂರ್ನಿಯಲ್ಲಿ ಅವರು ಇನಿಂಗ್ಸ್ ಆರಂಭಿಸುತ್ತಿಲ್ಲ. ಅವರ ಅಚ್ಚುಮೆಚ್ಚಿನ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬರುತ್ತಿದ್ದಾರೆ. ತವರಿನ ಅಂಗಳದಲ್ಲಿ 155 ರನ್‌ಗಳ ಗುರಿ ಬೆನ್ನತ್ತಿದ್ದ ತಂಡವು ಎರಡನೇ ಓವರ್‌ನಲ್ಲಿಯೇ ಬ್ರೆಂಡನ್ ಮೆಕ್ಲಮ್ ಅವರನ್ನು ಕಳೆದುಕೊಂಡಿತ್ತು.

ಅಂತಹ ಸಂದರ್ಭದಲ್ಲಿ ವಿರಾಟ್ ಅಬ್ಬರಿಸುವುದು ಅವಶ್ಯಕವಾಗಿತ್ತು. ಆದರೆ ಮುಜೀಬ್ ಉರ್ ರೆಹಮಾನ್ ಹಾಕಿದ್ದ ನೇರ ಎಸೆತದ ಚಲನೆಯನ್ನು ಗುರುತಿಸುವಲ್ಲಿ ವಿಫಲರಾಗಿ ಕ್ಲೀನ್‌ಬೌಲ್ಡ್‌ ಆಗಿದ್ದರು. ಗಣ್ಯರ ಗ್ಯಾಲರಿಯಲ್ಲಿದ್ದ ಅವರ ಪತ್ನಿ ಅನುಷ್ಕಾ ಶರ್ಮಾ ಅವರ ಮುಖವೂ ಬಾಡಿತ್ತು!

ಆದರೆ ಎಬಿ ಡಿವಿಲಿಯರ್ಸ್ ಅವರ ಆಕರ್ಷಕ ಅರ್ಧಶತಕ (57 ರನ್) ಮತ್ತು ಮನದೀಪ್ ಸಿಂಗ್ ಅವರ ಚುರುಕಿನ ಬ್ಯಾಟಿಂಗ್‌ನಿಂದಾಗಿ ಆರ್‌ಸಿಬಿ ಜಯದ ಸಂಭ್ರಮ ಆಚರಿಸಿತ್ತು.

ಈ ಆವೃ‌ತ್ತಿಯಲ್ಲಿ ಲಭಿಸಿದ ಮೊದಲ ಯಶಸ್ಸು ಇದು. ಆದರೆ ತಂಡದಲ್ಲಿರುವ ಬ್ಯಾಟಿಂಗ್ ಶಕ್ತಿಯನ್ನು ಗಮನಿಸಿದರೆ, ಸಾಧಾರಣ ಗುರಿಯನ್ನು ಮುಟ್ಟಲು 19.2 ಓವರ್‌ಗಳನ್ನು ತೆಗೆದುಕೊಂಡಿದ್ದು ಹೆಚ್ಚಾಯಿತು ಅನಿಸದೇ ಇರದು. ಬೌಲಿಂಗ್‌ನಲ್ಲಿಯೂ ಕೂಡ ಹೆಚ್ಚಿನ ನಿಖರತೆ ಸಾಧಿಸಿದರೆ ಮುಂದಿನ ಎಲ್ಲ ಪಂದ್ಯಗಳಲ್ಲಿಯೂ ಯಶಸ್ಸು ಸಾಧಿಸುವುದು ಕಷ್ಟವಾಗಲಿಕ್ಕಿಲ್ಲ. ಉಮೇಶ್ ಯಾದವ್, ಕುಲಂವತ ಖೆಜ್ರೋಲಿಯಾ, ಕ್ರಿಸ್‌ ವೋಕ್ಸ್‌ ಮತ್ತು ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಉತ್ತಮ ಲಯದಲ್ಲಿದ್ದಾರೆ. ಚಾಹಲ್ ಮಿಂಚಿದರೆ ತಂಡದ ಬಲ ಹೆಚ್ಚುತ್ತದೆ. ‌

ರಾಜಸ್ಥಾನ್ ರಾಯಲ್ಸ್‌ನಲ್ಲಿಯೂ ಚಿಂತೆ: ಎರಡು ವರ್ಷಗಳ ನಿಷೇಧ ಶಿಕ್ಷೆಯ ನಂತರ ಮತ್ತೆ ಐಪಿಎಲ್‌ಗೆ ಮರಳಿರುವ ರಾಜಸ್ಥಾನ ತಂಡವು ಆಡಿರುವ ಎರಡು ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದು, ಇನ್ನೊಂದರಲ್ಲಿ ಸೋತಿದೆ.

ಮೊದಲ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್‌ ವಿರುದ್ಧ ಗೆದ್ದಿತ್ತು. ಆದರೆ, ಎರಡನೇ ಪಂದ್ಯದಲ್ಲಿ ಸನ್‌ರೈಸರ್ಸ್‌ ವಿರುದ್ಧ ಸೋತಿತ್ತು. 127 ರನ್‌ಗಳ ಗುರಿಯನ್ನು ಮುಟ್ಟುವಲ್ಲಿ ಎಡವಿತ್ತು. ಅಜಿಂಕ್ಯ ಕೂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಇದೀಗ ಗೆಲುವಿನ ಲಯಕ್ಕೆ ಮರಳುವತ್ತ ಚಿತ್ತ ನೆಟ್ಟಿದೆ.

ಸಂಜು ಸ್ಯಾಮ್ಸನ್, ಬೆನ್‌ ಸ್ಟೋಕ್ಸ್‌, ಜಾಸ್ ಬಟ್ಲರ್ ಅವರು ಬ್ಯಾಟಿಂಗ್ ವಿಭಾಗದ ಪ್ರಮುಖರಾಗಿದ್ದಾರೆ. ಬೌಲಿಂಗ್‌ನಲ್ಲಿ  ಧವಳ್ ಕುಲಕರ್ಣಿ ಮತ್ತು ಜಯದೇವ್ ಉನದ್ಕತ್ ಅವರಿಂದ ತಂಡವು ಹೆಚ್ಚು ನಿರೀಕ್ಷೆ ಇಟ್ಟಿದೆ. ಸ್ಪಿನ್‌ ವಿಭಾಗವು ಇಬ್ಬರು ಕನ್ನಡಿಗರಾದ ಶ್ರೇಯಸ್ ಗೋಪಾಲ್ ಮತ್ತು ಕೃಷ್ಣಪ್ಪ ಗೌತಮ್ ಅವರ ಮೇಲೆ ಅವಲಂಬಿತವಾಗಿದೆ.

ತವರಿನ ಅಂಗಳದಲ್ಲಿ ಸ್ಟುವರ್ಟ್‌ ಬಿನ್ನಿ ಕೂಡ ಆಡುವ ನಿರೀಕ್ಷೆ ಇದೆ. ಕಾಗದದ ಮೇಲೆ ಎರಡೂ ತಂಡಗಳೂ ಸಮಬಲಶಾಲಿಗಳಾಗಿವೆ. ಇದರಿಂದ ತುರುಸಿನ ಹಣಾಹಣಿ ನಡೆಯುವ ನಿರೀಕ್ಷೆ ಮೂಡಿದೆ.

ಸರ್ಫರಾಜ್ ಖಾನ್‌ಗೆ ಸಿಗುವುದೇ ಮತ್ತೊಂದು ಅವಕಾಶ?
ಬೆಂಗಳೂರು:
ಎರಡು ವರ್ಷಗಳ ಹಿಂದೆ ಐಪಿಎಲ್‌ನಲ್ಲಿ ಮಿಂಚಿನ ಸಂಚಲನ ಮೂಡಿಸಿದ್ದ ಆರ್‌ಸಿಬಿ ಬ್ಯಾಟ್ಸ್‌ಮನ್ ಸರ್ಫರಾಜ್ ಖಾನ್ ಈ ಸಲದ ಆವೃತ್ತಿಯಲ್ಲಿ ಮಿಂಚಿಲ್ಲ. ಆದ್ದರಿಂದ ಅವರು ರಾಜಸ್ಥಾನ್ ರಾಯಲ್ಸ್‌ ಎದುರಿನ ಪಂದ್ಯದಲ್ಲಿ ಅವಕಾಶ ಪಡೆಯುವರೇ ಎಂಬು ಕುತೂಹಲ ಗರಿಗೆದರಿದೆ.

ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬರುವ ಸರ್ಫರಾಜ್ ಅವರು ಕೊನೆಯ ಹಂತದ ಓವರ್‌ಗಳಲ್ಲಿ ‘ಫಿನಿಷರ್’ ಪಾತ್ರ ನಿರ್ವಹಿಸಬೇಕು. ಆದರೆ ಎರಡೂ ಪಂದ್ಯಗಳಲ್ಲಿ ಅವರು ತೀರಾ ಅಗ್ಗಕ್ಕೆ ವಿಕೆಟ್‌ ಚೆಲ್ಲಿದ್ದಾರೆ. ಆದ್ದರಿಂದ ಅವರ ಬದಲಿಗೆ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಪಾರ್ಥಿವ್ ಪಟೇಲ್ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ.

ಪಾರ್ಥಿವ್ ಅವರನ್ನು ಪರಿಗಣಿಸದಿದ್ದರೆ  ಧಾರವಾಡದ ಹುಡುಗ ಪವನ್ ದೇಶಪಾಂಡೆ ಅವಕಾಶ ಪಡೆಯುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಎಡಗೈ ಬ್ಯಾಟ್ಸ್‌ಮನ್ ಪವನ್ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ಉತ್ತಮವಾಗಿ ಆಡಿದ್ದರು. ಇದೇ ಮೊದಲ ಬಾರಿಗೆ ಅವರು ಆರ್‌ಸಿಬಿಗೆ ಆಯ್ಕೆಯಾಗಿದ್ದಾರೆ.

ತಂಡಗಳು
ಆರ್‌ಸಿಬಿ:
ವಿರಾಟ್ ಕೊಹ್ಲಿ (ನಾಯಕ), ಬ್ರೆಂಡನ್ ಮೆಕ್ಲಮ್, ಕ್ವಿಂಟನ್ ಡಿ ಕಾಕ್, ಎಬಿ ಡಿವಿಲಿಯರ್ಸ್, ಸರ್ಫರಾಜ್ ಖಾನ್, ಮನದೀಪ್ ಸಿಂಗ್, ಕ್ರಿಸ್ ವೋಕ್ಸ್, ವಾಷಿಂಗ್ಟನ್ ಸುಂದರ್, ಉಮೇಶ್ ಯಾದವ್, ಯಜುವೇಂದ್ರ ಚಾಹಲ್, ಕುಲವಂತ್ ಖೆಜ್ರೊಲಿಯಾ, ಡೇನಿಯಲ್ ವೆಟ್ಟೊರಿ (ಮುಖ್ಯ ಕೋಚ್), ಗ್ಯಾರಿ ಕರ್ಸ್ಟನ್ (ಬ್ಯಾಟಿಂಗ್ ಕೋಚ್), ಆಶಿಶ್ ನೆಹ್ರಾ (ಬೌಲಿಂಗ್ ಕೋಚ್).

ರಾಜಸ್ಥಾನ್ ರಾಯಲ್ಸ್: ಅಜಿಂಕ್ಯ ರಹಾನೆ (ನಾಯಕ), ಜಾನ್ ಮ್ಯಾಥ್ಯೂ ಶಾರ್ಟ್, ಸಂಜು ಸ್ಯಾಮ್ಸನ್, ಬೆನ್ ಸ್ಟೋಕ್ಸ್‌, ರಾಹುಲ್ ತ್ರಿಪಾಠಿ, ಜಾಸ್ ಬಟ್ಲರ್, ಕೃಷ್ಣಪ್ಪ ಗೌತಮ್, ಶ್ರೇಯಸ್ ಗೋಪಾಲ್, ಧವಳ್ ಕುಲಕರ್ಣಿ, ಜಯದೇವ್ ಉನದ್ಕತ್, ಬೆನ್ ಲಾಫ್ಲಿನ್. ಜೋಫ್ರಾ ಆರ್ಚರ್, ಸ್ಟುವರ್ಟ್ ಬಿನ್ನಿ, ಆರ್ಯಮನ್ ಬಿರ್ಲಾ, ಪ್ರಶಾಂತ್ ಚೋಪ್ರಾ, ಹೆನ್ರಿಕ್ ಕ್ಲಾಸನ್, ಮಹಿಪಾಲ್ ಲೊಮರೊರ್, ಸುದೇಶ್ನ ಮಿಧುನ್, ಜತೀನ್ ಸಕ್ಸೆನಾ, ಈಶ್ ಸೋಧಿ, ದುಷ್ಮಂತ ಚಾಮೀರಾ, ಪ್ಯಾಡಿ ಆಪ್ಟನ್ (ಮುಖ್ಯ ಕೋಚ್), ಅಮೋಲ್ ಮುಜುಂದಾರ್ (ಬ್ಯಾಟಿಂಗ್ ಕೋಚ್), ಸಾಯಿರಾಜ್ ಬಹುತುಳೆ (ಬೌಲಿಂಗ್ ಕೋಚ್). ದಿಶಾಂತ್ ಯಾಜ್ಞಿಕ್ (ಫೀಲ್ಡಿಂಗ್ ಕೋಚ್).

ಪಂದ್ಯ ಆರಂಭ: ಸಂಜೆ 4ರಿಂದ
ನೇರಪ್ರಸಾರ: ಸ್ಟಾರ್ ನೆಟ್‌ವರ್ಕ್


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT