ಭಾನುವಾರ, ಡಿಸೆಂಬರ್ 15, 2019
21 °C

ಕಾಂಗ್ರೆಸ್‌ ಪಟ್ಟಿ ಕಗ್ಗಂಟು

ಸಿದ್ದಯ್ಯ ಹಿರೇಮಠ Updated:

ಅಕ್ಷರ ಗಾತ್ರ : | |

ಕಾಂಗ್ರೆಸ್‌ ಪಟ್ಟಿ ಕಗ್ಗಂಟು

ನವದೆಹಲಿ: ಬೇರೆ ಪಕ್ಷಗಳಿಂದ ವಲಸೆ ಬಂದಿರುವವರು ಹಾಗೂ ಸೋಲಿನ ಸುಳಿಯಲ್ಲಿರುವ ಪಕ್ಷದ 10ಕ್ಕೂ ಹೆಚ್ಚು ಜನ ಹಾಲಿ ಶಾಸಕರಿಗೆ ಟಿಕೆಟ್ ಹಂಚಿಕೆ ಮಾಡುವ ಕುರಿತು ರಾಜ್ಯ ಮುಖಂಡರಲ್ಲಿನ ಜಟಾಪಟಿ ಮುಂದುವರಿದ ಕಾರಣ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಶನಿವಾರವೂ ಅಂತಿಮಗೊಂಡಿಲ್ಲ.

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರೇ ಮೂರು ಗಂಟೆಗೂ ಅಧಿಕ ಕಾಲ ರಾಜ್ಯ ಮುಖಂಡರೊಂದಿಗೆ ಚರ್ಚಿಸಿ, 199 ಕ್ಷೇತ್ರಗಳ ಅಭ್ಯರ್ಥಿಗಳಿಗೆ ಟಿಕೆಟ್‌ ಹಂಚುವ ಪ್ರಕ್ರಿಯೆಗೆ ಹಸಿರು ನಿಶಾನೆ ತೋರಿದ್ದಾರೆ. ಆದರೆ, ಇನ್ನೂ 24 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕಗ್ಗಂಟು ಮುಂದುವರಿದಿದ್ದರಿಂದ, ಭಾನುವಾರ ಮತ್ತೊಂದು ಸುತ್ತಿನ ಮಾತುಕತೆ ನಡೆಸಿ, ಮಧ್ಯಾಹ್ನದ ವೇಳೆಗೆ ಎಲ್ಲ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಶುಕ್ರವಾರವಿಡೀ ಪಕ್ಷದ ಕೇಂದ್ರ ಚುನಾವಣಾ ಸಮಿತಿಯು ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ಎರಡು ಸುತ್ತಿನ ಸಭೆ ನಡೆಸಿ ಚರ್ಚಿಸಿದ್ದರೂ, ಕೆಲವು ಕ್ಷೇತ್ರಗಳ ಟಿಕೆಟ್‌ ಹಂಚಿಕೆ ಕುರಿತು ರಾಜ್ಯ ಮುಖಂಡರಲ್ಲಿ ಒಮ್ಮತ ಮೂಡದ್ದರಿಂದ ಸಭೆಯನ್ನು ಮುಂದೂಡಲಾಗಿತ್ತು.

ಇಲ್ಲಿನ ಗುರುದ್ವಾರಾ ರಖಬ್‌ಗಂಜ್‌ ರಸ್ತೆಯಲ್ಲಿರುವ ಪಕ್ಷದ ಐ.ಟಿ. ಸೆಲ್‌ ಕಚೇರಿಯಲ್ಲಿ ಬೆಳಿಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಅವರೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದ ಮಧುಸೂದನ ಮಿಸ್ತ್ರಿ ನೇತೃತ್ವದ ಚುನಾವಣಾ ಪರಿಶೀಲನಾ ಸಮಿತಿಯು, ಒಮ್ಮತದ ಪಟ್ಟಿ ಸಿದ್ಧಪಡಿಸುವುದಕ್ಕೆ ಪ್ರಯತ್ನ ನಡೆಸಿತಾದರೂ ರಾಜ್ಯ ನಾಯಕರು ಪಟ್ಟು ಬಿಡದ ಕಾರಣ ಮತ್ತೆ ಸಂಜೆ ಸಭೆ ಸೇರಿ ಚರ್ಚಿಸಲು ನಿರ್ಧರಿಸಿತು.

ಜೆಡಿಎಸ್‌ನಿಂದ ವಲಸೆ ಬಂದಿರುವ ಏಳು ಜನ, ಬೀದರ್‌ನ ಅಶೋಕ್‌ ಖೇಣಿ, ವಿಜಯನಗರದ ಆನಂದ್‌ ಸಿಂಗ್‌, ಕೂಡ್ಲಿಗಿಯ ಬಿ.ನಾಗೇಂದ್ರ ಅವರಿಗೆ ಟಿಕೆಟ್‌ ಹಂಚಿಕೆ ಮಾಡುವ ಕುರಿತೂ ಸಾಕಷ್ಟು ಚರ್ಚೆ ನಡೆಸಲಾಯಿತು. ಈ ಕುರಿತು ಸಭೆ ಒಮ್ಮತಕ್ಕೆ ಬಾರದ್ದರಿಂದ ಭಾನುವಾರ ಈ ಕುರಿತು ಚರ್ಚೆ ಮುಂದುವರಿಸಲು ನಿರ್ಧರಿಸಲಾಯಿತು ಎನ್ನಲಾಗಿದೆ.

ಭಾನುವಾರ ಮಧ್ಯಾಹ್ನದೊಳಗೆ ರಾಜ್ಯದ ಎಲ್ಲ ಮುಖಂಡರು ಒಮ್ಮತದ ನಿರ್ಧಾರ ಕೈಗೊಂಡು ಎಲ್ಲ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಗೆ ಸಮ್ಮತಿ ಸೂಚಿಸಬೇಕು. ನಂತರ ಇಲ್ಲಿನ ಅಕ್ಬರ್‌ ರಸ್ತೆಯಲ್ಲಿರುವ ಎಐಸಿಸಿ ಕಚೇರಿಯಲ್ಲಿ ಎಲ್ಲರ ಸಮ್ಮುಖದಲ್ಲೇ ಪಟ್ಟಿ ಬಿಡುಗಡೆ ಆಗಲಿ.

ಈ ವೇಳೆ ಎಲ್ಲ ಮುಖಂಡರೂ ಒಗ್ಗಟ್ಟು ಪ್ರದರ್ಶಿಸುವ ಮೂಲಕ ಯಾವುದೇ ರೀತಿಯ ಗೊಂದಲ, ಭಿನ್ನಾಭಿಪ್ರಾಯ ಇಲ್ಲ ಎಂಬ ಸಂದೇಶ ರವಾನಿಸಬೇಕು ಎಂದು ರಾಹುಲ್‌ ಗಾಂಧಿ ತಾಕೀತು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಧ್ಯಾಹ್ನ 3ಕ್ಕೆ ಎಐಸಿಸಿ ಕಚೇರಿಯಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗಲಿದ್ದು, ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಂದರ್ಭ ಹಾಜರಿರಲಿದ್ದಾರೆ.

**

ಒಂದೇ ಕಡೆ ಸ್ಪರ್ಧಿಸಲು ಸಲಹೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಹಾಗೂ ಬಾದಾಮಿ ಕ್ಷೇತ್ರಗಳಿಂದ ಸ್ಪರ್ಧೆ ಬಯಸಿರುವ ಕುರಿತು ಚರ್ಚೆ ನಡೆಸಿದ ರಾಹುಲ್‌ ಸಾಧಕ ಬಾಧಕಗಳ ಬಗ್ಗೆ ಅವಲೋಕಿಸಿದರು. ಬಳಿಕ ಚಾಮುಂಡೇಶ್ವರಿ ಕ್ಷೇತ್ರದಿಂದ ಮಾತ್ರ ಸ್ಪರ್ಧೆಗೆ ಇಳಿಯುವಂತೆ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದ್ದಾರೆ.

**

24 ಕ್ಷೇತ್ರಗಳ ಟಿಕೆಟ್‌ ಹಂಚಿಕೆ ಪ್ರಕ್ರಿಯೆ ಅಂತಿಮ ವಾಗಿಲ್ಲ. ಭಾನುವಾರ ಇನ್ನೊಂದು ಸುತ್ತಿನ ಸಭೆಯ ಬಳಿಕ ಎಲ್ಲ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುವುದು.

–ಜಿ.ಪರಮೇಶ್ವರ್‌, ಕೆಪಿಸಿಸಿ ಅಧ್ಯಕ್ಷ

ಪ್ರತಿಕ್ರಿಯಿಸಿ (+)