ಸುಳಿವು ಕೊಟ್ಟು ಜೈಲಿಗಟ್ಟಿದ ದೂರುದಾರ!

7
ಮೊಬೈಲ್‌ ಕಳವು lಬಾಲಕರು ಸೇರಿ ಮೂವರ ಬಂಧನ

ಸುಳಿವು ಕೊಟ್ಟು ಜೈಲಿಗಟ್ಟಿದ ದೂರುದಾರ!

Published:
Updated:

ಬೆಂಗಳೂರು: ಮೊಬೈಲ್‌ ಕಿತ್ತುಕೊಂಡು ಪರಾರಿಯಾಗಿದ್ದ ಕಳ್ಳರ ಬಗ್ಗೆ ದೂರುದಾರರೇ ಮಾಹಿತಿ ಸಂಗ್ರಹಿಸಿ, ಪೊಲೀಸರಿಗೆ ನೀಡುವ ಮೂಲಕ ಆರೋಪಿಗಳನ್ನು ಜೈಲಿಗಟ್ಟಿದ್ದಾರೆ.

ಸುಳ್ಯದ ಜೈಮಿನಿ ಎಂಬುವರು ಫೆ.26ರಂದು ಬನ್ನೇರುಘಟ್ಟ ರಸ್ತೆಯ ಕಾರ್ಮಿಕ ಭವನಕ್ಕೆ ತೆರಳಿದ್ದರು. ಅಲ್ಲಿ ಕೆಲಸ ಮುಗಿದ ಬಳಿಕ, ವಾಪಸ್ ಊರಿಗೆ ಹೊರಡಲು ಡೈರಿ ವೃತ್ತಕ್ಕೆ ಬಂದು ನಿಂತಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು, ಮೊಬೈಲ್‌ ಕಿತ್ತುಕೊಂಡು ಪರಾರಿಯಾಗಿದ್ದರು.

ಮೊಬೈಲ್‌ ಕಳವಾದ ಸಂಬಂಧ ‘ಇ–ಲಾಸ್ಟ್‌’ ಆ್ಯಪ್‌ನಲ್ಲಿ ದೂರು ಸಲ್ಲಿಸಿದ ಜೈಮಿನಿ, ಸ್ವೀಕೃತಿ ಪ‍ತ್ರವನ್ನು ಸಿದ್ದಾಪುರ ಠಾಣೆಗೆ ನೀಡಿದ್ದರು. ಪೊಲೀಸರು ತನಿಖೆ ನಡೆಸಿದರೂ, ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆಗ ದೂರುದಾರರೇ ಆರೋಪಿಗಳ ಬಗ್ಗೆ ಮಾಹಿತಿ ಕಲೆಹಾಕಲು ಆರಂಭಿಸಿದ್ದರು.

ಆ್ಯಪ್‌ವೊಂದರ ನೆರವಿನಿಂದ ತಮ್ಮ ಮೊಬೈಲ್‌ನ ಕರೆ ವಿವರಗಳನ್ನು (ಸಿಡಿಆರ್) ಸಂಗ್ರಹಿಸಿದ ಜೈಮಿನಿ, ಆ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದರು. ಅದರನ್ವಯ ಕಾರ್ಯಾಚರಣೆ ಪ್ರಾರಂಭಿಸಿದ ಇನ್‌ಸ್ಪೆಕ್ಟರ್‌ ನೇತೃತ್ವದ ತಂಡ, ಆರೋಪಿ ಅಬೂಬಕರ್‌ (19) ಸೇರಿದಂತೆ ಇಬ್ಬರು ಬಾಲಕರನ್ನು ಬಂಧಿಸಿದೆ. ಅವರಿಂದ ಐದು ಮೊಬೈಲ್‌ ಹಾಗೂ 1 ಬೈಕ್‌ ಜಪ್ತಿ ಮಾಡಿದೆ.

ಒಎಲ್‌ಎಕ್ಸ್‌ನಲ್ಲಿ ಮಾರಾಟ: ‘ಕದ್ದ ಮೊಬೈಲ್‌ಗಳನ್ನು ಆರೋಪಿಗಳು, ಮೊಬೈಲ್‌ ದುರಸ್ತಿ ಮಾಡುತ್ತಿದ್ದ ವ್ಯಕ್ತಿಯೊಬ್ಬನಿಗೆ ಮಾರಾಟ ಮಾಡುತ್ತಿದ್ದರು. ಆತ, ನಕಲಿ ಬಿಲ್‌ ಸೃಷ್ಟಿಸಿ ಒಎಲ್‌ಎಕ್ಸ್‌ ಜಾಲತಾಣದ ಮೂಲಕ ಗ್ರಾಹಕರಿಗೆ ಮಾರುತ್ತಿದ್ದ’ ಎಂದು ಪೊಲೀಸರು ತಿಳಿಸಿದರು.

ದೂರುದಾರ ಜೈಮಿನಿ ಅವರ ಮೊಬೈಲ್‌ನ್ನು ಚೆನ್ನೈನ ವ್ಯಕ್ತಿಯೊಬ್ಬನಿಗೆ ಮಾರಾಟ ಮಾಡಲಾಗಿತ್ತು. ಆತನಿಗೆ ಕರೆ ಮಾಡಿದರೆ, ‘ನಾನು ಹೊಸ ಮೊಬೈಲ್‌ ಖರೀದಿ ಮಾಡಿದ್ದೇನೆ. ಕರೆ ಮಾಡಿ ತೊಂದರೆ ಕೊಡಬೇಡಿ’ ಎನ್ನುತ್ತಿದ್ದ. ನಂತರ, ಆತನಿರುವ ಸ್ಥಳಕ್ಕೆ ಹೋಗಿ ವಶಕ್ಕೆ ಪಡೆದೆವು. ಆತ ನೀಡಿದ ಮಾಹಿತಿಯಂತೆ, ಮೊಬೈಲ್‌ ಮಾರಿದ್ದ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳು ಸಿಕ್ಕಿಬಿದ್ದರು ಎಂದು ಅವರು ತಿಳಿಸಿದರು.

**

ಇ–ಮೇಲ್‌ ಮೂಲಕ ನೋಂದಣಿ

‘ಮೊಬೈಲ್‌ ಖರೀದಿ ಮಾಡಿದ್ದ ವೇಳೆ, ಕರೆಗಳ ವಿವರ ಪಡೆಯಲೆಂದು ಆ್ಯಪೊಂದನ್ನು ಇನ್‌ಸ್ಟಾಲ್‌ ಮಾಡಿಕೊಂಡಿದ್ದೆ. ಮೊಬೈಲ್‌ ಸಂಖ್ಯೆ ಆಧರಿತ ಒನ್‌ ಟೈಂ ಪಾಸ್‌ವರ್ಡ್‌ (ಒಟಿಪಿ) ಬದಲು, ಇ–ಮೇಲ್‌ ಮೂಲಕ ನೋಂದಣಿ ಮಾಡಿಕೊಂಡಿದ್ದೆ. ಮೊಬೈಲ್‌ ಕಳೆದಾಗಲೂ ಕರೆಗಳ ವಿವರವು ಇ–ಮೇಲ್‌ಗೆ ಬರುತ್ತಿತ್ತು. ಅದುವೇ ಕಳ್ಳರನ್ನು ಹಿಡಿಯಲು ನೆರವಾಯಿತು’ ಎಂದು ಜೈಮಿನಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ನನ್ನ ಮೊಬೈಲ್‌ ಕಳವಾದ ನಂತರ, ಎರಡು ದಿನ ಸ್ವಿಚ್ಡ್‌ ಆಫ್‌ ಆಗಿತ್ತು. ನಂತರ, ಬೇರೊಂದು ಸಿಮ್‌ ಕಾರ್ಡ್‌ ಮೂಲಕ ಆನ್‌ ಮಾಡಲಾಗಿತ್ತು. ಆ ಮಾಹಿತಿಯೂ ನನಗೆ ಬಂದಿತ್ತು. ಅದನ್ನೇ ಪೊಲೀಸರಿಗೆ ತಿಳಿಸಿದ್ದೆ. ಅವರು ಆರೋಪಿಯನ್ನು ಬಂಧಿಸಿ, ನನ್ನ ಮೊಬೈಲ್‌ ಸಿಗುವಂತೆ ಮಾಡಿದ್ದಾರೆ’ ಎಂದರು.

**

ಪ್ರತ್ಯೇಕ ಪ್ರಕರಣ; ಐವರು ಶಾಲಾ ಬಾಲಕರ ಬಂಧನ

ಇನ್ನೊಂದು ಪ್ರಕರಣದಲ್ಲಿ ಐವರು ಶಾಲಾ ಬಾಲಕರನ್ನು ಬಂಧಿಸಿರುವ ಸಿದ್ದಾಪುರ ಪೊಲೀಸರು, ಅವರಿಂದ 15 ಮೊಬೈಲ್, 4 ಬೈಕ್‌ ಜಪ್ತಿ ಮಾಡಿದ್ದಾರೆ.

‘ನಗರದ ಶಾಲೆಯೊಂದರಲ್ಲಿ ಓದುತ್ತಿರುವ ವಿದ್ಯಾರ್ಥಿಗಳು, ದುಶ್ಚಟಗಳಿಗೆ ಹಣ ಹೊಂದಿಸಲೆಂದು ಮೊಬೈಲ್‌ ಕಳವು ಮಾಡುತ್ತಿದ್ದರು. ಶಾಲಾ ಶುಲ್ಕ ಪಾವತಿಗೆ ಹಣ ಬೇಕೆಂದು ಹೇಳಿ ಆ ಮೊಬೈಲ್‌ಗಳನ್ನು ಮಾರಾಟ ಮಾಡುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಅವರನ್ನು ಬಾಲಮಂದಿರಕ್ಕೆ ಕಳುಹಿಸಿದ್ದೇವೆ. ಜಪ್ತಿ ಮಾಡಿರುವ ಮೊಬೈಲ್‌ಗಳ ಪೈಕಿ ಒಂದರ ಮಾಲೀಕರು ಮಾತ್ರ ಸಿಕ್ಕಿದ್ದಾರೆ. ಉಳಿದವರು ಯಾರು ಎಂಬುದನ್ನು ಹುಡುಕುತ್ತಿದ್ದೇವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry