ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಂಬೇಡ್ಕರ್‌ ಕೇಸರೀಕರಣಕ್ಕೆ ಕುತಂತ್ರ’

ಹಿರಿಯ ವಕೀಲ ಎ.ಕೆ.ಸುಬ್ಬಯ್ಯ ಆರೋಪ
Last Updated 14 ಏಪ್ರಿಲ್ 2018, 19:28 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನವರು ಡಾ.ಬಿ.ಆರ್‌.ಅಂಬೇಡ್ಕರ್‌ ಅವರನ್ನು ವೈದಿಕಗೊಳಿಸಲು ಹಾಗೂ ಕೇಸರೀಕರಣ ಮಾಡಲು ಕುತಂತ್ರ ನಡೆಸಿದ್ದಾರೆ’ ಎಂದು ಹಿರಿಯ ವಕೀಲ ಎ.ಕೆ.ಸುಬ್ಬಯ್ಯ ದೂರಿದರು.

ಕರ್ನಾಟಕ ಸಮತಾ ಸೈನಿಕ ದಳದ ವತಿಯಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಅಂಬೇಡ್ಕರ್‌ ಅವರ 127ನೇ ಜಯಂತಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅಂಬೇಡ್ಕರ್‌ ನಮ್ಮವರು ಎನ್ನುತ್ತಲೇ ಅವರ ಸಿದ್ಧಾಂತ, ಸಂವಿಧಾನ ಹಾಗೂ ಪ್ರಜಾತಂತ್ರವನ್ನು ನಿರ್ನಾಮ ಮಾಡಲು ಹುನ್ನಾರ ನಡೆಸಿದ್ದಾರೆ. ಅಂಬೇಡ್ಕರ್‌ ಅವರಿಗೆ ನಾವು ನೀಡಿದಷ್ಟು ಗೌರವ ಬೇರೆ ಯಾರೂ ನೀಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ. ಆದರೆ, ಅಂಬೇಡ್ಕರ್‌ ಬಗ್ಗೆ ಅವಹೇಳನ ಮಾಡುವುದು, ಅವರ ಪ್ರತಿಮೆಗಳನ್ನು ಭಗ್ನಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ದಲಿತರ ಮೇಲೆ ದೌರ್ಜನ್ಯ, ಅತ್ಯಾಚಾರ ನಡೆಯುತ್ತಿದೆ. ಇದರ ಬಗ್ಗೆ ಮೋದಿ ಮಾತನಾಡುವುದಿಲ್ಲ’ ಎಂದು ಕಿಡಿಕಾರಿದರು.

‘ನಮಗೆ ಬುದ್ಧ, ಬಸವ, ಅಂಬೇಡ್ಕರ್‌, ಪೆರಿಯಾರ್‌, ನಾರಾಯಣಗುರುಗಳ ಭಾರತ ಬೇಕು. ಭಾಗವತ್‌, ಮೋದಿ ಹಾಗೂ ಆರ್‌ಎಸ್‌ಎಸ್‌ ಭಾರತ ಬೇಕಿಲ್ಲ’ ಎಂದರು.

ಕೇಂದ್ರ ಸರ್ಕಾರವು ಜನರ ಬದುಕಿಗೆ ಸಂಬಂಧಿಸಿದ ಯಾವುದೇ ಯೋಜನೆಗಳನ್ನು ಜಾರಿಗೊಳಿಸಿಲ್ಲ. ಕೋಮುವಾದಿ ಶಕ್ತಿಗಳಿಂದ ದೇಶವನ್ನು ಬಿಡುಗಡೆ ಮಾಡಬೇಕು. ರಾಜ್ಯದಿಂದಲೇ ಅದರ ಆರಂಭ ಆಗಬೇಕು. ಮುಂದಿನ ಚುನಾವಣೆಯಲ್ಲಿ ಕೋಮು ಶಕ್ತಿಗಳು ಗೆಲುವು ಸಾಧಿಸದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಟಿಪ್ಪು ಸುಲ್ತಾನ್‌ ಸಂಯುಕ್ತ ರಂಗ ರಾಜ್ಯ ಘಟಕದ ಅಧ್ಯಕ್ಷ ಸರ್ದಾರ್‌ ಅಹಮದ್‌ ಖುರೇಶಿ, ‘ಅಖಿಲ ಭಾರತ ಮಹಿಳಾ ಸಬಲೀಕರಣ ಪಕ್ಷದ (ಎಂಇಪಿ) ನಾಯಕಿ ಬಿಜೆಪಿ ಪಕ್ಷದ ಏಜೆಂಟ್‌. ರಾಜ್ಯದಲ್ಲಿರುವ ಜಾತ್ಯತೀತ ಪಕ್ಷಗಳನ್ನು ಸೋಲಿಸುವುದು ಅವರ ಗುರಿ. ಅವರು ಜನರನ್ನು ಯಾಮಾರಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ಸಂವಿಧಾನವನ್ನು ಬದಲಾಯಿಸಬೇಕು ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದ್ದಾರೆ. ಅವರನ್ನು ದೇಶದಿಂದ ಓಡಿಸಬೇಕು’ ಎಂದು ಕಿಡಿಕಾರಿದರು.

**

ಆರ್‌ಎಸ್‌ಎಸ್‌ನವರಿಗಿಂತ ದೊಡ್ಡ ದೇಶದ್ರೋಹಿಗಳು ಯಾರೂ ಇಲ್ಲ.
–ಎ.ಕೆ.ಸುಬ್ಬಯ್ಯ, ಹಿರಿಯ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT