5

ವಿವಿಧೆಡೆ ಅಂಬೇಡ್ಕರ್‌ಗೆ ನಮನ

Published:
Updated:

ಬಾಗಲಕೋಟೆ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‌ ಜಯಂತಿಯನ್ನು ಜೆ.ಡಿ.ಎಸ್ ಜಿಲ್ಲಾ ಘಟಕದ ಕಚೇರಿಯಲ್ಲಿ ಶನಿವಾರ ಆಚರಿಸಲಾಯಿತು.

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ಹುರಕಡ್ಲಿ, ಬಿಎಸ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಗುರುಶಾಂತಪ್ಪ ಮದುಬಿನಕೇರಿ ಹಾಗೂ ತಾಲ್ಲೂಕು ಘಟಕದ ಅಧ್ಯಕ್ಷ ಸಲೀಂ ಮೋಮಿನ್ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡುವ ಮೂಲಕ ಸರಳವಾಗಿ ಆಚರಿಸಲಾಯಿತು.

ಗುರುಶಾಂತಪ್ಪ ಮದುಬಿನಕೇರಿ ಮಾತನಾಡಿ ‘ದೇಶಕ್ಕೆ ಬಲಿಷ್ಠ ಸಂವಿಧಾನ ಕೊಟ್ಟ ಅಂಬೇಡ್ಕರ್ ಅವರ ಆದರ್ಶಗಳ ಪಾಲನೆ ಮರೆತು ಸಂವಿಧಾನ ಬದಲಿಸುತ್ತೇವೆ ಎಂದು ಬಿಜೆಪಿಯವರು ಹೊರಟಿದ್ದಾರೆ. ದಲಿತರನ್ನು ಮೂಲೆಗೆ ಒತ್ತಿ ಅವರಿಗೆ ಅಧಿಕಾರ ಕೊಡದೇ ವಂಚಿಸುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಮುಂಬರುವ ದಿನಗಳಲ್ಲಿ ಸರಿಯಾಗಿ ಬುದ್ಧಿ ಕಲಿಸಬೇಕು’ ಎಂದರು.

ನಂತರ ಅಂಬೇಡ್ಕರ್‌ ಪುತ್ಥಳಿಗೆ ಪಕ್ಷದ ಎಲ್ಲ ಮುಖಂಡರು ಸೇರಿ ಮಾಲಾರ್ಪಣೆ ಮಾಡಿ ಜಯ ಘೋಷಣೆ ಮಾಡಿದರು. ಯಾಸೀನ್ ಮಿರ್ಜಿ, ಜಮೀಲ್ ಟಂಕಸಾಲಿ, ರಾಮಣ್ಣ ಸುನಗದ, ಮುಷ್ತಾಕ್‌ ಫಣಿಬಂದ ಭಾಗವಹಿಸಿದ್ದರು.

ಬಾಡಗಂಡಿ ಶಾಲೆ: ಬೀಳಗಿ ಸಮೀಪದ ಬಾಡಗಂಡಿಯ ಬಾಪೂಜಿ ಅಂತರ ರಾಷ್ಟ್ರೀಯ ಶಾಲೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.

ಉಪನ್ಯಾಸಕ ಆರ್.ಜಿ.ಕುಲಕರ್ಣಿ ಮಾತನಾಡಿ, ಶೋಷಿತ, ದುರ್ಬಲ ಹಾಗೂ ಅಸಹಾಯಕ ಜನರ ಅಭಿವೃದ್ಧಿಗೆ ಶ್ರಮಿಸಿದ ಮಾನವತಾವಾದಿ ಡಾ.ಅಂಬೇಡ್ಕರ್ ಅವರ ಸಾಧನೆ ಜಗತ್ತಿಗೆ ಮಾದರಿಯಾಗಿದೆ ಎಂದರು.

ಅಂಬೇಡ್ಕರ್ ನಡೆದು ಬಂದ ದಾರಿಯನ್ನು ಮನಮುಟ್ಟುವಂತೆ ವಿವರಿಸಿದ ಅವರು, ‘ಮಕ್ಕಳು ಕಲಿತ ಶಾಲೆ, ನಾಡು, ದೇಶ ಹಾಗೂ ಜಾಗತಿಕ ಮಟ್ಟದಲ್ಲಿ ಸಾಧನೆಗೆ ಮುಂದಾಗಬೇಕು’ ಎಂದರು.

ಪಿ.ಯು.ವಿಭಾಗದ ಪ್ರಾಚಾರ್ಯ ಡಾ.ಜಿ.ವೆಂಕಟೇಶ ಜಿ, ಕನ್ನಡ ವಿಭಾಗದ ಮುಖ್ಯಸ್ಥ ಎಚ್.ಎಸ್. ವಿಜೇಂದ್ರ ಮಾತನಾಡಿ, ರಾಷ್ಟ್ರೀಯ ನಾಯಕರನ್ನು ಒಂದು ಜನಾಂಗಕ್ಕೆ ಸೀಮಿತಗೊಳಿಸುತ್ತಿರುವುದು ದುರದೃಷ್ಟಕರ ಸಂಗತಿ. ನಾವೆಲ್ಲರೂ ಭಾರತೀಯರು ಎನ್ನುವ ಸಂಕಲ್ಪದೊಂದಿಗೆ ಸದೃಢ ಭಾರ

ತದ ನಿರ್ಮಾಣ ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ ಎಂದರು.

ಅಧ್ಯಕ್ಷತೆಯನ್ನು ಆಡಳಿತಾಧಿಕಾರಿ ಎಚ್.ಬಿ.ಧರ್ಮಣ್ಣವರ ವಹಿಸಿದ್ದರು. ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಉಪನ್ಯಾಸಕರು, ಶಿಕ್ಷಕ ಬಳಗ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಿಕ್ಷಕಿ ಮಂಜುಳಾ ಬೋರ್ಜ ಸ್ವಾಗತಿಸಿದರು. ಮಹಾನಂದಾ ಡಂಗಿ ನಿರೂಪಿಸಿದರು. ಮಲ್ಲಮ್ಮ ಬಿರಾದಾರ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry