ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನ ಜಾಗೃತಿಗಾಗಿ ಧರ್ಮಸ್ಥಳಕ್ಕೆ ಪಾದಯಾತ್ರೆ!

ಪರಿಸರ ಸಂರಕ್ಷಣೆ, ಸ್ವಚ್ಛ ಭಾರತ ಕುರಿತು ಅರಿವು ಮೂಡಿಸಲು ಹೊರಟ ಯುವಕರು
Last Updated 15 ಏಪ್ರಿಲ್ 2018, 7:06 IST
ಅಕ್ಷರ ಗಾತ್ರ

ಹೊಳಲ್ಕೆರೆ: ತಾಲ್ಲೂಕಿನ ಮಲ್ಲಾಡಿಹಳ್ಳಿಯ 40 ಯುವಕರ ತಂಡ ಜನರಲ್ಲಿ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಧರ್ಮಸ್ಥಳಕ್ಕೆ ಶನಿವಾರ ಪಾದಯಾತ್ರೆ ಹೊರಟಿತು.

ಪರಿಸರ ಸಂರಕ್ಷಣೆ, ಸ್ವಚ್ಛ ಭಾರತ್, ಭ್ರಷ್ಟಾಚಾರ ನಿಯಂತ್ರಣ, ದುಶ್ಚಟಗಳ ದುಷ್ಪರಿಣಾಮಗಳ ಬಗ್ಗೆ ಜನಜಾಗೃತಿ ಮೂಡಿಸುವುದು ಹಾಗೂ ಲೋಕ ಕಲ್ಯಾಣದ ಉದ್ದೇಶದಿಂದ ಪಾದಯಾತ್ರೆ ಆರಂಭಿಸಿತು. ಗ್ರಾಮದ ಬನಶಂಕರಿ ದೇವಾಲಯದಿಂದ ಪಾದಯಾತ್ರೆ ಆರಂಭಿಸಿದ ಯುವಕರ ತಂಡ ತಾಳಿಕಟ್ಟೆ, ಶಿವನಿ, ಕಡೂರು, ಬೀರೂರು, ಸಖರಾಯ ಪಟ್ಟಣ, ಚಿಕ್ಕಮಗಳೂರು, ಮೂಡಿಗೆರೆ, ಕೊಟ್ಟಿಗೆಹಾರ ಮೂಲಕ ಐದು ದಿನಗಳಲ್ಲಿ ಧರ್ಮಸ್ಥಳ ತಲುಪಲಿದೆ. ಸದಸ್ಯರು ಪ್ರತಿ ದಿನ 40ರಿಂದ 50 ಕಿ.ಮೀ. ನಡೆಯಲಿದ್ದಾರೆ. ಕೊರಳಲ್ಲಿ ಜಾಗೃತಿ ಸಂದೇಶಗಳಿರುವ ಫಲಕಗಳನ್ನು ಹಾಕಿಕೊಂಡ ಪಾದಯಾತ್ರಿಗಳು, ಆಸರೆಗಾಗಿ ಎರಡೂ ಕೈಗಳಲ್ಲಿ ಉದ್ದನೆಯ ಕೋಲು ಹಿಡಿದು ಗ್ರಾಮದಿಂದ ಪ್ರಯಾಣ ಬೆಳೆಸಿದರು.

ಮತ ಜಾಗೃತಿಗಾಗಿ ಪಾದಯಾತ್ರೆ: ‘ಎಂಟು ವರ್ಷಗಳಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಹೋಗುತ್ತಿದ್ದೇವೆ. ಮಂಜುನಾಥ ಸ್ವಾಮಿಯ ದರ್ಶನ ಪಡೆಯುವುದಷ್ಟೇ ನಮ್ಮ ಮುಖ್ಯ ಉದ್ದೇಶ ಅಲ್ಲ. ಕೆಲವು ಮುಖ್ಯ ವಿಷಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತೇವೆ. ಈ ವರ್ಷ ವಿಧಾನಸಭಾ ಚುನಾವಣೆ ಇರುವುದರಿಂದ ಜನರಿಗೆ ಮತದಾನದ ಮಹತ್ವದ ಬಗ್ಗೆ ಮನವರಿಕೆ ಮಾಡಿಕೊಡುತ್ತೇವೆ. ಪ್ರಜಾಪ್ರಭುತ್ವ ಬಲಿಷ್ಠವಾಗಲು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಪ್ರೇರೇಪಿಸುತ್ತೇವೆ. ರಾಜಕಾರಣಿಗಳ ಆಸೆ, ಆಮಿಷಗಳಿಗೆ ಒಳಗಾಗದೆ ಅರ್ಹ ಅಭ್ಯರ್ಥಿಗೆ ಮತ ಹಾಕುವಂತೆ ಮನವೊಲಿಸುತ್ತೇವೆ’ ಎಂದು ಪಾದಯಾತ್ರೆಯ ನೇತೃತ್ವ ವಹಿಸಿರುವ ಶಿಕ್ಷಕ ಟಿ.ಡಿ.ಪ್ರಕಾಶ್‌, ಎಸ್.ಮಂಜುನಾಥ, ಎಸ್.ಆರ್.ರವಿ ತಿಳಿಸಿದರು.

‘ಚುನಾವಣೆಯ ಜತೆಗೆ ದೇಶದಲ್ಲಿ ತಾಂಡವ ಆಡುತ್ತಿರುವ ಭ್ರಷ್ಟಾಚಾರದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು, ಮದ್ಯಪಾನ, ಧೂಮಪಾನದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸುವುದು. ಕಾಡು, ಬೆಟ್ಟ, ನದಿಗಳನ್ನು ಉಳಿಸುವ ಬಗ್ಗೆ ಜಾಗೃತಿ ಮೂಡಿಸುವುದು, ಸ್ವಚ್ಛತೆಯ ಪಾಠ ಹೇಳುವುದು ನಮ್ಮ ಉದ್ದೇಶ’ ಎಂದು ಪಾದಯಾತ್ರೆ ಹೊರಟಿದ್ದ ಎಚ್.ಎನ್.ದೇವರಾಜ್, ಬಿ.ಪಿ.ಚಂದ್ರು, ರಂಗಸ್ವಾಮಿ ಹೇಳಿದರು.

‘ಪಾದಯಾತ್ರೆ ಹೋಗುವ ಮಾರ್ಗದಲ್ಲಿ ಸಿಗುವ ಹಳ್ಳಿಗಳಲ್ಲಿ ಜನರನ್ನು ಸೇರಿಸಿ ಜಾಗೃತಿ ಮೂಡಿಸುತ್ತೇವೆ. ದಾರಿಯುದ್ದಕ್ಕೂ ಜನಜಾಗೃತಿಯ ಘೋಷಣೆಗಳನ್ನು ಕೂಗುತ್ತೇವೆ. ಭಜನೆ, ಹಾಡುಗಳೊಂದಿಗೆ ಜನರ ಮನಸ್ಸನ್ನು ಜಾಗೃತಗೊಳಿಸುತ್ತೇವೆ. ಮೊದಲ ವರ್ಷ 15 ಜನರ ತಂಡದೊಂದಿಗೆ ಪಾದಯಾತ್ರೆ ಆರಂಭಿಸಿದ್ದೆವು. ಈಗ ನಮ್ಮ ಕಾರ್ಯವನ್ನು ಮೆಚ್ಚಿ 40 ಸದಸ್ಯರು ನಮ್ಮ ಜತೆ ಬಂದಿದ್ದಾರೆ’ ಎನ್ನುತ್ತಾರೆ ತಂಡದ ಸದಸ್ಯರು.

‘ಬಿಸಿಲನ್ನೂ ಲೆಕ್ಕಿಸದೆ 260 ಕಿ.ಮೀ ನಡೆಯುತ್ತೇವೆ. ಬೆಳಿಗ್ಗೆ ಮತ್ತು ಸಂಜೆ ಹೆಚ್ಚು ನಡೆಯುತ್ತೇವೆ. ಕೆಲವೊಮ್ಮೆ ರಾತ್ರಿ ವೇಳೆಯೂ ನಡೆಯುತ್ತೇವೆ. ರಾತ್ರಿ 10ರ ನಂತರ ಸಿಗುವ ಊರಿನ ಶಾಲೆಯ ಆವರಣದಲ್ಲಿ ಅಡುಗೆ ತಯಾರಿಸಿ ಊಟ ಮಾಡಿ, ಅಲ್ಲಿಯೇ ಮಲಗುತ್ತೇವೆ. ನೀರು ಸಿಕ್ಕಿದ ಕಡೆ ಸ್ನಾನ ಮಾಡುತ್ತೇವೆ. ಧರ್ಮಸ್ಥಳ ತಲುಪಿದ ನಂತರ ದೇವರ ದರ್ಶನ ಪಡೆದು ಬಸ್‌ನಲ್ಲಿ ಮರಳಿ ಬರುತ್ತೇವೆ’ ಎಂದು ತಂಡದ ಸದಸ್ಯರು ಮಾಹಿತಿ ನೀಡಿದರು.

ಪಾದಯಾತ್ರೆಯಿಂದ ಸಾಮರಸ್ಯ: ಪಾದಯಾತ್ರೆಗೆ ಚಾಲನೆ ನೀಡಿದ ಅನಾಥ ಸೇವಾಶ್ರಮದ ವಿಶೇಷಾಧಿಕಾರಿ ಪ್ರೊ.ಟಿ.ಎಚ್.ಕೃಷ್ಣಮೂರ್ತಿ, ‘ಪಾದಯಾತ್ರೆಯಿಂದ ಸಾಮರಸ್ಯದ ಬದುಕು ಕಟ್ಟಿಕೊಳ್ಳಲು ಸಾಧ್ಯ. ನಡಿಗೆಯಿಂದ ಆರೋಗ್ಯ ವೃದ್ಧಿಸುವುದಲ್ಲದೆ, ಆಧ್ಯಾತ್ಮಿಕವಾಗಿ ಮನಸ್ಸುಗಳು ಒಂದಾಗುತ್ತವೆ’ ಎಂದರು.

ದೇವಾಂಗ ಸಮಾಜದ ಅಧ್ಯಕರಾದ ಆತ್ಮಪ್ಪ, ದಯಾನಂದಪ್ಪ, ದೇವಸ್ಥಾನ ಅಭಿವೃದ್ಧಿ ಸಂಘದ ಅಧ್ಯಕ್ಷ ರಾಮದಾಸ್, ಯೋಗ ತರಬೇತುದಾರ ಸಂತೋಷ್ ಹಾಗೂ ಊರಿನ ಗ್ರಾಮಸ್ಥರು ಇದ್ದರು.

ರಾಘವೇಂದ್ರ ಸ್ವಾಮೀಜಿ ಪ್ರೇರಣೆ

‘ನಮ್ಮ ಜನ ಜಾಗೃತಿ ಪಾದಯಾತ್ರೆಗೆ ಮಲ್ಲಾಡಿಹಳ್ಳಿಯ ಅನಾಥ ಸೇವಾಶ್ರಮ ಸ್ಥಾಪಕ ರಾಘವೇಂದ್ರ ಸ್ವಾಮೀಜಿ ಪ್ರೇರಣೆಯೇ ಕಾರಣ. ಬೇರೆ ಕಡೆಯಿಂದ ನಮ್ಮ ಗ್ರಾಮಕ್ಕೆ ಬಂದು ನೆಲೆಸಿದ ಅವರು ಇಲ್ಲಿನ ಜನರಲ್ಲಿ ಶಿಕ್ಷಣ, ಆರೋಗ್ಯ, ಸ್ವಚ್ಛತೆ, ಸೇವೆಯ ಬಗ್ಗೆ ಜಾಗೃತಿ ಮೂಡಿಸಿದ್ದರು. ಮುಗ್ಧ ಜನರಲ್ಲಿ ಶಿಕ್ಷಣ, ಶಿಸ್ತು, ಸಂಸ್ಕಾರ ತುಂಬಿದರು. ಅವರಲ್ಲಿದ್ದ ಸರಳತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಪಾದಯಾತ್ರೆ ಆರಂಭಿಸಿದ್ದೇವೆ’ ಎಂದು ಪಾದಯಾತ್ರಿಗಳು ಮಾಹಿತಿ ನೀಡಿದರು.

‘ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೂ ನಮ್ಮ ಪಾದಯಾತ್ರೆಯ ಉದ್ದೇಶ ತಿಳಿಸಿದ್ದೇವೆ. ನಾವು ಧರ್ಮಸ್ಥಳಕ್ಕೆ ಬರುವ ದಿನವನ್ನು ಮೊದಲೇ ಪತ್ರ ಬರೆದು ತಿಳಿಸುತ್ತೇವೆ. ಧರ್ಮಸ್ಥಳಕ್ಕೆ ಹೋದಾಗ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುತ್ತೇವೆ. ಅವರು ನಮ್ಮ ಕಾರ್ಯವನ್ನು ಶ್ಲಾಘಿಸಿದ್ದಾರೆ’ ಎನ್ನುತ್ತಾರೆ ಅವರು.

**

ದೇವರ ದರ್ಶನ ಪಡೆಯುವುದರ ಜೊತೆಗೆ ಪ್ರಚಲಿತ ವಿದ್ಯಮಾನಗಳ ಬಗ್ಗೆ ಜನಜಾಗೃತಿ ಮೂಡಿಸುವುದು ನಮ್ಮ ಪಾದಯಾತ್ರೆಯ ಪ್ರಮುಖ ಉದ್ದೇಶ – ಟಿ.ಡಿ..ಪ್ರಕಾಶ್, ಪಾದಯಾತ್ರೆ ತಂಡದ ಸದಸ್ಯ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT