‘ಜೆಸಿಬಿ’ ಪಕ್ಷಗಳಿಗೆ ಜನರ ಕಾಳಜಿ ಇಲ್ಲ

7
ಸಂಡೂರಿನಲ್ಲಿ ಪತ್ರಿಕಾಗೋಷ್ಠಿ: ಮಹಾಮೈತ್ರಿಯ ಮುಖಂಡ ಎಸ್.ಆರ್. ಹಿರೇಮಠ್ ಆರೋಪ

‘ಜೆಸಿಬಿ’ ಪಕ್ಷಗಳಿಗೆ ಜನರ ಕಾಳಜಿ ಇಲ್ಲ

Published:
Updated:

ಸಂಡೂರು: ‘ವಿಧಾನಸಭೆಯಲ್ಲಿ ಜನರ ಸಮಸ್ಯೆಗಳ ಬಗ್ಗೆ ಅರ್ಥಪೂರ್ಣವಾಗಿ ಚರ್ಚಿಸಲು, ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲು, ಜನರ ಬದುಕನ್ನು ಹಸನುಗೊಳಿಸಲು ಜನಾಂದೋಲನಗಳ ಮಹಾಮೈತ್ರಿ ಈ ಬಾರಿ ರಾಜ್ಯದಲ್ಲಿ 20 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ’ ಎಂದು ಮಹಾಮೈತ್ರಿಯ ಮುಖಂಡ ಎಸ್.ಆರ್. ಹಿರೇಮಠ್ ತಿಳಿಸಿದರು.

ಪಟ್ಟಣದಲ್ಲಿ ಶನಿವಾರ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಮಹಾಮೈತ್ರಿಯ ಘಟಕವಾದ ಎಸ್‌ಯುಸಿಐ (ಕಮ್ಯುನಿಸ್ಟ್‌) ಪಕ್ಷದಿಂದ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಎ. ರಾಮಾಂಜನಪ್ಪ ಅವರನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

‘ರಾಜ್ಯವನ್ನು ಆಳಿದ ಜೆಡಿಎಸ್‌, ಕಾಂಗ್ರೆಸ್ ಹಾಗೂ ಬಿಜೆಪಿಗೆ(ಜೆಸಿಬಿ ಪಕ್ಷಗಳು) ಜನಪರ ಕಳಕಳಿ ಇಲ್ಲ. ಇವು ಜನಹಿತ ಬಯಸುವ ಪಕ್ಷಗಳಲ್ಲ. ಸಂವಿಧಾನದ ಆಶಯಗಳಾದ ನ್ಯಾಯ, ಸಹೋದರತೆ, ಸಮಾನತೆಯ ಅಂಶಗಳ ಬಗ್ಗೆ ಜೆಸಿಬಿ ಪಕ್ಷಗಳಿಗೆ ಕಾಳಜಿ ಇಲ್ಲ’ ಎಂದು ದೂರಿದರು.

‘ಬಿಜೆಪಿ ಆಡಳಿತಾವಧಿಯಲ್ಲಿ ಬಿಹಾರದ ಲಾಲೂ ಪ್ರಸಾದ್ ಅವರ ವಿರುದ್ಧದ ಪ್ರಕರಣಗಳ ವಿಚಾರನೆ ತ್ವರಿತವಾಗಿ ನಡೆಸಲಾಗುತ್ತಿದೆ. ಆದರೆ, ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ನೀಡಿದ ವರದಿ ಅನ್ವಯ ಓಬಳಾಪುರಂ, ಬೇಲಿಕೇರಿ ಮುಂತಾದ ಗಣಿ ಹಗರಣಗಳ ಪ್ರಕರಣ ವಿಚಾರಣೆ ತ್ವರಿತವಾಗಿ ನಡೆಯುತ್ತಿಲ್ಲ’ ಎಂದು ಆರೋಪಿಸಿದರು.

‘ಗಣಿ ಕಂಪನಿಗಳಿಂದ ಸಂಗ್ರಹಿಸಿದ ಸುಮಾರು ₹13,000 ಕೋಟಿ ದುಡ್ಡು ಮಾನಿಟರಿಂಗ್ ಸಮಿತಿಯ ಬಳಿ ಇದೆ. ಪರಿಸರ ಪುನರ್‌ ನಿರ್ಮಾಣ, ಪುನಶ್ಚೇತನಗೊಳಿಸಲು ಸಮಗ್ರ ಯೋಜನೆ ಜಾರಿಗೊಳಿಸುತ್ತಿಲ್ಲ. ಈ ಹಣ ಮತ್ತು ಜಿಲ್ಲಾ ಖನಿಜ ನಿಧಿಯ ಹಣ ಸದುಪಯೋಗವಾಗಬೇಕಿದೆ. ಶ್ರೀಕುಮಾರಸ್ವಾಮಿ ದೇವಸ್ಥಾನ ಸಂರಕ್ಷಣೆಗೆ ಸ್ಥಳೀಯರ ಸಂಘಟಿತ ಹೋರಾಟ ಅಗತ್ಯವಾಗಿದೆ’ ಎಂದರು.

ಮಹಾಮೈತ್ರಿಯ ಮುಖಂಡ ರಾಘವೇಂದ್ರ ಕುಷ್ಟಗಿ ಮಾತನಾಡಿ, ‘ಜೆಸಿಬಿ ಪಕ್ಷಗಳು ಬಳ್ಳಾರಿ ಜನರ, ಮತದಾರರ ಮರ್ಯಾದೆ ಹಾಳುಮಾಡಿವೆ. ಅವುಗಳು ಜನರ ಹಿತಾಸಕ್ತಿ ಕಾಪಾಡುವ ಬದಲು ಕಾರ್ಪೊರೇಟ್ ಹಿತಾಸಕ್ತಿಯನ್ನು ಕಾಯುತ್ತಿವೆ. ಒಳ್ಳೆಯ ಆಡಳಿತ ನೀಡಲು ನಾವು ವಿಧಾನಸಭೆಗೆ ಆರಿಸಿ ಕಳುಹಿಸಿದ ಕೆಲವರು ಹೋದದ್ದು ಜೈಲಿಗೆ. ಆದ್ದರಿಂದ ಈಗಿನ ಚುನಾವಣೆಯಲ್ಲಿ ಜೈಲಿಗೆ ಹೋಗುವವರನ್ನು ವಿಧಾನಸಭೆಗೆ ಆಯ್ಕೆಮಾಡಿ ಕಳುಹಿಸಬಾರದು’ ಎಂದು ವಾಗ್ದಾಳಿ ನಡೆಸಿದರು.

‘ಅಕ್ರಮ ಗಣಿಗಾರಿಕೆಯ ವಿರುದ್ಧ ತೊಡೆತಟ್ಟಿ ಪಾದಯಾತ್ರೆ ನಡೆಸಿದ್ದ ಸಿದ್ದರಾಮಯ್ಯ ಅಕ್ರಮ ಗಣಿಗಾರಿಕೆಗೆ ಪ್ರಕರಣದಲ್ಲಿ ಹೆಸರಿಸಲಾಗಿದ್ದ 700 ಅಧಿಕಾರಿಗಳಿಗೆ ಶಿಕ್ಷೆ ವಿಧಿಸುವ ಬದಲು, ಬಡ್ತಿ ನೀಡುವ ಮೂಲ ವಚನ ಭ್ರಷ್ಟರಾಗಿದ್ದಾರೆ. ಆನಂದಸಿಂಗ್, ನಾಗೇಂದ್ರ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಜಿಂದಾಲ್ ಕಂಪನಿಯ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯ ಹಣ ಆರ್.ವಿ.ದೇಶಪಾಂಡೆ ಅವರ ಕ್ಷೇತ್ರವಾದ ಹಳಿಯಾಳದಲ್ಲಿ ಬಳಕೆಯಾಗಿರುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

ಎಸ್‌ಯುಸಿಐ(ಕಮ್ಯುನಿಸ್ಟ್‌) ಅಭ್ಯರ್ಥಿ ಎ. ರಾಮಾಂಜನಪ್ಪ, ಸಂಘಟನೆಯ ಜಿಲ್ಲಾ ಘಟಕದ ಕಾರ್ಯದರ್ಶಿ ಕೆ. ಸೋಮಶೇಖರ್, ಚಂದ್ರಶೇಖರ್ ಮೇಟಿ ಇದ್ದರು.

**

‘ರಾಜ್ಯವನ್ನು ಆಳಿದ ಜೆಡಿಎಸ್‌, ಕಾಂಗ್ರೆಸ್ ಹಾಗೂ ಬಿಜೆಪಿಗೆ(ಜೆಸಿಬಿ ಪಕ್ಷಗಳು) ಜನಪರ ಕಳಕಳಿ ಇಲ್ಲ. ಇವು ಜನಹಿತ ಬಯಸುವ ಪಕ್ಷಗಳಲ್ಲ. ಸಂವಿಧಾನದ ಆಶಯಗಳಾದ ನ್ಯಾಯ, ಸಹೋದರತೆ, ಸಮಾನತೆಯ ಅಂಶಗಳ ಬಗ್ಗೆ ಜೆಸಿಬಿ ಪಕ್ಷಗಳಿಗೆ ಕಾಳಜಿ ಇಲ್ಲ’ ಎಂದು ದೂರಿದರು.

**

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry