ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲಿಂಗ ಆಧಾರದಲ್ಲಿ ಗುರುತಿಸಬೇಡಿ’

ಲೈಂಗಿಕ ಅಲ್ಪಸಂಖ್ಯಾತರ ಅಂತರರಾಷ್ಟ್ರೀಯ ಸಮಾವೇಶ
Last Updated 14 ಏಪ್ರಿಲ್ 2018, 19:57 IST
ಅಕ್ಷರ ಗಾತ್ರ

ಬೆಂಗಳೂರು: ‘ಹೆಣ್ಣು–ಗಂಡು ಎಂದರೆ ಕೇವಲ ಲಿಂಗದ ಆಧಾರದಲ್ಲಿ ಗುರುತಿಸುವ ಜೀವಗಳಲ್ಲ. ನಮಗೂ ಒಂದು ಅಸ್ತಿತ್ವವಿದೆ. ಈ ನೆಲದ ಕಾನೂನುಗಳು ನಮಗೂ ಸಮಾನತೆ ನೀಡಬೇಕು’ ಎಂಬ ಪ್ರಬಲ ಪ್ರತಿಪಾದನೆ ಮುಖಾಂತರ ಲೈಂಗಿಕ ಅಲ್ಪಸಂಖ್ಯಾತರು ಎರಡು ದಿನಗಳ ಅಂತರರಾಷ್ಟ್ರೀಯ ಬೌದ್ಧಿಕ ಸಮಾವೇಶಕ್ಕೆ ಶನಿವಾರ ತಿದಿ ಒತ್ತಿದರು.

‘ಸೆಂಟರ್ ಫಾರ್ ಲಾ ಅಂಡ್‌ ಪಾಲಿಸಿ ರೀಸರ್ಚ್‌’, ‘ಸ್ವತಂತ್ರ ಮತ್ತು ಒಂದೆಡೆ’ ಆಶ್ರಯದಲ್ಲಿ ನಗರದ ‘ಇಂಡಿಯನ್ ಇನ್‌ಸ್ಟಿಟ್ಯೂಟ್ ಫಾರ್ ಹ್ಯೂಮನ್ ಸೆಟ್ಲ್‌ಮೆಂಟ್ಸ್‌’ (ಐಐಎಚ್‌ಎಸ್) ಸಭಾಂಗಣದಲ್ಲಿ ಸಮಾವೇಶ ಬೆಳಿಗ್ಗೆ ಆರಂಭವಾಯಿತು.

'ಲೈಂಗಿಕ ಅಲ್ಪಸಂಖ್ಯಾತರ ಹಕ್ಕು ಬಾಧ್ಯತೆಗಳು, ಶಿಕ್ಷಣ, ಕೌಶಲ, ಅಭಿವೃದ್ಧಿ ಮತ್ತು ಉದ್ಯೋಗ, ಸರ್ಕಾರಿ ನೌಕರಿಯಲ್ಲಿ ಸಿಗಬೇಕಾದ ಸೂಕ್ತ ಸ್ಥಾನಮಾನಗಳೂ ಸೇರಿದಂತೆ ಸಮಾನ ಅವಕಾಶಗಳು ಇನ್ನೂ ಸಿಗುತ್ತಿಲ್ಲ' ಎಂದು ಸಮಾವೇಶದಲ್ಲಿ ಪಾಲ್ಗೊಂಡಿದ್ದ ಕಾನೂನು ತಜ್ಞರು ಆತಂಕ ವ್ಯಕ್ತಪಡಿಸಿದರು.

‘ತೆಲಂಗಾಣದ ಹಿಜಡಾ ಸಮಿತಿ’ ಸಂಸ್ಥಾಪಕರಾದ ವೈಜಯಂತಿ ವಸಂತ ಮೋಗ್ಲಿ ಮಾತನಾಡಿ, ‘ಮೂಲಭೂತ ಹಕ್ಕು ಸೇರಿದಂತೆ ಘನತೆಯಿಂದ ಬದುಕುವ ಯಾವ ಹಕ್ಕುಗಳೂ ನಮಗೆ ಸಮರ್ಪಕವಾಗಿ ಸಿಕ್ಕಿಲ್ಲ. ಸಾರ್ವಜನಿಕ ಸ್ಥಳಗಳ ಶೌಚಾಲಯ ಮಾತ್ರವಲ್ಲ, ಹೈಕೋರ್ಟ್‌ ಒಳಗೇ ನಮ್ಮನ್ನು ಬಿಡುವುದಿಲ್ಲ. ನಿಮ್ಮ ಗುರುತಿನ ಚೀಟಿ ತೋರಿಸಿ ಎಂದು ಪೊಲೀಸರು ಕೇಳುತ್ತಾರೆ. ಶಾಸನ ರೂಪಿಸುವವರು ಕಾನೂನು ಮಾಡಿದರೂ ಸಮಾಜ ನಮ್ಮನ್ನು ಅಪ್ಪಿಕೊಳ್ಳುವ ವೈಶಾಲ್ಯತೆ ಮೆರೆಯುತ್ತಿಲ್ಲ’ ಎಂದು ವಿಷಾದಿಸಿದರು.

ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಆನಂದ ಗ್ರೋವರ್, ‘ಖಾಸಗಿತನದ ಹಕ್ಕು ಮತ್ತು ಲೈಂಗಿಕ ಅಲ್ಪಸಂಖ್ಯಾತರ ಮೇಲೆ ಅದರ ಪ್ರಭಾವ’ ಎಂಬ ವಿಷಯದ ಕುರಿತಂತೆ ಮಾತನಾಡಿ, ‘ಲೈಂಗಿಕ ಅಲ್ಪಸಂಖ್ಯಾತರಿಗೆ ಮೀಸಲಾತಿ ಸಿಗಬೇಕು. ಶಾಸನಸಭೆಗಳಲ್ಲಿ ಈ ಸಮುದಾಯವನ್ನು ಪ್ರತಿನಿಧಿಸುವವರ ಅವಶ್ಯಕತೆ ಇದೆ’ ಎಂದರು. ‘ಒಪ್ಪಿಗೆಯ ಅನುಸಾರ ನಡೆಯುವ ಲೈಂಗಿಕ ಕ್ರಿಯೆಗೆ ವಯೋಮಿತಿಯ ಬಗ್ಗೆ ವಿಶ್ಲೇಷಣೆ ನಡೆಯಬೇಕು’ ಎಂದೂ ಅವರು ಹೇಳಿದರು.

‘ಸ್ವತಂತ್ರ ಮತ್ತು ಒಂದೆಡೆ’ ಟ್ರಸ್ಟ್‌ ಮುಖ್ಯಸ್ಥೆ ಅಕ್ಕೈ ಪದ್ಮಶಾಲಿ, ‘ಬ್ಯಾಂಕುಗಳಲ್ಲಿ ನಮಗೆಲ್ಲಾ ಸಾಲ ಕೊಡಲು ಅಧಿಕಾರಿಗಳು ಹಿಂಜರಿಯುತ್ತಾರೆ. ರಸ್ತೆಗಳಲ್ಲಿ ಭಿಕ್ಷೆ ಬೇಡುವ ಮತ್ತು ಲೈಂಗಿಕ ಕಾರ್ಯಕರ್ತರ ಮೇಲೆ ಪೊಲೀಸರ ದಬ್ಬಾಳಿಕೆ ನಡೆಯುತ್ತಲೇ ಇದೆ. ಇದೆಲ್ಲಾ ಕೊನೆಯಾಗಬೇಕು’ ಎಂದು ಆಗ್ರಹಿಸಿದರು.

ಪೆರು ದೇಶದ ಕಾನೂನು ವಿಶ್ವವಿದ್ಯಾಲಯದ ಪ್ರೊಫೆಸರ್ ಕಾರ್ಲೊಸ್‌ ಜೆ ಝೆಲಾಡ, ಅರವಿಂದ ನಾರಿಯನ್‌, ಜಯ್ನಾ ಕೊಠಾರಿ, ತೃಪ್ತಿ ಟಂಡನ್‌, ಪ್ರೊಫೆಸರ್ ಕೆ.ಸೀತಾರಾಮನ್‌ ವಿಷಯ ಮಂಡಿಸಿದರು.

‘ಟ್ರಾನ್ಸ್‌ಫಾರ್ಮ್‌’ ಘೋಷವಾಕ್ಯದೊಂದಿಗೆ ಆರಂಭವಾದ ಈ ಸಮ್ಮೇಳನದಲ್ಲಿ ವಿವಿಧೆಡೆಯಿಂದ ಬಂದಿದ್ದ 300ಕ್ಕೂ ಹೆಚ್ಚು ಲೈಂಗಿಕ ಅಲ್ಪಸಂಖ್ಯಾತರು, ವಿವಿಧ ಕ್ಷೇತ್ರಗಳ ತಜ್ಞರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT