ಬಿಡಿಎ ಬಲವರ್ಧನೆಗೆ ಹೆಗಲು ಯಾರದ್ದು?

ಬುಧವಾರ, ಮಾರ್ಚ್ 27, 2019
22 °C
ವಿವಾದಗಳ ಸುಳಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ : ನೌಕರರಿಂದಲೇ ನಕಲಿ ದಾಖಲೆಗಳ ಸೃಷ್ಟಿ

ಬಿಡಿಎ ಬಲವರ್ಧನೆಗೆ ಹೆಗಲು ಯಾರದ್ದು?

Published:
Updated:
ಬಿಡಿಎ ಬಲವರ್ಧನೆಗೆ ಹೆಗಲು ಯಾರದ್ದು?

ಬೆಂಗಳೂರು: ಮಹಾನಗರದ ಬೆಳವಣಿಗೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಕೊಡುಗೆಯೂ ಮಹತ್ತರವಾದುದು. ಹೊಸ ಬಡಾವಣೆಗಳನ್ನು ಅಭಿವೃದ್ಧಿಪಡಿಸುತ್ತಾ ಬಂದಿರುವ ಬಿಡಿಎ, ನಗರದ ವಸತಿ ಸಮಸ್ಯೆಯ ಒತ್ತಡ ಕಡಿಮೆ ಮಾಡಲು ನೆರವಾಗಿದೆ. ವರ್ತುಲ ರಸ್ತೆಗಳ ಮತ್ತು ಕೆರೆಗಳ ಅಭಿವೃದ್ಧಿಯಲ್ಲಿ, ವಾಣಿಜ್ಯ ಸಂಕೀರ್ಣಗಳ ನಿರ್ಮಾಣದಲ್ಲೂ ತೊಡಗಿಸಿಕೊಂಡಿದೆ. ಯಾವಾಗ ಬಡಾವಣೆ ಅಭಿವೃದ್ಧಿಗಿಂತ ಅನ್ಯಕಾರ್ಯಗಳತ್ತ ಹೆಚ್ಚಿನ ಗಮನ ನೀಡಲಾರಂಭಿಸಿತೋ, ಅಂದಿನಿಂದಲೇ ಪ್ರಾಧಿಕಾರ ಹಳಿ ತಪ್ಪಲಾರಂಭಿಸಿದೆ.

ಅಭಿವೃದ್ಧಿ ಚಟುವಟಿಕೆಗೆ ಹೆಸರಾಗಿದ್ದ ಪ್ರಾಧಿಕಾರ ಈಗ ವಿವಾದಗಳಿಂದಾಗಿ ಗಮನ ಸೆಳೆಯುತ್ತಿದೆ. ಬಡಾವಣೆಗಳಿಗೆ ಮೂಲಸೌಕರ್ಯ ಕಲ್ಪಿಸುವಲ್ಲಿ ವಿಳಂಬ ಧೋರಣೆ, ರಿಯಲ್‌ ಎಸ್ಟೇಟ್‌ ಕುಳಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಸ್ವತ್ತುಗಳ ಡಿನೋಟಿಫಿಕೇಷನ್‌, ಕೆರೆಗಳ ನಿರ್ವಹಣೆಯಲ್ಲಿ ಅದಕ್ಷತೆ.... ಹೀಗೆ ಸಮಸ್ಯೆಗಳ ಪಟ್ಟಿ ‘ಹನುಮಂತನ ಬಾಲ’ದಂತೆ ಬೆಳೆಯುತ್ತಿದೆ.

ಬಿಡಿಎ ಬಡಾವಣೆಯಲ್ಲೇ ನಿವೇಶನ ಪಡೆಯಬೇಕು ಎಂದು ಜನ ಹಾತೊರೆಯುತ್ತಿದ್ದ ಕಾಲವೊಂದಿತ್ತು. ಆದರೆ, ಆ ವಿಶ್ವಾಸಾರ್ಹತೆ ಈಗ ಉಳಿದಿಲ್ಲ. ಅರ್ಕಾವತಿ ಬಡಾವಣೆಯ ‘ಡಿನೋಟಿಫಿಕೇಷನ್‌’ ಹಗರಣದ ಬಳಿಕ ಬಿಡಿಎ ನಿವೇಶನ ಖರೀದಿಗೆ ಮುನ್ನ ಹತ್ತು ಬಾರಿ ಯೋಚಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಅರ್ಕಾವತಿ ಬಡಾವಣೆಯಲ್ಲಿ ಭೂಮಿಯ ಅಕ್ರಮ ಡಿನೋಟಿಫಿಕೇಷನ್‌ನಿಂದಾಗಿ ನೂರಾರು ಮಂದಿ ನಿವೇಶನ ಕಳೆದುಕೊಂಡರು. ಇಲ್ಲಿ ಮಂಜೂರಾದ ನಿವೇಶನ ಉಳಿಸಿಕೊಳ್ಳಲು ಹರಸಾಹಸ ಪಡಬೇಕಾದ ವಾತಾವರಣವಿದೆ. ಸಂತ್ರಸ್ತರು ವಾರಕ್ಕೊಮ್ಮೆ ಬಿಡಿಎ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಹಿಡಿಶಾಪ ಹಾಕಿದರೂ ಸರ್ಕಾರ ಇವರಿಗೆ ನ್ಯಾಯ ದೊರಕಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ಅರ್ಕಾವತಿಯ ಬಿಕ್ಕಟ್ಟು ಬಗೆಹರಿಸುವ ಬದಲು, ಸಂತ್ರಸ್ತರಿಗೆ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನ ನೀಡಲು ಮುಂದಾಗಿದೆ.

ಪ್ರಾಧಿಕಾರವು ದಶಕಗಳ ಹಿಂದೆ ಅಭಿವೃದ್ಧಿಪಡಿಸಿರುವ ವಿಶ್ವೇಶ್ವರಯ್ಯ ಹಾಗೂ ಬನಶಂಕರಿ ಬಡಾವಣೆಗಳಿಗೂ ಪೂರ್ಣಪ್ರಮಾಣದಲ್ಲಿ ಮೂಲಸೌಕರ್ಯ ಕಲ್ಪಿಸಿಲ್ಲ. ಅರ್ಕಾವತಿ ಬಡಾವಣೆಗೆ ಮೂಲಸೌಕರ್ಯ ಕಲ್ಪಿಸುವ ಕಾಮಗಾರಿ ಇತ್ತೀಚೆಗಷ್ಟೇ ಆರಂಭವಾಗಿದೆ. ಬಡಾವಣೆಯ ಮೂಲ ಸೌಕರ್ಯ ನಿವೇಶನಗಳು ಹಾಗೂ ಮೂಲೆ ನಿವೇಶನಗಳು ಪ್ರಾಧಿಕಾರಕ್ಕೆ ಆದಾಯತಂದು ಕೊಡುತ್ತವೆ. ಪರೋಕ್ಷವಾಗಿ ಇದು ವರಮಾನ ನಷ್ಟಕ್ಕೂ ಕಾರಣವಾಗುತ್ತಿದೆ.

ಸಾಲದ ಸುಳಿಯಲ್ಲಿ ಬಿಡಿಎ: ಕೆಂಪೇಗೌಡ ಬಡಾವಣೆಯಲ್ಲಿ ಮೊದಲ ಹಂತದಲ್ಲಿ 5 ಸಾವಿರ ನಿವೇಶನ ಹಂಚಿಕೆಗೆ ಅರ್ಜಿ ಆಹ್ವಾನಿಸಿದ್ದ ಬಿಡಿಎ, ಅರ್ಜಿದಾರರಿಂದ ಸಂಗ್ರಹಿಸಿದ ಆರಂಭಿಕ ಠೇವಣಿ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಸಿತ್ತು. ನಿವೇಶನ ಸಿಗದ ಅರ್ಜಿದಾರರಿಗೆ ಆರಂಭಿಕ ಠೇವಣಿ ಹಣ ಹಿಂತಿರುಗಿಸಲು ಹಣವಿಲ್ಲದೇ ಬ್ಯಾಂಕ್‌ನಲ್ಲಿ ಸಾಲದ ಮೊರೆ ಹೋಗಿತ್ತು. ವಸತಿ ಸಮುಚ್ಚಯಗಳ ನಿರ್ಮಾಣಕ್ಕೂ ಸಾಲ ಮಾಡಿತ್ತು. ಆರ್ಥಿಕ ಮುಗ್ಗಟ್ಟಿನಿಂದಾಗಿ ನೌಕರರಿಗೆ ಸಂಬಳ ಪಾವತಿಗೂ ಸಮಸ್ಯೆ ಎದುರಿಸಿತ್ತು. ಪ್ರಸ್ತುತ ಬಿಡಿಎ, ಹುಡ್ಕೊದಲ್ಲಿ ₹ 100 ಕೋಟಿ, ಕೆನರಾ ಬ್ಯಾಂಕಿನಲ್ಲಿ ₹ 235 ಕೋಟಿ, ಕೆಯುಐಡಿಎಫ್‌ಸಿಯಲ್ಲಿ ₹ 32 ಕೋಟಿ ಹಾಗೂ ಸಿಂಡಿಕೇಟ್‌ ಬ್ಯಾಂಕ್‌ನಲ್ಲಿ 220 ಕೋಟಿ ಸಾಲ ಹೊಂದಿದೆ.

ಭ್ರಷ್ಟಾಚಾರದ ಕೂಪ: ಪ್ರಾಧಿಕಾರದ ನೌಕರರೇ ನಕಲಿ ದಾಖಲೆಗಳನ್ನು ಸೃಷ್ಟಿಸಿ ಯಾರದೋ ನಿವೇಶನಗಳನ್ನು ಇನ್ನಾರಿಗೋ ಮಾರಾಟ ಮಾಡಿದ ಪ್ರಕರಣಗಳೂ ನಡೆದಿವೆ. ಈ ಸಂಬಂಧ ಕೆಲವು ಬಿಡಿಎ ಸಿಬ್ಬಂದಿ ವಿರುದ್ಧ ಪ್ರಕರಣಗಳೂ ದಾಖಲಾಗಿವೆ. ಬಡಾವಣೆಗೆ ಸ್ವಾಧೀನಪಡಿಸಿಕೊಂಡ ಜಾಗವನ್ನು ಹಣದ ಆಮಿಷಕ್ಕಾಗಿ ಡಿನೋಟಿಫಿಕೇಷನ್‌ ಮಾಡಿದ ಅನೇಕ ಉದಾಹರಣೆಗಳಿವೆ. ಇದಕ್ಕೆಲ್ಲ ಕಡಿವಾಣ ಹಾಕುವುದು ಸವಾಲಿನ ವಿಷಯ.

‘ಬಿಡಿಎ ಸುಪರ್ದಿಯಲ್ಲಿರುವ ಸ್ವತ್ತುಗಳ ಕುರಿತ ನಿಖರ ದಾಖಲೆಗಳು ಒಂದೆಡೆ ಲಭ್ಯ ಇಲ್ಲ. ದಾಖಲೆಗಳೆಲ್ಲವನ್ನೂ ಮೊದಲು ಡಿಜಿಟಲೀಕರಣಗೊಳಿಸಬೇಕು. ನಿವೇಶನಗಳ ವಾಸ್ತವ ಪರಿಸ್ಥಿತಿಯ ವರದಿಗಾಗಿ ಎಂಜಿನಿಯರಿಂಗ್‌ ವಿಭಾಗ, ಉಪಕಾರ್ಯದರ್ಶಿಗಳ ಬಳಿ ಅಲೆಯುವ ಪ್ರಮೇಯ ಇರಬಾರದು. ಆಯುಕ್ತರೇ ನೇರವಾಗಿ ಇವುಗಳನ್ನು ನೀಡುವಂತಾಗಬೇಕು. ಇಂತಹ ವಾತಾವರಣ ನಿರ್ಮಾಣವಾದರೆ ಬಹುತೇಕ ಭ್ರಷ್ಟಾಚಾರಗಳಿಗೆ ಕಡಿವಾಣ ಬೀಳುತ್ತದೆ’ ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ಸಲಹೆ ನೀಡಿದರು.

ಬಿಡಿಎ ಅನೇಕ ಸ್ವತ್ತುಗಳು ಒತ್ತುವರಿಯಾಗಿವೆ. ಇವೆಲ್ಲವೂ ಅಧಿಕಾರಿಗಳ ಗಮನಕ್ಕೆ ಬಾರದೇ ನಡೆದಿವೆ ಎಂದು ಭಾವಿಸಿದರೆ ಮೂರ್ಖತನವಾದೀತು. ಇಂತಹ ಪ್ರಕರಣಗಳ ಬಗ್ಗೆ ಗಮನ ಸೆಳೆದ ಬಳಿಕವೂ ಅಧಿಕಾರಿಗಳು ಕ್ರಮ ಕೈಗೊಳ್ಳದ ಉದಾಹರಣೆಗಳಿವೆ. ಇತ್ತೀಚೆಗೆ ಬಿಡಿಎ ಸ್ವಾಧೀನದಲ್ಲಿರುವ ಸ್ವತ್ತುಗಳ ಸಮಗ್ರ ವಿವರ ಕಲೆ ಹಾಕುವ ಸಲುವಾಗಿ ‘ಲ್ಯಾಂಡ್‌ ಆಡಿಟ್‌’ ನಡೆಸುವಂತೆ ಆಯುಕ್ತರು ಸೂಚಿಸಿದ್ದರು. ಈ ಪ್ರಕ್ರಿಯೆ ಈಗ ಜಾರಿಯಲ್ಲಿದೆ.

ಬೆಳ್ಳಂದೂರು ಹಾಗೂ ವರ್ತೂರು ಕೆರೆಗಳ ದುಸ್ಥಿತಿ ಅವುಗಳ ನಿರ್ವಹಣೆ ಕುರಿತು ಬಿಡಿಎ ತಳೆದಿರುವ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿಯುತ್ತದೆ. ಇವುಗಳ ಅಭಿವೃದ್ಧಿಗೆ ಇತರ ಇಲಾಖೆಗಳ ಸಹಕಾರವೂ ಮುಖ್ಯ. ಹಸಿರು ನ್ಯಾಯಮಂಡಳಿಯಿಂದ ಪದೇ ಪದೇ ಛಿಮಾರಿ ಹಾಕಿಸಿಕೊಂಡ ಬಳಿಕವೂ ಈ ಕೆರೆಯನ್ನು ಸುಸ್ಥಿತಿಗೆ ತರಲು ಸಾಧ್ಯವಾಗಿಲ್ಲ.

ಪ್ರಾಧಿಕಾರದಲ್ಲಿ ಕೆಲಸ ಮಾಡುವ ‘ಮಹದಾಸೆ’ಯಿಂದ ಬೇರೆ ಇಲಾಖೆ ಸಿಬ್ಬಂದಿಯು ರಾಜಕಾರಣಿಗಳಿಗೆ ಒತ್ತಡ ಹೇರಿ ಇಲ್ಲಿಗೆ ನಿಯೋಜನೆ ಮಾಡಿಸಿಕೊಳ್ಳುತ್ತಾರೆ. ಎಂಜಿನಿಯರಿಂಗ್‌ ವಿಭಾಗದಲ್ಲಂತೂ ಅಗತ್ಯಕ್ಕಿಂತ ಹೆಚ್ಚು ಸಿಬ್ಬಂದಿ ನಿಯೋಜನೆ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಅಧಿಕಾರಿಗಳು ಒಂದೇ ಕಡೆ ಮೂರು ವರ್ಷಗಳಿಗಿಂತ ಹೆಚ್ಚು ಕಾಲ ಕರ್ತವ್ಯ ನಿರ್ವಹಿಸಲು ಅವಕಾಶ ನೀಡದಿದ್ದರೆ ಭ್ರಷ್ಟಾಚಾರ ನಿಯಂತ್ರಣ ಸಾಧ್ಯ. ಇಂತಹ ಕಠಿಣ ನಿರ್ಧಾರಗಳ ಮೂಲಕ ಈ ಪ್ರಾಧಿಕಾರಕ್ಕೆ ಶಕ್ತಿ ತುಂಬುವ ಇಚ್ಛಾ ಶಕ್ತಿ ಯಾವ ರಾಜಕೀಯ ಪಕ್ಷಕ್ಕಿದೆ?

**

ಪ್ರಾಧಿಕಾರವು ನಗರದಲ್ಲಿ ಅನೇಕ ಕಡೆ ರಸ್ತೆ, ಮೇಲ್ಸೇತುವೆ, ಕೆಳಸೇತುವೆ, ಗ್ರೇಡ್‌ ಸಪರೇಟರ್‌ನಂತಹ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಿದೆ. ಅಚ್ಚರಿಯೆಂದರೆ ಸರ್ಕಾರ ಇದಕ್ಕೆ ಅನುದಾನ ನೀಡುತ್ತಿಲ್ಲ. ಅಭಿವೃದ್ಧಿಪಡಿಸಿದ ನಿವೇಶನಗಳ ಹಾಗೂ ವಸತಿಗಳ ಮಾರಾಟದಿಂದ ಬಂದ ಹಣವನ್ನೇ ಇದಕ್ಕಾಗಿ ವಿನಿಯೋಗಿಸುತ್ತಿದೆ. ಹಣಕಾಸಿನ ಮುಗ್ಗಟ್ಟಿನಿಂದ ಈ ಯೋಜನೆಗಳು ಸಕಾಲದಲ್ಲಿ ಪೂರ್ಣಗೊಳ್ಳುತ್ತಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಪೆರಿಫೆರಲ್‌ ವರ್ತುಲ ರಸ್ತೆ (ಪಿಆರ್‌ಆರ್‌). ದಶಕಗಳ ಹಿಂದೆಯೇ ಇದರ ಪ್ರಸ್ತಾವ ಸಿದ್ಧವಾಗಿದ್ದರೂ ಇನ್ನೂ ಕಾರ್ಯಗತಗೊಂಡಿಲ್ಲ.

ಪಿಆರ್‌ಆರ್‌ ಪ್ರಸ್ತಾವ ಸಿದ್ಧಪಡಿಸಿದಾಗ ಅದರ ಯೋಜನಾ ವೆಚ್ಚ ₹ 500 ಕೋಟಿ ಇತ್ತು. ಈಗ ಭೂಸ್ವಾಧೀನಕ್ಕೇ (1,810 ಎಕರೆ) ₹ 8,100 ಕೋಟಿ ಬೇಕು. ಪರಿಹಾರ ನೀಡಲು ಬಿಡಿಎ ಬಳಿ ದುಡ್ಡಿಲ್ಲ. ಇದಕ್ಕಾಗಿ ಜಾಗ ಕಳೆದುಕೊಳ್ಳುವ ರೈತರು ಒಂದೆಡೆ ಭೂಮಿಯನ್ನು ಅಭಿವೃದ್ಧಿಪಡಿಸಲೂ ಆಗದೇ, ಮಾರಾಟ ಮಾಡಲೂ ಆಗದೆ ತ್ರಿಶಂಕು ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಹೊರವರ್ತುಲ ರಸ್ತೆಯಲ್ಲಿ ಗ್ರೇಡ್‌ ಸಪರೇಟರ್‌ ನಿರ್ಮಾಣಕ್ಕಾಗಿ ಜಾಗ ಬಿಟ್ಟುಕೊಟ್ಟವರಿಗೆ ನಾಲ್ಕೈದು ವರ್ಷಗಳ ಬಳಿಕವೂ ಪರಿಹಾರ ಪಾವತಿ ಆಗಿಲ್ಲ. ಪರಿಹಾರದ ಹಣಕ್ಕೆ ಒತ್ತಾಯಿಸಿ 2016ರ ಅಕ್ಟೋಬರ್‌

ನಲ್ಲಿ ಮಹಿಳೆಯೊಬ್ಬರು ಬಿಡಿಎ ಕೇಂದ್ರ ಕಚೇರಿ ಬಳಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಘಟನೆಯೂ ನಡೆದಿತ್ತು. ಕೆಲವು ಮೇಲ್ಸೇತುವೆಗಳನ್ನು ಪೂರ್ಣಗೊಳಿಸಲು ಏಳೆಂಟು ವರ್ಷಗಳೇ ಹಿಡಿದ ಉದಾಹರಣೆಯೂ ಕಣ್ಣ ಮುಂದಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಮೂಲಸೌಕರ್ಯ ಒದಗಿಸುವುದು ಬಿಡಿಎ ಕೆಲಸವಲ್ಲ. ಪ್ರಾಧಿಕಾರದ ಬಡಾವಣೆಗಳಿಗೆ ಸೌಕರ್ಯ ಕಲ್ಪಿಸಿದ ನಂತರ ಬೇಕಿದ್ದರೆ ಅನ್ಯಕಾರ್ಯಗಳನ್ನು ಕೈಗೆತ್ತಿಕೊಳ್ಳಬಹುದು. ಆದರೆ, ಈಗ ರಾಜಕೀಯ ನಾಯಕರ ಒತ್ತಾಯಕ್ಕೆ ಮಣಿದು ದೊಡ್ಡ ಯೋಜನೆಗಳ ಅನುಷ್ಠಾನಕ್ಕೆ ಪ್ರಾಧಿಕಾರ ಕೈಹಾಕುತ್ತಿದೆ. ಇಂತಹ ಯೋಜನೆಗಳಿಗೆ ಸರ್ಕಾರದಿಂದ ಯಾವುದೇ ಅನುದಾನವೂ ಸಿಗುತ್ತಿಲ್ಲ. ಕನಿಷ್ಠ ಪಕ್ಷ ಭೂಸ್ವಾಧೀನ ವೆಚ್ಚವನ್ನೂ ಸರ್ಕಾರ ಪಾವತಿಸುತ್ತಿಲ್ಲ. ಆಸ್ತಿ ಮಾರಾಟದಿಂದ ಬಂದ ಹಣವನ್ನು ಇವುಗಳಿಗೆ ಹೂಡಿಕೆ ಮಾಡುತ್ತಿದೆ. ಈ ಯೋಜನೆಗಳು ಪ್ರಾಧಿಕಾರಕ್ಕೆ ವರಮಾನವನ್ನೂ ತರುವುದಿಲ್ಲ. ಹಾಗಾಗಿ ಪ್ರಾಧಿಕಾರದ ಆರ್ಥಿಕ ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಿದೆ.

‘ಬಡಾವಣೆಗಳ ನಿವೇಶನ ಹಂಚಿಕೆಯಿಂದ ಲಾಭಾಂಶದ ಒಂದು ಪಾಲನ್ನು ಬೇಕಿದ್ದರೆ ಅನ್ಯ ಮೂಲಸೌಕರ್ಯ ಅಭಿವೃದ್ಧಿಗೆ ಬಳಸಲಿ. ಆದರೆ, ಭಾರಿ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗಿ ಕೈಸುಟ್ಟುಕೊಳ್ಳುವುದು ಒಳ್ಳೆಯದಲ್ಲ’ ಎಂದು ಹೆಸರು ಹೇಳಲು ಇಚ್ಛಿಸದ ಬಿಡಿಎ ಅಧಿಕಾರಿಯೊಬ್ಬರು ವಿವರಿಸಿದರು.

**

‘ಹಸ್ತಕ್ಷೇಪದಿಂದ ಮುಕ್ತಿ ಸಿಗಲಿ’

ಬಿಡಿಎಯು ಬಡಾವಣೆ ಅಭಿವೃದ್ಧಿಗಿಂತ ಹೆಚ್ಚು ಆಗಿ ಅನ್ಯಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದಕ್ಕೆ ರಾಜಕೀಯ ಹಸ್ತಕ್ಷೇಪವೂ ಕಾರಣ. ರಾಜಕಾರಣಿಗಳು, ತಮಗೆ ಬೇಕಾದ ಮೂಲಸೌಕರ್ಯ ಅಭಿವೃದ್ಧಿ ಕೆಲಸವನ್ನು ಬಿಡಿಎ ಮೂಲಕ ಮಾಡಿಸಿಕೊಳ್ಳುತ್ತಾರೆ. ಸಂಸ್ಥೆ ನೇರವಾಗಿ ಮುಖ್ಯಮಂತ್ರಿ ಅಧೀನದಲ್ಲಿ ಕಾರ್ಯನಿರ್ವಹಿಸುವಂತಾದರೆ ಈ ಪ್ರವೃತ್ತಿ ಸ್ವಲ್ಪ ಕಡಿಮೆ ಆಗಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

**

‘ವಸತಿ ಸಮುಚ್ಚಯ ನಿರ್ಮಿಸಲಿ’

ಬಡಾವಣೆ ನಿರ್ಮಿಸುವುದರ ಬದಲು ಬಿಡಿಎ ವಸತಿ ಸಮುಚ್ಚಯ ನಿರ್ಮಿಸಲು ಆದ್ಯತೆ ನೀಡಬೇಕು. ಬೆಂಗಳೂರಿನಲ್ಲಿ 40 ಸಾವಿರ ಎಕರೆಯಷ್ಟು ಸರ್ಕಾರಿ ಜಮೀನು ಒತ್ತುವರಿಯಾಗಿದೆ ಎಂದು ಎ.ಟಿ. ರಾಮಸ್ವಾಮಿ ನೇತೃತ್ವದ ಸಮಿತಿಯ ವರದಿ ಹೇಳಿದೆ. ಈ ಜಾಗಗಳನ್ನು ವಶಪಡಿಸಿಕೊಂಡು ಅಲ್ಲಿ ವಸತಿ ಸಮುಚ್ಚಯಗಳನ್ನು ನಿರ್ಮಿಸಲಿ. ಆಗ ರೈತರ ಜಮೀನು ಸ್ವಾಧೀನಪಡಿಸಿಕೊಳ್ಳುವುದು ತಪ್ಪುತ್ತದೆ.

ಅಧಿಕಾರಿಗಳ ಭ್ರಷ್ಟಾಚಾರ ಹಾಗೂ ರಾಜಕೀಯ ಹಸ್ತಕ್ಷೇಪದಿಂದಾಗಿ ಅರ್ಕಾವತಿ ಬಡಾವಣೆ ಗೊಂದಲದ ಗೂಡಾಗಿದೆ. ಮಂಜೂರಾದ ನಿವೇಶನದಲ್ಲಿ ಮನೆ ನಿರ್ಮಿಸಲು ಈಗಲೂ ನಿವೇಶನದಾರರಿಗೆ ಸಾಧ್ಯವಾಗು

ತ್ತಿಲ್ಲ. ನಮ್ಮ ಮೇಲೆ ಕಾನೂನು ತೊಡಕಿನ ತೂಗುಗತ್ತಿ ನೇತಾಡುತ್ತಿದೆ.

ಶಿವಪ್ರಕಾಶ್‌, ಅರ್ಕಾವತಿ ನಿವೇಶನದಾರರ ಸಂಘದ ಅಧ್ಯಕ್ಷ

**

‘ವಸತಿ ಸಮುಚ್ಚಯಕ್ಕೆ ಆದ್ಯತೆ’

ಬೆಂಗಳೂರು ಅಂತರರಾಷ್ಟ್ರೀಯ ಮಟ್ಟದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರ. ಇಲ್ಲಿನ ಮೂಲಸೌಕರ್ಯ ಅಭಿವೃದ್ಧಿ ದೃಷ್ಟಿಯಿಂದ ಬಿಡಿಎಯನ್ನು ಇನ್ನಷ್ಟು ಬಲಪಡಿಸುತ್ತೇವೆ. ನಗರದ ನಿವಾಸಿಗಳ ವಸತಿ ಕೊರತೆ ನಿವಾರಿಸುವ ಸಲುವಾಗಿ ಆದಷ್ಟು ಹೆಚ್ಚು ವಸತಿ ಸಮುಚ್ಚಯಗಳ ನಿರ್ಮಾಣಕ್ಕೆ ಆದ್ಯತೆ ನೀಡುತ್ತೇವೆ. ಸಂಚಾರ ದಟ್ಟಣೆ

ಕಡಿಮೆ ಮಾಡುವ ನಿಟ್ಟಿನಲ್ಲಿ ಉತ್ತರ– ದಕ್ಷಿಣ– ಪೂರ್ವ–ಪಶ್ಚಿಮಕ್ಕೆ ಕಾರಿಡಾರ್‌ ನಿರ್ಮಿಸುವ ಯೋಜನೆಯನ್ನು ಅನುಷ್ಠಾನಕ್ಕೆ ತರುತ್ತೇವೆ

ಬಿ.ಎಲ್‌.ಶಂಕರ್‌, ಕಾಂಗ್ರೆಸ್‌ ಮುಖಂಡ

**

‘ಭ್ರಷ್ಟಾಚಾರಕ್ಕೆ ಕಡಿವಾಣ’

ದಕ್ಷ ಅಧಿಕಾರಿಗಳನ್ನು ನೇಮಿಸುವ ಮೂಲಕ ಬಿಡಿಎ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳುತ್ತೇವೆ. ಬಡವರಿಗೆ ರಿಯಾಯಿತಿ ದರದಲ್ಲಿ ನಿವೇಶನ ಹಾಗೂ ವಸತಿ ಒದಗಿಸುವ ಯೋಜನೆಗಳನ್ನು ಕಾಲಮಿತಿಯೊಳಗೆ ಅನುಷ್ಠಾನಗೊಳಿಸುತ್ತೇವೆ. ಬಿಡಿಎ ಮೂಲಕ ಅನುಷ್ಠಾನ

ಗೊಳಿಸುವ ಮೂಲಸೌಕರ್ಯ ಯೋಜನೆಗಳಿಗೆ ಸರ್ಕಾರ

ದಿಂದಲೇ ಅನುದಾನ ಒದಗಿಸುತ್ತೇವೆ.

ಆರ್‌.ಪ್ರಕಾಶ್‌, ಜೆಡಿಎಸ್‌ ಬೆಂಗಳೂರು ನಗರ ಘಟಕದ ಅಧ್ಯಕ್ಷ

**

‘ಮೂಲಸೌಕರ್ಯಕ್ಕೆ ಆದ್ಯತೆ’

ಬಿಡಿಎ ಬಡಾವಣೆಗಳಿಗೆ ಮೂಲಸೌಕರ್ಯ ಕಲ್ಪಿಸುವ ಬಗ್ಗೆ ಈಗಿನ ಸರ್ಕಾರ ಗಮನವನ್ನೇ ವಹಿಸಿಲ್ಲ. ನಾವು ಅಧಿಕಾರಕ್ಕೆ ಬಂದರೆ ಈ ವಿಚಾರಕ್ಕೆ ಆದ್ಯತೆ ನೀಡುತ್ತೇವೆ. ಈಗಿನ ಸರ್ಕಾರ ಗುತ್ತಿಗೆದಾರರಿಗೆ ಲಾಭ ಮಾಡಿಕೊಡುವ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ನಾವು ಇದಕ್ಕೆ ಅವಕಾಶ ನೀಡುವುದಿಲ್ಲ. ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಶೇಕಡ 70ಕ್ಕೂ ಹೆಚ್ಚು ವರಮಾನ ಬರುವುದು ಈ ಮಹಾನಗರದ ವ್ಯಾಪ್ತಿಯಲ್ಲಿ. ಹಾಗಾಗಿ ಬೆಂಗಳೂರಿನ ಅಭಿವೃದ್ಧಿಗೆ ಹೆಚ್ಚಿನ ಪ್ರಾಧಾನ್ಯ ನೀಡುತ್ತೇವೆ

ಪಿ.ಸಿ. ಮೋಹನ್‌, ಸಂಸದ (ಬಿಜೆಪಿ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry