4

ರಸಾಯನಿಕ ಶಸ್ತ್ರಾಸ್ತ್ರ ಬಳಸಿದರೆ ಮತ್ತೆ ದಾಳಿ

Published:
Updated:
ರಸಾಯನಿಕ ಶಸ್ತ್ರಾಸ್ತ್ರ ಬಳಸಿದರೆ ಮತ್ತೆ ದಾಳಿ

ವಾಷಿಂಗ್ಟನ್ (ಎಎಫ್‌ಪಿ/ರಾಯಿಟರ್ಸ್): ‘ರಸಾಯನಿಕ ದಾಳಿಯನ್ನು ಮತ್ತೆ ನಡೆಸಿದರೆ ಸಿರಿಯಾದ ಮೇಲೆ ಮತ್ತೆ ದಾಳಿ ನಡೆಸುತ್ತೇವೆ’ ಎಂದು ಅಮೆರಿಕ ಎಚ್ಚರಿಕೆ ನೀಡಿದೆ.

ಸಿರಿಯಾದ ಡಮಾಸ್ಕಸ್ ಮತ್ತು ಹಾಮ್ಸ್‌ ಮೇಲೆ ನಡೆಸಿದ ದಾಳಿ ಬಗ್ಗೆ ಮಾಹಿತಿ ನೀಡಲು ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಅಮೆರಿಕದ ಸೇನೆಯ ಜನರಲ್ ಜೋಸೆಫ್ ಡನ್‌ಫೋರ್ಡ್‌ ಸಿರಿಯಾಗೆ ಎಚ್ಚರಿಕೆ ನೀಡಿದ್ದಾರೆ.

‘ಡಮಾಸ್ಕಸ್ ಮತ್ತು ಹಾಮ್ಸ್ ಪ್ರಾಂತಗಳಲ್ಲಿ ಕೆಲವು ನಿರ್ದಿಷ್ಟ ಜಾಗಗಳ ಮೇಲೆ ಮಾತ್ರ ದಾಳಿ ನಡೆಸಲಾಗಿದೆ. ರಸಾಯನಿಕ ಶಸ್ತ್ರಾಸ್ತ್ರಗಳ ಪ್ರಯೋಗಾಲಯ, ಸಂಗ್ರಹಾಗಾರ ಮತ್ತು ರಸಾಯನಿಕ ಶಸ್ತ್ರಾಸ್ತ್ರ ದಾಳಿ ನಿರ್ದೇಶನ ಕೇಂದ್ರಗಳ ಮೇಲಷ್ಟೇ ದಾಳಿ ನಡೆಸಲಾಗಿದೆ’ ಎಂದು ಡನ್‌ಪೋರ್ಡ್ ಮಾಹಿತಿ ನೀಡಿದ್ದಾರೆ.

ಬ್ರಿಟನ್ ಮತ್ತು ಫ್ರಾನ್ಸ್‌ನ ಸಹ ಸಿರಿಯಾ ಮೇಲೆ ದಾಳಿ ಮಾಡಿರುವುದಾಗಿ ಘೋಷಿಸಿಕೊಂಡಿವೆ. ದಾಳಿಯ ಹಲವು ಚಿತ್ರಗಳನ್ನು ಬ್ರಿಟನ್ ಮತ್ತು ಫ್ರಾನ್ಸ್‌ಗಳು ಬಿಡುಗಡೆ ಮಾಡಿವೆ.

‘ಸಿರಿಯಾ ಸರ್ವಾಧಿಕಾರಿ ಬಶಾರ್ ಅಲ್ ಅಸ್ಸಾದ್ ಅವರ ರಸಾಯನಿಕ ಶಸ್ತ್ರಾಸ್ತ್ರಗಳನ್ನು ನಾಶ ಮಾಡಲು ದಾಳಿ ನಡೆಸಿ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶಿಸಿದ್ದರು. ‘ಅಸ್ಸಾದ್ ನಡೆಸಿದ್ದ ದಾಳಿಯಿಂದ ನೂರಾರು ತಂದೆ–ತಾಯಿಗಳು, ಮಕ್ಕಳು ವಿಷಗಾಳಿಯನ್ನು ಉಸಿರಾಡಿ ತಲೆಚೆಚ್ಚಿಕೊಂಡು ಸತ್ತರು. ಅವರೆಲ್ಲಾ ಗಾಳಿಗಾಗಿ ಪರಿತಪಿಸುವಂತೆ ಮಾಡಿದ ಆ ದಾಳಿಯನ್ನು ಮನುಷ್ಯರು ನಡೆಸಲು ಸಾಧ್ಯವೇ ಇಲ್ಲ. ಅದೊಂದು ರಾಕ್ಷಸೀ ಕೃತ್ಯ’ ಎಂದು ಟ್ರಂಪ್ ಹರಿಹಾಯ್ದಿದ್ದಾರೆ.

‘ಮಿತ್ರಪಕ್ಷದ ದಾಳಿ ಯಶಸ್ವಿಯಾಗಿದೆ. ಅದು ಸಿರಿಯಾ ಇರಲಿ, ಬ್ರಿಟನ್ ಆಗಿರಲಿ, ಜಗತ್ತಿನ ಯಾವ ಭಾಗದಲ್ಲಿಯೂ ರಸಾಯನಿಕ ಶಸ್ತ್ರಾಸ್ತ್ರಗಳನ್ನು ಬಳಸಲು ನಾವು ಅವಕಾಶ ಕೊಡುವುದಿಲ್ಲ’ ಎಂದು ಬ್ರಿಟನ್ ಪ್ರಧಾನಿ ಥೆರೆಸಾ ಮೇ ಹೇಳಿದ್ದಾರೆ.

‘ಇದು ಒಂದು ಸೀಮಿತ ದಾಳಿ ಮಾತ್ರ. ನಾವು ಮತ್ತೊಮ್ಮೆ ದಾಳಿ ನಡೆಸುವ ಪರಿಸ್ಥಿತಿ ಉದ್ಭವಿಸುವುದಿಲ್ಲ ಎಂದು ಭಾವಿಸಿದ್ದೇವೆ’ ಎಂದು ಫ್ರಾನ್ಸ್ ಆದ್ಯಕ್ಷ ಇಮಾನ್ಯುಯೆಲ್ ಮ್ಯಾಕ್ರೋನ್ ಹೇಳಿದ್ದಾರೆ.

‘ಬಹುತೇಕ ಕ್ಷಿಪಣಿ ಹೊಡೆದುರುಳಿಸಿದ್ದೇವೆ’

‘ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳು ನೂರಕ್ಕೂ ಹೆಚ್ಚು ಕ್ಷಿಪಣಿಗಳನ್ನು ನಮ್ಮತ್ತ ಉಡಾಯಿಸಿದ್ದವು. ಆದರೆ ಅವುಗಳಲ್ಲಿ ಬಹುತೇಕವನ್ನು ನಾವು ಹೊಡೆದುರುಳಿಸಿದ್ದೇವೆ’ ಎಂದು ಸಿರಿಯಾ ಹೇಳಿದೆ.

‘ಡಮಾಸ್ಕಸ್, ಹಾಮ್ಸ್‌ ಬಳಿಯ ಶಸ್ತ್ರಾಗಾರ ಮತ್ತು ಪ್ರಯೋಗಾಲಯಗಳ ಮೇಲೆ ಅಮೆರಿಕ ದಾಳಿ ನಡೆಸಬಹುದು ಎಂದು ರಷ್ಯಾ ನಮಗೆ ಮುನ್ನೆಚ್ಚರಿಕೆ ನೀಡಿತ್ತು. ಹೀಗಾಗಿ ಆ ಸ್ಥಳಗಳಿಂದ ಜನರನ್ನು ಮೊದಲೇ ತೆರವು ಮಾಡಿಸಿದ್ದೆವು. ರಷ್ಯಾ ಊಹಿಸಿದ್ದಂತೆಯೇ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳು ದಾಳಿ ನಡೆಸಿವೆ. ಆ ಸ್ಥಳಗಳಲ್ಲಿ ಜನರೇ ಇಲ್ಲದ ಕಾರಣ ಸಾವು–ನೋವು ಸಂಭವಿಸಿಲ್ಲ’ ಎಂದು ಸಿರಿಯಾ ಸೇನೆ ತಿಳಿಸಿದೆ.

‘ನಮ್ಮಲ್ಲಿ ಅತ್ಯಾಧುನಿಕ ಕ್ಷಿಪಣಿ ನಿರೋಧಕ ವ್ಯವಸ್ಥೆ ಇದೆ. ರಷ್ಯಾವೂ ನಮ್ಮಲ್ಲಿ ಅವರ ಕ್ಷಿಪಣಿ ನಿರೋಧಕ ಘಟಕಗಳನ್ನು ಸ್ಥಾಪಿಸಿದೆ. ಹೀಗಾಗಿ ನಮ್ಮ ವಿರುದ್ಧ ಉಡಾಯಿಸಲಾದ ಕ್ಷಿಪಣಿಗಳನ್ನು ಸುಲಭವಾಗಿ ಹೊಡೆದುರುಳಿಸಲು ಸಾಧ್ಯವಾಯಿತು. ಈ ಎಲ್ಲದರಲ್ಲೂ ನಮಗೆ ನೆರವಾದ ರಷ್ಯಾಕ್ಕೆ ಧನ್ಯವಾದ ಹೇಳುತ್ತೇವೆ’ ಎಂದು ಸಿರಿಯಾ ಹೇಳಿದೆ.

ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳ ದಾಳಿಯ ವಿರುದ್ಧ ಸಿರಿಯಾ ಜನರು ದೇಶದಾದ್ಯಂತ ಭಾರಿ ಪ್ರತಿಭಟನೆ ನಡೆಸಿದ್ದಾರೆ.

ತಜ್ಞರ ಭೇಟಿಗೂ ಮುನ್ನ ದಾಳಿ

ಮಾಸ್ಕೊ (ಎಎಫ್‌ಪಿ):
ರಾಸಾಯನಿಕ ದಾಳಿ ತನಿಖೆಗಾಗಿ ವಿಶ್ವಸಂಸ್ಥೆಯ ತಜ್ಞರ ತಂಡ ಸಿರಿಯಾದ ಡೌಮಾಗೆ ಭೇಟಿಗೂ ಮೊದಲೇ ಅಮೆರಿಕ ವೈಮಾನಿಕ ದಾಳಿ ನಡೆಸಿದೆ. ಇದು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಎಂದು ರಷ್ಯಾ ಅಧ್ಯಕ್ಷ ಪುಟಿನ್ ಆರೋಪಿಸಿದ್ದಾರೆ.

‘ಸಿರಿಯಾ ಮೇಲೆ ದಾಳಿ ನಡೆಸಿದ್ದಕ್ಕೆ ಅಮೆರಿಕ ಹೇಳುತ್ತಿರುವ ನೆಪದಲ್ಲಿ ಯಾವುದೇ ಹುರುಳಿಲ್ಲ. ರಾಸಾಯನಿಕ ಶಸ್ತ್ರಾಸ್ತ್ರಗಳ ದಾಳಿ ನಡೆದಿಲ್ಲ ಎಂದು ನಮ್ಮ ಸೈನಿಕರು ದೃಢಪಡಿಸಿದ್ದಾರೆ’ ಎಂದು ಅವರು ಪ್ರತಿಪಾದಿಸಿದ್ದಾರೆ.

‘ಸಿರಿಯಾ ಮೇಲೆ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳು ನಡೆಸಿದ ದಾಳಿಯ ಬಗ್ಗೆ ಚರ್ಚಿಸಲು ವಿಶ್ವಸಂಸ್ಥೆಯು ತನ್ನ ಭದ್ರತಾ ಮಂಡಳಿಯ ತುರ್ತು ಸಭೆಯನ್ನು ಕರೆಯಬೇಕು’ ಎಂದು ಪುಟಿನ್ ಹೇಳಿದ್ದಾರೆ.

ಡೌಮಾದಲ್ಲಿದ್ದ ಬಂಡುಕೋರರನ್ನು ಓಡಿಸಲು ಏಪ್ರಿಲ್ 7ರಂದು ಸಿರಿಯಾ ಸೇನೆ ದಾಳಿ ನಡೆಸಿತ್ತು. ಯಾವುದೇ ಗಾಯಗಳಾಗದಿದ್ದರೂ ಸುಮಾರು 70 ಜನರು ಆ ದಾಳಿಯಲ್ಲಿ ಮೃತಪಟ್ಟಿದ್ದರು. ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಬಳಸಿದ್ದರಿಂದಲೇ ಜನರು ಮೃತಪಟ್ಟಿದ್ದಾರೆ ಎಂದು ಕೆಲವು ಸ್ವಯಂಸೇವಾ ಸಂಸ್ಥೆಗಳು ಆರೋಪಿಸಿದ್ದವು.

2013ರಿಂದ ಸಿರಿಯಾ ಹಲವು ಬಾರಿ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಬಳಸಿತ್ತು. ಅವುಗಳನ್ನು ಬಳಸದಂತೆ ಅಮೆರಿಕ, ಬ್ರಿಟನ್, ಫ್ರಾನ್ಸ್ ಮತ್ತು ರಷ್ಯಾಗಳು ತಾಕೀತು ಮಾಡಿದ್ದವು.

*

ಇದು ಅತ್ಯಂತ ಪ್ರಚೋದನಾಕಾರಿ ದಾಳಿ. ಅಂತರರಾಷ್ಟ್ರೀಯ ಸಂಬಂಧಗಳ ಮೇಲೆ ಈ ದಾಳಿ ಕೆಟ್ಟ ಪರಿಣಾಮ ಬೀರುತ್ತದೆ.

–ವ್ಲಾದಿಮಿರ್ ಪುಟಿನ್, ರಷ್ಯಾ ಅಧ್ಯಕ್ಷ

*

ದೇಶದ ಮೂಲೆಮೂಲೆಯಲ್ಲಿರುವ ಉಗ್ರರನ್ನು ಧ್ವಂಸ ಮಾಡುವ ಸಿರಿಯಾ ಜನರ ಕಿಚ್ಚನ್ನು ಅಮೆರಿಕದ ಈ ದಾಳಿ ಮತ್ತಷ್ಟು ಉದ್ದೀಪಿಸಿದೆ.

–ಬಶರ್ ಅಲ್ ಅಸ್ಸಾದ್, ಸಿರಿಯಾ ಅಧ್ಯಕ್ಷ

* 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry