7
ಮುಖ್ಯ ಎಂಜಿನಿಯರ್‌ ಹುದ್ದೆಗಳಿಗೆ ಅರ್ಹರಾದವರ ಪಟ್ಟಿಯಲ್ಲಿ ಗೊಂದಲ

ಪಿಡಬ್ಲ್ಯೂಡಿ–ಡಿಪಿಎಆರ್‌ ಜಟಾಪಟಿ

Published:
Updated:
ಪಿಡಬ್ಲ್ಯೂಡಿ–ಡಿಪಿಎಆರ್‌ ಜಟಾಪಟಿ

ಬೆಂಗಳೂರು:‌ ‘ಬಡ್ತಿ ಮೀಸಲು ಕಾಯ್ದೆ–2002’ ಅನ್ನು ರದ್ದುಪಡಿಸಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪು ಪ್ರಕಾರ, ಸೂಪರಿಂಟೆಂಡಿಂಗ್ ಎಂಜಿನಿಯರ್ ಹುದ್ದೆಯಿಂದ ಮುಖ್ಯ ಎಂಜಿನಿಯರ್‌ ಹುದ್ದೆಗೆ ಬಡ್ತಿ ಪಡೆಯಲು ಅರ್ಹರಾದ ಅಧಿಕಾರಿಗಳ ಪಟ್ಟಿಗೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ) ಮತ್ತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ಮಧ್ಯೆ ಜಟಾಪಟಿ ನಡೆದಿದೆ.

ವಿವಿಧ ಇಲಾಖೆಗಳಲ್ಲಿ 34 ಮುಖ್ಯ ಎಂಜಿನಿಯರ್‌ ಹುದ್ದೆಗಳಿಗೆ ‘ನಿಯಮ 32’ ಅಡಿ ಬಡ್ತಿ ನೀಡಿ ಈ ಹಿಂದೆಯೇ ನೇಮಕ ಮಾಡಿಕೊಳ್ಳಲಾಗಿದೆ. 30 ಮುಖ್ಯ ಎಂಜಿನಿಯರ್‌ ಹುದ್ದೆಗಳು ಖಾಲಿ ಇವೆ. ಸುಪ್ರೀಂ ಕೋರ್ಟ್‌ ತೀರ್ಪು ಅನುಷ್ಠಾನದ ಅನ್ವಯ ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ಆಧರಿಸಿ ಬಡ್ತಿ ನೀಡಿದರೆ, ‘ನಿಯಮ 32’ ಅಡಿ ಬಡ್ತಿ ಪಡೆದಿರುವ ನಾಲ್ವರು ಅಧಿಕಾರಿಗಳು ಹಿಂಬಡ್ತಿ ಪಡೆಯಲಿದ್ದಾರೆ.

ಎಲ್ಲ ಇಲಾಖೆಗಳ ಸೂಪರಿಂಟೆಂಡಿಂಗ್ ಎಂಜಿನಿಯರ್‌ಗಳ ಜ್ಯೇಷ್ಠತಾ ಪಟ್ಟಿಯನ್ನು ಕ್ರೋಡೀಕರಿಸಿ ಪರಿಷ್ಕೃತ ಪಟ್ಟಿಯನ್ನು ಪಿಡಬ್ಲ್ಯೂಡಿ ಸಿದ್ಧಪಡಿಸಬೇಕು. ಅದನ್ನು ಆಧರಿಸಿ ಮುಖ್ಯ ಎಂಜಿನಿಯರ್ ಹುದ್ದೆಗೆ ಬಡ್ತಿ ಪಡೆಯಲು ಅರ್ಹರಾದವರ ಪಟ್ಟಿಯನ್ನು ಡಿಪಿಎಆರ್‌ ಸಿದ್ಧಪಡಿಸುತ್ತದೆ.

ಮುಖ್ಯ ಎಂಜಿನಿಯರ್ ಹುದ್ದೆಗಳಿಗೆ ಹತ್ತು ವರ್ಷಗಳಿಂದ ಸಾಮಾನ್ಯ ಬಡ್ತಿಯೇ ನೀಡಿಲ್ಲ. ಸುಪ್ರೀಂ ಕೋರ್ಟ್‌ ತೀರ್ಪು ಪ್ರಕಾರ, ಇದೀಗ ನಿಯಮ 32ರಡಿ ನೇಮಕಗೊಂಡವರಿಗೆ ಕಾಯಂ ಬಡ್ತಿ ಮತ್ತು ಖಾಲಿಯಾಗುವ ಹುದ್ದೆಗಳಿಗೆ ಬಡ್ತಿ ನೀಡಲು ಪ್ರಕ್ರಿಯೆ ಆರಂಭಗೊಂಡಿದೆ.

1978ರಿಂದ ಅನ್ವಯವಾಗುವಂತೆ ಸಿಬ್ಬಂದಿಯ ಜ್ಯೇಷ್ಠತಾ ಪಟ್ಟಿ ಪರಿಷ್ಕರಿಸಿ, ತತ್ಪರಿಣಾಮ ಕ್ರಮ (ಮುಂಬಡ್ತಿ– ಹಿಂಬಡ್ತಿ) ತೆಗೆದುಕೊಳ್ಳಬೇಕು ಎಂದು ತೀರ್ಪು ಹೇಳಿದೆ. ಆದರೆ, ಪಿಡಬ್ಲ್ಯೂಡಿ ಪಟ್ಟಿ ಸಿದ್ಧಪಡಿಸಲು ವಿಳಂಬ ಮಾಡಿದೆ. ಅಷ್ಟೇ ಅಲ್ಲ, ಸಮರ್ಪಕವಾಗಿ ಪಟ್ಟಿ ಸಿದ್ಧಪಡಿಸಿಲ್ಲ ಎಂಬ ಆರೋಪವನ್ನು ಇಲಾಖೆಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಈ ಕುರಿತು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಲಕ್ಷ್ಮೀ ನಾರಾಯಣ ಅವರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದೂ ದೂರಿದ್ದಾರೆ.

ಸೂಪರಿಂಟೆಂಡಿಂಗ್ ಎಂಜಿನಿಯರ್ ಹುದ್ದೆಗೆ ಸಂಬಂಧಿಸಿ 2009ರವರೆಗಿನ ಪರಿಷ್ಕೃತ ಜ್ಯೇಷ್ಠತಾ ಪಟ್ಟಿಯನ್ನು ನ. 29ರಂದು ಇಲಾಖೆ ಪ್ರಕಟಿಸಿತ್ತು. ಡಿಪಿಎಆರ್‌ ಹೊರಡಿಸಿದ ಸುತ್ತೋಲೆಯ ಬಳಿಕ 2017ರವರೆಗಿನ ತಾತ್ಕಾಲಿಕ ಪಟ್ಟಿಯನ್ನು ಇದೇ ಮಾರ್ಚ್‌ 28ರಂದು ಪ್ರಕಟಿಸಿದೆ. ಈ ಪಟ್ಟಿಗೆ ಆಕ್ಷೇಪಣೆ ಆಹ್ವಾನಿಸಲಾಗಿದ್ದು, ಬಳಿಕ ಅಂತಿಮ ಪರಿಷ್ಕೃತ ಪಟ್ಟಿ ಪ್ರಕಟವಾಗಲಿದೆ.

ಈ ಮಧ್ಯೆ, ನ. 29ರಂದು ಇಲಾಖೆ ಪ್ರಕಟಿಸಿದ್ದ ಪರಿಷ್ಕೃತ ಪಟ್ಟಿಯನ್ನು ಪಿಡಬ್ಲ್ಯೂಡಿಯಿಂದ ಪಡೆದು, ಮುಖ್ಯ ಎಂಜಿನಿಯರ್‌ ಹುದ್ದೆಗೆ ಬಡ್ತಿ ಪಡೆಯಲು ಅರ್ಹರಾದ ಅಧಿಕಾರಿಗಳ ಪಟ್ಟಿಯನ್ನು ಡಿಪಿಎಆರ್‌ ಸಿದ್ಧಪಡಿಸಿದೆ.

‘ಡಿಪಿಎಆರ್‌ ಸಿದ್ಧಪಡಿಸಿದ ಈ ಪಟ್ಟಿಯಲ್ಲಿ ಹಲವು ಲೋಪಗಳಿವೆ. ಅದನ್ನು ಬದಲಿಸುವ ಅಗತ್ಯವಿದೆ’ ಎಂದು ಲಕ್ಷ್ಮೀ ನಾರಾಯಣ ಅವರು ಡಿಪಿಎಆರ್‌ ಕಾರ್ಯದರ್ಶಿ ಅನಿಲ್‌ ಕುಮಾರ್ ಝಾಗೆ ಪತ್ರ ಬರೆದಿದ್ದಾರೆ.

‘ಪಿಡಬ್ಲ್ಯೂಡಿ ಸಿದ್ಧಪಡಿಸಿದ ಸೂಪರಿಂಟೆಂಡಿಂಗ್ ಎಂಜಿನಿಯರ್‌ ಜ್ಯೇಷ್ಠತಾ ಪಟ್ಟಿ ಸಮರ್ಪಕವಾಗಿಲ್ಲ. ಅಧಿಕಾರಿಗಳು ಬಡ್ತಿ ಪಡೆಯಲು ಅರ್ಹತೆ ಪಡೆಯುವ ದಿನ ಲೆಕ್ಕ ಹಾಕುವ ಸಂದರ್ಭದಲ್ಲೂ ತಪ್ಪುಗಳಾಗಿವೆ. ಆ ತಪ್ಪು ಪಟ್ಟಿ ಆಧರಿಸಿಯೇ ಮುಖ್ಯ ಎಂಜಿನಿಯರ್‌ ಹುದ್ದೆಗೆ ಅರ್ಹರಾದವರ ಪಟ್ಟಿಯನ್ನು ಸಿದ್ಧಪಡಿಸಿರುವುದು ಮತ್ತಷ್ಟು ಗೊಂದಲಕ್ಕೆ ಕಾರಣವಾಗಿದೆ’ ಎಂದು ಇಲಾಖೆಯಿಂದ ನಿವೃತ್ತರಾದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಸೂಪರಿಂಟೆಂಡಿಂಗ್ ಎಂಜಿನಿಯರ್‌ಗಳ ಜ್ಯೇಷ್ಠತಾ ಪಟ್ಟಿಯಲ್ಲಿ ನಿವೃತ್ತರಾದ ಹಲವು ಅಧಿಕಾರಿಗಳ ಹೆಸರು ಕೈಬಿಡಲಾಗಿದೆ. ಪಟ್ಟಿ ಕ್ರಮಬದ್ಧವಾಗಿ ಇಲ್ಲದಿರುವುದರಿಂದ ಮುಖ್ಯ ಎಂಜಿನಿಯರ್‌ ಹುದ್ದೆಗೆ ಅರ್ಹರಿದ್ದ ಹಲವು ಹೆಸರು ಪಟ್ಟಿಯಲ್ಲಿ ನಾಪತ್ತೆಯಾಗಿವೆ. ಇದು ಮತ್ತೊಂದು ಕಾನೂನು ಹೋರಾಟಕ್ಕೂ ಕಾರಣ ಆಗಬಹುದು’ ಎಂದೂ ಅವರು ಎಚ್ಚರಿಕೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry