ಭಾನುವಾರ, ಡಿಸೆಂಬರ್ 15, 2019
25 °C
ಕಾಂಗ್ರೆಸ್‌ ಪ್ರಚಾರ ಸಮಿತಿ ಕಚೇರಿ ಉದ್ಘಾಟನೆ

ಬಿಜೆಪಿ ಸಂವಿಧಾನ ವಿರೋಧಿ ಪಕ್ಷ: ಮೋಟಮ್ಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಜೆಪಿ ಸಂವಿಧಾನ ವಿರೋಧಿ ಪಕ್ಷ: ಮೋಟಮ್ಮ

 

ಮೂಡಿಗೆರೆ: ಬಿಜೆಪಿ ಸಂವಿಧಾನ ವಿರೋಧಿ ಪಕ್ಷ ಎಂದು ವಿಧಾನ ಪರಿಷತ್‌ ಸದಸ್ಯೆ ಮೋಟಮ್ಮ ಅಭಿಪ್ರಾಯಪಟ್ಟರು.ಪಟ್ಟಣದ ಕೆ.ಎಂ. ರಸ್ತೆಯ ಚಂದನ್‌ ಕಟ್ಟಡದಲ್ಲಿ ಶುಕ್ರವಾರ ಕಾಂಗ್ರೆಸ್‌ ಪ್ರಚಾರ ಸಮಿತಿ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಭಾರತವು ಜಾತ್ಯತೀತ ರಾಷ್ಟ್ರವಾಗಿದ್ದು, ಬಿಜೆಪಿಯು ಈ ಜಾತ್ಯತೀತ ನಿಲುವಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತದೆ. ಬಿಜೆಪಿಯ ರೀತಿ ನೀತಿಗಳಿಂದ ಜನರು ನೆಮ್ಮದಿಯಾಗಿ ಬದುಕಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗುತ್ತದೆ ಎಂದು ಆರೋಪಿಸಿದರು. ಏಳು ದಶಕಗಳಿಂದ ಭಾರತದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್‌ ಪಕ್ಷವು ಎಂದಿಗೂ ಸಂವಿಧಾನದ ನಿಯಮಗಳಿಗೆ ಕುಂದುಂಟು ಮಾಡಲು ಮುಂದಾಗಲಿಲ್ಲ. ಪಕ್ಷವು ಸಂವಿಧಾನದ ಅಡಿಯಲ್ಲಿ ಕೆಸಲ ಮಾಡಿಕೊಂಡು ದೇಶವನ್ನು ಮುನ್ನೆಡೆಸಿದೆ. ಆದರೆ ಬಿಜೆಪಿಯು ಸಂವಿಧಾನವನ್ನೇ ಬದಲಾಯಿಸಲು ಹೊರಟಿರುವುದು ಆ ಪಕ್ಷವು ಸಂವಿಧಾನ ವಿರೋಧಿ ಎನ್ನುವುದನ್ನು ಸಾಬೀತು ಮಾಡಿದೆ ಎಂದು ಆರೋಪಿಸಿದರು.

ಕಚೇರಿಯನ್ನು ಉದ್ಘಾಟಿಸಿದ ಮಾಜಿ ಸಂಸದ ಡಿ.ಎಂ. ಪುಟ್ಟೇಗೌಡ ಮಾತನಾಡಿ, ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ಉತ್ತಮ ಯೋಜನೆಗಳನ್ನು ಜಾರಿಗೊಳಿಸಿ, ಜನಪರ ಸರ್ಕಾರವೆಂದು ಸಾಬೀತು ಮಾಡಿದೆ. ಬಿಜೆಪಿಯು ಕೇವಲ ಪ್ರಚಾರದ ಮೂಲಕ ಅಭಿವೃದ್ಧಿ ಸಾಧಿಸಿದ್ದೇವೆ ಎಂದು ಹೇಳುತ್ತಾರೆ. ಆದರೆ ರಾಜ್ಯ ಸರ್ಕಾರವು ಉತ್ತಮ ಕೆಲಸ ಮಾಡುವ ಮೂಲಕ ಅಭಿವೃದ್ಧಿಯನ್ನು ಸಾಬೀತುಗೊಳಿಸಿದೆ. ರಾಜ್ಯದ ಚುನಾವಣೆಯು ಮಹತ್ತರವಾಗಿದ್ದು, ಪ್ರತಿ ಕಾರ್ಯಕರ್ತರು ಶ್ರಮವಿಲ್ಲದೇ ದುಡಿದು ಪಕ್ಷಕ್ಕೆ ಗೆಲವು ತಂದುಕೊಡಬೇಕು ಎಂದರು.

ಕಾರ್ಯಕ್ರಮದಲ್ಲಿ ಬ್ಲಾಕ್‌ ಅಧ್ಯಕ್ಷ ಯು.ಎಚ್. ಹೇಮಶೇಖರ್‌, ವಕ್ತಾರ ಎಂ.ಎಸ್‌. ಅನಂತ್‌, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಮೀಜಾಬಿ, ಸದಸ್ಯ ಟಿ.ಎಂ. ಮದೀಶ್‌, ಪದಾಧಿಕಾರಿಗಳಾದ ಬಿ.ಎಸ್‌. ಜಯರಾಂ, ಸನಾವುಲ್ಲಾ, ಸಿ.ಎಚ್‌. ಕೃಷ್ಣೇಗೌಡ, ರಘುರಾಂ ಅಡ್ಯಂತಾಯ, ಕಸಬಾ ಹೋಬಳಿ ಅಧ್ಯಕ್ಷ ಸಿ.ಬಿ. ಶಂಕರ್‌, ಕೆ. ಮಂಚೇಗೌಡ, ಶ್ರೀನಿವಾಸ್‌ ಹೆಬ್ಬಾರ್‌, ಎಂ.ಪಿ. ಮನು, ಸುಬ್ರಮಣ್ಯ, ಮನುಮರೇಬೈಲ್‌, ಡಿ.ಎಸ್‌. ರಘು ಮುಂತಾದವರಿದ್ದರು.

ಪ್ರತಿಕ್ರಿಯಿಸಿ (+)