ಬುಧವಾರ, ಡಿಸೆಂಬರ್ 11, 2019
16 °C

ಕಾರಾಗೃಹದಲ್ಲಿ ಎಲ್‌ಇಡಿ, ಕೂಲರ್‌ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರಾಗೃಹದಲ್ಲಿ ಎಲ್‌ಇಡಿ, ಕೂಲರ್‌ ಪತ್ತೆ

ಬಳ್ಳಾರಿ: ಇಲ್ಲಿನ ಕೇಂದ್ರ ಕಾರಾಗೃಹಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣ ರಂಗ ರಾಜನ್‌ ಶನಿವಾರ ದಿಢೀರ್‌ ಭೇಟಿ ನೀಡಿ ತಪಾಸಣೆ ನಡೆಸಿದ ಸಂದರ್ಭದಲ್ಲಿ ಸೆಲ್‌ಗಳಲ್ಲಿ ಎಲ್‌ಇಡಿ ಟಿ.ವಿ ಮತ್ತು ಏರ್‌ಕೂಲರ್‌ ಸೇರಿದಂತೆ ಅಪಾರ ಪ್ರಮಾಣದ ತಂಬಾಕು ಉತ್ಪನ್ನ, ಮೊಬೈಲ್‌ ಫೋನ್‌ಗಳು ಹಾಗೂ ಚಾರ್ಜರ್‌ಗಳು ಪತ್ತೆಯಾದವು. ಮಧ್ಯಾಹ್ನ ಮೂರು ಗಂಟೆಯ ವೇಳೆಗೆ ಭೇಟಿ ನೀಡಿದ ಅವರು ರಾತ್ರಿ 7.30ರ ವರೆಗೂ ತಪಾಸಣೆ ನಡೆಸಿದರು.

‘3 ಎಲ್‌ಇಡಿ ಟ.ವಿ, ಒಂದು ಏರ್‌ ಕೂಲರ್‌, 786 ತಂಬಾಕು ಪೊಟ್ಟಣಗಳು, 14 ಮೊಬೈಲ್‌ ಫೋನ್‌, 8 ಚಾರ್ಜರ್‌, 5 ಈಯರ್‌ ಫೋನ್‌, 500 ಸಿಗರೇಟ್‌ ಪ್ಯಾಕೆಟ್‌ಗಳು, 180 ಬೀಡಿ ಪ್ಯಾಕೆಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ದೂರು ದಾಖಲಿಸಲಾಗುವುದು’ ಎಂದು ಎಸ್ಪಿ ಸುದ್ದಿಗಾರರಿಗೆ ತಿಳಿಸಿದರು.

‘ಕಾರಾಗೃಹ ಡಿಜಿಪಿ, ಎಡಿಜಿಪಿ ಅವರ ಸೂಚನೆ ಮೇರೆಗೆ ತಪಾಸಣೆ ನಡೆಸಲಾಯಿತು. ತಪಾಸಣೆ ಸಂದರ್ಭದಲ್ಲಿ ಕಂಡುಬಂದ ಎಲ್ಲ ಸಂಗತಿಗಳನ್ನೂ ಅವರ ಗಮನಕ್ಕೆ ತರಲಾಗಿದೆ’ ಎಂದರು.

ಕಾರಾಗೃಹ ಅಧೀಕ್ಷಕ ಡಾ.ಪಿ.ರಂಗನಾಥ್‌ ಕಚೇರಿ ಕಾರ್ಯ ನಿಮಿತ್ತ ಬೆಂಗಳೂರಿಗೆ ತೆರಳಿದ್ದಾಗಲೇ ಈ ತಪಾಸಣೆ ನಡೆದಿದೆ.

ಪ್ರೇಮಿಗಳಿಗೆ ಎಚ್ಚರಿಕೆ: ಕಾರಾಗೃಹಕ್ಕೆ ಭೇಟಿ ನೀಡುವ ಮುನ್ನ ನಗರದ ಕಿರು ಮೃಗಾಲಯಕ್ಕೆ ಭೇಟಿ ನೀಡಿದ್ದ ಎಸ್ಪಿ, ಅಲ್ಲಿದ್ದ ಯುವಕ– ಯುವತಿಯರಿಗೆ ಎಚ್ಚರಿಕೆ ನೀಡಿದರು.

ಕೆಲವರ ವಯಸ್ಸು 18ಕ್ಕಿಂತ ಕಡಿಮೆ ಇದ್ದುದು ತಿಳಿದುಬಂದ ಬಳಿಕ ಅಸಮಾಧಾನಗೊಂಡ ಅವರು, ವಯಸ್ಕರಾಗುವವರೆಗೂ ಪ್ರೀತಿ– ಪ್ರೇಮ ಎಂದು ಅಲೆದಾಡದೆ, ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಿ ಎಂದು ಸೂಚಿಸಿದರು.

ಅಪ್ರಾಪ್ತ ವಯಸ್ಸಿನ ಬಾಲಕಿಯರೊಂದಿಗೆ ದುರ್ವರ್ತನೆ, ಪ್ರೇಮಿಸಿ ವಂಚಿಸಿದರೆ ಪೋಕ್ಸೋ ಕಾಯ್ದೆ ಅಡಿ ಜೈಲು ಸೇರಬೇಕಾಗುತ್ತದೆ ಎಂದು ಅವರು ಯುವಕರಿಗೆ ಎಚ್ಚರಿಕೆ ನೀಡಿದರು.

ಮಂಗಳೂರು ಜೈಲಿನೊಳಗೂ ಗಾಂಜಾ, ಮೊಬೈಲ್‌, ಸಿಮ್‌ ಪತ್ತೆ

ಮಂಗಳೂರು:
ನಗರದ ಜಿಲ್ಲಾ ಕಾರಾಗೃಹದಲ್ಲಿನ ಕೈದಿಗಳ ಬ್ಯಾರಕ್‌ಗಳ ಮೇಲೆ ಶನಿವಾರ ಮಧ್ಯಾಹ್ನ ಪೊಲೀಸರು ದಿಢೀರ್‌ ದಾಳಿ ಮಾಡಿ ಶೋಧ ನಡೆಸಿದ್ದು, ಗಾಂಜಾ, ಮೊಬೈಲ್‌, ಸಿಮ್‌ ಕಾರ್ಡ್ ಸೇರಿದಂತೆ ಹಲವು ನಿಷೇಧಿತ ವಸ್ತುಗಳು ಪತ್ತೆಯಾಗಿವೆ.

ಪೊಲೀಸ್ ಕಮಿಷನರ್‌ ಟಿ.ಆರ್‌.ಸುರೇಶ್‌ ನಿರ್ದೇಶನದಂತೆ ಡಿಸಿಪಿಗಳಾದ ಹನುಮಂತರಾಯ, ಉಮಾ ಪ್ರಶಾಂತ್‌ ನೇತೃತ್ವದಲ್ಲಿ 20 ಅಧಿಕಾರಿಗಳು, 30 ಸಿಬ್ಬಂದಿ ಮತ್ತು ಮಹಿಳಾ ಸಿಬ್ಬಂದಿಯ ತಂಡ ಸಂಜೆ 4 ಗಂಟೆ ಸುಮಾರಿಗೆ ಕಾರಾಗೃಹದಲ್ಲಿ ಶೋಧ ಆರಂಭಿಸಿತು. ಜೈಲಿನಲ್ಲಿರುವ ಎಲ್ಲ ಬ್ಯಾರಕ್‌ಗಳಲ್ಲೂ ಲೋಹ ಶೋಧಕಗಳ ನೆರವಿನೊಂದಿಗೆ ತಪಾಸಣೆ ನಡೆಸಲಾಯಿತು.

‘ಕೆಲವು ಕೈದಿಗಳ ಬ್ಯಾರಕ್‌ನಲ್ಲಿ ನಿಷೇಧಿತ ವಸ್ತುಗಳು ಪತ್ತೆಯಾಗಿವೆ. ಸುಮಾರು 250 ಗ್ರಾಂ. ಗಾಂಜಾ, ಒಂದು ಮೊಬೈಲ್‌, ಎರಡು ಸಿಮ್‌ ಕಾರ್ಡ್‌, ಕಬ್ಬಿಣದ ಸರಳುಗಳು, ಕಟ್ಟರ್‌, ಬೀಡಿ ಕಟ್ಟುಗಳು, ಬೆಂಕಿಕಡ್ಡಿ ಪೊಟ್ಟಣ, ಸಿಗರೇಟು, ತಂಬಾಕು ಜೈಲಿನೊಳಗೆ ಪತ್ತೆಯಾಗಿವೆ. ಎಲ್ಲವನ್ನೂ ವಶಪಡಿಸಿಕೊಳ್ಳಲಾಗಿದೆ’ ಎಂದು ಕಮಿಷನರ್ ಟಿ.ಆರ್.ಸುರೇಶ್ ತಿಳಿಸಿದರು.

ಜೈಲಿನೊಳಗೆ ನಿಷೇಧಿತ ವಸ್ತುಗಳನ್ನು ಕೊಂಡೊಯ್ಯಲಾಗುತ್ತಿದೆ ಮತ್ತು ವಿಚಾರಣಾಧೀನ ಕೈದಿಗಳಿಗೆ ಮಾದಕ ವಸ್ತುಗಳ ಪೂರೈಕೆ ಆಗುತ್ತಿದೆ ಎಂಬ ಮಾಹಿತಿ ಆಧರಿಸಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಚಿಕ್ಕ ಪೊಟ್ಟಣಗಳಲ್ಲಿ ಗಾಂಜಾವನ್ನು ಕೈದಿಗಳಿಗೆ ಒದಗಿಸುತ್ತಿರುವುದು ಶೋಧದ ವೇಳೆ ಕಂಡುಬಂದಿದೆ. ಹಲವು ಕೈದಿಗಳ ಬಳಿ ಗಾಂಜಾ ಪೊಟ್ಟಣಗಳು ದೊರಕಿವೆ.

ವಶಪಡಿಸಿಕೊಂಡ ವಸ್ತುಗಳನ್ನು ಬರ್ಕೆ ಪೊಲೀಸ್ ಠಾಣೆಗೆ ಹಸ್ತಾಂತರ ಮಾಡಲಾಗಿದೆ. ಜೈಲಿನೊಳಗೆ ನಿಷೇಧಿತ ವಸ್ತುಗಳನ್ನು ಕೊಂಡೊಯ್ದಿರುವ ಸಂಬಂಧ ಅಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಈ ವಸ್ತುಗಳು ಜೈಲಿನೊಳಗೆ ಹೇಗೆ ಬಂದವು ಮತ್ತು ಅವುಗಳನ್ನು ಸಾಗಿಸಲು ನೆರವಾದ ವ್ಯಕ್ತಿಗಳು ಯಾರು ಎಂಬುದರ ಕುರಿತು ತನಿಖೆ ನಡೆಯಲಿದೆ ಎಂದು ಕಮಿಷನರ್‌ ತಿಳಿಸಿದರು.

ಪ್ರತಿಕ್ರಿಯಿಸಿ (+)