ಗುರುವಾರ , ಆಗಸ್ಟ್ 13, 2020
21 °C
ವಿಜಯ‍ಪುರ ಜಿಲ್ಲೆ ಇಂಡಿ ತಾಲ್ಲೂಕಿನ ಒಂದೇ ಕುಟುಂಬದ ಇಬ್ಬರು ಮಕ್ಕಳು ಹಾಗೂ ಚಾಲಕ ಸಾವು

ಎಳನೀರು ಕುಡಿಯಲು ನಿಂತಾಗ ಜವರಾಯ ಕರೆದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಳನೀರು ಕುಡಿಯಲು ನಿಂತಾಗ ಜವರಾಯ ಕರೆದ

ಚಾಮರಾಜನಗರ: ಎಳನೀರು ಕುಡಿಯಲು ಕಾರು ನಿಲ್ಲಿಸಿದರು, ನೀರು ಕುಡಿಯುವ ಮೊದಲೇ ಜವರಾಯನ ಮನೆ ಸೇರಿದರು.ಅವರೆಲ್ಲ ಒಂದೇ ಕುಟುಂಬದ ಸದಸ್ಯರು. ಶಾಲೆಯ ರಜಾ ದಿನವನ್ನು ಸಂಭ್ರಮದಿಂದ ಕಳೆಯಲು ತಮಿಳುನಾಡು, ಆಂಧ್ರಪ್ರದೇಶಕ್ಕೆ ಪ್ರವಾಸ ಹೋಗಿ ವಾಪಸ್‌ ಬರುವಾಗ ಮಾರ್ಗ ಮಧ್ಯೆ ಜವರಾಯ ಕಾದುಕುಳಿತಿದ್ದ.

ಚಾಮರಾಜನಗರದ ಸಮೀಪದ ಸೋಮವಾರಪೇಟೆ ಬಳಿಯ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಕಾರಿನ ಮೇಲೆ ಲಾರಿ ಮಗುಚಿ ಬಿದ್ದುದರಿಂದ ಇಬ್ಬರು ಮಕ್ಕಳು ಹಾಗೂ ಕಾರಿನ ಚಾಲಕ ಸಾವನ್ನಪ್ಪಿದ್ದಾರೆ.

ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಕೊಳೂರಗಿ ಗ್ರಾಮದಿಂದ ಏ. 8ರಂದು ಜೀಪ್‌ ಹಾಗೂ ಇಂಡಿಕಾ ಕಾರಿನಲ್ಲಿ 18 ಜನರ ತಂಡ ಪ್ರವಾಸಕ್ಕೆ ತೆರಳಿತ್ತು. ಶ್ರೀಶೈಲ, ತಿರುಪತಿ, ವೆಲ್ಲೂರು, ಮಧುರೈ, ರಾಮೇಶ್ವರ, ಕನ್ಯಾಕುಮಾರಿ ನೋಡಿಕೊಂಡು ಏ. 13ರಂದು ಕೇರಳದ ಕೊಚ್ಚಿನ್‌ನಲ್ಲಿ ವಾಸ್ತವ್ಯ ಹೂಡಿದ್ದರು.

ಬೆಳಿಗ್ಗೆ 6ಗಂಟೆಗೆ ಕೊಚ್ಚಿನ್‌ನಿಂದ ಚಾಮರಾಜನಗರ ಮೂಲಕ ನಂಜನಗೂಡು, ಚಾಮುಂಡಿಬೆಟ್ಟಕ್ಕೆ ಜೀಪ್‌ನಲ್ಲಿ 10 ಜನರು ತಂಡ ಮೊದಲು ಹೊರಟಿತು. ಅವರನ್ನು ಕಾರಿನಲ್ಲಿ ಸಂಗಣ್ಣಗೌಡ, ಲಕ್ಷ್ಮಿ ಅವರ ಮಕ್ಕಳಾದ ಲಕ್ಷ್ಮಿಕಾಂತ, ಸೃಷ್ಟಿ, ಸಂಕೇತ, ಯುವತಿ ಪ್ರೀತಿ, ಚಾಲಕ ಸಿದ್ದರಾಮ ಮೇಡೆಗಾರ ಅವರು ಹಿಂಬಾಲಿಸಿದರು.

ಮಾರ್ಗಮಧ್ಯದಲ್ಲಿ ಸಂಗಣ್ಣಗೌಡ ಅವರ ಪುತ್ರಿ ಸೃಷ್ಟಿ ಅವರಿಗೆ ವಾಂತಿಯಾದ ಕಾರಣ ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದಾರೆ. ಅದೇ ವೇಳೆ ಎಳನೀರು ತರಲೆಂದು ಸಂಗಣ್ಣಗೌಡ ಕಾರಿನಿಂದ ಇಳಿದಿದ್ದಾರೆ. ಈ ವೇಳೆ ಚಾಮರಾಜನಗರದಿಂದ ತಮಿಳುನಾಡಿಗೆ ಮುಸುಕಿನ ಜೋಳ ತುಂಬಿಕೊಂಡು ಹೋಗುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದ್ದಿಯಲ್ಲಿ ನಿಂತಿದ್ದ ಕಾರಿನ ಮೇಲೆ ಬಿದ್ದಿದೆ. ಕಾರಿನ ಬಲಭಾಗದಲ್ಲಿ ಕುಳಿತಿದ್ದ ಚಾಲಕ ಸಿದ್ದರಾಮ ಮೇಡೆಗಾರ, ಲಕ್ಷ್ಮಿಕಾಂತ, ಸಂಕೇತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಎಡಭಾಗದಲ್ಲಿ ಕುಳಿತಿದ್ದ ಲಕ್ಷ್ಮಿ, ಸೃಷ್ಟಿ, ಪ್ರೀತಿ ಅವರಿಗೆ ಗಾಯಗಳಾಗಿದ್ದು, ಅವರನ್ನು ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕ್ಷಣಾರ್ಧದಲ್ಲಿ ನಡೆದ ಘಟನೆಯಿಂದ ಸಂಗಣ್ಣಗೌಡ, ಲಕ್ಷ್ಮಿ ದಂಪತಿ ತಮ್ಮ ಇಬ್ಬರು ಪುತ್ರರನ್ನು ಕಳೆದುಕೊಂಡಿದ್ದಾರೆ. ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಧರ್ಮೇಂದರ್‌ಕುಮಾರ್ ಮೀನಾ, ಡಿವೈಎಸ್‌ಪಿ ಜಯಕುಮಾರ್‌ ಸೇರಿದಂತೆ ಪೊಲೀಸ್‌ ಅಧಿಕಾರಿಗಳು ಆಸ್ಪತ್ರೆ ಭೇಟಿ ನೀಡಿ ಸಂಬಂಧಿಕರಿಂದ ಮಾಹಿತಿ ಪಡೆದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.